ಕತೆ : ವ್ಯಾಪಾರಿ ತಂದೆ ಮಕ್ಕಳಿಗೆ ನೀಡಿದ ಸಲಹೆಗಳು

– ಸಚಿನ ಕೋಕಣೆ

( ಬರಹಗಾರರ ಮಾತು: ಚಿಕ್ಕಂದಿನಲ್ಲಿ ಕೇಳಿದ ಕತೆ, ಓದುಗರ ಮುಂದಿಡುವ ಒಂದು ಚಿಕ್ಕ ಪ್ರಯತ್ನ )

ಒಂದು ಊರಿನಲ್ಲಿ ಒಬ್ಬ ವ್ಯಾಪಾರಿಗೆ 3 ಜನ ಮಕ್ಕಳಿದ್ದರು. ವ್ಯಾಪಾರಿಯು ತುಂಬಾ ದಿನಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದ. ತನ್ನ ವ್ಯಾಪಾರದಿಂದ  ಚೆನ್ನಾಗಿ ಆಸ್ತಿ  ಮಾಡಿದ್ದ. ಜನರ ಜೊತೆ ಅವನ ಒಡನಾಟವು ಚೆನ್ನಾಗಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಅವನಿಗೆ ಕಾಯಿಲೆ ಬಂದು ಕೊನೆಯುಸಿರೆಳೆಯುವಾಗ, ಅವನ ಮೂರೂ ಮಕ್ಕಳನ್ನು ಕರೆದು,

‘ನಾನು ನನ್ನ ಜೀವನದಲ್ಲಿ ಮಾಡಿದ ಆಸ್ತಿ-ಪಾಸ್ತಿ ನೋಡಿಕೊಂಡು ಹೋದರೆ ಸಾಕು. ನೀವೇನೂ ಮಾಡುವುದು ಬೇಕಾಗಿಲ್ಲ. ಆದ್ರೆ ವ್ಯಾಪಾರ ಮಾಡೋಕೆ ಕೆಲವು ಸಲಹೆಗಳನ್ನ ಕೊಡ್ತೀನಿ ಅದನ್ನ ಪಾಲಿಸಿ’ ಎಂದು 3 ಸಲಹೆಗಳನ್ನು ನೀಡುತ್ತಾನೆ:

  • ಕೊಟ್ಟ ಸಾಲ ಮತ್ತೆ ಕೇಳಬೇಡಿ ​
  • ಊರಿಗೊಂದು ಮನೆ ಕಟ್ಟಿಸಿ ​
  • ನೆರಳಲ್ಲಿ ಹೋಗಿ, ನೆರಳಲ್ಲಿ ಬನ್ನಿ

‘ಹಾಗೆಯೇ, ಈ ಯಾವುದೂ ತಿಳಿಯದಿದ್ದರೆ 3 ಕಾಲಿನ ಮನುಶ್ಯನನ್ನು ಕೇಳಿ’ ಎಂದು ಹೇಳಿ ಸತ್ತು ಹೋಗುತ್ತಾನೆ.

ಆದರೆ  ಅಶ್ಟೊಂದು ಬುದ್ದಿವಂತರಲ್ಲದ ಮಕ್ಕಳಿಗೆ ತಂದೆ ಹೇಳಿದ್ದು ಸರಿಯಾಗಿ ಅರ‍್ತವಾಗುವುದಿಲ್ಲ. ‘ತಮ್ಮ ತಂದೆ ಹೇಳಿದ ಹಾಗೇ ಮಾಡಿದರೆ ಜೀವನದಲ್ಲಿ ಒಳ್ಳೆ ವ್ಯಕ್ತಿಗಳಾಗುವೆವು’ ಎಂದು ತಿಳಿಯುತ್ತಾರೆ.

