ಗುಂಡಪ್ಪ ವಿಶ್ವನಾತ್ : ಕ್ರಿಕೆಟ್ ಆಟದ ಮೇರು ಪ್ರತಿಬೆ ಮತ್ತು ವ್ಯಕ್ತಿತ್ವ

ರಾಮಚಂದ್ರ ಮಹಾರುದ್ರಪ್ಪ.

ಜಿ ಆರ್ ವಿಶ್ವನಾತ್, ಗುಂಡಪ್ಪ ವಿಶ್ವನಾತ್, GRV, G R Vishwanath, Gundappa Vishwanath

ಅದು 2005 ರ ಆಶಸ್ ಟೆಸ್ಟ್ ಸರಣಿ. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಪರ‍್ಡ್ ನಲ್ಲಿ ನಡೆಯುತ್ತಿದ್ದ 3ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ನ ಇಯಾನ್ ಬೆಲ್, ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ‍್ನ್ ರ ಎಸೆತವೊಂದನ್ನು ಇನ್ನೇನು ಕೀಪರ್ ಗಿಲ್ಕ್ರಿಸ್ಟ್ ಕೈ ಸೇರಲಿದೆ ಅನ್ನುವಶ್ಟರಲ್ಲಿ ಲೇಟ್ ಕಟ್ ಮಾಡಿ ಬೌಂಡರಿಗೆ ಅಟ್ಟುತ್ತಾರೆ. ಇದನ್ನು ಕಂಡೊಡನೆ ಸ್ಕೈ ಸ್ಪೋರ‍್ಟ್ಸ್ ನ ನೇರುಲಿಗರಾದ(Commentator) ಇಂಗ್ಲೆಂಡ್ ನ ಮಾಜಿ ನಾಯಕ ಡೇವಿಡ್ ಗೋವರ್, ಬೆಲ್ ರ ಈ ಹೊಡೆತ ಬಾರತದ ದಿಗ್ಗಜ ಬ್ಯಾಟ್ಸ್ಮನ್ ಗುಂಡಪ್ಪ ವಿಶ್ವನಾತ್ ರ ಲೇಟ್ ಕಟ್ ಅನ್ನು ನೆನಪಿಸುತ್ತದೆ ಅನ್ನುತ್ತಾರೆ.

ಆದರೆ 2005 ರಲ್ಲಿ, ವಿಶ್ವನಾತ್ ಅಂತರಾಶ್ಟ್ರೀಯ ಕ್ರಿಕೆಟ್ ನಿಂದ ದೂರ ಸರಿದು 22 ವರ‍್ಶಗಳೇ ಕಳೆದಿದ್ದರೂ ಅವರ ಬ್ಯಾಟಿಂಗ್ ಅನ್ನು ನೋಡಿದವರು ಅವರನ್ನು ಇನ್ನೂ ನೆನೆದು ಹೊಗಳುತ್ತಾರೆ ಅಂದರೆ ಅವರೆಂತ ಶ್ರೇಶ್ಟ ಆಟಗಾರ ಇದ್ದಿರಬಹುದು ಎಂದೆನಿಸದೇ ಇರದು. ಸುಮಾರು 14 ವರ‍್ಶ ಬಾರತದ ಪರ ಅಂತರಾಶ್ಟ್ರೀಯ ಕ್ರಿಕೆಟ್ ಆಡಿ ತಮ್ಮ ಸೊಗಸಾದ ಬ್ಯಾಟಿಂಗ್ ನಿಂದ ಪ್ರಪಂಚದಾದ್ಯಂತ ಅಬಿಮಾನಿಗಳನ್ನು ಸಂಪಾದಿಸಿರುವ ವಿಶ್ವನಾತ್, ಆಪ್ತರ ಪ್ರೀತಿಯ ‘ವಿಶಿ’ ಕನ್ನಡಿಗರು ಅನ್ನೋದೇ ನಮ್ಮೆಲ್ಲರಿಗೂ ಹೆಮ್ಮೆ.

ಹುಟ್ಟು – ಎಳವೆಯ ಕ್ರಿಕೆಟ್ ತರಬೇತಿ

1949 ರ ಪೆಬ್ರವರಿ 12 ರಂದು ಗುಂಡಪ್ಪ ರಂಗನಾತ್ ಮತ್ತು ಸಾವಿತ್ರಮ್ಮ ದಂಪತಿಗಳ ಎರಡನೇ ಮಗನಾಗಿ ವಿಶ್ವನಾತ್ ಬದ್ರಾವತಿಯಲ್ಲಿ ಹುಟ್ಟಿದರು. ರಾಜ್ಯ ವಿದ್ಯುತ್ ಮಂಡಳಿಯಲ್ಲಿ ಸ್ಟೆನೋಗ್ರಾಪರ್ ಆಗಿದ್ದ ಅವರ ತಂದೆಗೆ ಬೆಂಗಳೂರಿಗೆ ವರ‍್ಗ ಆದ್ದರಿಂದ ಐದು ವರ‍್ಶದ ಪುಟ್ಟ ವಿಶ್ವನಾತ್, ಕುಟುಂಬದೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದರು. ಸಣ್ಣ ವಯಸ್ಸಿನಿಂದಲೂ ಓದಿಗಿಂತ ನಾನಾ ಬಗೆಯ ಆಟಗಳಲ್ಲಿ ವಿಶ್ವನಾತ್ ಅವರಿಗೆ ಹೆಚ್ಚು ಒಲವಿತ್ತು. ಅವರನ್ನು ಕ್ರಿಕೆಟ್ ಎಂಬ ಮಾಯಾ ಲೋಕಕ್ಕೆ ಪರಿಚಯಿಸಿದ್ದು ಅವರ ಅಣ್ಣ ಜಗನ್ನಾತ್ ಮತ್ತವರ ಗೆಳೆಯ ಕ್ರಿಶ್ಣ. ವಿಶ್ವನಾತ್ ಅವರಿಗಿಂತ ಹತ್ತು ವರ‍್ಶ ದೊಡ್ಡವರಾಗಿದ್ದ ಅವರ ಅಣ್ಣ, ವಿಶ್ವನಾತ್ ರನ್ನು ಹಲವು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಗಳಿಗೆ ಕರೆದೊಯ್ದು ಅವರಿಗೆ ಆಡುವ ಅವಕಾಶ ಕೊಡಿಸುತ್ತಿದ್ದರು. ಹಾಗಾಗಿ ಸಣ್ಣ ವಯಸ್ಸಿನಿಂದಲೇ ಅವರು ತಮಗಿಂತ ದೊಡ್ಡವರೊಟ್ಟಿಗೆ ಕ್ರಿಕೆಟ್ ಆಡಿ ಪಳಗಿದರು. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಟೆನ್ನಿಸ್ ಬಾಲ್ ಕ್ರಿಕೆಟ್ ನಲ್ಲಿ ನಿರಾಯಾಸವಾಗಿ ಹೆಚ್ಚು ಹೊತ್ತು ಔಟಾಗದೇ ರನ್ ಗಳಿಸುತ್ತಿದ್ದ ವಿಶ್ವನಾತ್ ನೆರೆಹೊರೆಯಲ್ಲಿ ‘ಟೆನ್ನಿಸ್ ಬಾಲ್ ಬ್ರಾಡ್ಮನ್’ ಎಂದೇ ಪ್ರಸಿದ್ದರಾಗಿದ್ದರು.

ಬೆಂಗಳೂರಿನ ವಿಶ್ವೇಶ್ವರಪುರ ಮಿಡಲ್ ಸ್ಕೂಲ್ ಗ್ರೌಂಡ್, ಪೋರ‍್ಟ್ ಹೈಸ್ಕೂಲ್ ಗ್ರೌಂಡ್ ಮತ್ತು ಕ್ರಿಶ್ಣರಾವ್ ಪಾರ‍್ಕ್ ನಲ್ಲಿ ದಿನಕ್ಕೆ 4 ರಿಂದ 5 ಟೆನ್ನಿಸ್ ಬಾಲ್ ಪಂದ್ಯಗಳನ್ನಾಡುತ್ತಿದ ವಿಶ್ವನಾತ್ ತಮ್ಮ ಶಾಲೆ ಪೋರ‍್ಟ್ ಹೈ ಸ್ಕೂಲ್ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಆಡತೊಡಗಿದರು. ಒಳ್ಳೆ ಆಟದಿಂದ ಹಂತಹಂತವಾಗಿ ಬೆಳೆದು ತಂಡದ ನಾಯಕ ಕೂಡ ಆದರು. ಆದರೆ ರಾಜ್ಯ ಮಟ್ಟದ ಶಾಲಾ ಟೂರ‍್ನಿಯಲ್ಲಿ ಆಡಬೇಕೆಂಬ ಅವರ ಬಯಕೆ ಕೈಗೂಡಲಿಲ್ಲ. ‘ತೀರಾ ಕುಳ್ಳಗಿರುವ ಈ ಹುಡುಗ ಏನು ಬ್ಯಾಟಿಂಗ್ ಮಾಡಬಲ್ಲ’ ಎಂದು ಆಯ್ಕೆಗಾರರು ಅವರನ್ನು ತಂಡದಿಂದಲೇ ಕೈ ಬಿಟ್ಟರು. ಆದರೆ ಈ ನೋವನ್ನು ಅರಗಿಸಿಕೊಂಡ 14ರ ಹರೆಯದ ಹುಡುಗ ವಿಶ್ವನಾತ್,  ಅಲ್ಲಿಂದ ಕೇವಲ 6 ವರ‍್ಶದೊಳಗೆ ಬಾರತದ ಪರ ಟೆಸ್ಟ್ ಆಡುವ ಮಟ್ಟಿಗೆ ಬೆಳೆದದ್ದು ವಿಶಿ ಅವರ ಅಳವನ್ನು ತೋರಿಸುತ್ತದೆ.

ಬಿಡದ ಕ್ರಿಕೆಟ್ ಹುಚ್ಚು – ಕ್ಲಬ್ ಕ್ರಿಕೆಟ್

ರಾಜ್ಯ ಮಟ್ಟದಲ್ಲಿ ಶಾಲಾ ತಂಡದವನ್ನು ಪ್ರತಿನಿದಿಸುವ ಅವಕಾಶ ವಿಶ್ವನಾತ್ ರ ಕೈತಪ್ಪಿದರೂ ದಿನದಿಂದ ದಿನಕ್ಕೆ ಕ್ರಿಕೆಟ್ ಹುಚ್ಚು ಅವರಲ್ಲಿ ಹೆಚ್ಚುತ್ತಾ ಹೋಯಿತು. ಯಾವ ಮಟ್ಟಕ್ಕೆ ಎಂದರೆ ಒಮ್ಮೆ ಅವರಣ್ಣನೊಟ್ಟಿಗೆ ಮದ್ರಾಸ್ ಗೆ ಟೆಸ್ಟ್ ಪಂದ್ಯ ನೋಡಲು ಹೋಗಿದ್ದಾಗ ಗ್ಯಾಲರಿ ಟಿಕೆಟ್ ಸಿಕ್ಕಿದ್ದುದ್ದರಿಂದ, ಕೂತು ನೋಡಲು ಒಳ್ಳೆ ಜಾಗ ಗಿಟ್ಟಿಸಿಕ್ಕೊಳ್ಳುವುದಕ್ಕಾಗಿ ಬೆಳಗಿನ ಜಾವ 2:30 ಕ್ಕೆ ಚೆಪಾಕ್ ನ ಚಿದಂಬರಮ್ ಸ್ಟೇಡಿಯಮ್ ನಲ್ಲಿ ಹಾಜರಿದ್ದರು. ಮಗ ಚೆನ್ನಾಗಿ ಓದಿ ಡಿಗ್ರಿ ಪಡೆದು ಬದುಕು ಕಟ್ಟಿಕೊಳ್ಳಲಿ ಎಂದು ವಿಶಿ, ಅವರಿಗೆ ಕ್ರಿಕೆಟ್ ಪಟ್ಟುಗಳನ್ನು ಕಲಿಸಿಕೊಟ್ಟ ಗುರುಗಳ ಜೊತೆಗೆ, Vishy with his cricket coachಕನಸು ಕಾಣುತ್ತಿದ್ದ ಅವರ ತಂದೆಗೆ ಮಗನ ಈ ಕ್ರಿಕೆಟ್ ಹುಚ್ಚು ಕಾಡತೊಡಗಿತು. ಇದನ್ನು ಅರಿತ ವಿಶ್ವನಾತ್ ತಮ್ಮ ತಾಯಿಗೆ “ನನ್ನ ಓದಿನ ಬಗ್ಗೆ ಚಿಂತಿಸಬೇಡಿ ನಾನು ಒಳ್ಳೆ ಹೆಸರನ್ನು ಗಳಿಸುತ್ತೇನೆ” ಎಂದು ಹೇಳಿದರು. ನಂತರ ಕ್ರಿಕೆಟ್ ಅಂಗಳದಲ್ಲೇ ಬೆವರು ಹರಿಸತೊಡಗಿದರು. ಒಮ್ಮೆ ಪೋರ‍್ಟ್ ಹೈ ಸ್ಕೂಲ್ ಗ್ರೌಂಡ್ ನಲ್ಲಿ ಆಡುತ್ತಿದ್ದಾಗ ಪಂದ್ಯದ ಅಂಪೈರ್ ಆಗಿದ್ದ ಚಂದ್ರಶೆಟ್ಟಿ ಅವರು ವಿಶ್ವನಾತ್ ಅವರ ಆಟಕ್ಕೆ ಮನಸೋತು ದಿನದಾಟ ಮುಗಿದ ಮೇಲೆ ತಮ್ಮ ಸ್ಪಾರ‍್ಟನ್ಸ್ ಕ್ಲಬ್ ಸೇರಿಕೊಳ್ಳುವಂತೆ ಕೇಳಿಕೊಂಡರು. ಜೊತೆಗೆ ಕಿಟ್ ಬಾಗ್ ಸೇರಿದಂತೆ ತರಬೇತಿಗೆ ತಗಲುವ ಎಲ್ಲಾ ಕರ‍್ಚುಗಳನ್ನು ತಾವೇ ನೋಡಿಕೊಳ್ಳುವಂತೆ ಚಂದ್ರಶೆಟ್ಟಿ ಬರವಸೆ ನೀಡಿದರು. ಈ ವಿಶಯವನ್ನು ತಿಳಿದ ಮೇಲೆ ವಿಶ್ವನಾತ್ ಅವರ ಅಣ್ಣ ಕೂಡ ತಮ್ಮನಿಗೆ ಅನುಕೂಲವಾಗಲೆಂದು ಅದೇ ಕ್ಲಬ್ ಗೆ ಸೇರಿಸಿದರು.

ಸ್ಪಾರ‍್ಟನ್ಸ್ ಕ್ಲಬ್ ನ ಮ್ಯಾನೇಜರ್ ಬಿ.ಎನ್ ಚಂದ್ರಶೇಕರರು ವಿಶ್ವನಾತ್ ರನ್ನು ಪ್ರೋತ್ಸಾಹಿಸಿ ಬ್ಯಾಟನ್ನು ಉಡುಗೊರೆಯಾಗಿ ನೀಡಿದರು. ಮತ್ತು ಚಂದ್ರಶೆಟ್ಟಿ ಅವರು ರಾಜ್ಯ ತಂಡದ ಮಾಜಿ ರಣಜಿ ಆಟಗಾರರಾಗಿದ್ದ ‘ಪಿ.ಎಸ್ ವಿಶ್ವನಾತ್’ ರನ್ನು ಕೋಚ್ ಆಗಿ ಪರಿಚಯಿಸಿದರು. ಇವರ ಜೊತೆ ಇನ್ನೊಬ್ಬ ರಾಜ್ಯದ ಮಾಜಿ ಆಟಗಾರ ‘ಸಲುಸ್ ನಸರೆತ್’ ಸಹ-ಕೋಚ್ ಆದರು. ಇವರ ಗರಡಿಯಲ್ಲಿ ವಿಶ್ವನಾತ್ ವ್ರುತ್ತಿಪರ ಕ್ರಿಕೆಟ್ ಗೆ ಬೇಕಾಗುವ ಆಟದ ಎಲ್ಲಾ ಪಟ್ಟುಗಳನ್ನು ಕಲಿತು ಮೊಗ್ಗಿನಿಂದ ಹೂವಾಗಿ ಅರಳಿದರು. ಸಣ್ಣ ವಯಸ್ಸಿಂದಲೂ ಆಸ್ಟ್ರೇಲಿಯಾದ ನೀಲ್ ಹಾರ‍್ವೇ ಅವರ ಮೆಚ್ಚಿನ ಕ್ರಿಕೆಟಿಗರಾಗಿದ್ದರು.

ನಂತರ ಸ್ಪಾರ‍್ಟನ್ಸ್ ಕ್ಲಬ್ ಪರ ಲೀಗ್ ಪಂದ್ಯಗಳಲ್ಲಿ ರನ್ ಗಳ ಹೊಳೆಯನ್ನೇ ಹರಿಸ ತೊಡಗಿದರು. ಒಮ್ಮೆ ಬಾರತದ ಟೆಸ್ಟ್ ಆಟಗಾರ ಮತ್ತು ಮೈಸೂರಿನ ಮಾಜಿ ನಾಯಕರಾಗಿದ್ದ ವಿ.ಸುಬ್ರಮಣ್ಯ ಅವರು ಸ್ಟೇಟ್ ಬ್ಯಾಂಕ್ ಆಪ್ ಮೈಸೂರು ಪರ ಲೀಗ್ ಪಂದ್ಯ ಆಡುವಾಗ ಸ್ಪಾರ‍್ಟನ್ಸ್ ತಂಡದ ವಿಶ್ವನಾತ್, ಅವರ ತಂಡದ ವೇಗದ ಬೌಲರ್ ಹನುಮೇಶ್ ಅವರ ಎಸೆತಗಳನ್ನು ನಿರಾಯಾಸವಾಗಿ ಮನಬಂದಂತೆ ಚಚ್ಚುತಿದ್ದುದ್ದನ್ನು ಕಂಡು ‘ಯಾರು ಈತ’ ಎಂದು ಬೆರಗಾಗಿದ್ದರು. ಹೀಗೆಯೇ ಬಿ.ಟಿ ರಾಮಯ್ಯ ಶೀಲ್ಡ್ ನಲ್ಲೂ ಕೂಡ ವಿಶ್ವನಾತ್ ರ ಬ್ಯಾಟ್ ಸದ್ದು ಮಾಡಿತು. ಮತ್ತು ರಾಜ್ಯದ ಎಲ್ಲಾ ಲೀಗ್ ಗಳಲ್ಲಿ ಇವರ ಹೆಸರು ರಾರಾಜಿಸ ತೊಡಗಿತು. ಕಡೆಗೆ ಇವರ ಬೆಳವಣಿಗೆಯನ್ನು ಗಮನಿಸಿದ ಮೈಸೂರು ರಾಜ್ಯ ಕ್ರಿಕೆಟ್ ಸಂಸ್ತೆ 1967/68 ರ ರಣಜಿ ಟೂರ‍್ನಿ ಗೆ ವಿಶ್ವನಾತ್ ಅವರನ್ನು ರಾಜ್ಯ ತಂಡಕ್ಕೆ ಆಯ್ಕೆ ಮಾಡಿತು.

ರಣಜಿ ಪಾದಾರ‍್ಪಣೆ

ಆಗಿನ್ನೂ ಮೈಸೂರು ರಾಜ್ಯ ಕ್ರಿಕೆಟ್ ತಂಡ ಎಂದು ಹೆಸರಾಗಿದ್ದ ಕರ‍್ನಾಟಕ ರಣಜಿ ತಂಡದ ಪರ, ವೈ.ಬಿ ಪಟೇಲ್ ರ ನಾಯಕತ್ವದಲ್ಲಿ ಆಂದ್ರದ ಎದುರು ವಿಜಯವಾಡದಲ್ಲಿ ವಿಶ್ವನಾತ್ ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿದರು. ಈ ಪಂದ್ಯದಲ್ಲೇ ಸೊಗಸಾದ ದ್ವಿಶತಕ (230) ರನ್ ಗಳಿಸಿ ಆಡಿದ ಮೊದಲ ಪಂದ್ಯದಲ್ಲೇ ದ್ವಿಶತಕ ಗಳಿಸಿದ ರಾಜ್ಯದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಪ್ರಸನ್ನ, ಚಂದ್ರಶೇಕರ್ ರಂತಹ ಒಳ್ಳೆ ಬೌಲರ್ ಗಳಿದ್ದರೂ ಬ್ಯಾಟಿಂಗ್ ಬಲವಿಲ್ಲದೇ ಸೊರಗಿದ್ದ ಮೈಸೂರು ತಂಡಕ್ಕೆ ವಿಶ್ವನಾತ್ ಬ್ಯಾಟಿಂಗ್ ಬೆನ್ನೆಲುಬಾದರು. ಮುಂದಿನ ರಣಜಿ ಟೂರ‍್ನಿಯಲ್ಲೂ ಇವರ ಅಬ್ಬರ ಮುಂದುವರೆಯಿತು. ತಮ್ಮ ಬ್ಯಾಟ್ ನಿಂದ ರನ್ ಗಳ ಗೋಪುರವನ್ನೇ ಕಟ್ಟುತ್ತಾ ಹೋದರು. ಇವರ ಕ್ರಿಕೆಟ್ ಅಳವಿಗೆ ಬಿ.ಸಿ.ಸಿ.ಐ ಮಣೆ ಹಾಕದೇ ಬೇರೆ ದಾರಿ ಇರಲಿಲ್ಲ. 1969 ರ ಆಸ್ಟ್ರೇಲಿಯಾ ವಿರುದ್ದದ ಎರಡನೇ ಟೆಸ್ಟ್ ಗೆ ಕೇವಲ ಎರಡು ವರ‍್ಶಗಳ ದೇಶೀ ಕ್ರಿಕೆಟ್ ನ ಅನುಬವವಿದ್ದ ವಿಶ್ವನಾತ್ ರನ್ನು ಬಿ.ಸಿ.ಸಿ.ಐ, ಬಾರತ ತಂಡಕ್ಕೆ ಆಯ್ಕೆ ಮಾಡಿತು.

ಅಂತರಾಶ್ಟ್ರೀಯ ಕ್ರಿಕೆಟ್ -ಟೆಸ್ಟ್ ಪಾದಾರ‍್ಪಣೆ  

ಬಾರತ ತಂಡದ ನಾಯಕ ಪಟೌಡಿ ಅವರು ವಿಶ್ವನಾತ್ ರ ಆಟದ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದರು. ಹಾಗಾಗಿ ಪಟ್ಟು ಹಿಡಿದು ಆಸ್ಟ್ರೇಲಿಯಾ ಎದುರಿನ ಕಾನ್ಪುರ ಟೆಸ್ಟ್ ನಲ್ಲಿ ವಿಶ್ವನಾತ್ ರಿಗೆ ಆಡುವ ಹನ್ನೊಂದರಲ್ಲಿ ಎಡೆ ಮಾಡಿ ಕೊಟ್ಟರು. ಇದು ಜಿ ಆರ್ ವಿ ಬ್ಯಾಟ್ ಮಾಡಲು ನಿಲ್ಲುತ್ತಿದ್ದ ಶೈಲಿ, GRV Batting Stance, ವಿಶ್ವನಾತ್ ರ ಚೊಚ್ಚಲ ಟೆಸ್ಟ್ ಪಂದ್ಯವಾಯಿತು. ನಾಯಕನ ನಂಬಿಕೆಯ ಬಲದ ಮೇಲೆ ಅವಕಾಶ ಪಡೆದು ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟ್ ಮಾಡಲು ಹೋದ ವಿಶ್ವನಾತ್ ರಿಗೆ ನಿರಾಸೆ ಕಾದಿತ್ತು. ಒಂದೂ ರನ್ ಗಳಿಸದೆ ಕನೋಲಿ ಅವರಿಗೆ ವಿಕೆಟ್ ಒಪ್ಪಿಸಿ ಡ್ರೆಸ್ಸಿಂಗ್ ರೂಮ್ ನ ಒಂದು ಕೋಣೆಯಲ್ಲಿ ಸಪ್ಪೆಯಾಗಿ ತಮ್ಮನ್ನು ತಾವೇ ಶಪಿಸುತ್ತಾ ಕೂತರು. ಇದನ್ನು ಕಂಡ ಪಟೌಡಿ, ಅವರನ್ನು ಸಂತೈಸಿ “ನಿನ್ನ ನೈಜ ಆಟ ನೀನಾಡು, ಎರಡನೇ ಇನ್ನಿಂಗ್ಸ್ ನಲ್ಲಿ ರನ್ ಬರಲಿದೆ” ಎಂದು ಪ್ರೋತ್ಸಾಹಿಸಿದರು.

ಪಟೌಡಿ ಅವರ ಮಾತಿನಂತೆಯೇ ವಿಶ್ವನಾತ್ ಎದೆಗುಂದದೆ ಆಸ್ಟ್ರೇಲಿಯಾದ ಬೌಲರ್ ಗಳನ್ನು ದಿಟ್ಟತನದಿಂದ ಎದುರಿಸಿ 25 ಬೌಂಡರಿಗಳುಳ್ಳ ಬರ‍್ಜರಿ 137 ರನ್ ಬಾರಿಸಿದರು(2013 ರಲ್ಲಿ ಶಿಕರ್ ದವನ್ 187 ರನ್ ಗಳಿಸುವವರೆಗೂ ವಿಶ್ವನಾತ್ ರ 137 ರನ್ ಗಳು, ಪಾದಾರ‍್ಪಣೆ ಪಂದ್ಯವೊಂದರಲ್ಲಿ ಬಾರತೀಯನೊಬ್ಬನ ಗರಿಶ್ಟ ಮೊತ್ತ ಆಗಿತ್ತು). ಈ ಶತಕ ಬಾರೀ ಸದ್ದು ಮಾಡಿ ಇಡೀ ಕ್ರಿಕೆಟ್ ಜಗತ್ತೇ ವಿಶ್ವನಾತ್ ರತ್ತ ಅಚ್ಚರಿಯಿಂದ ನೋಡುವಂತೆ ಮಾಡಿತು. ಪ್ರಶಂಸೆ, ಪುರಸ್ಕಾರಗಳಿಂದ ವಿಚಲಿತರಾಗದೆ ವಿಶ್ವನಾತ್ ನಂತರದ ಮೂರು ಟೆಸ್ಟ್ ಗಳಲ್ಲಿ ಎರಡು ಅರ‍್ದ ಶತಕ ಗಳಿಸಿ ತಮ್ಮ ಸ್ತಿರ ಪ್ರದರ‍್ಶನ ಕಾಯ್ದುಕೊಂಡು ತಂಡದ ಕಾಯಮ್ ಸದಸ್ಯನಾಗುವತ್ತ ಹೆಜ್ಜೆ ಇಡತೊಡಗಿದರು.

ಬ್ಯಾಟಿಂಗ್ ಪಕ್ವತೆ – ಮೇರು ಅಂತರಾಶ್ಟ್ರೀಯ ಆಟಗಾರನಾಗಿ ಬೆಳೆದ ವಿಶಿ 

ತಮ್ಮ ಮೊದಲ ಸರಣಿ ನಂತರ ಮತ್ತೊಂದು ಟೆಸ್ಟ್ ಆಡಲು ವಿಶ್ವನಾತ್ ಸುಮಾರು ಹದಿನೆಂಟು ತಿಂಗಳು ಕಾಯಬೇಕಾಯಿತು. 1970 ರಲ್ಲಿ ಬಾರತ ಒಂದೂ ಟೆಸ್ಟ್ ಆಡಲಿಲ್ಲ. ಹಾಗಾಗಿ 1971 ರ ವೆಸ್ಟ್ ಇಂಡೀಸ್ ಪ್ರವಾಸ (ಗವಾಸ್ಕರ್ ರ ಮೊದಲ ಸರಣಿ)
ಅವರ ಎರಡನೇ ಸರಣಿಯಾಯಿತು. ಆದರೆ ಪೆಟ್ಟು ಮಾಡಿಕೊಂಡು ಮೊದಲೆರಡು ಟೆಸ್ಟ್ ಗಳಿಂದ ಹೊರಗುಳಿದರು. ಮೂರನೇ ಟೆಸ್ಟ್ ನಲ್ಲಿ ಅರ‍್ದ ಶತಕದ ಮೂಲಕ ವಿಶ್ವನಾತ್ ಅಂತರಾಶ್ಟ್ರೀಯ ಕ್ರಿಕೆಟ್ ಗೆ ಮರಳಿದರು. ಈ ಸರಣಿಯಲ್ಲಿ ಬಾರತ 1-0 ಟೋನಿ ಗ್ರೇಗ್ ವಿಶ್ವನಾತ್ ಅವರನ್ನು ಮಗುವಿನ ಹಾಗೆ ಎತ್ತುಕೊಂಡಿರುವುದು, Tony Greig cradles Gundappa Viswanathಅಂತರದಿಂದ ವೆಸ್ಟ್ ಇಂಡೀಸ್ ನಲ್ಲಿ ಐತಿಹಾಸಿಕ ಸರಣಿ ಗೆಲುವು ದಾಕಲಿಸಿತು. ನಂತರದ ಇಂಗ್ಲೆಂಡ್ ಪ್ರವಾಸದಲ್ಲೂ ವಿಶ್ವನಾತ್ ರನ್ ಗಳಿಸಿ ಹೊರದೇಶದಲ್ಲೂ ತಮ್ಮ ಚಳಕವನ್ನು ಸಾಬೀತು ಮಾಡಿದರು. ಇಂಗ್ಲೆಂಡ್ ನಲ್ಲೂ ಬಾರತ 1-0 ಸರಣಿ ಗೆದ್ದು ಬೀಗಿತು. ಓವಲ್ ಟೆಸ್ಟ್ ನಲ್ಲಿ 6 ವಿಕೆಟ್ ಪಡೆದ ಕನ್ನಡಿಗ ಬಿ.ಎಸ್ ಚಂದ್ರಶೇಕರ್ ಗೆಲುವಿನ ರೂವಾರಿಯಾದರು. 1972 ರ ಇರಾನಿ ಟ್ರೋಪಿಯಲ್ಲಿ ಬಾರತ ಇತರೆ ತಂಡದ ಪರ ಮುಂಬೈ ಎದುರು ಶತಕ ಗಳಿಸುವ ಮೂಲಕ ತಾವಾಡಿದ ಮೊದಲ ರಣಜಿ, ಟೆಸ್ಟ್ ಮತ್ತು ಇರಾನಿ ಟ್ರೋಪಿ ಪಂದ್ಯಗಳಲ್ಲಿ ಶತಕ ಗಳಿಸಿದ ಅಪರೂಪದ ಸಾದನೆ ಮಾಡಿದರು.

ನಂತರ 1972/73 ರಲ್ಲಿ ಇಂಗ್ಲೆಂಡ್ ಬಾರತ ಪ್ರವಾಸ ಮಾಡಿದಾಗ ಬಾಂಬೆ ಟೆಸ್ಟ್ ನಲ್ಲಿ ತಮ್ಮ ಎರಡನೇ ಟೆಸ್ಟ್ ಶತಕ (113 ರನ್) ಗಳಿಸಿದರು. ವಿಶಿ ಅವರ ಈ ಸೊಗಸಾದ ಬ್ಯಾಟಿಂಗ್ ಅನ್ನು ಕಂಡು ಬೆರಗಾಗಿ, ಇಂಗ್ಲೆಂಡ್ ನ ಆಲ್ ರೌಂಡರ್ ಟೋನಿ ಗ್ರೇಗ್ ವಿಶ್ವನಾತ್ ಅವರನ್ನು ಮಗುವಿನಂತೆ ಎತ್ತುಕೊಂಡು ಜೋಗುಳ ಹಾಡಿದ್ದು ಕ್ರಿಕೆಟ್ ಅಂಗಳದಲ್ಲಿ ನಡೆದ ಅಪರೂಪದ ಕ್ಶಣಗಳಲ್ಲೊಂದಾಗಿ ಇಂದಿಗೂ ಜನರ ಮನದಲ್ಲಿ ನೆಲೆಸಿದೆ. ಒಂದೆಡೆ ಕರ‍್ನಾಟಕದ ವಿಶ್ವನಾತ್ ತಮ್ಮ ಕಲಾತ್ಮಕ ಬ್ಯಾಟಿಂಗ್ ನಿಂದ ನೋಡುಗರಿಗೂ ಮನೋರಂಜನೆ ನೀಡುತ್ತಾ ಕ್ರಿಕೆಟ್ ಪಂಡಿತರಿಂದಲೂ ಮೆಚ್ಚುಗೆ ಪಡೆಯುತ್ತಾ ಅಂತರಾಶ್ಟ್ರೀಯ ಮಟ್ಟದದಲ್ಲಿ ಬೆಳೆದರೆ ಅವರೊಟ್ಟಿಗೆ ಮುಂಬೈನ ಗವಾಸ್ಕರ್ ಕೂಡ ತಮ್ಮ ತಾಳ್ಮೆಯ ಆಟ ಆಡುತ್ತಾ ಅವರ ಸರಿಸಮಾನವಾಗಿ ಬೆಳೆದರು.

ವಿಶಿ-ಸನ್ನಿ ಗೆಳೆತನ- ನೆಂಟಸ್ತಿಕೆ

ಜಿ ಆರ್ ವಿ ಮತ್ತು ಸುನಿಲ್ ಗವಾಸ್ಕರ್, G R Vishwanth and Sunil Gavaskarವಿಶ್ವನಾತ್, ಗವಾಸ್ಕರ್ ಇವರಿಬ್ಬರಲ್ಲಿ ಯಾರು ಶ್ರೇಶ್ಟ?? ಈ ಕೇಳ್ವಿ ನಾಲ್ಕು ದಶಕಗಳಿಂದ ಬಗೆಹರಿಯದೆ ಹಾಗೇ ಉಳಿದಿದೆ. 70 ರ ದಶಕದಾದ್ಯಂತ ಬಾರತದ ಪ್ರತೀ ಗೆಲುವು ಇವರಿಬ್ಬರ ಬ್ಯಾಟಿಂಗ್ ಬಲದ ಮೇಲೆಯೇ ಪಡೆದದ್ದು ಇವರ ಅಳವಿಗೆ ಎತ್ತುಗೆ. ಗವಾಸ್ಕರ್ ಅವರನ್ನು ಕೇಳಿದರೆ “ವಿಶಿ ನನಗಿಂತ ಶ್ರೇಶ್ಟ, ಅವರ ಬ್ಯಾಟಿಂಗ್ ನಲ್ಲಿ ಒಂದು ಬಾಲ್ ಗೆ ಎರಡು-ಮೂರು ಹೊಡೆತಗಳಿರುತ್ತಿದ್ದವು” ಅನ್ನುತ್ತಾರೆ. ಅದೇ ಕೇಳ್ವಿಯನ್ನು ವಿಶ್ವನಾತ್ ಅವರಿಗೆ ಕೇಳಿದರೆ “ಬೌಲರ್ ಬಾಲ್ ಮಾಡಿದಾಗ ಏನು ಮಾಡಬೇಕೆಂದು ತಿಳಿಯದೇ ತಬ್ಬಿಬ್ಬಾಗಿ ವಿಚಿತ್ರವಾಗಿ ಬ್ಯಾಟ್ ಬೀಸುತ್ತಿದ್ದೆ. ಹಾಗಾಗಿ ಸನ್ನಿಗೆ ನನ್ನ ಬಳಿ ಪ್ರತಿ ಬಾಲ್ ಗೂ ಎರಡು-ಮೂರು ಹೊಡೆತಗಳಿದ್ದವು ಎಂದೆನೆಸಿರಬೇಕು” ಎಂದು ತಮಾಶೆ ಮಾಡುತ್ತಾರೆ.

ಎಲ್ಲರಿಗಿಂತ ಹೆಚ್ಚು ರನ್ ಮತ್ತು ಶತಕ ಗಳಿಸಿರೋ ಗವಾಸ್ಕರ್ ಅವರೇ ಶ್ರೇಶ್ಟ ಅನ್ನೋದು ವಿಶ್ವನಾತ್ ಅವರ ಅಂಬೋಣ. ಗವಾಸ್ಕರ್ ಅವರು ಬರೆದಿರುವ ‘ಸನ್ನಿ ಡೇಸ್’ ಹೊತ್ತಗೆಯಲ್ಲಿ ವಿಶ್ವನಾತ್ ಮತ್ತವರ ಬ್ಯಾಟಿಂಗ್ ಬಗ್ಗೆ ಸಾಕಶ್ಟು ವಿವರಣೆ ನೀಡಿದ್ದಾರೆ. ಗವಾಸ್ಕರ್ ಅವರ ತಂಗಿ ಕವಿತಾ ಅವರನ್ನು 1978 ರಲ್ಲಿ ವಿಶ್ವನಾತ್ ಮದುವೆ ಆಗುವ ಮೂಲಕ ಈ ಇಬ್ಬರು ಬ್ಯಾಟಿಂಗ್ ದಿಗ್ಗಜರು ಬಾವ-ಬಾಮೈದ ಆದರು. ಈಗಲೂ ಬೇಟಿಯಾದಾಗಲೆಲ್ಲಾ ತಮ್ಮಿಬ್ಬರಲ್ಲಿ ‘ಯಾರು ಹೆಚ್ಚು ಕುಳ್ಳರು ಎಂದು ಒಬ್ಬರ ಕಾಲೊಬ್ಬರು ಎಳೆಯೋದು ನಮ್ಮ ಅಬ್ಯಾಸ’ ಎಂದು ಗವಾಸ್ಕರ್ ಹೇಳುತ್ತಾರೆ. ತಮ್ಮ ಪ್ರೀತಿಯ ವಿಶಿ ಮೇಲಿನ ಅಬಿಮಾನದಿಂದ ಗವಾಸ್ಕರ್ ತಮ್ಮ ಮಗನಿಗೆ “ರೋಹನ್ ಜೈವಿಶ್ವ ಗವಾಸ್ಕರ‍್” ಎಂದು ಹೆಸರಿಸಿದ್ದಾರೆ.

ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ವಿಶ್ವನಾತ್ ಸಾದನೆ:

ತಮ್ಮ 14 ವರ‍್ಶದ ಅಂತರಾಶ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ವಿಶ್ವನಾತ್ ಸದಾ ತಂಡದ ಆಪತ್ಬಾಂದವರಂತೆಯೇ ಆಡಿದರು. ವಿಶಿ ಅವರು ಶತಕ ಗಳಿಸಿದಾಗಲೆಲ್ಲಾ ಬಾರತ ಒಮ್ಮೆಯೂ ಸೋಲದಿರುವುದು ಅವರ ನಿಸ್ವಾರ‍್ತ ಆಟಕ್ಕೆ ಎತ್ತುಗೆ. ಅವರು ಗಳಿಸಿರೋ ಒಟ್ಟು 14 ಶತಕಗಳಲ್ಲಿ ಕೆಲವು ಗೆಲುವು ತಂದುಕೊಟ್ಟರೆ ಇನ್ನು ಕೆಲವು ತಂಡ ಅಪಾಯದಲ್ಲಿರುವಾಗ ಸೋಲು ತಪ್ಪಿಸಿ ಡ್ರಾ ಮಾಡಿಕೊಳ್ಳಲು ನೆರವಾಗಿವೆ. ಈ ರೀತಿಯ ದಾಕಲೆ ಇನ್ನೊಬ್ಬ ಬಾರತೀಯ ಬ್ಯಾಟ್ಸ್ಮನ್ ಮಾಡದಿರುವುದು ವಿಶ್ವನಾತ್ ರ ಶ್ರೇಶ್ಟತೆಯನ್ನು ಸಾರಿ ಹೇಳುತ್ತದೆ. 1976 ಟ್ರಿನಿಡಾಡ್ ಟೆಸ್ಟ್ ನ ನಾಲ್ಕನೇ ಇನ್ನಿಂಗ್ಸ್ ಲಿ ಗೆಲುವಿಗೆ 403 ರನ್ ಗಳು ಬೇಕಿದ್ದಾಗ, ಬಲಾಡ್ಯ ವೆಸ್ಟ್ ಇಂಡೀಸ್ ಬೌಲರ್ ಗಳ ಎದುರು ಅವರು ಗಳಿಸಿದ ಬರ‍್ಜರಿ ಶತಕ (112 ರನ್) ಬಾರತಕ್ಕೆ ಗೆಲುವು ಜಿ ಆರ್ ವಿ ಸ್ಕ್ವೇರ್ ಕಟ್ ಮಾಡುತ್ತಿದ್ದ ಬಗೆ, GRV's Square cut ತಂದು ಕೊಟ್ಟಿತ್ತು. ಆಸ್ಟ್ರೇಲಿಯಾಗೆ ಹೋದಾಗಲೆಲ್ಲಾ ಸರಣಿ ಸೋತೇ ಬರುತ್ತಿದ್ದ ಬಾರತ ಮೊದಲ ಬಾರಿ 1981ರಲ್ಲಿ ಸರಣಿ ಸಮ(1-1) ಮಾಡಿಕೊಂಡು ಬರಲು ಕಾರಣವಾಗಿದ್ದು ವಿಶಿ ಅವರು ಮೆಲ್ಬರ‍್ನ್ ನಲ್ಲಿ ಗಳಿಸಿದ ತಾಳ್ಮೆಯ ಶತಕ (114 ರನ್). ಮೆಲ್ಬರ‍್ನ್ ಟೆಸ್ಟ್ ಗೆಲುವು ಬಾರತ ವಿದೇಶದಲ್ಲಿ ಸಾದಿಸಿದ ಐತಿಹಾಸಿಕ ಗೆಲುವುಗಳಲ್ಲೊಂದಾಗಿ ಇನ್ನೂ ಗುರುತಿಸಲ್ಪಡುತ್ತದೆ.

ಈ ಶತಕಗಳಿಂದಾಚೆಗೆ ಕ್ರಿಕೆಟ್ ಪಂಡಿತರು ಮತ್ತು ಅಬಿಮಾನಿಗಳು ಹೆಚ್ಚು ನೆನೆದು ಕೊಂಡಾಡೋದು 1975 ರ ಮದ್ರಾಸ್ ಟೆಸ್ಟ್ ನಲ್ಲಿ ಅವರು ಓಟಾಗದೇ ಗಳಿಸಿದ 97 ರನ್ ಗಳನ್ನು. ಅಂದು ರಾಬರ‍್ಟ್ಸ್ ದಾಳಿಗೆ ತತ್ತಿರಿಸಿದ್ದ ಬಾರತಕ್ಕೆ ಮತ್ತೊಮ್ಮೆ ವಿಶಿ ಆಪತ್ಬಾಂದವನಂತೆ ಆಸರೆಯಾಗಿ ನಿಂತು ಬ್ಯಾಟ್ ಬೀಸಿದ್ದರು. ತಂಡ 118 ಕ್ಕೆ 8 ವಿಕಟ್ ಕಳೆದುಕೊಂಡಿದ್ದಾಗ ಬೌಲರ್ ಗಳಾದ ಬೇಡಿ ಮತ್ತು ಚಂದ್ರಶೇಕರ್ ಅವರಿಗೆ ಹೆಚ್ಚು ಸ್ಟ್ರೈಕ್ ನೀಡದೇ ಅವರನ್ನು ಕಾಪಾಡುತ್ತಾ ಅವರಾಡಿದ ಆಟವನ್ನು ಕಂಡೋರೆ ಪುಣ್ಯವಂತರು ಎಂದು ಪತ್ರಿಕೆಗಳು ವರದಿ ಮಾಡಿದ್ದವು. ಕೊನೆಗೆ ತಂಡದ ಮೊತ್ತ 190 ಆದಾಗ ಚಂದ್ರಶೇಕರ್ ಔಟ್ ಆಗಿ ವಿಶ್ವನಾತ್ ಶತಕ ವಂಚಿತರಾದಾಗ, ತನ್ನಿಂದಲೇ ಆದ ತಪ್ಪು ಎಂದು ಅಳುತ್ತಾ ಪಿಚ್ ಬಳಿ ಕೂತ ಗೆಳೆಯ ಚಂದ್ರ ಅವರನ್ನು ಸಂತೈಸಿ, ವಿಶಿ ಅವರನ್ನು ಒಟ್ಟಿಗೆ ಕರೆದುಕೊಂಡು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದನ್ನು ಬಣ್ಣಿಸಲು ಪದಗಳೇ ಸಾಲದು. ಅಂತಹ ವ್ಯಕ್ತಿತ್ವ ವಿಶ್ವನಾತ್ ಅವರದು. ಈ 97 ರನ್ ಗಳ ಆಟ ವಿಸ್ಡನ್ ನ ನೂರು ಶ್ರೇಶ್ಟ ಇನ್ನಿಂಗ್ಸ್ ಗಳಲ್ಲಿ ಸ್ತಾನ ಪಡೆಯಿತು ಮತ್ತು ಶತಕವಲ್ಲದ ಎರಡನೇ ಶ್ರೇಶ್ಟ ಇನ್ನಿಂಗ್ಸ್ ಎಂಬ ಹೆಗ್ಗಳಿಕೆ ಕೂಡ ಪಡೆಯಿತು. ಆಗಿನ ಎರಡು ಗಟಾನುಗಟಿ ತಂಡಗಳಾದ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಎದುರು ವಿಶ್ವನಾತ್ ಅವರ ಬ್ಯಾಟಿಂಗ್ ಸರಾಸರಿ 50 ಕ್ಕಿಂತಲೂ ಹೆಚ್ಚಿರೋದು ಅವರ ಬ್ಯಾಟಿಂಗ್ ಅಳವಿಗೆ ಹಿಡಿದ ಕನ್ನಡಿ.

ಬಾರತದ ನಾಯಕ ವಿಶ್ವನಾತ್

ತಮ್ಮ ಸುದೀರ‍್ಗ ಕ್ರಿಕೆಟ್ ಬದುಕಿನಲ್ಲಿ ವಿಶ್ವನಾತ್ ಎಂದೂ ಬಾರತದ ಪೂರ‍್ಣ ಪ್ರಮಾಣ ನಾಯಕರಾಗದೇ ಹೋದರೂ ಎರಡು ಟೆಸ್ಟ್ ಮತ್ತು ಒಂದು ಒಂದು ದಿನದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಒಂದು ದಿನದ ಪಂದ್ಯದಲ್ಲಿ ಸೋಲುಂಡಿದ್ದರೆ ಒಂದು ಟೆಸ್ಟ್ ಡ್ರಾ ಮತ್ತು ಇನ್ನೊಂದು ಟೆಸ್ಟ್ ನಲ್ಲಿ ಸೋಲು ಕಂಡಿದ್ದಾರೆ. ಆದರೆ ಕ್ರಿಕೆಟ್ ಜಗತ್ತು ಅವರನ್ನು ಈಗಲೂ ನೆನೆದು ಹೊಗಳೋದು 1980 ರ ಗೋಲ್ಡನ್ ಜುಬಿಲೀ ಟೆಸ್ಟ್ ನಲ್ಲಿ ಅವರು ತೋರಿದ ನಾಯಕತ್ವದ ಗುಣದಿಂದ. ಬಾಂಬೆಯಲ್ಲಿ ಇಂಗ್ಲೆಂಡ್ 5 ವಿಕೆಟ್ ಬೇಗನೆ  ಕಳೆದುಕೊಂಡು ತತ್ತರಿಸಿ ಹೋಗಿತ್ತು. ನಂತರ ಕಪಿಲ್ ದೇವ್ ರ ಎಸೆತದಲ್ಲಿ ಬಾಬ್ ಟೇಲರ್ ರನ್ನು ಔಟ್ ಎಂದು ಅಂಪೈರ್ ಗೋಶಿಸಿದರು. ಆಗ ಸ್ಲಿಪ್ ನಲ್ಲಿ ಪೀಲ್ಡಿಂಗ್ ಮಾಡುತ್ತಿದ್ದ ನಾಯಕ ವಿಶ್ವನಾತ್, ಅಂಪೈರ್ ಬಳಿ ತಾವು ಗಮನಿಸಿದಂತೆ ಬಾಬ್ ಟೇಲರ್ ಬ್ಯಾಟ್ ಗೆ ಬಡಿದು ಚೆಂಡು ಕೀಪರ್ ಕಿರ‍್ಮಾನಿ ಕೈ ಸೇರಿಲ್ಲ. ಹಾಗಾಗಿ ದಯವಿಟ್ಟು ನಿಮ್ಮ ತೀರ‍್ಮಾನವನ್ನು ನಾಟ್ ಔಟ್ ಎಂದು ಬದಲಿಸಿ ಎಂದು ಕೇಳಿಕೊಂಡು ಟೇಲರ್ ಗೆ ಜೀವದಾನ ಮಾಡಿದರು. ನೂರೈವತ್ತಕ್ಕೂ ಹೆಚ್ಚು ವರ‍್ಶಗಳ ಹಳಮೆ ಇರುವ ಕ್ರಿಕೆಟ್ ನಲ್ಲಿ ಬಹುಶಹ ಈ ರೀತಿಯ ಗಟನೆ ಮತ್ತೆಲ್ಲೂ ನಡೆದಿಲ್ಲ. ನಂತರ ಅವರು ತಗೆದುಕೊಂಡ ಈ ತೀರ‍್ಮಾನ ತಂಡಕ್ಕೆ ಮುಳುವಾಯಿತು. ಬಾಬ್ ಟೇಲರ್ ಹೆಚ್ಚು ರನ್ ಗಳಿಸದೆ ಇದ್ದರೂ ಬಾತಮ್ ರೊಟ್ಟಿಗೆ ಅವರಾಡಿದ ಜೊತೆಯಾಟ ಬಾರತದ ಸೋಲಿಗೆ ಕಾರಣವಾಯಿತು.

ವಿಶ್ವನಾತ್ ರ ಈ ನಡೆಗೆ ಹಲವು ವಲಯಗಳಿಂದ ಟೀಕೆ ಮತ್ತು ಪ್ರಶಂಸೆ ಸಮನಾಗಿ ಕೇಳಿಬಂದವು. ಆದರೆ ಈಗಲೂ ಸಹ ವಿಶ್ವನಾತ್  ಅವರಿಗೆ, ಅವರು ತೆಗೆದುಕೊಂಡ ತೀರ‍್ಮಾನದ ಬಗ್ಗೆ ಯಾವುದೇ ಕೊರಗಿಲ್ಲ. “ಗೆಲ್ಲುವುದೊಂದೇ ಮುಕ್ಯವಲ್ಲ, ನೇರ‍್ಮೆ ಕೂಡ ಅತ್ಯವಶ್ಯಕ. ಅವರು ಔಟ್ ಅಲ್ಲ ಎಂದು ತಿಳಿದೂ ನಾನು ನಾಯಕನಾಗಿ ಸುಮ್ಮನಿದ್ದಿದ್ದರೆ ಅದು ಕ್ರಿಕೆಟ್ ಗೆ ನಾನು ಮಾಡುವ ಮೋಸವಾಗುತ್ತಿತ್ತು. ಆಟದ ದ್ರುಶ್ಟಿಯಿಂದ ಅದು ಸರಿಯಾದ ನಡೆ “ಎನ್ನುತ್ತಾರೆ. ಆದರೆ ದುರಂತವೆಂದರೆ ಅದೇ ಟೆಸ್ಟ್, ಬಾರತವನ್ನು ಮುನ್ನಡೆಸಿದ ವಿಶ್ವನಾತ್  ಅವರ ಕಟ್ಟ ಕಡೆಯ ಟೆಸ್ಟ್ ಆಯಿತು. ಹಾಗೆಯೇ ತಾವು ಔಟ್ ಎಂದು ತಿಳಿದ ಕೂಡಲೇ ಅಂಪೈರ್ ತೀರ‍್ಮಾನಕ್ಕೆ ಕಾಯದೇ ಹೊರ ನಡೆಯುತ್ತಿದ್ದದ್ದು ವಿಶ್ವನಾತ್ ರ ಶ್ರೇಶ್ಟ ಗುಣಗಳಲ್ಲೊಂದು.

ಅಂತರಾಶ್ಟ್ರೀಯ ಕ್ರಿಕೆಟ್ ಬದುಕಿಗೆ ತೆರೆ ಎಳೆದ 1982/83 ರ ಪಾಕಿಸ್ತಾನ ಪ್ರವಾಸ

ಸುನೀಲ್ ಗವಾಸ್ಕರ್ ರ ನಾಯಕತ್ವದಲ್ಲಿ ಬಾರತ 6 ಟೆಸ್ಟ್ ಗಳ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಮಾಡಿದ್ದು ವಿಶ್ವನಾತ್ ರ ಕಟ್ಟ ಕಡೆಯ ಅಂತರಾಶ್ಟ್ರೀಯ ಸರಣಿ ಆಯಿತು. ಒಟ್ಟು 6 ಟೆಸ್ಟ್ ಗಳಲ್ಲಿ ಕೇವಲ ಒಂದು ಅರ‍್ದ ಶತಕ ಗಳಿಸಿ ವೈಪಲ್ಯ ಅನುಬವಿಸಿದ ವಿಶ್ವನಾತ್ ರನ್ನು ಮುಂದಿನ ವೆಸ್ಟ್ ಇಂಡೀಸ್ ಪ್ರವಾಸದಿಂದ ಕೈ ಬಿಟ್ಟರೆ, ಪಾಕಿಸ್ತಾನದಲ್ಲಿ 3-0 ಅಂತರದಿಂದ ಸರಣಿ ಸೋತಿದ್ದಕ್ಕೆ ಗವಾಸ್ಕರ್ ನಾಯಕತ್ವವನ್ನು ಕಳೆದು ಕೊಳ್ಳುತ್ತಾರೆ. 1983 ವಿಶ್ವಕಪ್ ಗೂ ಸಹ ವಿಶಿ ಅವರನ್ನು ಕಡೆಗಣಿಸಲಾಗುತ್ತದೆ. ಇಂದು 35 ವರ‍್ಶಗಳ ನಂತರ, ವಿಶ್ವನಾತ್ ರನ್ನು ಬಿ.ಸಿ.ಸಿ.ಐ ನಡೆಸಿಕೊಂಡ ರೀತಿಯನ್ನು ನೋಡಿದರೆ ನೋವಾಗುವುದರ ಜೊತೆ ಸಿಟ್ಟೂ ಬರುತ್ತದೆ. ಕೇವಲ ಒಂದು ಸರಣಿಯ ವೈಪಲ್ಯದಿಂದ ಕಡೆಗಣಿಸುವಶ್ಟು ಸಣ್ಣ ಬ್ಯಾಟ್ಸ್ಮೆನ್ ಆಗಿದ್ದರೆ ವಿಶಿ ?? ಕಂಡಿತ ಇಲ್ಲ ಅನ್ನೋದು ಕ್ರಿಕೆಟ್ ತಿಳಿದಿರೋ ಯಾರಾದರೂ ಹೇಳುತ್ತಾರೆ. ಆದರೆ ಅವರು ಪಾಕಿಸ್ತಾನ ಪ್ರವಾಸಕ್ಕೂ ಮುನ್ನ ಇಂಗ್ಲೆಂಡ್ ನಲ್ಲಿ ನಡೆದ 3 ಟೆಸ್ಟ್ ಗಳಲ್ಲಿ ಮೂರು ಅರ‍್ದ ಶತಕ ಗಳಿಸಿದ್ದು, ಅದಕ್ಕೂ ಮುನ್ನ ತವರಿನಲ್ಲಿ ಇಂಗ್ಲೆಂಡ್ ಮೇಲಿನ 5 ಟೆಸ್ಟ್ ಗಳಲ್ಲಿ ಒಂದು ಅರ‍್ದ ಶತಕ (74), ಒಂದು ಶತಕ(107), ಮತ್ತು ಒಂದು ದ್ವಿಶತಕ(222) ಗಳಿಸಿದ್ದು ಆಯ್ಕೆಗಾರರಿಗೆ ಕಾಣದೆ ಹೋಯಿತೇ ಎಂದು ಸೋಜಿಗವಾಗುತ್ತದೆ.

ಈ ನೋವಿನಿಂದ ಎದೆಗುಂದದೆ ದೇಶೀ ಕ್ರಿಕೆಟ್ ನಲ್ಲಿ ತಮ್ಮ ಕರ‍್ನಾಟಕ ತಂಡದ ಪರ 1983/84/85 ರಲ್ಲಿ ಹೆಚ್ಚು ರನ್ ಗಳಿಸಿದರೂ ಯುವಕರಿಗೆ ಅವಕಾಶ ನೀಡಬೇಕು ಎಂಬ ಆಯ್ಕೆಗಾರರ ಹುಂಬತನಕ್ಕೆ ವಿಶ್ವನಾತ್ ಬಲಿಯಾದದ್ದು ಕ್ರಿಕೆಟ್ ನ ದೊಡ್ಡ ದುರಂತಗಳಲ್ಲಿ ಒಂದು. ಅವರ ವಯಸ್ಸಿನವರೇ ಆದ ಗವಾಸ್ಕರ್, ಅಮರನಾತ್ ರವರಿಗೆ 1987/88ರ ತನಕ ಆಡುವ ಅವಕಾಶ ಕೊಟ್ಟು ವಿಶ್ವನಾತ್ ರನ್ನು ಮಾತ್ರ ಮೂಲೆಗುಂಪು ಮಾಡಿದ್ದು ಆಯ್ಕೆಗಾರರ ಬದಿಯೊಲವಲ್ಲದೆ ಬೇರೇನೂ ಅಲ್ಲ. ಗವಾಸ್ಕರ್ ರಂತೆ ಅಂತರಾಶ್ಟ್ರೀಯ ಕ್ರಿಕೆಟ್ ನಿಂದ ಗೌರವಯುತ ವಿದಾಯ ಹೇಳುವ ಅವಕಾಶ ನಮ್ಮ ವಿಶ್ವನಾತ್ ರಿಗೆ ಸಿಗಲಿಲ್ಲ. ಹಾಗಂದ ಮಾತ್ರಕ್ಕೆ ಕ್ರಿಕೆಟ್ ಜಗತ್ತಿನಲ್ಲಿ ಅವರ ಬೆಲೆಗೇನು ಚ್ಯುತಿ ಬಂದಿಲ್ಲ. 1983 ರ ಕರಾಚಿ ಟೆಸ್ಟ್ ನಂತರ ಅವರನ್ನು ಕೈ ಬಿಟ್ಟಾಗ ವಿಶ್ವನಾತ್ 91 ಟೆಸ್ಟ್ ಗಳನ್ನಾಡಿ 42ರ ಸರಾಸರಿಯಲ್ಲಿ 6080 ರನ್ ಗಳಿಸಿ ದಿಗ್ಗಜರಾಗಿ ಬೆಳೆದ್ದಿದ್ದರು. ಅವರಾಡಿದ 91 ಪಂದ್ಯಗಳಲ್ಲಿ 87 ಟೆಸ್ಟ್ ಗಳನ್ನು ಸತತವಾಗಿ ಆಡಿದ್ದು ಆಗ ಬಾರತೀಯನೊಬ್ಬನ ದಾಕಲೆಯಾಗಿತ್ತು. ನಂತರ ಗವಾಸ್ಕರ್ (108 ಟೆಸ್ಟ್), ದ್ರಾವಿಡ್ (93 ಟೆಸ್ಟ್), ಸತತವಾಗಿ ಆಡಿ ಆ ದಾಕಲೆಯನ್ನು ಮುರಿದರು.

ಕರ‍್ನಾಟಕ ಕ್ರಿಕೆಟ್ ಗೆ ವಿಶ್ವನಾತ್ ರ ಕೊಡುಗೆ

ರಣಜಿ ಟ್ರೋಪಿ ಗೆದ್ದ ಕರ‍್ನಾಟಕ ತಂಡದಲ್ಲಿದ್ದಾಗ, Vishy in Karnataka Ranji Team1983 ರಲ್ಲಿ ತಮ್ಮ ಕಡೆಯ ಅಂತರಾಶ್ಟ್ರೀಯ ಪಂದ್ಯವಾಡಿದ ಮೇಲೆ 1987 ರ ತನಕ ವಿಶ್ವನಾತ್ ಕರ‍್ನಾಟಕ ತಂಡದ ಪರ ದೇಶೀ ಕ್ರಿಕೆಟ್ ಆಡಿದರು. ದಶಕಗಳ ಕಾಲ ಅಂತರಾಶ್ಟ್ರೀಯ ಮಟ್ಟದಲ್ಲಿ ಟೆಸ್ಟ್ ಆಡಿದ ಯಾವುದೇ ಆಟಗಾರನಿಗೆ,ದೇಶೀ ಕ್ರಿಕೆಟ್ ಅನ್ನು ಅಶ್ಟೇ ತೀವ್ರತೆಯಿಂದ ಆಡೋದು ತುಂಬಾ ಕಶ್ಟ. ಅಂತರಾಶ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಂಡ ಬಹಳಶ್ಟು ಆಟಗಾರರು ಕಾಟಾಚಾರಕ್ಕೆ ದೇಶೀ ಕ್ರಿಕೆಟ್ ಆಡಿರೋ ಎತ್ತುಗೆಗಳು ನಮ್ಮ ಕಣ್ಣ ಮುಂದೆ ಸಾಕಶ್ಟಿವೆ. ಆದರೆ ವಿಶ್ವನಾತ್ ಮಾತ್ರ ಇದಕ್ಕೆ ಅಪವಾದ. ಮೊದಲೆರಡು ವರುಶ ಬಾರತ ತಂಡಕ್ಕೆ ಮರಳುವ ಹಂಬಲದಿಂದ ದೇಶೀ ಕ್ರಿಕೆಟ್ ಆಡಿದರೂ ಆಯ್ಕೆಗಾರರ ಕಡೆಗಣನೆಯಿಂದ ಆಡುವ ಉತ್ಸಾಹ ಅವರಲ್ಲಿ ಕುಗ್ಗಲಿಲ್ಲ. ಕರ‍್ನಾಟಕ ತಂಡದ ಯುವಕರಿಗೆ ಮಾರ‍್ಗದರ‍್ಶಕರಾಗಿ ತಮ್ಮ ಕಡೆ ಕ್ರಿಕೆಟ್ ದಿನಗಳನ್ನು ಕಳೆದರು. 1967 ರಿಂದ 1987 ರ ತನಕ ಇಪ್ಪತ್ತು ವರ‍್ಶಗಳ ಕಾಲ ರಾಜ್ಯ ತಂಡದ ಪರ ಆಡಿದ ವಿಶ್ವನಾತ್ ತಂಡದೊಂದಿಗೆ ಒಟ್ಟು 3 ರಣಜಿ ಟ್ರೋಪಿ ಮತ್ತು 2 ಇರಾನಿ ಟ್ರೋಪಿಗಳನ್ನು ಗೆದ್ದರು. ಪ್ರಸನ್ನರ ನಾಯಕತ್ವದಲ್ಲಿ 1973 ರಲ್ಲಿ ಗೆದ್ದ ಮೊದಲ ರಣಜಿ ಟ್ರೋಪಿಗೆ ಅಡಿಪಾಯ ಹಾಕಿಕೊಟ್ಟಿದ್ದು ವಿಶಿ ಅವರ ಸ್ತಿರ ಬ್ಯಾಟಿಂಗ್ ಪ್ರದರ‍್ಶನ. ಕರ‍್ನಾಟಕದ ನಾಯಕನಾಗಿ ಒಂದೂ ರಣಜಿ ಟ್ರೋಪಿ ಗೆಲ್ಲದ್ದಿದ್ದರೂ 22 ಪಂದ್ಯಗಳಲ್ಲಿ ಅವರು ತಂಡವನ್ನು ಮುನ್ನಡೆಸಿ 7 ಪಂದ್ಯಗಳಲ್ಲಿ ಗೆಲುವು ಕಂಡು ಒಳ್ಳೆ ಸಾದನೆಯನ್ನೇ ಮಾಡಿದ್ದಾರೆ. ತಮ್ಮ ನಾಯಕತ್ವದಲ್ಲಿ 1982ರ ರಣಜಿ ಪೈನಲ್ ನಲ್ಲಿ ದೆಹಲಿ ಎದುರು ಮೊದಲ ಇನ್ನಿಂಗ್ಸ್ ನಲ್ಲಿ ಕರ‍್ನಾಟಕ 705 ರನ್ ಗಳ ಬ್ರುಹತ್ ಸ್ಕೋ ರ್ ಮಾಡಿಯೂ ಎದುರಾಳಿಗೆ ಇನ್ನಿಂಗ್ಸ್ ಲೀಡ್ ಬಿಟ್ಟು ಕೊಟ್ಟು ರಣಜಿ ಟ್ರೋಪಿ ಗೆಲ್ಲದೇ ಹೋದಾಗ ಬೌಲರ್ ಗಳನ್ನು ದೂರದೇ, ಇದು ತಮ್ಮ ನಾಯಕತ್ವದ ಕುಂದಿನಿಂದ ಆದ ಎಡವಟ್ಟು ಎಂದು ಮಾದ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.

ನಿವ್ರುತ್ತಿ ನಂತರದ ಬದುಕು

1987/88 ರ ಹೊತ್ತಿಗೆ ಮೊದಲ ದರ‍್ಜೆ ಕ್ರಿಕೆಟ್ ನಿಂದಲೂ ವಿಶ್ವನಾತ್ ದೂರ ಸರಿದರು. ಆದರೆ ಆಗೊಮ್ಮೆ ಈಗೊಮ್ಮೆ ತಮ್ಮ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ತಂಡದ ಪರ ಲೀಗ್ ಪಂದ್ಯಗಳನ್ನು ಆಡುತ್ತಾ ಯುವ ಬ್ಯಾಟ್ಸ್ಮನ್ ಗಳ ಆಟವನ್ನು ಗಮನಿಸುತ್ತಾ ತಮ್ಮ ಅನುಬವವವನ್ನು ಹಂಚಿಕೊಳ್ಳುವುದನ್ನು ರೂಡಿ ಮಾಡಿಕೊಂಡರು. ನಂತರ ಕರ‍್ನಾಟಕ ರಾಜ್ಯದ ಆಯ್ಕೆಗಾರರಾದರು. ಇವರ ಮುಂದಾಳತ್ವದಲ್ಲೇ ಆಯ್ಕೆ ಸಮಿತಿಯು 1991 ರಲ್ಲಿ ರಾಹುಲ್ ದ್ರಾವಿಡ್ ರನ್ನ ಕರ‍್ನಾಟಕ ತಂಡಕ್ಕೆ ಆರಿಸಿತು. ನಂತರ ನಡೆದ್ದಿದ್ದೆಲ್ಲಾ ಇತಿಹಾಸ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!! “ಆಗೆಲ್ಲಾ ಆಯ್ಕೆಗಾರರೂ ರಣಜಿ ತಂಡದೊಂದಿಗೆ ರೈಲಿನಲ್ಲೇ ಪ್ರಯಾಣಿಸುತ್ತಿದ್ದ ದಿನಗಳವು. ಆಗ ದೆಹಲಿಗೋ ಕೋಲ್ಕತ್ತಾಗೋ ಹೋಗಲು ಮೂರು ದಿನ ಹಿಡಿಯುತ್ತಿತ್ತು. ರೈಲಿನಲ್ಲಿ ಅಶ್ಟು ಹೊತ್ತು ವಿಶ್ವನಾತ್ ಅಂತಹ ಬ್ಯಾಟ್ಸ್ಮನ್ ಒಟ್ಟಿಗೆ ಮಾತಾಡುತ್ತಾ ಆಟದ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಿದ್ದೆ. ಅವರು ಎಂದಿಗೂ ಬೇಸರ ಪಟ್ಟಿಕೊಳ್ಳದೆ ನನ್ನ ಕೇಳ್ವಿಗಳಿಗೆ ಸ್ಪಂದಿಸುತ್ತಿದ್ದರು” ಎಂದು ರಾಹುಲ್ ದ್ರಾವಿಡ್ ತಮ್ಮ ಆರಂಬದ ರಣಜಿ ದಿನಗಳನ್ನು ಈಗಲೂ ಮೆಲಕು ಹಾಕುತ್ತಾರೆ. ನಂತರ ಬಾರತ ತಂಡದ ಆಯ್ಕೆ ಸಮಿತಿಯ ಅದ್ಯಕ್ಶ ಸ್ತಾನಕ್ಕೆ ಬಡ್ತಿ ಪಡೆದು 1992 ರಿಂದ 1996 ತನಕ ಸೇವೆ ಸಲ್ಲಿಸಿದರು.

ದೇಶೀ ಕ್ರಿಕೆಟ್ ನಲ್ಲಿ ಒಳ್ಳೆ ಸಾದನೆ ಮಾಡಿಯೂ ಕಡೆಗಣಿಸಲ್ಪಟ್ಟಿದ್ದ ಕರ‍್ನಾಟಕದ ಸುನಿಲ್ ಜೋಶಿ, ವೆಂಕಟೇಶ್ ಪ್ರಸಾದ್, ದೊಡ್ಡ ಗಣೇಶ್, ಸುಜಿತ್ ಸೋಮಸುಂದರ್ ಬಾರತ ತಂಡಕ್ಕೆ ಆಯ್ಕೆಯಾಗಲು ನೆರವಾದರು. 1999 ರಿಂದ 2004 ರ ತನಕ ಐದು ವರ‍್ಶಗಳ ಕಾಲ ಐ.ಸಿ.ಸಿ ಯ ಮ್ಯಾಚ್ ರೆಪರೀ ಆಗಿಯೂ ಕೆಲಸ ಮಾಡಿದರು. ಕ್ರಿಕೆಟ್ ನಲ್ಲಿ ಇವರ ಸಾದನೆಯನ್ನು ಗಮನಿಸಿ ಬಾರತ ಸರ‍್ಕಾರ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿದೆ. ಆದರೆ ಕೆಲವರಿಗೆ ಅಚ್ಚರಿ ಎನ್ನಿಸುವ ಮತ್ತು ತಿಳಿಯದ ವಿಶಯವೊಂದಿದೆ. ಅದೇನೆಂದರೆ ವಿಶ್ವನಾತ್ ಅವರು ಕುಮಾರ ಬಂಗಾರಪ್ಪ ಅವರ ‘ನವತಾರೆ’ ಎಂಬ ಕನ್ನಡ ಸಿನಿಮಾಲಿ ಅತಿತಿ ನಟರಾಗಿ ನಟಿಸಿದ್ದಾರೆ.

ವಿಶ್ವನಾತ್ ಎಂಬ ದಂತಕತೆ

84 ವರ‍್ಶಗಳ ಹಳಮೆ ಇರುವ ಕರ‍್ನಾಟಕ(ಮೈಸೂರು) ರಾಜ್ಯ ಕ್ರಿಕೆಟ್ ನ ಶ್ರೇಶ್ಟ ಬ್ಯಾಟ್ಸ್ಮನ್ ಯಾರು ಎಂದೊಡನೆ ಇಂದಿನ ಪೀಳಿಗೆಯವರು, ಈಗಿನ ಹಲವಾರು ಆಟಗಾರರ ಹೆಸರುಗಳನ್ನು ಹೇಳಬಹುದು. ಆದರೆ ಅವರೆಲ್ಲರಿಗೂ ಮುನ್ನ ವಿಶ್ವನಾತ್ ಎಂಬ ಒಬ್ಬ ಜಾದೂಗಾರ ಕ್ರಿಕೆಟ್ ಅಂಗಳದಲ್ಲಿ ತಮ್ಮ ಬ್ಯಾಟ್ ನಿಂದ ನೋಡುಗರ ಮನ ತಣಿಸಿದ್ದುದು ಅವರಿಗೆ ತಿಳಿದಿರುವುದಿಲ್ಲ. ವಿಶ್ವನಾತ್ ರ ಸಾದನೆಯನ್ನು ಅಂಕಿ-ಸಂಕ್ಯೆಗಳಿಂದ ಅಳೆಯೋದು ದಡ್ಡತನವಾದೀತು. ತಲೆಗಾಪು ಇದ್ದೂ ವೇಗದ ಬೌಲರ್ ಗಳೆದುರು ತತ್ತರಿಸೋ ಈಗಿನ ಆಟಗಾರರನ್ನು, ತಲೆಗಾಪಿಲ್ಲದೇ ರಾಬರ‍್ಟ್ಸ್, ಹೋಲ್ಡಿಂಗ್, ಗಾರ‍್ನೆರ್, ಲಿಲ್ಲಿ, ಮಾರ‍್ಶಲ್ ರಂತ ಶ್ರೇಶ್ಟ ವೇಗದ ಬೌಲರ್ ಗಳನ್ನು ದಿಟ್ಟತನದಿಂದ ಎದುರಿಸಿ ರನ್ ಕಲೆ ಹಾಕಿದ ವಿಶ್ವನಾತ್ ರೊಟ್ಟಿಗೆ ಹೋಲಿಸಲಾದೀತೇ??

ಹಾಗಾಗಿ ರನ್, ಶತಕಗಳನ್ನು ಪಕ್ಕಕ್ಕಿಟ್ಟು ವಿಶ್ವನಾತ್ ರಂತಹ ದಿಗ್ಗಜರ ಸಾದನೆಯನ್ನು ಅಳೆಯಬೇಕು. ಈಗಲೂ 1970, 80 ರ ದಶಕದ ಕ್ರಿಕೆಟ್ ರಸಿಕರು ಮತ್ತು ವಿಶ್ಲೇಶಕರ ಬಾಯಲ್ಲಿ ವಿಶ್ವನಾತ್ ರ ಬ್ಯಾಟಿಂಗ್ ಸೊಬಗನ್ನು ಕೇಳೋದೇ ಒಂದು ಚೆಂದ. ಸರ್ ವಿವಿಯನ್ ರಿಚರ‍್ಡ್ಸ್, ಜೆಪ್ರಿ ಬಾಯ್ಕಾಟ್, ಇಯಾನ್ ಚಾಪೆಲ್, ಮೈಕಲ್ ಹೋಲ್ಡಿಂಗ್, ಇವರೆಲ್ಲಾ ಹೆಚ್ಚು ಗೌರವಿಸೋ ಬಾರತದ ಬ್ಯಾಟ್ಸ್ಮನ್ ವಿಶ್ವನಾತ್. ಕಳೆದ ವರ‍್ಶ 2017ರ ನವೆಂಬರ್ ನಲ್ಲಿ ವಿಶ್ವನಾತ್ ಅವರು ಕರ‍್ನಾಟಕದ ಪರ ದೇಶೀ ಕ್ರಿಕೆಟ್ ಗೆ ಕಾಲಿಟ್ಟು 50 ವರ‍್ಶಗಳು ಸಂದದ್ದನ್ನು ಮುಕ್ಯಮಂತ್ರಿ ಅವರು ನೆನೆದು ತಮ್ಮ ಅದಿಕ್ರುತ ಕಾತೆಯಿಂದ ಟ್ವೀಟ್ ಮಾಡಿದ್ದು ಒಂದೊಳ್ಳೆ ಬೆಳವಣಿಗೆ.

ಆಟದಲ್ಲಿ ಹೆಚ್ಚು ಹಣ ಇಲ್ಲದ, ಹೆಚ್ಚು ಪಂದ್ಯಗಳು ಟೀವಿಯಲ್ಲಿ ಪ್ರಸಾರವಾಗದ ಕಾಲದಲ್ಲಿ ಕೇವಲ ಕ್ರಿಕೆಟ್ ಮೇಲಿನ ಪ್ರೀತಿಗೆ ಆಡಿ, ಯಶಸ್ಸು ಕಂಡು, ಕರ‍್ನಾಟಕದ ಹೆಸರನ್ನು ಪ್ರಪಂಚದಾದ್ಯಂತ ಬೆಳಗಿದ ವಿಶ್ವನಾತ್ ಯುವ ಕ್ರಿಕೆಟಿಗರಿಗೆ ಮಾದರಿ. ವಿಶ್ವನಾತ್ ರನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ್ದು ನಮ್ಮ ಹೊಣೆ. ಇದೇ ನಾವು ಅವರಿಗೆ ತೋರಬಹುದಾದ ದೊಡ್ಡ ಗೌರವ, ಅಲ್ವೇ ??

( ಚಿತ್ರಸೆಲೆ: digitalhdphotos.com, dnaindia.com, bhaskar.com, espncricinfo.com, espncricinfo.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Thippanna Jamadagni ms says:

    ಆತ್ಯುತ್ತಮ ಲೇಖನ. ನಿರಂತರವಾಗಿ ಮುಂದುವರಿಯಲಿ.

ಅನಿಸಿಕೆ ಬರೆಯಿರಿ: