ಜಾಣ್ಮೆ ಹಾಗೂ ಚುರುಕುತನಕ್ಕೆ ಹೆಸರಾದ ಜರ‍್ಮನ್ ಶೆಪರ‍್ಡ್
ತನ್ನ ಜಾಣ್ಮೆ ಹಾಗೂ ಕಲಿಕೆಯಲ್ಲಿ ತೋರುವ ಚುರುಕುತನದಿಂದ ಜಗತ್ತಿನಾದ್ಯಂತ ಹೆಸರಾದ ನಾಯಿತಳಿ ಎಂದರೆ ಜರ‍್ಮನ್ ಶೆಪರ‍್ಡ್ (German Shepherd). ಹಲವಾರು ಬಗೆಯ ಬೇಹುಗಾರಿಕೆ ಕೆಲಸಗಳಲ್ಲಿ ಪೋಲಿಸ್ ಇಲಾಕೆ ಹಾಗೂ ಮಿಲಿಟರಿಗಳಿಗೆ ಇವು ತುಂಬಾ ನೆರವಾಗುತ್ತಿವೆ.
ಜರ‍್ಮನ್ ಶೆಪರ‍್ಡ್ ನಾಯಿ ತಳಿಯ ಹಿನ್ನೆಲೆ
1800 ರ ದಶಕದಲ್ಲಿ ಪಡುವಡಗಣ (northwest) ಯುರೋಪ್‍ನ ಬೆಲ್ಜಿಯಂ, ಜರ‍್ಮನಿ, ನೆದರ‍್ಲೆಂಡ್ಸ್ ಮುಂತಾದ ದೇಶಗಳಲ್ಲಿ ಈ ತಳಿಯ ನಾಯಿಗಳನ್ನು ಕಾಡುಸಿರಿಗಳಿಂದ ಕುರಿ ಹಿಂಡನ್ನು ಕಾಪಾಡಲು ಸಾಕುತ್ತಿದ್ದರು. ಕುರಿಗಾಹಿಗಳು ಇವನ್ನು ಪ್ರೀತಿಯಿಂದ ‘ಈ ನೆಲದ ಕುರಿಕಾಯುವ ನಾಯಿ (continental shepherd dog)’ ಎಂದು ಕರೆಯುತ್ತಿದ್ದರು.
1850 ರಲ್ಲಿ ಯುರೋಪಿನಲ್ಲಿ ಕುರಿಹಿಂಡನ್ನು ಕಾಪಾಡಲು ನೆರವಾಗುವ ನಾಯಿ ತಳಿಗಳನ್ನು ಬೆಳೆಸುವ ಉದ್ದೇಶದಿಂದ ವಿಶೇಶ ಪ್ರಯತ್ನಗಳು ಆರಂಬಗೊಂಡವು. ಅದರಂತೆ ಜರ‍್ಮನಿಯಲ್ಲಿ ಇದರ ಹೊಣೆಗಾರಿಕೆಯನ್ನು ಅಲ್ಲಿನ ಕುರಿಕಾಯುವ ಮಂದಿಗೆ ನೀಡಲಾಯಿತು. ಅವರು ಹಲವಾರು ಬಗೆಯ ತಳಿಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಅಳವನ್ನು ಪರಿಶೀಲಿಸಲು ಆರಂಬಿಸಿದರು. ಬಳಿಕ ಒಂದು ಅಚ್ಚರಿಯ ವಿಶಯ ಹೊರಬಂತು, ನಾಯಿಗಳ ಅಳವು ಒಂದು ಪ್ರದೇಶದಿಂದ ಇನ್ನೊಂದಕ್ಕೆ ಬೇರೆ ಆಗಿತ್ತು. ಇದರ ಬಗ್ಗೆ ಹೆಚ್ಚಿನ ಕಲಿಕೆ ಮಾಡಲು ಹಾಗೂ ಜರ‍್ಮನಿಯ ಸ್ತಳೀಯ ನಾಯಿ ತಳಿಗಳ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಲು 1891 ರಲ್ಲಿ ಪಿಲಾಕ್ಸ್ ಸೊಸೈಟಿಯನ್ನು (Phylax Society) ಹುಟ್ಟುಹಾಕಲಾಯಿತು. ಆದರೆ ಸದಸ್ಯರಗಳ ನಡುವಿನ ತಿಕ್ಕಾಟಗಳಿಂದ ಈ ಸೊಸೈಟಿಯು ಕೇವಲ ಮೂರು ವರುಶಗಳಲ್ಲಿಯೇ ನಿಂತುಹೋಯಿತು.
ದಿನಗಳು ಕಳೆದಂತೆ ಜರ‍್ಮನಿಯಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಆರಂಬಗೊಂಡು ಕುರಿ ಸಾಕಾಣಿಕೆ ಕಡಿಮೆಯಾಗಿ ಕುರಿಕಾಯುವ ನಾಯಿಗಳ ಬೇಡಿಕೆ ಕುಸಿಯಿತು. ಪಿಲಾಕ್ಸ್ ಸೊಸೈಟಿಯ ಮಾಜಿ ಸದಸ್ಯ ಮ್ಯಾಕ್ಸ್ ವಾನ್ ಸ್ಟೆಪಾನಿಟ್ಜ್ (Max von Stephanitz) ಅವರು ಮನುಶ್ಯನು ತನ್ನ ಹಲವಾರು ಕೆಲಸಗಳಲ್ಲಿ ನಾಯಿಯ ನೆರವು ಪಡೆದುಕೊಳ್ಳಬಹುದು ಎಂದು ನಂಬಿದ್ದರು. ಆದರೆ ತಮ್ಮ ನಂಬಿಕೆಗೆ ಸರಿಹೊಂದುವ ನಾಯಿಯ ತಳಿ ಅವರಿಗಿನ್ನು ಸಿಕ್ಕಿರಲಿಲ್ಲ. 1899 ರಲ್ಲಿ ಅವರು ಒಂದು ನಾಯಿ ಪ್ರದರ‍್ಶನ ಕಾರ‍್ಯಕ್ರಮಕ್ಕೆ ಹೋಗಿದ್ದಾಗ, ಅಲ್ಲಿ ಹೆಕ್ಟಾರ್ ಲಿಂಕ್ಸ್ರೀನ್ (Hektor Linksrhein) ಎಂಬ ಹೆಸರಿನ ನಾಯಿಯಿಂದ ತುಂಬಾ ಪ್ರಬಾವಿತರಾಗಿ ಅದನ್ನು ಕೊಂಡುಕೊಂಡರು. ಬಳಿಕ ಕೂಡಲೇ ಅವರು ಆ ನಾಯಿಯನ್ನು ಹೊರಾಂಡ್ ವೊನ್ ಗ್ರಾಪ್ರತ್ (Horand von Grafrath) ಎಂದು ಹೆಸರಿಸಿ, ಸ್ತಳೀಯ ನಾಯಿ ತಳಿಗಳ ಏಳಿಗೆಗಾಗಿ ವೆರೆನ್ ಪುರ್ ಡ್ಯೂಶೆ ಶೇಪರ‍್ಹಂಡ್ (Verein für Deutsche Schäferhunde) ಎಂಬ ಹೆಸರಿನ ಸೊಸೈಟಿಯೊಂದನ್ನು ಹುಟ್ಟುಹಾಕಿದರು (ಇದಕ್ಕೆ ಇನ್ನೊಂದು ಹೆಸರು ಸೊಸೈಟಿ ಪಾರ್ ದಿ ಜರ‍್ಮನ್ ಶೆಪರ‍್ಡ್ ಡಾಗ್).
ಹೊರಾಂಡ್ ನಾಯಿಯು ಮೊದಲ ಜರ‍್ಮನ್ ಶೆಪರ‍್ಡ್ ನಾಯಿ ತಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಬಳಿಕ ಸ್ಟೆಪಾನಿಟ್ಜ್ ಅವರು ಹೊರಾಂಡ್ ನಾಯಿಯನ್ನು ಬೇರೆ ತಳಿಯ ನಾಯಿಗಳೊಂದಿಗೆ ಒಂದಾಗಿಸಿ ಅವುಗಳ ಸಂತತಿಯನ್ನು ಹೆಚ್ಚಿಸಿದರು. ದಿನ ಕಳೆಂದತೆ ಈ ತಳಿಯು ಜರ‍್ಮನ್ ಶೆಪರ‍್ಡ್ ಎಂದು ಜನಪ್ರಿಯಗೊಂಡಿತು. ಇದಕ್ಕೆ ವೋನ್ ಸ್ಟೆಪಾನಿಟ್ಜ್ ಅವರ ಬಲವಾದ ನಂಬಿಕೆ ಹಾಗೂ ರಾಜಿಯಾಗದ ಮುಂದಾಳುತನವೇ ಮುಕ್ಯ ಕಾರಣವಾಗಿತ್ತು. ಆದ್ದರಿಂದ ಅವರನ್ನು ಜರ‍್ಮನ್ ಶೆಪರ‍್ಡ್ ನಾಯಿ ತಳಿಯ ಸ್ರುಶ್ಟಿಕರ‍್ತ ಎಂದು ಕರೆಯುತ್ತಾರೆ.
ಮೈಮಾಟ
ಜರ‍್ಮನ್ ಶೆಪರ‍್ಡ್‍ನ ಮೈಮಾಟವು ಮದ್ಯಮ ಗಾತ್ರದಾಗಿದ್ದು, ಗಟ್ಟಿಯಾದ ನರಕಟ್ಟು ಹಾಗೂ ಮೂಳೆಗಳನ್ನು ಹೊಂದಿದೆ. ಇವು ಸುಮಾರು 60 ರಿಂದ 65 ಸೆಂಟಿಮೀಟರಿನಶ್ಟು ಉದ್ದ ಹಾಗೂ 30 ರಿಂದ 40 ಕೆ.ಜಿ.ಯಶ್ಟು ತೂಕ ಹೊಂದಿರುತ್ತವೆ. ಇದರ ಮೈ ಎರಡು ಬಗೆಯ ತೊಗಲಿನ ಹೊದಿಕೆಯನ್ನು ಹೊಂದಿದ್ದು, ಒಳಗಿನ ಹೊದಿಕೆ ದಪ್ಪವಾಗಿದ್ದರೆ, ಹೊರಗಿನದ್ದು ಅದಕ್ಕಿಂತ ಸ್ವಲ್ಪ ತೆಳುವಾಗಿರುತ್ತದೆ. ಕುತ್ತಿಗೆ ಹಾಗೂ ಹೆಗಲು ತುಂಬಾ ಬಿರುಸಾಗಿದ್ದು, ಹೆಚ್ಚು ಹೊತ್ತು ಕೆಲಸ ಮಾಡುವ ಅಳವನ್ನು ನೀಡುತ್ತವೆ. ಇವು 42 ಹಲ್ಲುಗಳನ್ನು ಹೊಂದಿದ್ದು, ಮೇಲಿನ ದವಡೆಯು 20 ಹಲ್ಲುಗಳನ್ನು ಹೊಂದಿದ್ದರೆ, ಕೆಳಗಿನದ್ದು 22 ಹಲ್ಲುಗಳನ್ನು ಹೊಂದಿರುತ್ತದೆ. ಇವು ಸುಮಾರು 9 ರಿಂದ 13 ವರ‍್ಶಗಳ ಕಾಲ ಬದುಕುತ್ತವೆ.
ನಡಿಗೆಯಲ್ಲಿ ತುಂಬಾ ಬಿರುಸು
ಜರ‍್ಮನ್ ಶೆಪರ‍್ಡ್ ನಾಯಿಯ ಕಾಲುಗಳು ಒಂದು ವಿಶೇಶ ರಚನೆ ಹೊಂದಿದ್ದು, ಮುಂಗಾಲುಗಳು ಆಕಾರದಲ್ಲಿ ನೇರವಾಗಿದ್ದರೆ, ಹಿಂಗಾಲುಗಳು ಸ್ವಲ್ಪ ಡೊಂಕಾಗಿರುತ್ತವೆ. ಈ ವಿಶೇಶವಾದ ರಚನೆ ಇವುಗಳು ತುಂಬಾ ಸುಳುವಾಗಿ ದೊಡ್ಡ ದೊಡ್ಡ ಹೆಜ್ಜೆಗಳನ್ನು ಹಾಕಿ ಬಿರುಸಿನಿಂದ ನಡೆದಾಡಲು ನೆರವಾಗುತ್ತದೆ. ಇವುಗಳ ಕಾಲಿನ ಅಡಿಗಳು ಚಿಕ್ಕದಾಗಿದ್ದು, ಕಾಲ್ಬೆರಳುಗಳು ಕಮಾನಿನ ಆಕಾರದಲ್ಲಿರುತ್ತವೆ.
ಜಾಣ್ಮೆಗೆ ಜಗತ್ತಿನಾದ್ಯಂತ ಹೆಸರುವಾಸಿ
ಜರ‍್ಮನಿಯ ಕುರಿ ಕಾಯುವ ಮಂದಿ ಬಳಸುತ್ತಿದ್ದ ನಾಯಿಗಳು, ಕೆಲವೇ ದಿನಗಳಲ್ಲಿ ತನ್ನ ಜಾಣ್ಮೆಯಿಂದ ಜಗತ್ತಿನಾದ್ಯಂತ ಹೆಸರುವಾಸಿ ಆದವು. ಸ್ಟ್ಯಾನ್ಲಿ ಕೊರೆನ್ (Stanley Coren) ಅವರು ತಮ್ಮ ಹೊತ್ತಿಗೆ ‘ದಿ ಇಂಟೆಲಿಜೆನ್ಸ್ ಆಪ್ ಡಾಗ್ಸ್ (the Intelligence of Dogs)’ ನಲ್ಲಿ ಜರ‍್ಮನ್ ಶೆಪರ‍್ಡ್ ತಳಿಯು ಜಾಣ್ಮೆಯಲ್ಲಿ ಬಾರ‍್ಡರ್ ಕಾಲಿಸ್ (Border Collies) ಹಾಗೂ ಪೂಡಲ್ಸ್ (Poodles) ತಳಿಯ ನಂತರ ಮೂರನೇ ಸ್ತಾನವನ್ನು ಪಡೆದಿದೆ ಎಂದು ಬರೆದಿದ್ದಾರೆ. ಅವರ ಪ್ರಕಾರ ಜರ‍್ಮನ್ ಶೆಪರ‍್ಡ್ ನಾಯಿಗೆ ಯಾವುದೇ ಕೆಲಸವನ್ನು ಕೇವಲ ಐದು ಬಾರಿ ಮಾಡಿ ತೋರಿಸದರೆ ಸಾಕು ಅದು ಕಲಿತುಕೊಳ್ಳುತ್ತದೆ. ಹಾಗೆಯೇ ಹೇಳಿದ ಕೆಲಸಗಳಲ್ಲಿ 95% ರಶ್ಟನ್ನು ಇದು ತಪ್ಪದೇ ಮಾಡುತ್ತದೆ.
ಮಂದಿಯ ಪ್ರೀತಿಯ ಪೋಲಿಸ್ ನಾಯಿ
ಕಳ್ಳತನ, ಕೊಲೆ ಮಾಡಿ ಓಡಿ ಹೋದವನನ್ನು ಹುಡುಕಲು, ಸಿಡಿಗುಂಡು ಪತ್ತೆಹಚ್ಚುವಿಕೆ, ತೊಂದರೆಗೊಳಗಾಗಿರುವ ಪ್ರದೇಶಗಳಿಗೆ ಗಸ್ತು ತಿರುಗುವಿಕೆ ಹೀಗೆ ಹಲವಾರು ಕೆಲಸಗಳಿಗೆ ಪೋಲಿಸ್ ಇಲಾಕೆಯಲ್ಲಿ ಈ ನಾಯಿಗಳ ನೆರವು ಪಡೆದುಕೊಳ್ಳುತ್ತಾರೆ. ಇವು ಪೋಲಿಸರೊಂದಿಗೆ ಒಂದು ಬಿಡಿಸಲಾರದ ನಂಟನ್ನು ಹೊಂದಿದ್ದು, ಮಂದಿ ಪ್ರೀತಿಯಿಂದ ಇವುಗಳನ್ನು ಪೋಲಿಸ್ ನಾಯಿ ಎಂದೇ ಕರೆಯುತ್ತಾರೆ.
ಇವು ಮಿಲಿಟರಿಯಲ್ಲಿ ಕೂಡ ಸದ್ದು ಮಾಡಿದ್ದವು
ಜಗತ್ತಿನ ಹಲವಾರು ದೇಶಗಳ ಮಿಲಿಟರಿಯಲ್ಲಿ ಕೂಡ ಜರ‍್ಮನ್ ಶೆಪರ‍್ಡ್ ನಾಯಿಗಳನ್ನು ಬಳಸುತ್ತಾರೆ. ಇವುಗಳಿಗೆ ವಿಶೇಶವಾದ ತರಬೇತಿ ನೀಡಿ ಎದುರಾಳಿ ಸೈನಿಕರ ಇರುವಿಕೆಯ ಬಗ್ಗೆ ಎಚ್ಚರಿಕೆ ನೀಡುವುದು, ಸಿಡಿಗುಂಡು ಪತ್ತೆಹಚ್ಚುವುದು, ಅಪಾಯಗಳ ಮುನ್ಸೂಚನೆಗಳನ್ನು ನೀಡುವುದು, ಇಂತಹ ಹಲವಾರು ಕೆಲಸಗಳಿಗೆ ಇದರ ನೆರವನ್ನು ಪಡೆದುಕೊಳ್ಳುತ್ತಾರೆ. ಅಪಾಯದ ಹೊತ್ತಿನಲ್ಲಿ ಗಾಳಿಕೊಡೆಯನ್ನು (parachute) ಬಳಸಿ ಗಾಳಿತೇರಿನಿಂದ (aircraft) ನೆಲಕ್ಕೆ ಇಳಿಯುವ ತರಬೇತಿಯನ್ನು ಕೂಡ ಇವುಗಳಿಗೆ ನೀಡಲಾಗಿರುತ್ತದೆ. ಎರಡನೇ ವಿಶ್ವ ಯುದ್ದದ ಹೊತ್ತಿನಲ್ಲಿ ಓಲೆಗಳನ್ನು ಒಂದು ಜಾಗದಿಂದ ಇನ್ನೊಂದಕ್ಕೆ ತಲುಪಿಸಲು ಓಲೆಕಾರರಂತೆ (messenger) ಇವುಗಳನ್ನು ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ.
ತಮ್ಮ ನಟನೆಯಿಂದ ಜಗತ್ತಿನಾದ್ಯಂತ ಮನೆಮಾತಾದವು
ಮೊದಲನೇ ವಿಶ್ವ ಯುದ್ದದ ಹೊತ್ತಿನಲ್ಲಿ ಜರ‍್ಮನಿ ಮಿಲಿಟರಿಯಲ್ಲಿ ವಿಶೇಶ ತರಬೇತಿ ಪಡೆದ ರಿನ್ ಟಿನ್ ಟಿನ್ (Rin Tin Tin) ಹಾಗೂ ಸ್ಟ್ರಾಂಗ್‍ಹಾರ‍್ಟ್ (Strongheart) ಎಂಬ ಹೆಸರಿನ ಎರಡು ಜರ‍್ಮನ್ ಶೆಪರ‍್ಡ್ ನಾಯಿಗಳ ನೆರವನ್ನು ಪಡೆಯಲಾಗಿತ್ತು. ಯುದ್ದದ ಬಳಿಕ ರಿನ್ ಟಿನ್ ಟಿನ್ ಎಂಬ ನಾಯಿಯನ್ನು ಅಮೇರಿಕಾದ ಸೈನಿಕ ಲೀ ಡಂಕನ್ ಅವರು ತಮ್ಮ ಜೊತೆಗೆ ತೆಗೆದುಕೊಂಡು ಹೋದರು. ಅದಕ್ಕೆ ನಟನೆ ಕುರಿತು ವಿಶೇಶ ತರಬೇತಿಯನ್ನು ನೀಡಿ, ಒಂದು ಮೂಕ ಚಿತ್ರದಲ್ಲಿ ನಟನೆ ಮಾಡಿಸಿದರು. ಅಚ್ಚರಿಯ ವಿಶಯ ಎಂದರೆ ಆ ಚಿತ್ರ ಗೆಲುವು ದಾಕಲಿಸಿ ಬಾಕ್ಸ್ ಆಪೀಸ್ ನಲ್ಲಿ ಸೂಪರ್ ಹಿಟ್ ಆಗಿ ರಿನ್ ಟಿನ್ ಟಿನ್ ನಾಯಿ ಜಗತ್ತಿನಾದ್ಯಂತ ಹೆಸರುವಾಸಿ ಆಯಿತು. ಬಳಿಕ ಇದು ಸುಮಾರು 27 ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಎಲ್ಲರ ಮನೆಮಾತಾಯಿತು.
ಮೊದಲನೇ ವಿಶ್ವ ಯುದ್ದದಲ್ಲಿ ಬಳಸಿದ ಇನ್ನೊಂದು ನಾಯಿ ಸ್ಟ್ರಾಂಗ್‍ಹಾರ‍್ಟ್ ಕೂಡ ಹಲವಾರು ಚಿತ್ರಗಳಲ್ಲಿ ನಟಿಸಿದೆ. ಹಾಲಿವುಡ್‍ನ ಹೆಸರಾಂತ ನಿರ‍್ದೇಶಕ ಲಾರೆನ್ಸ್ ಟ್ರಿಂಬಲ್ (Laurence Trimble) ಅವರು ಈ ನಾಯಿಗೆ ನಟನೆಯ ಕುರಿತು ವಿಶೇಶ ತರಬೇತಿ ನೀಡಿ ತಮ್ಮ ಚಿತ್ರಗಳಲ್ಲಿ ಮುಕ್ಯ ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದ್ದರು.
ಜಾಣ್ಮೆ, ಚುರುಕಾದ ಕಲಿಕೆ, ನಟನೆ, ಗಟ್ಟಿಯಾದ ಮೈಕಟ್ಟು, ಬಿರುಸಿನ ಓಟ ಹೀಗೆ ಹಲವಾರು ಅಳವುಗಳಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ನಾಯಿ ತಳಿ ಎಂದರೆ ಜರ‍್ಮನ್ ಶೆಪರ‍್ಡ್.
(ಮಾಹಿತಿ ಸೆಲೆ: wiki, germanshepherdworld.com, siriusdog.com, ankc.org.au )
(ಚಿತ್ರ ಸೆಲೆ: maxpixel, skitterphoto.com, wiki )
ಇತ್ತೀಚಿನ ಅನಿಸಿಕೆಗಳು