ಅಂದಿನಿಂದ ತಮ್ಮ ಅಂಗಡಿಗೆ ಬಂದು ಸಾಲ ತೆಗೆದು ಕೊಂಡು ಹೋದವರಿಗೆ, ‘ಸಾಲ ಎಂದು ತೀರಿಸುವಿರಿ?’ ಎಂದು ಕೇಳುವುದನ್ನೇ ಬಿಟ್ಟುಬಿಡುತ್ತಾರೆ. ಇದನ್ನು ತಿಳಿದ ಜನ, ಅವರ ಹತ್ತಿರ ತುಂಬಾ ಸಾಲಮಾಡಿ ಆರಾಮಾಗಿ ಇರುತ್ತಾರೆ. ಯಾರೂ ಸಾಲವನ್ನು ಮರಳಿಸುವುದೇ ಇಲ್ಲ. ಹೀಗಾಗಿ ವ್ಯಾಪಾರಿಯ ಮಕ್ಕಳು ಅಂಗಡಿ ಮುಚ್ಚುವ ಪರಿಸ್ತಿತಿ ಬರುತ್ತದೆ.

ಇನ್ನು ಊರಿಗೊಂದು ಮನೆ ಕಟ್ಟು ಅಂತ ತಂದೆ ಹೇಳಿರುವ ಮಾತನ್ನಾದ್ರೂ ಪಾಲಿಸೋಣ ಎಂದು ಸ್ವಲ್ಪ ಜಮೀನು ಮಾರಿ, ಅಕ್ಕ ಪಕ್ಕದ ಊರಲ್ಲೆಲ್ಲಾ ಮನೆ ಕಟ್ಟಿಸುತ್ತಾರೆ. ಆ ಮನೆಗಳು ಸ್ವಲ್ಪ ದಿನಗಳಲ್ಲೇ ಬಿದ್ದು ಹೋಗುತ್ತವೆ. ಅಪ್ಪನ ಮೊದಲೆರಡು ಸಲಹೆಗಳಿಂದ ನಶ್ಟವಾದಾಗ, ಮೂರನೆಯ ಮಾತನ್ನಾದ್ರೂ ಪಾಲಿಸೋಣ ಅಂತ ತೀರ‍್ಮಾನಿಸುತ್ತಾರೆ.

‘ನೆರಳಲ್ಲಿ ಹೋಗಿ ನೆರಳಲ್ಲಿ ಬನ್ನಿ’ ಎಂಬ ಅಪ್ಪನ ಮಾತನ್ನು ಪಾಲಿಸಲು, ತಾವು ಓಡಾಡುವ ಎಲ್ಲ ದಾರಿಯಲೂ ಚಪ್ಪರ ಹಾಕಿಸುತ್ತಾರೆ. ತಾವು ನಡೆಯುವ ದಾರಿಗಳಿಗೆಲ್ಲಾ ಚಪ್ಪರ ಹಾಕಿಸೋಕೆ ಆಗದೆ ಅದರಲ್ಲೂ ನಶ್ಟ ಅನುಬವಿಸುತ್ತಾರೆ. ಅಪ್ಪನ 3 ಸಲಹೆಗಳನ್ನು ಸರಿಯಾಗಿ ತಿಳಿಯದೇ ಬೀದಿಗೆ ಬರುತ್ತಾರೆ. ‘ತಂದೆ ಹೇಳಿದ್ದು ತಪ್ಪು ಅದನ್ನ ನಾವು ಮಾಡಬಾರದಿತ್ತು’ ಅಂತ ಬೈದು ಕೊಳ್ಳುತ್ತಾರೆ.

ಆಗ ಕೊನೆಯ ಮಗ, ‘ನನ್ನ ಮಾತುಗಳು ತಿಳಿಯಲಿಲ್ಲ ಅಂದ್ರೆ 3 ಕಾಲಿನ ಮನುಶ್ಯನನ್ನು ಕೇಳಿ ಅಂತ ತಂದೆ ಹೇಳಿದ್ರು. ನಾವು  ಅದನ್ನ ತಿಳಿಯದೆ, ದೊಡ್ಡ ಬುದ್ದಿವಂತರಂತೆ ನಡೆದುಕೊಂಡು ನಶ್ಟ ಅನುಬವಿಸಿದ್ವಿ. ಈಗ ನಾವೆಲ್ಲರೂ ಸೇರಿ ಆ 3 ಕಾಲಿನ ಮನುಶ್ಯನನ್ನು ಹುಡುಕೋಣ’ ಅಂತ ಉಳಿದವರಿಗೆ ಹೇಳುತ್ತಾನೆ. ಎಲ್ಲರೂ 3 ಕಾಲಿನ ಮನುಶ್ಯನನ್ನು ಹುಡುಕಲು ಹೊರಡುತ್ತಾರೆ.

ಅಕ್ಕ ಪಕ್ಕದ ಊರಲ್ಲೆಲ್ಲ 3 ಕಾಲಿನ ಮನುಶ್ಯನ ಬಗ್ಗೆ ಕೇಳ್ತಾರೆ. ಆ ತರಹದ ವ್ಯಕ್ತಿ ಯಾರೂ ಇಲ್ಲ ಅಂತ ಊರಿನ ಮಂದಿ ಹೇಳುತ್ತಾರೆ. ಕೆಲವರು ಇವರನ್ನು ನೋಡಿ ನಗುತ್ತಾರೆ. ಇನ್ನೂ ಕೆಲವರು ‘ನಿಮಗೆಲ್ಲೋ ಹುಚ್ಚು ಹಿಡಿದಿರಬಹುದು, ಹೋಗಿ’ ಅಂತ ಬೈದು ಕಳಿಸುತ್ತಾರೆ. ‘ಏನೇ ಆದ್ರೂ ಆ 3 ಕಾಲಿನ ಮನುಶ್ಯ ಯಾರು? ಅಂತ ತಿಳಿದುಕೊಳ್ಳಲೇಬೇಕು’ ಅಂತ ವ್ಯಾಪಾರಿಯ ಮಕ್ಕಳು ತೀರ‍್ಮಾನಿಸುತ್ತಾರೆ.

ಒಂದು ದಿನ, ಎಲ್ಲರೂ ಮರದ ಕೆಳಗೆ ಕುಳಿತಿರುವಾಗ ದೂರದಲ್ಲಿ 3 ಕಾಲಿನ ಮನುಶ್ಯನಂತೆ ಒಬ್ಬ ಕಾಣುತ್ತಾನೆ. ಆ ಮನುಶ್ಯನ ಹತ್ತಿರ ಓಡಿ ಹೋಗಿ ನೋಡಿದಾಗ ಅವನೊಬ್ಬ ಹಣ್ಣು ಹಣ್ಣು ಮುದುಕನಾಗಿರುತ್ತಾನೆ. ಅವರಿಗೆ ನಿರಾಸೆಯಾಗುತ್ತದೆ. ಇವರ ನಿರಾಸೆಯನ್ನು ಕಂಡು ‘ಏನ್ ಆಯಿತು’ ಎಂದು ಆ ಮುದುಕ ಇವರಿಗೆ ಕೇಳುತ್ತಾನೆ. ಅಲ್ಲಿಯವರೆಗೂ ನಡೆದಿದ್ದನ್ನೆಲ್ಲಾ ಆ ಮುದುಕನಿಗೆ ವ್ಯಾಪಾರಿಯ ಮಕ್ಕಳು ವಿವರಿಸುತ್ತಾರೆ.

ಆಗ ಆ ಹಣ್ಣು ಹಣ್ಣು ಮುದುಕನು,

1) ಕೊಟ್ಟ ಸಾಲ ಮತ್ತೆ ಕೇಳಬೇಡಿ : ಸಾಲ ಕೊಡುವ ಮುನ್ನ ಅವರ ಹತ್ತಿರ ಏನಾದರೂ ಸಾಲಕ್ಕಿಂತ ಹೆಚ್ಚು ಬೆಲೆಬಾಳುವ ವಸ್ತು ಇಟ್ಟುಕೊಂಡು ಕೊಡಬೇಕು. ಆಗ ಅವರು ನೀವು ಕೇಳುವ ಮುಂಚೆಯೇ, ತಮ್ಮ ವಸ್ತು ವಾಪಸ್ ಪಡೆಯಲು ಬಂದೇ ಬರುತ್ತಾರೆ.  ಸಾಲ ಹಿಂದಿರುಗಿಸುತ್ತಾರೆ.

2) ಊರಿಗೊಂದು ಮನೆ ಕಟ್ಟಿ : ನೀವು ಯಾವ ಊರಿಗೆ ಹೋಗುತ್ತಿರೋ ಅಲ್ಲೊಬ್ಬ ಗೆಳೆಯನನ್ನು ಮಾಡಿಕೊಳ್ಳಬೇಕು. ನೀವು ಯಾವಾಗಲಾದ್ರೂ ಕೆಲಸದ ಮೇಲೆ ಅಲ್ಲಿಗೆ ಹೋದಾಗ ನೀವು ಅವನ ಸಹಾಯ​ ಪಡೆಯಬಹುದು.

3) ನೆರಳಲ್ಲಿ ಹೋಗಿ, ನೆರಳಲ್ಲಿ ಬನ್ನಿ : ಇದರರ‍್ತ ನಡೆದಾಡುವ ದಾರಿಯಲ್ಲಿ ಚಪ್ಪರ ಹಾಕಿಸುವುದಲ್ಲ. ನೆರಳಿನಲ್ಲಿ ಹೋಗಿ ಅಂದ್ರೆ ಸೂರ‍್ಯ ಹುಟ್ಟುವ ಮುಂಚೆ ಕೆಲಸಕ್ಕೆ ಹೋಗ್ಬೇಕು. ಸೂರ‍್ಯ ಮುಳುಗೋವರೆಗೂ ಅಂಗಡಿಯಲಿ ಕೆಲಸ ಮಾಡಬೇಕು. ಸೂರ‍್ಯ ಮುಳುಗಿದ ನಂತರ ಮನೆಗೆ ಬರಬೇಕು.

ಎಂದು ತಂದೆಯ ಮಾತಿನ ಅರ‍್ತವನ್ನು ಹೀಗೆ ಬಿಡಿಸಿ ಹೇಳುತ್ತಾನೆ. ಮೂರೂ ಮಕ್ಕಳಿಗೆ ತಂದೆಯ ಸಲಹೆಗಳು ಈಗ ಅರ‍್ತವಾಗುತ್ತವೆ. ಇದನ್ನೆಲ್ಲಾ ತಿಳಿಸಿದ ಆ ಮುದುಕನಿಗೆ ದನ್ಯವಾದ ಹೇಳುತ್ತಾ, ‘ಅಜ್ಜಾ, ಇದೆಲ್ಲ ನಿನಗೆ ಹೇಗೆ ಅರ‍್ತ ಆಯಿತು’ ಎಂದು ಕೇಳುತ್ತಾರೆ.

ಆಗ, ‘ನಾನೇ ಆ 3 ಕಾಲಿನ ಮನುಶ್ಯ’ ಎಂದು ಆ ಮುದುಕ ಹೇಳುವನು. ವ್ಯಾಪಾರಿಯ ಮಕ್ಕಳಿಗೆ ಮುದುಕನ ಮಾತು ಗೊತ್ತಾಗದೇ ‘ಅದು ಹೇಗೆ’ ಅಂತ ಮರು ಪ್ರಶ್ನೆ ಹಾಕುತ್ತಾರೆ.

ಮುದುಕ ಹೇಳುತ್ತಾನೆ, ‘ನನಗೆ ವಯಸ್ಸಾಗಿದೆ, ಈಗ ನನಗೆ ಎರಡು ಕಾಲಿನಲ್ಲಿ ನಿಲ್ಲೋಕೆ ಶಕ್ತಿ ಇಲ್ಲ. ಅದಕ್ಕೆ ನನಗೆ ಈ ಊರುಗೋಲು ಬೇಕು. ಈಗ ನನಗೆ ಈ ಊರುಗೋಲು ಒಂದು ಕಾಲು ಇದ್ದಂತೆ. ಅದಕ್ಕೆ ನಾನು 3 ಕಾಲು ಇರುವ ಮನುಶ್ಯ’.

ಅಜ್ಜನಿಗೆ ನಮಸ್ಕರಿಸಿ, ತಮ್ಮ ಊರಿನತ್ತ ಹೊರಟ ಮಕ್ಕಳು, ಅಂದಿನಿಂದ ತಮ್ಮ ಅಪ್ಪ ನೀಡಿದ ಸಲಹೆಗಳನ್ನು ಸರಿಯಾಗಿ ಪಾಲಿಸಿ ತಮ್ಮ ವ್ಯಾಪಾರವನ್ನು ನಶ್ಟದಿಂದ ಲಾಬಕ್ಕೆ ತರುತ್ತಾರೆ. ಸುಕವಾಗಿ ಬಾಳುತ್ತಾರೆ.

( ಚಿತ್ರ ಸೆಲೆ:  kidsworldfun.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *