ಸುರುಳಿ ಹೋಳಿಗೆ
– ಸವಿತಾ.
ಸುರುಳಿ ಹೋಳಿಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು 5 ದಿನ ಇಟ್ಟು ಆಮೇಲೂ ತಿನ್ನಬಹುದು.
ಕಣಕದ ಹಿಟ್ಟು ಮಾಡಲು ಬೇಕಾಗುವ ಪದಾರ‍್ತಗಳು:
- 2 ಲೋಟ – ಮೈದಾ ಹಿಟ್ಟು
- 1 ಲೋಟ – ಚಿರೋಟಿ ರವೆ
- 4 ಚಮಚ – ಕಾಯಿಸಿದ ಎಣ್ಣೆ
ಸ್ವಲ್ಪ ಉಪ್ಪು, ನೀರು ಸೇರಿಸಿ ಚಪಾತಿ ಹಿಟ್ಟಿನಗಿಂತ ಸ್ವಲ್ಪ ತೆಳ್ಳಗೆ ಹಿಟ್ಟು ನಾದಿಕೊಂಡು, ಮೇಲೆ ಒಂದು ಬಟ್ಟೆ ಮುಚ್ಚಿ 2 ಗಂಟೆ ಕಾಲ ಇಡಿ.
ಒಳಗೆ ತುಂಬಲು ಕೊಬ್ಬರಿ ಸಿಹಿ ಮಿಶ್ರಣ ಮಾಡಲು ಬೇಕಾಗುವ ಪದಾರ‍್ತಗಳು:
- 1/2 ಲೋಟ – ಕೊಬ್ಬರಿ ತುರಿ
- 2 ಚಮಚ – ಗಸಗಸೆ
- 1/2 ಲೋಟ – ಸಕ್ಕರೆ ಪುಡಿ
- 6 ಏಲಕ್ಕಿಯ ಪುಡಿ
- ಸ್ವಲ್ಪ ಅತವಾ ಕಾಲು ಚಮಚ – ಜಾಜಿ ಕಾಯಿ ಪುಡಿ
ಗಸಗಸೆಯನ್ನು ಸ್ವಲ್ಪ ಹುರಿಯಿರಿ. ಸಕ್ಕರೆ ಪುಡಿಗೆ ಕೊಬ್ಬರಿ ತುರಿ, ಏಲಕ್ಕಿ ಪುಡಿ, ಜಾಜಿಕಾಯಿ ಪುಡಿ ಮತ್ತು ಹುರಿದ ಗಸಗಸೆಯನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲೆಸಿಟ್ಟಿರಿ.
ಹೋಳಿಗೆ ಮಾಡುವ ಬಗೆ:
- ಕಲಸಿ ಇಟ್ಟ ಕಣಕದ ಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ನಾದಿಕೊಂಡು, ಒಂದು ಉಂಡೆ ಅಳತೆ ಹಿಟ್ಟು ತೆಗೆದುಕೊಳ್ಳಿರಿ.
- ಒಂದು ಪ್ಲಾಸ್ಟಿಕ್ ಹಾಳೆಯ ಮೇಲೆ ಎಣ್ಣೆ ಹಚ್ಚಿ, ತೆಳುವಾಗಿ ಚಪಾತಿಯಂತೆ ಲಟ್ಟಿಸಿರಿ (ಲಟ್ಟಿಸುವಾಗ ಮಾತ್ರ ಎಣ್ಣೆ ಹಚ್ಚಿ)
- ತವೆ ಬಿಸಿ ಮಾಡಿ ಸಣ್ಣ ಉರಿಯಲ್ಲಿಟ್ಟು, ಎರಡೂ ಬದಿ ಸ್ವಲ್ಪ ಬೇಯಿಸಿರಿ.
- ಕೊಬ್ಬರಿ ಸಿಹಿ ಮಿಶ್ರಣ ಒಂದು ಅತವಾ ಎರಡು ಚಮಚದಶ್ಟು ಹಾಕಿ ಸಮವಾಗಿ ಹರಡಿ.
- ಚಪಾತಿಯಂತೆ ಲಟ್ಟಿಸಿದ ಹಿಟ್ಟಿನ ಒಂದು ಕೊನೆಯನ್ನು ಮಡಚಿ, ಅದರ ಮೇಲೆ ಮತ್ತೊಂದು ಕೊನೆಯನ್ನು ಮಡಚುತ್ತಾ ಬಟ್ಟೆಯಿಂದ ಒತ್ತಬೇಕು. ಅದು ಲಕೋಟೆಯ ಹಾಗೇ ಕಾಣುತ್ತದೆ
- ಕೊಬ್ಬರಿ ಮಿಶ್ರಣ ಹೊರ ಬರದಂತೆ ಬಟ್ಟೆಯಿಂದ ಒತ್ತಿ ಮುಚ್ಚಿರಿ.
- ಹಿಟ್ಟು ಒಣಗುವವರೆಗೆ ಬೇಯಿಸಿರಿ.
- ಎಣ್ಣೆ ಹಾಕದೇ ಎರಡೂ ಬದಿ ಬೇಯಿಸಿ ತೆಗೆಯಿರಿ. ಸುರುಳಿ ಹೋಳಿಗೆ ತಯಾರು 🙂
ನೆನಪಿಡಿ: ಈ ಹೋಳಿಗೆಯನ್ನು ಸಾವಕಾಶವಾಗಿ ಮಾಡಬೇಕು.
ಇತ್ತೀಚಿನ ಅನಿಸಿಕೆಗಳು