ಕಾಲವೇ ನೀ ಹೊಸತನದ ಹರಿಕಾರ

– ವಿನು ರವಿ.

ಕಾಲ ಕೂಡಿಸುವ ಜೀವ
ಜಾತ್ರೆಯಲಿ ನಿತ್ಯ ಉತ್ಸವ
ನಿತ್ಯ ಹೊಸತನ
ಕಾಲನಿಟ್ಟ ಪ್ರತಿ ಹೆಜ್ಜೆಯಲಿ
ಸಾವಿರ ನೆನಪುಗಳ ಚಿತ್ತಾರದ
ಹೊಸತನದ ಮೆಲುಕಿದೆ

ಕಾಲ ಎಳೆದ ವರ‍್ತಮಾನದ
ರೇಕೆಗಳಲಿ ಬಣ್ಣ ಬಣ್ಣದಾ
ಬವಿಶ್ಯದ ಹೂಗಳಲಿ
ಹೊಸತನದ ನರುಗಂಪಿದೆ

ಕಾಲ ಹಾಡುವ ರುತುಗಾನದಲಿ
ಕೋಗಿಲೆಯ ಇಂಪಿದೆ
ಮಾಗಿಯ ಇಬ್ಬನಿಯ ಸಿಂಚನದಲಿ
ಹೊಸತನದ ಎಳೆ ಚಿಗುರಿದೆ

ಕಾಲ ತೂಗುವ ಪ್ರೀತಿಯ
ಉಯ್ಯಾಲೆಯಲಿ
ಜೀವ ಜೀವಗಳ ಬೆಸೆದ
ಅನುರಾಗದ ಹೊಸತನದ ಜೀಕಿದೆ

ಕಾಲ ಹಚ್ಚಿದಾ ದೀಪದ
ಬೆಳಕಲಿ ಎಳೆಯರು ಕಟ್ಟಿದ
ಕೋಟಿ ಕನಸುಗಳ
ಹೊಸತನದ ಹೊಂಬೆಳಕಿದೆ

ಕಾಲವೇ ನೀ ಹೊಸತನದ ಹರಿಕಾರ
ನೀ ಚಿರಂತನ, ನೀ ನಿತ್ಯ ನೂತನ

(ಚಿತ್ರದ ಹಿನ್ನೆಲೆ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: