ಟೆಸ್ಲಾ ಸೆಮಿ ಟ್ರಕ್ – ಇದೊಂದು ‘ಸೂಪರ್ ಟ್ರಕ್’

– ಜಯತೀರ‍್ತ ನಾಡಗವ್ಡ.

ಕೆಲವರು ಯಾವತ್ತೂ ಸುಮ್ಮನೆ ಇರುವುದಿಲ್ಲ. ಹೊಸ ಹೊಳಹು, ಯೋಚನೆಗಳ ಸುತ್ತ ಕೆಲಸ ಮಾಡಿ ಏನಾದರೊಂದು ಸಾದನೆ ಮಾಡುವ ತುಡಿತ ಹೊಂದಿರುತ್ತಾರೆ. ಎಲಾನ್ ಮಸ್ಕ್(Elon Musk) ಅಂತವರಲ್ಲೊಬ್ಬರು. ಯಾವಾಗಲೂ ಚಟುವಟಿಕೆಯಿಂದ ಕೂಡಿದ ಮನುಶ್ಯ. ಕೊಳವೆಸಾರಿಗೆ, ಟೆಸ್ಲಾ ಮಿಂಚಿನ ಕಾರುಗಳು, ಸ್ಪೇಸ್-ಎಕ್ಸ್(Space-X) ಎಂಬ ಬಾನಬಂಡಿ(Space shuttle) ಹೀಗೆ ಹತ್ತಾರು ಹಮ್ಮುಗೆಗಳಲ್ಲಿ ತೊಡಗಿಕೊಂಡು, ವಿಶೇಶವಾದ ಸಾದನೆ ಮಾಡುವ ಗುರಿ ಅವರದು. ಇದೀಗ ಇವರ ಚಿತ್ತ ಹೊಸದೊಂದು ಹಮ್ಮುಗೆಯತ್ತ ನೆಟ್ಟಿದ್ದಾರೆ. ಅದೇ ಟೆಸ್ಲಾ ಸೆಮಿ(Tesla Semi).

ಏನಿದು ಟೆಸ್ಲಾ ಸೆಮಿ?

ಸೆಮಿ ಎಂಬುದು ಎಲಾನ್ ಮಸ್ಕ್‌ರವರ ಟೆಸ್ಲಾ ಕೂಟ ತಯಾರಿಸಲಿರುವ ಹೊಸ ಮಿಂಚಿನ ಟ್ರಕ್(Electric Truck). ಇಲ್ಲಿಯವರೆಗೆ ಮಿಂಚಿನ ಕಾರುಗಳನ್ನು ತಯಾರಿಸಿ ಅವುಗಳ ಮಾರಾಟದಲ್ಲಿ ತೊಡಗಿದ್ದ ಮಸ್ಕ್, ತಮ್ಮ ಟೆಸ್ಲಾ ಕೂಟದ ಮೂಲಕ “ಸೆಮಿ” ಹೆಸರಿನ ಟ್ರಕ್ ಹೊರತರುವ ಹಮ್ಮುಗೆಗೆ ಕೈ ಹಾಕಿದ್ದಾರೆ. ಈ ಹೊಸ ಸೆಮಿ ಟ್ರಕ್‌ನ ಮಾದರಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ, ಸುದ್ದಿಯಲ್ಲಿದ್ದಾರೆ ಮಸ್ಕ್. ಜಗತ್ತಿನ ಪ್ರಮುಕ ಟ್ರಕ್ ತಯಾರಕ ಕೂಟಗಳು ಮಿಂಚಿನ ಟ್ರಕ್ ತಯಾರಿಕೆಯಲ್ಲಿ ತೊಡಗಿವೆ, ಆದರೆ ಟೆಸ್ಲಾ ಟ್ರಕ್ ಸಾಮಾನ್ಯ ಟ್ರಕ್ ಆಗಿರದೇ, ಸಾಕಶ್ಟು ವಿಶೇಶತೆಗಳನ್ನು ಹೊಂದಿರಲಿದೆ.

36 ಟನ್ ತೂಕದ ಇಂತ ಆನೆಗಾತ್ರದ ಮಿಂಚಿನ ಟ್ರಕ್ ತಯಾರಾಗುತ್ತಿರುವುದು ಇದೇ ಮೊದಲು. ಸೊನ್ನೆಯಿಂದ ನೂರು ಕಿ.ಮೀ.ವೇಗದಿಂದ ಸಾಗಲು ಕೇವಲ 20 ಸೆಕೆಂಡುಗಳು ಸಾಕು, ಸಾಮಾನ್ಯ ಟ್ರಕ್‌ಗಳು ಇದಕ್ಕೆ ಸುಮಾರು 1 ನಿಮಿಶ ತೆಗೆದುಕೊಳ್ಳುತ್ತವೆ. ಒಮ್ಮೆ ಮಿಂಚಿನ ಹುರುಪು ತುಂಬಿದ ಮೇಲೆ 500 ಮೈಲಿಗಳಶ್ಟು ದೂರದವರೆಗೆ ಸಾಗಲಿದೆ ಈ ಟ್ರಕ್. ನೆನಪಿರಲಿ, ಈಗ ಬಳಕೆಯಲ್ಲಿರುವ, ತಯಾರಿಕೆಯಲ್ಲಿರುವ ಯಾವುದೇ ಮಿಂಚಿನ ಕಾರುಗಳು ಇಶ್ಟೊಂದು ದೂರ ಸಾಗುವ ಮಿತಿ ಹೊಂದಿಲ್ಲ. ಪ್ರತಿ ಮೈಲಿಗೆ ಕೇವಲ 2 ಕಿಲೋವ್ಯಾಟ್-ಅವರ್‌‌ನಶ್ಟು(kWh) ಹುರುಪು(Charging) ಬಳಸಿ, ಹೆಚ್ಚಿನ ಹುರುಪು ಉಳಿತಾಯ ಮಾಡಲಿದೆಯಂತೆ ಟೆಸ್ಲಾ ಸೆಮಿ. ಓಡಿಸುಗನೆಡೆ(Driver Cabin) ಬಾನೋಡದ ಓಡಿಸುಗನೆಡೆಯಂತಿದ್ದು, ಓಡಿಸುಗನ ಎಡ-ಬಲ ಬದಿಗೆ ಎರಡು ಸೋಕು ತೆರೆಗಳಿದ್ದು(Touch Screen), ಅದರ ಮೂಲಕ ಬಂಡಿಯನ್ನು ಸುಳುವಾಗಿ ಹಿಡಿತದಲ್ಲಿಡುವ ಏರ‍್ಪಾಟು ಮಾಡಲಾಗಿದೆ. ಟೆಸ್ಲಾದವರ ‘ಆಟೋ ಪೈಲಟ್’ ಹೆಸರಿನ ಚಳಕವನ್ನು ಇದರಲ್ಲಿ ಅಳವಡಿಸಿ, ತನ್ನಿಂದ ತಾನೇ ಓಡಬಲ್ಲ ಏರ‍್ಪಾಟನ್ನು ಇದಕ್ಕೆ ಸೇರಿಸುವ ಹಮ್ಮುಗೆ ಹಾಕಿಕೊಳ್ಳಲಾಗಿದೆ. 4 ಮಿಂಚಿನ ಓಡುಗೆಗಳು(Electric Motors) ಈ ಟ್ರಕ್‌ಗೆ ಬೇಕಾದ ಕಸುವು ನೀಡಿ ಮುನ್ನುಗ್ಗಲು ನೆರವಾಗಲಿವೆ. ಕೆಲವೊಮ್ಮೆ ಗಾಟ್, ಬೆಟ್ಟದ ಪ್ರದೇಶಗಳಲ್ಲಿ ಟ್ರಕ್‌ಗಳು ಮೇಲೇರಿ ಸಾಗಲು ತುಂಬಾ ಹೊತ್ತು ತಗಲುತ್ತದೆ, ಅದರಲ್ಲೂ  ಟ್ರಕ್‌ಗಳು ಸಾಮಾನು ಸರಂಜಾಮು ತುಂಬಿಕೊಂಡಿದ್ದರೆ ಮೆಲ್ಲಗೆ ಏರುವುದನ್ನು ನಾವು ನೋಡಿದ್ದೇವೆ. ಸುಮಾರು 5 ಡಿಗ್ರಿಗಳಶ್ಟು ಏರಿಕೆ ಹೊಂದಿರುವ ರಸ್ತೆಗಳಲ್ಲಿಯೂ ಸಾಮಾನು ಸರಂಜಾಮು ಹೊತ್ತುಕೊಂಡು ಸೆಮಿ 100 ಕಿ.ಮೀ. ಪ್ರತಿಗಂಟೆಯ ವೇಗದಲ್ಲಿ ಸಾಗಲಿದೆಯೆಂದರೆ ನಂಬಲಾಗದು.

2019ರ ಹೊತ್ತಿಗೆ ಈ ಟ್ರ‍ಕ್ ಹೊರಬರಲಿದೆ. ಇದನ್ನು ಈಗಲೇ ಮುಂಗಡ ಕಾದಿರಿಸಬಹುದು. ಈಗಾಗಲೇ ಟೆಸ್ಲಾ ಸೆಮಿಗೆ ಬಾರಿ ಬೇಡಿಕೆ ಬಂದಿದ್ದು, ಸಾವಿರಾರು ಟ್ರಕ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಪೆಪ್ಸಿಕೋ, ವಾಲ್‌ಮಾರ‍್ಟ್, ಡಿಹೆಚ್‌ಎಲ್ ನಂತ ದೊಡ್ಡ ಕೂಟಗಳು ನೂರಾರು ಸೆಮಿಗಳನ್ನು ಮುಂಗಡವಾಗಿ ಕಾದಿರಿಸಿವೆ.

ಇದರ ವಿಶೇಶತೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

features and specification of tesla sei truck

(ಮಾಹಿತಿ ಮತ್ತು ಚಿತ್ರ ಸೆಲೆ: tesla.com,vox.com, express.co.uk)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.