ವಿಶ್ವದ ಅತ್ಯಂತ ದುಬಾರಿ ಉಡುಪು

– ಕೆ.ವಿ.ಶಶಿದರ.

Most Expensive Dress, ಅತ್ಯಂತ ದುಬಾರಿ ಉಡುಪು

ಅಮೇರಿಕಾದ ಅದ್ಯಕ್ಶರಾದ ತಿಯೋಡರ್‍ ರೂಸ್ವೆಲ್ಟ್ ನಂತರ ಅತ್ಯಂತ ಚಿಕ್ಕ ವಯಸ್ಸಿನ ಅದ್ಯಕ್ಶ ಎಂಬ ಕ್ಯಾತಿ ಜಾನ್‍ ಎಪ್‍ ಕೆನಡಿ ಅವರದ್ದು. ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದ ಕೆನಡಿ ಅದ್ಯಕ್ಶರಾಗಿದ್ದುದು ಕೇವಲ 2 ವರ‍್ಶ10 ತಿಂಗಳು ಮಾತ್ರ(ಜನವರಿ 1961-ನವೆಂಬರ್ 1963). ಇವರ 45ನೇ ವರ‍್ಶದ ಹುಟ್ಟು ಹಬ್ಬದ ಆಚರಣೆಯ ಬಗ್ಗೆ ಹಲವಾರು ಕತೆಗಳು ಕೇಳಿಬರುತ್ತಲೇ ಇವೆ. ಹೊಸ ಹೊಸ ಕತೆಗಳು ಪದೇ ಪದೇ ಕೇಳಿ ಬರುತ್ತಿದ್ದರೂ ಹೇಳುವವರ-ಕೇಳುವವರ ಸಂಕ್ಯೆ ಕಡಿಮೆಯಾಗಿಲ್ಲ ಹಾಗೂ ಕುತೂಹಲ ತಣಿದಿಲ್ಲ.

‘ ಹ್ಯಾಪಿ ಬರ‍್ತ್‍ಡೇ ಮಿಸ್ಟರ್ ಪ್ರೆಸಿಡೆಂಟ್ ಡ್ರೆಸ್ ‘

ಜಾನ್‍ ಎಪ್. ಕೆನಡಿಯವರ 45ನೇ ಹುಟ್ಟು ಹಬ್ಬದ ಸಂಜೆ ಅಮೇರಿಕಾದ ಕ್ಯಾತ ನಟಿ, ಗಾಯಕಿ ಹಾಗೂ ರೂಪದರ‍್ಶಿ ಮರ‍್ಲಿನ್ ಮನ್ರೋ ದರಿಸಿದ್ದ ಉಡುಪು ‘ರಿಪ್ಲೀಸ್ ಬಿಲೀವ್‍ ಇಟ್‍ ಆರ್ ನಾಟ್’ ರವರ ಸುಪರ‍್ದಿಯಲ್ಲಿದೆ. ‘ಹ್ಯಾಪಿ ಬರ‍್ತ್‍ಡೇ ಮಿಸ್ಟರ್ ಪ್ರಸಿಡೆಂಟ್ ಡ್ರೆಸ್’ ಎಂಬ ನಾಮ ಪಲಕದ ಅಡಿಯಲ್ಲಿ ಈ ಉಡುಪನ್ನು ಸ್ಯಾನ್ ಪ್ರಾನ್ಸಿಸ್ಕೋದ ವಸ್ತು ಸಂಗ್ರಹಾಲಯದಲ್ಲಿ ಪ್ರದರ‍್ಶನಕ್ಕೆ ಇಡಲಾಗಿದೆ.

4.8 ದಶಲಕ್ಶ ಡಾಲರ್‍ ನೀಡಿ ಕರೀದಿಸಿದ ಉಡುಪು!

ಈ ಉಡುಪಿನಲ್ಲೇನಿದೆ ಹೆಚ್ಚುಗಾರಿಕೆ?ಎಂದು ಮೂಗು ಮುರಿಯಬೇಡಿ. ಈ ಉಡುಪಿನ ಕಲಾತ್ಮಕತೆಗೆ ಹಾಗೂ ತಯಾರಿಯ ಕೈಕೆಲಸಕ್ಕೆ ಮಾರುಹೋದವರು ಅಸಂಕ್ಯಾತರು. 20ನೇ ಶತಮಾನದ ಅತ್ಯಂತ ಪ್ರಸಿದ್ದ ಉಡುಪು ಇದು. ಕಣ್ಣು ಕೋರೈಸುವ ಈ ಉಡುಪು, ಅದನ್ನು ದರಿಸಿದ್ದ ಮರ‍್ಲಿನ್ ಮನ್ರೋ ಹಾಗೂ ಜಾನ್‍ ಎಪ್.ಕೆನಡಿ ಅಮೇರಿಕಾದ ರಾಜಕೀಯದಲ್ಲಿ ತಮ್ಮದೇ ಆದ ಪ್ರಾಮುಕ್ಯತೆಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.  ರಿಪ್ಲೀಸ್ ಬಿಲೀವ್‍ ಇಟ್‍ ಆರ್ ನಾಟ್ ಸಂಸ್ತೆ 4.8 ದಶಲಕ್ಶ ಡಾಲರ್‍ ನೀಡಿ ಈ ಉಡುಪನ್ನು ಹರಾಜಿನಲ್ಲಿ ಕರೀದಿಸಿತು.ಆದ್ದರಿಂದ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಉಡುಪು ಎಂಬ ಕ್ಯಾತಿಯೂ ಇದಕ್ಕೆ ಅಂಟಿತು. ಈ ಉಡುಪಿನ ಜೊತೆಯಲ್ಲಿ ಅಂದಿನ ದಿನದ ಕಾರ‍್ಯಕ್ರಮಗಳ ಮೂಲ ಪಟ್ಟಿ, ಕಾರ‍್ಯಕ್ರಮದ ಟಿಕೇಟ್‍ನ ತುಣುಕುಗಳು, ವೈಬವದ ಬಿತ್ತಿ ಚಿತ್ರಗಳು, ಮನ್ರೋಳ ಸಹಿ ಹೊಂದಿರುವ ಬಿಲ್ಲೆಗಳು ಸಹ ವಸ್ತು ಸಂಗ್ರಹಾಲಯದಲ್ಲಿ ಪ್ರದರ‍್ಶನಕ್ಕಿವೆ.

ಮೆರೆಗುರುತಿನ ಉಡುಪು!

ಮೇ, 19 1962ರ ನಡೆದ ಅಮೇರಿಕಾದ ಅದ್ಯಕ್ಶರ ಹುಟ್ಟು ಹಬ್ಬದ ದಿನ ಮನ್ರೋ ದರಿಸಿದ್ದ ಈ ದುಬಾರಿ ಉಡುಪಿಗೆ 6000 ವಜ್ರವನ್ನು ಹೋಲುವ ರೈನ್ ಸ್ಟೋನ್‍ಗಳನ್ನು ಕೂರಿಸಲಾಗಿದೆ. ಕೈಯಿಂದಲೇ ಎಲ್ಲವನ್ನೂ ಹೊಲಿದು ಉಡುಪನ್ನು ತಯಾರಿಸುವ ಕೆಲಸವಾಗಿತ್ತು. ‘ಕಳೆದ 50 ವರ‍್ಶದ ಅವದಿಯಲ್ಲಿ ವಿಶ್ವದಲ್ಲಿ ಯಾವುದಾದರೂ ಮೆರೆಗುರುತಿನ(iconic) ಉಡುಪು ಇದ್ದಲ್ಲಿ ಅದು ಇದೇ’ ಎನ್ನುತ್ತಾರೆ ರಿಪ್ಲೀಸ್ ಬಿಲೀವ್‍ ಇಟ್‍ ಆರ್ ನಾಟ್ ಸಂಸ್ತೆಯವರು.

ಜಾನ್‍ ಎಪ್. ಕೆನಡಿಯ 45ನೇ ಹುಟ್ಟು ಹಬ್ಬದಂದು ಮರ‍್ಲಿನ್ ಮನ್ರೋ ಹಾಡಿದ ಹಾಡು’ಹ್ಯಾಪಿ ಬರ‍್ತ್‍ಡೇ ಮಿಸ್ಟರ್ ಪ್ರೆಸಿಡೆಂಟ್ ‘ಎಂಬ ಹಾಡು ಆ ಕಾಲದಲ್ಲಿ ಜಗತ್ತಿನೆಲ್ಲೆಲ್ಲಾ ಸಂಚಲನ ಸ್ರುಶ್ಟಿಸಿತ್ತು. ಆದರೆ ಹೆಚ್ಚಿನವರಿಗೆ ಗೊತ್ತಿರದ ಸಂಗತಿಯೆಂದರೆ ಜಾನ್‍ ಎಪ್. ಕೆನಡಿಯ ನಿಜವಾದ ಹುಟ್ಟು ಹಬ್ಬಕ್ಕೆ 10 ದಿನ ಮುನ್ನವೇ ಈ ಕಾರ‍್ಯಕ್ರಮ ನಡೆಯಿತೆನ್ನುವುದು! ಕೆನಡಿ ಹುಟ್ಟಿದ್ದು 29ನೇ ಮೇ 1917ರಂದು.

( ಮಾಹಿತಿ ಮತ್ತು ಚಿತ್ರ ಸೆಲೆ: luxurylaunches.com, prnewswire.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.