ಕಲೀಲ್ ಗಿಬ್ರಾನ್ ನ ಕತೆ: ಪ್ರಾಚೀನ ಪ್ರತಿಮೆ

– ಪ್ರಕಾಶ ಪರ‍್ವತೀಕರ.

ಪ್ರತಿಮೆ, Statue

ಬೆಟ್ಟದ ಮೇಲಿನ ಒಂದು ಊರಲ್ಲಿ ಒಬ್ಬ ವಾಸಿಸುತ್ತಿದ್ದ. ಆತನ ಹತ್ತಿರ ಒಂದು ತುಂಬಾ ಹಳೆಯ ಕಾಲದ ಕಲ್ಲಿನ ಪ್ರತಿಮೆ ಇತ್ತು. ಅದು ಮೂಲೆಯಲ್ಲಿ ದಿಕ್ಕೇಡಿಯಾಗಿ ಬಿದ್ದಿತ್ತು. ಇವನ ಗಮನ ಅದರ ಕಡೆ ಇರಲೂ ಇಲ್ಲ. ಒಂದು ದಿನ ಪಟ್ಟಣದಿಂದ ಒಬ್ಬ ಈತನ ಮನೆಗೆ ಬಂದ. ಆತ ತುಂಬಾ ಓದಿದವನಾಗಿದ್ದ, ತಿಳಿದವನಾಗಿದ್ದ. ನಾಲ್ಕಾರು ದೇಶಗಳನ್ನು ನೋಡಿದ್ದ.

ಆತ ಆ ಪ್ರತಿಮೆಯನ್ನು ನೋಡಿ, ”ಈ ಪ್ರತಿಮೆಯನ್ನು ನನಗೆ ಮಾರುವೆಯಾ?“ ಎಂದು ಬೆಟ್ಟದೂರಿನವನನ್ನು  ಕೇಳಿದ.

ಆತನ ಮಾತನ್ನು ಕೇಳಿ ಬೆಟ್ಟದೂರಿನವನು ನಕ್ಕು ”ಈ ಕಲ್ಲನ್ನು ಯಾರಾದರೂ ಕೊಂಡು ಕೊಳ್ಳುತ್ತಾರೆಯೇ?” ಎಂದು ಕೇಳಿದ.

ಪಟ್ಟಣದಿಂದ ಬಂದಿದ್ದವ ಹೇಳಿದ ”ನಾನು ಈ ಕಲ್ಲಿಗೆ ಒಂದು ಬೆಳ್ಳಿ ನಾಣ್ಯ ಕೊಡುತ್ತೇನೆ. ನನಗೆ ಕೊಡು”.

ಮೊದಲು ಅವನ ಮಾತು ಕೇಳಿ ಬೆಟ್ಟದೂರಿನವನಿಗೆ ಅಚ್ಚರಿಯಾಯಿತು. ಕುಶಿಯಿಂದ ಬೆಳ್ಳಿ ನಾಣ್ಯವನ್ನು ತನ್ನ ಜೇಬಿನಲ್ಲಿ ಹಾಕಿಕೊಂಡ. ಆ ವಿದ್ವಾಂಸ ಕಲ್ಲಿನ ಆ ಮೂರ‍್ತಿಯನ್ನು ತೆಗೆದುಕೊಂಡು ಪಟ್ಟಣಕ್ಕೆ ಹೋದ.

ಕೆಲ ದಿನಗಳ ಬಳಿಕ ಬೆಟ್ಟದೂರಿನವ ಪಟ್ಟಣಕ್ಕೆ ಬಂದ. ಹೀಗೇ ಅಡ್ಡಾಡುತ್ತಿರುವಾಗ ಆತನಿಗೆ ಒಂದು ಕಡೆ ಜನರ ಗುಂಪು ಕಾಣಿಸಿತು. ಕುತೂಹಲದಿಂದ ಏನಾಗುತ್ತಿದೆ ಎಂದು ನೋಡುತ್ತಾ ನಿಂತ.

ಒಬ್ಬ ವ್ಯಕ್ತಿ ಎತ್ತರದ ದನಿಯಲ್ಲಿ ಕೂಗುತ್ತಿದ್ದ. ”ಕೇಳಿರಿ, ಕೇಳಿರಿ, ಅಪ್ರತಿಮ, ಅಮೂಲ್ಯವಾದ ಈ ಮೂರ‍್ತಿಗೆ ಸರಿಸಾಟಿಯಾದ ಬೇರೊಂದು ಮೂರ‍್ತಿ ಈ ಪ್ರಪಂಚದಲ್ಲಿ ಇಲ್ಲ. ಶಿಲ್ಪಕಲೆಯ ಅದ್ವಿತೀಯ ನಮೂನೆ ನೋಡ ಬನ್ನಿ. ಕೇವಲ ಎರಡು ಬೆಳ್ಳಿ ನಾಣ್ಯಗಳು”

ಬೆಟ್ಟದೂರಿದವನು, ಆ ಬೆಲೆಬಾಳುವ ಮೂರ‍್ತಿ ಯಾವುದಿರಬಹುದೆಂಬ ಕುತೂಹಲದಿಂದ ಎರಡು ಬೆಳ್ಳಿ ನಾಣ್ಯ ಕೊಟ್ಟು ನೋಡಲು ಒಳಗೆ ಹೋದ. ಈ ಹಿಂದೆ ತಾನೇ ಒಂದು ಬೆಳ್ಳಿ ನಾಣ್ಯಕ್ಕೆ ಮಾರಾಟ ಮಾಡಿದ್ದ ಕಲ್ಲಿನ ಪ್ರತಿಮೆ ಅದಾಗಿತ್ತು!

( ಮಾಹಿತಿ ಸೆಲೆ: gutenberg.net.au )
( ಚಿತ್ರ ಸೆಲೆ: wikimedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: