ರಣಜಿ ಕ್ರಿಕೆಟ್: ಕರ‍್ನಾಟಕ-ಮುಂಬೈ ಮಹಾಕಾಳಗ

ರಾಮಚಂದ್ರ ಮಹಾರುದ್ರಪ್ಪ.

ಬಾರತ ಮತ್ತು ಅಂತರರಾಶ್ಟ್ರೀಯ ಕ್ರಿಕೆಟ್ ಗೆ ದಶಕಗಳಿಂದ ಹಲವಾರು ದಿಗ್ಗಜ ಆಟಗಾರರನ್ನು ಬಳುವಳಿಯಾಗಿ ನೀಡಿರೋ ಎರಡು ರಾಜ್ಯ ಕ್ರಿಕೆಟ್ ಸಂಸ್ತೆಗಳಾದ ಮಂಬೈ ಮತ್ತು ಕರ‍್ನಾಟಕದ ಕ್ರಿಕೆಟ್ ಇತಿಹಾಸ ಸರಿ ಸುಮಾರು 85 ವರ‍್ಶಗಳಶ್ಟು ಹಳೆಯದು. 1933 ರ ಮೊದಲ ರಣಜಿ ಪಂದ್ಯಾವಳಿಯಿಂದ ಹಿಡಿದು ಇಲ್ಲಿಯ ತನಕ ಈ ಎರಡೂ ತಂಡಗಳು ತಮ್ಮ ಪ್ರಾಬಲ್ಯ ಮೆರೆದಿವೆ. ಮುಂಬೈ ತಂಡದಿಂದ ಸುಮಾರು ಬೌಲರ್ ಗಳು ಬಾರತಕ್ಕೆ ಆಡಿದರೂ ಅದು ತನ್ನ ಬ್ಯಾಟಿಂಗ್ ಪರಂಪರೆಗೇ ಹೆಚ್ಚು ಹೆಸರುವಾಸಿ. ಅದೇ ರೀತಿ ವಿಶ್ವನಾತ್, ದ್ರಾವಿಡ್ ರಂತಹ ವಿಶ್ವಶ್ರೇಶ್ಟ ಬ್ಯಾಟ್ಸಮನ್ ಗಳನ್ನು ಹೊಂದಿಯೂ ಕರ‍್ನಾಟಕ ತನ್ನ ಬೌಲಿಂಗ್ ಪರಂಪರೆಗೆ ಹೆಚ್ಚು ಹೆಸರುವಾಸಿ. ಮುಂಬೈ ತಂಡದಿಂದ ಇಲ್ಲಿಯ ತನಕ ಅತಿ ಹೆಚ್ಚು 73 ಜನ ಆಟಗಾರರು ಬಾರತದ ಪರ ಅಂತರರಾಶ್ಟ್ರೀಯ ಕ್ರಿಕೆಟ್ ಆಡಿದ್ದರೆ, 30 ಜನ ಕರುನಾಡ ಕ್ರಿಕೆಟಿಗರು ಅಂತರರಾಶ್ಟ್ರೀಯ ಮಟ್ಟದಲ್ಲಿ ಆಡಿದ್ದಾರೆ.

ಮುಂಬೈ ಇತಿಹಾಸ:

1934/35 ರ ಸಾಲಿನ ರಣಜಿ ಟೂರ‍್ನಿಯಲ್ಲಿ ಮೊದಲ ಬಾರಿಗೆ ಟ್ರೋಪಿ ಗೆದ್ದ ಬಾಂಬೆ ತಂಡ(ಈಗ ಮುಂಬೈ) ಇಲ್ಲಿಯ ತನಕ ಅತಿ ಹೆಚ್ಚು 41 ಬಾರಿ ರಣಜಿ ಟ್ರೋಪಿಯನ್ನು ಮುಡಿಗೇರಿಸಿಕೊಂಡಿದೆ. ಅದರಲ್ಲೂ 1958 ರಿಂದ 73ರ ತನಕ ದಾಕಲೆಯ ಸತತ 15 ಬಾರಿ ಗೆದ್ದಿರೋದು ಮುಂಬೈನ ತಾಕತ್ತನ್ನು ತೋರುತ್ತದೆ. ಅಲ್ಲಿನ ಆಜಾದ್ ಮೈದಾನ್, ಶಿವಾಜಿ ಪಾರ‍್ಕ್, ದಾದರ್ ಯೂನಿಯನ್ ಮೈದಾನಗಳಲ್ಲಿ ಬ್ಯಾಟಿಂಗ್ ಪಟ್ಟುಗಳನ್ನು ಕಲಿತ ಮುಂಬೈ ಆಟಗಾರರು ಅಂತರರಾಶ್ಟ್ರೀಯ ಮಟ್ಟದಲ್ಲಿ ಸರ‍್ವಶ್ರೇಶ್ಟರಾಗಿ ಹೊರಹೊಮ್ಮಿದ್ದಾರೆ. ವಿಜಯ್ ಮರ‍್ಚೆಂಟ್, ವಿಜಯ್ ಮಂಜ್ರೇಕರ್, ಅಜಿತ್ ವಾಡೇಕರ್, ಸುನಿಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್ ಇವರೆಲ್ಲರೂ ಅಂತರರಾಶ್ಟ್ರೀಯ ಮಟ್ಟದಲ್ಲಿ ಮುಂಬೈ ಹೆಸರನ್ನು ಬೆಳಗಿದವರು.

ಆಗಿನ ಕಾಲದಲ್ಲಿ ಮುಂಬೈನ ಪ್ರಾಬಲ್ಯಕ್ಕೆ ಮುಕ್ಯವಾದ ಕಾರಣ ಅಲ್ಲಿದ್ದ ಟರ‍್ಪ್ ಪಿಚ್ ಗಳು. ದೇಶದ ಯಾವುದೇ ಊರಿನಲ್ಲಿ ಇರದ ಅತಿ ಹೆಚ್ಚು ಟರ‍್ಪ್ ಪಿಚ್ ಗಳು ಮುಂಬೈನಲ್ಲಿ ಇದ್ದವು. 75ರ ತನಕ ಬೆಂಗಳೂರಿನಂತಹ ಊರಿನಲ್ಲೇ ಸೆಂಟ್ರಲ್ ಕಾಲೇಜ್ ಗ್ರೌಂಡ್ ಬಿಟ್ಟರೆ ಎಲ್ಲೂ ಟರ‍್ಪ್ ಪಿಚ್ ಗಳು ಇರಲಿಲ್ಲ. ಹೀಗಿರುವಾಗ ಬೇರೆ ಊರುಗಳ ಪರಿಸ್ತಿತಿ ಏನೆಂದು ಊಹಿಸಬಹುದು. 80 ರ ದಶಕದಿಂದೀಚೆಗೆ ಎಲ್ಲಾ ರಾಜ್ಯಗಳಲ್ಲೂ ಕ್ರಿಕೆಟ್ ನ ಸೌಕರ‍್ಯಗಳು ಸುದಾರಿಸಿದ ಮೇಲೆ ಮುಂಬೈ ಮೊದಲಿನಶ್ಟು ಸಲೀಸಾಗಿ ಗೆಲ್ಲಲಾಗದ್ದಿದ್ದರೂ ಒಂದು ದಶಕದಲ್ಲಿ ಕಡಿಮೆ ಅಂದರೂ ಮೂರರಿಂದ ನಾಲ್ಕು ರಣಜಿ ಟ್ರೋಪಿಯನ್ನು ಗೆಲ್ಲುತ್ತಾ ಬಂದಿದೆ.

ಕರ‍್ನಾಟಕದ ಇತಿಹಾಸ:

1933 ರಿಂದ 1972 ರ ತನಕ ಮೈಸೂರು ತಂಡವಾಗಿ ರಣಜಿ ಟೂರ‍್ನಿಯಲ್ಲಿ ಪಾಲ್ಗೊಂಡ ಕರುನಾಡ ಕ್ರಿಕೆಟಿಗರು, 1973 ರಲ್ಲಿ ಕರ‍್ನಾಟಕ ಎಂದು ಮರು ಹೆಸರಿಸಿಕೊಂಡು, ಅದೇ ವರ‍್ಶ ತನ್ನ ಚೊಚ್ಚಲ ರಣಜಿ ಟ್ರೋಪಿಯನ್ನು ಎತ್ತಿ ಹಿಡಿಯಿತು. ಮುಂಬೈ ನಂತರ ಅತಿ ಹೆಚ್ಚು (8) ರಣಜಿ ಟ್ರೋಪಿಯನ್ನು ಗೆದ್ದಿರುವುದು ಕರ‍್ನಾಟಕದ ಹೆಗ್ಗಳಿಕೆ. ಪ್ರಸನ್ನ, ಚಂದ್ರಶೇಕರ್, ಕುಂಬ್ಳೆ ಅಂತಹ ಸ್ಪಿನ್ ದಿಗ್ಗಜರು, ವೇಗದ ಬೌಲರ್ ಗಳಾದ ಜಾವಗಲ್  ಶ್ರೀನಾತ್, ವೆಂಕಟೇಶ್ ಪ್ರಸಾದ್ ಮತ್ತು ಬ್ಯಾಟಿಂಗ್ ದಂತಕತೆಗಳಾದ ಗುಂಡಪ್ಪ ವಿಶ್ವನಾತ್, ರಾಹುಲ್ ದ್ರಾವಿಡ್ ಅವರು ಕರ‍್ನಾಟಕದ ಕ್ರಿಕೆಟ್ ಪರಂಪರೆಯನ್ನು ಪ್ರಪಂಚಕ್ಕೆ ತೋರಿದವರು.

85 ವರ‍್ಶಗಳ ಮೊದಲ ದರ‍್ಜೆ ಕ್ರಿಕೆಟ್ ಇತಿಹಾಸ ಇರುವ ಬಾರತದಲ್ಲಿ ಸತತ ಎರಡು ವರ‍್ಶ (2014,2015) ಎಲ್ಲಾ ದೇಶೀಯ ಟೂರ‍್ನಿಗಳನ್ನು (ರಣಜಿ, ಇರಾನಿ, ವಿಜಯ್ ಹಜಾರೆ) ಗೆದ್ದಿರುವುದು ಕರ‍್ನಾಟಕ ಮಾತ್ರ. ಬೇರೆ ಯಾವ ತಂಡ ಒಂದು ಬಾರಿಯೂ ಈ ಸಾದನೆಯನ್ನು ಮಾಡಿಲ್ಲ ಅನ್ನೋದನ್ನು ಇಲ್ಲಿ ಗಮನಿಸಬೇಕು. ಈಗಲೂ ಬಲಾಡ್ಯ ತಂಡವಾಗಿರೋ ಕರ‍್ನಾಟಕ ಪ್ರತಿ ಬಾರಿ ಪ್ರಶಸ್ತಿ ಗೆಲ್ಲುವ ಒಂದು ನೆಚ್ಚಿನ ತಂಡವಾಗಿಯೇ ಕಣಕ್ಕಿಳಿಯುತ್ತದೆ.

ಮುಕಾ-ಮುಕಿ:

ಈ ಎರಡೂ ತಂಡಗಳು ಮೊದಲ ಬಾರಿ ಮುಕಾಮುಕಿಯಾಗಿದ್ದು 1942ರ ರಣಜಿ ಪೈನಲ್ ನಲ್ಲಿ. ಆ ಪಂದ್ಯದಲ್ಲಿ ಬಾಂಬೆ ಮೈಸೂರನ್ನು ಇನ್ನಿಂಗ್ಸ್ ಹಾಗು 281 ರನ್ ಗಳಿಂದ ಮಣಿಸಿ ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಅದಾದ ನಂತರ 1960,70 ಹಾಗು 80 ರ ದಶಕಗಳಲ್ಲಿ ಹಲವಾರು ರೋಚಕ ಪಂದ್ಯಗಳಿಗೆ ಈ ತಂಡಗಳು ಸಾಕ್ಶಿಯಾಗಿವೆ. 70ರ ದಶಕದಲ್ಲಂತೂ ಅತ್ತ ಗವಾಸ್ಕರ್, ವಾಡೇಕರ್, ವೆಂಗಸರ‍್ಕರ್ ಆಡಿದರೆ ಕರ‍್ನಾಟಕದ ಪರ ವಿಶ್ವನಾತ್, ಪ್ರಸನ್ನ, ಬ್ರಿಜೇಶ್ ಪಟೇಲ್, ಚಂದ್ರಶೇಕರ್ ಆಡಿ ದೇಶೀ ಕ್ರಿಕೆಟ್ ಗೆ ಅಂತರಾಶ್ಟ್ರೀಯ ಕ್ರಿಕೆಟ್ ನ ಮೆರಗು ತಂದುಕೊಡುತ್ತಿದ್ದರು.

ಕ್ರಿಕೆಟ್ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಹೇಳುವಂತೆ 70 ರ ದಶಕದಲ್ಲಿ ಮುಂಬೈ- ಕರ‍್ನಾಟಕ ಪಂದ್ಯಗಳು ಅಂತರಾಶ್ಟ್ರೀಯ ಪಂದ್ಯಗಳಶ್ಟೇ ಕುತೂಹಲ ಕೆರಳಿಸಿ ಸಾವಿರಾರು ಜನರನ್ನು ಆಟದ ಕಣದತ್ತ ಸೆಳೆಯುತ್ತಿದ್ದವು. ಮೊನ್ನೆಯಶ್ಟೇ ಗವಾಸ್ಕರ್ ಒಂದು ಸಂದರ‍್ಶನದಲ್ಲಿ, ತಮ್ಮ ಪ್ರಬಲ ಮುಂಬೈ ತಂಡಕ್ಕೆ ಪೋಟಿ ನೀಡಿದ್ದು, ಕಡೆಗೆ ಮಣಿಸಿದ್ದು ಕರ‍್ನಾಟಕ ಮಾತ್ರ ಎಂದು ಹೇಳಿದರು. ಇಲ್ಲಿ ತನಕ ಈ ತಂಡಗಳ ನಡುವೆ ನಡೆದಿರೋ 24 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಮುಂಬೈ ಗೆದ್ದರೆ ಕರ‍್ನಾಟಕ 2 ಪಂದ್ಯಗಳನ್ನು ಗೆದ್ದಿದೆ. 12 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ. ಆದರೆ ಈ ಅಂಕಿ-ಅಂಶಗಳು ದಿಕ್ಕು ತಪ್ಪಿಸುತ್ತವೆ ಅನ್ನೋದು ದಿಟ. ಮುಂಬೈ ಮೇಲುಗೈ ಸಾದಿಸಿದ್ದರೂ ಹಲವಾರು ಪಂದ್ಯಗಳನ್ನು ಕರ‍್ನಾಟಕ ಕೂದಲೆಳೆಯ ಅಂತರದಲ್ಲಿ ಸೋಲುಂಡಿದೆ.

ಸ್ಮರಣೀಯ ಪಂದ್ಯಗಳು:

1973 ರಲ್ಲಿ ರಾಜಸ್ತಾನವನ್ನು ಸೋಲಿಸಿ ಮೊದಲ ರಣಜಿ ಟ್ರೋಪಿಯನ್ನು ಕರ‍್ನಾಟಕ ತನ್ನದಾಗಿಸಿಕೊಂಡಿತ್ತು. ಆದರೆ ಈ ಹಾದಿ ಅಶ್ಟು ಸುಳುವಾಗಿರಲಿಲ್ಲ. ಯಾಕೆಂದರೆ ಸೆಮಿಪೈನಲ್ ಪೋಟಿ ಮುಂಬೈ ಮೇಲಿತ್ತು. ಅಲ್ಲಿ ತನಕ ಸತತ 15 ಬಾರಿ ಪ್ರಶಸ್ತಿಯನ್ನು ಗೆದ್ದು ಬೀಗುತ್ತಿದ್ದ ತಂಡದ ಗೆಲುವಿನ ಓಟವನ್ನು ತಡೆದು, ಆ ತಂಡವನ್ನು ಕಟ್ಟಿಹಾಕಲು ಪವಾಡವೇ ಜರುಗಬೇಕಿತ್ತು. ಪ್ರಸನ್ನ ಹಾಗು ಚಂದ್ರಶೇಕರ್ ಅವರ ಸ್ಪಿನ್ ಮೋಡಿಯಿಂದ ಮುಂಬೈ ಯನ್ನು ಬಗ್ಗಿಸುವ ಕೆಲಸ ನಡೆದೇ ಹೋಯಿತು. ಗವಾಸ್ಕರ್ ರ ಬಳಿ ಕೂಡ ಪ್ರಸನ್ನ ಹಾಗು ಚಂದ್ರಶೇಕರ್ ಅವರ ಸ್ಪಿನ್ ಎಸೆತಗಳಿಗೆ ಉತ್ತರವಿರಲಿಲ್ಲ. ಮತ್ತು ಬಾಂಬೆ ತಂಡದ ನಾಯಕ ವಾಡೇಕರ್ ರನ್ನು ನೇರ ಎಸೆತದಿಂದ ರನ್ ಔಟ್ ಮಾಡಿ ಪಂದ್ಯಕ್ಕೆ ತಿರುವು ನೀಡಿದ್ದ ಸುದಾಕರ್ ರಾವ್ ರ ಪಾತ್ರವೂ ಅಶ್ಟೇ ಮಹತ್ವದ್ದಾಗಿತ್ತು. ಮೊದಲ ಇನ್ನಿಂಗ್ಸ್ ನ ಮುನ್ನಡೆ ಸಾದಿಸಿ ಕರ‍್ನಾಟಕ ಪೈನಲ್ ತಲುಪಿದ್ದು ತಮ್ಮ ಕ್ರಿಕೆಟ್ ಬದುಕಿನಲ್ಲಿ ಮರೆಯಲಾಗದ ಕ್ಶಣ ಎಂದು ಆಗಿನ ನಾಯಕ ಪ್ರಸನ್ನ ಈಗಲೂ ನೆನೆಯುತ್ತಾರೆ.

ಕರ‍್ನಾಟಕದ ಈ ಸಾದನೆ ಆಗ ಬಾರತದ ಕ್ರಿಕೆಟ್ ಲೋಕವನ್ನೇ ತಲ್ಲಣಗೊಳಿಸಿತ್ತು ಎಂದು ಮಾಜಿ ಆಟಗಾರರು, ಕ್ರಿಕೆಟ್ ಪಂಡಿತರು ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಡುತ್ತಾ ಹೇಳುವ ಮಾತು. 82 ರ ಸೆಮಿಪೈನಲ್ ನಲ್ಲೂ ಕರ‍್ನಾಟಕ ಮತ್ತೊಮ್ಮೆ ಮುಂಬೈ ಮೇಲೆ ಇನ್ನಿಂಗ್ಸ್ ಮುನ್ನಡೆ ಸಾದಿಸಿ ಪೈನಲ್ ಗೆ ಲಗ್ಗೆ ಇಟ್ಟಿತು. ಈ ಪಂದ್ಯದಲ್ಲಿ ರಗುರಾಮ್ ಬಟ್ ರ ಸ್ಪಿನ್ ಅನ್ನು ಎದುರಿಸಲು ಎರಡನೇ ಇನ್ನಿಂಗ್ಸ್ ನಲ್ಲಿ ಗವಾಸ್ಕರ್ ಎಡಗೈ ಬ್ಯಾಟಿಂಗ್ ಮಾಡಿದ್ದು ಪಂದ್ಯದ ಸ್ಮರಣೀಯ ಕ್ಶಣಗಳಲ್ಲೊಂದು.

1973 ರ ಮುಂಬೈ ಮೇಲಿನ ಪೋಟಿಯಲ್ಲಿ ಸಿಹಿ ಅನುಬವ ಪಡೆದಿದ್ದ ಕರ‍್ನಾಟಕ ತಂಡ, ಕನಸಲ್ಲಿಯೂ 2010 ರಲ್ಲಿ ಮೈಸೂರಿನಲ್ಲಿ ನಡೆದ ರಣಜಿ ಪೈನಲ್ ಪಂದ್ಯವನ್ನು ನೆನೆಯಲು ಬಯಸುವುದಿಲ್ಲ. ನಾಲ್ಕನೇ ಇನ್ನಿಂಗ್ಸ್ ನಲ್ಲಿ ಗೆಲ್ಲಲು 338 ರನ್ ಗಳ ಬೆನ್ನತ್ತಿ ಹೊರಟ ಕರ‍್ನಾಟಕ ಕೇವಲ 6 ರನ್ ಗಳಿಂದ ಸೋತದ್ದು ಕರ‍್ನಾಟಕದ ಕ್ರಿಕೆಟ್ ಇತಿಹಾಸದಲ್ಲೇ ಅತಿ ನೋವಿನ ಗಳಿಗೆ. ಮನೀಶ್ ಪಾಂಡೆ ಅವರ ಸೊಗಸಾದ 144 ರನ್ ಗಳ ಹೊರತಾಗಿಯೂ ಗೆಲುವಿನ ಹೊಸ್ತಿಲಲ್ಲಿ ಎಡವಿ ಕರ‍್ನಾಟಕ ನಿರಾಸೆ ಅನುಬವಿಸಿತು. ಅಂದು ಮೈಸೂರಿನಲ್ಲಿ ನೆರೆದಿದ್ದ ಜನರ ಮೊಗವನ್ನು ಕಂಡರೆ ತಿಳಿಯುತ್ತಿತ್ತು ಆ ಸೋಲು ಯಾವ ಮಟ್ಟಕ್ಕೆ ನೋವು ನೀಡಿತ್ತು ಎಂದು.

ನಂತರ 2013 ರಲ್ಲಿ ಕರ‍್ನಾಟಕ ಮುಂಬೈ ಮೇಲೆ 22ನೇ ಪಂದ್ಯದಲ್ಲಿ ತನ್ನ ಚೊಚ್ಚಲ ಗೆಲುವು ಸಾದಿಸಿತು. ಇನ್ನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟ ಮೇಲೂ, ಶರತ್ ರ ಬೌಲಿಂಗ್ ಮತ್ತು ಮನೀಶ್ ರ ಶತಕದ ನೆರವಿನಿಂದ ಕರ‍್ನಾಟಕ ತಂಡ ಗೆದ್ದು ಮುಂಬೈ ತಂಡಕ್ಕೆ ಆಗಾತ ನೀಡಿತು. ಮತ್ತೆ 2015 ರ ಸೆಮಿಪೈನಲ್ ನಲ್ಲಿ ನಾಯಕ ವಿನಯ್ 6 ವಿಕೆಟ್ ಪಡೆದು ಮಂಬೈ ಅನ್ನು 44 ಕ್ಕೆ ಆಲ್ ಔಟ್ ಮಾಡಿದ್ದು ಒಂದು ಸಾರ‍್ವಕಾಲಿಕ ದಾಕಲೆಯಾಗಿ ಉಳಿದಿದೆ. ಆ ಸೆಮಿಪೈನಲ್ ಪಂದ್ಯವನ್ನು ಗೆದ್ದು ನಂತರ 8ನೇ ರಣಜಿ ಟ್ರೋಪಿಯನ್ನೂ ಕರ‍್ನಾಟಕ ತನ್ನದಾಗಿಸಿಕೊಂಡಿತ್ತು.

2017/18 ಕ್ವಾರ‍್ಟರ್ ಪೈನಲ್:

ಈ ಸಾಲಿನ ಕ್ವಾರ‍್ಟರ್ ಪೈನಲ್ ಪಂದ್ಯದಲ್ಲಿ ಇಂದಿನಿಂದ ನಾಗಪುರದಲ್ಲಿ ಮತ್ತೊಮ್ಮೆ ಕರ‍್ನಾಟಕ ಮತ್ತು ಮುಂಬೈ ಎದುರಾಗಲಿದ್ದು, ಇದು ಈ ಟೂರ‍್ನಿಯ ಬ್ಲಾಕ್ ಬಸ್ಟರ್ ಪಂದ್ಯವೆಂದೇ ಕ್ರಿಕೆಟ್ ವಲಯದಲ್ಲಿ ಹೇಳಲಾಗುತ್ತಿದೆ. 6 ಲೀಗ್ ಪಂದ್ಯಗಳಲ್ಲಿ 4 ರಲ್ಲಿ ಗೆದ್ದು ಎರಡನೇ ಹಂತಕ್ಕೆ ಕರ‍್ನಾಟಕ ತಲುಪಿದ್ದರೆ, ಮುಂಬೈ 2 ಪಂದ್ಯ ಗೆದ್ದಿದೆ. ಹಾಳೆ ಮೇಲೆ ಕರ‍್ನಾಟಕವೇ ಬಲಿಶ್ಟ ಪಂದ್ಯವಾಗಿ ಕಂಡರೂ ಮುಂಬೈ ಅವರನ್ನು ಕಡೆಗಣಿಸುವಂತಿಲ್ಲ. ಅವರು ತಮ್ಮ ಕಡೂಸ್ ಗುಣಕ್ಕೆ(ಗಟ್ಟಿತನ) ಹೆಸರುವಾಸಿ.

6 ಪಂದ್ಯಗಳಲ್ಲಿ ಆಲ್ ರೌಂಡ್ ಪ್ರದರ‍್ಶನ ನೀಡಿರೋ ಕರ‍್ನಾಟಕ ಗೆಲ್ಲುವ ನೆಚ್ಚಿನ ತಂಡವಾಗಿದೆ. ತಂಡದ ಮಾಯಾಂಕ್ ಅಗರವಾಲ್ ಆಗಲೇ 5 ಶತಕಗಳಿಂದ 1064 ರನ್ ಬಾರಿಸಿದ್ದಾರೆ. ಇದರಲ್ಲಿ ಒಂದು ತ್ರಿಶತಕ ಕೂಡ ಇದೆ. ಜೊತೆಗೆ ಸಮರ‍್ತ್ 3 ಶತಕಗಳು, ಕರುಣ್ 2 ಶತಕಗಳು ಮತ್ತು ಸ್ಟುವರ‍್ಟ್ ಬಿನ್ನಿ, ಕೆ. ಗೌತಮ್ ತಲಾ ಒಂದು ಶತಕ ಬಾರಿಸಿದ್ದಾರೆ. ಒಟ್ಟಾರೆಯಾಗಿ ತಂಡ ಒಳ್ಳೆ ಬ್ಯಾಟಿಂಗ್ ಲಯ ಕಂಡುಕೊಂಡಿದೆ. ಮುಂಬೈ ಪರ ಪ್ರುತ್ವಿ ಶಾ ಮತ್ತು ಸಿದ್ದೇಶ್ ಲಾಡ್ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ಬೌಲಿಂಗ್ ವಿಬಾಗದಲ್ಲಿ ಕರ‍್ನಾಟಕವೇ ಮೇಲುಗೈ ಸಾದಿಸಿದೆ. ಮಿತುನ್ ಮತ್ತು ವಿನಯ್ ತಮ್ಮ ಎಂದಿನ ಸ್ತಿರತೆ ಕಾಪಾಡಿಕೊಂಡಿದ್ದಾರೆ. ಈಗ ಅನಬವಿ ಅರವಿಂದ್ ರ ಬರುವಿಕೆಯಿಂದ ವೇಗದ ಬೌಲಿಂಗ್ ಬಲಾಡ್ಯವಾಗಿದೆ. ಕೆ.ಗೌತಮ್ ಮತ್ತು ಶ್ರೇಯಸ್ ಗೋಪಾಲ್ ಸ್ಪಿನ್ನರ್ ಗಳ ಹೊಣೆಯನ್ನು ಸಮರ‍್ತವಾಗಿ ನಿಬಾಯಿಸಿದ್ದಾರೆ. ಮುಂಬೈನ ಅನುಬವಿ ವೇಗಿ ಶಾರ‍್ದುಲ್ ಟಾಕೂರ್ ಪೆಟ್ಟು ಮಾಡಿಕೊಂಡು ತಂಡದಿಂದ ಹೊರಗುಳಿದಿರೋದು ಮುಂಬೈ ತಂಡಕ್ಕೆ ಒಳ್ಳೆ ಸುದ್ದಿಯಲ್ಲ. ಆದ್ದರಿಂದ ದವಲ್ ಕುಲಕರ‍್ಣಿ ಅವರ ಮೇಲೆ ಮುಂಬೈ ತುಂಬಾ ಅವಲಂಬಿತವಾಗಿದೆ.

ಹೀಗೆ ಅರಕೆ ಮಾಡಿ ಆಟಗಾರಾರ ಅಳವನ್ನು ನೋಡಿದರೆ ಕರ‍್ನಾಟಕ ಗೆಲ್ಲಲೇಬೇಕು ಎಂದನಿಸುತ್ತದೆ. ಪಂದ್ಯದ ಪಲಿತಾಂಶ ಏನೇ ಆದರೂ ಇದೊಂದು ರೋಚಕ ಹಣಾಹಣಿಯಾಗಲಿದೆ ಅನ್ನೋದು ದಿಟ. ಈ 5 ದಿನಗಳ ಪಂದ್ಯ ನೇರ ಪ್ರಸಾರವಾಗಲಿದ್ದು ಅಬಿಮಾನಿಗಳು ಈ ಆಟವನ್ನು ಸವಿಯಬಹುದಾಗಿದೆ. ನಮ್ಮ ತಂಡ ಗೆಲ್ಲಲಿ ಎಂದು ಹಾರೈಸುತ್ತಾ, ವಿನಯ್ ಬಳಗ ಮತ್ತೊಮ್ಮೆ ಟ್ರೋಪಿಯನ್ನು ಎತ್ತಿ ಹಿಡಿಯಲಿ ಎಂದು ಆಶಿಸುತ್ತಾ ಈ ಪಂದ್ಯವನ್ನು ನೋಡೋಣ!!

( ಚಿತ್ರಸೆಲೆ : bcci.tv )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: