ಕುಳವಾಡಿಕೆ ಕೋಳಿ

– ಮಾದು ಪ್ರಸಾದ್ ಕೆ.

ಕುಳವಾಡಿಕೆ ಕೋಳಿ Countryside Chicken

(ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ ಪಡೆದ ಕತೆ.)

ಹಗಲು ಮುಗಿದು ಸಂಜೆ ಬರಲು ತವಕಿಸುತ್ತಿತ್ತು. ಆ ವೇಳೆಗೆ ಸರಿಯಾಗಿ ‘ದ್ಯಾವ’ ಅವನ ಹೆಂಡ್ತಿ ಸಿದ್ದಿ ಮನೆ ಕಡೆಗೆ ಬರುತ್ತಾ, ದೂರದಿಂದಲೇ ತನ್ನ ಮಗಳು ರಾಮಿಯನ್ನು ಕೂಗಿ ಕರೆದರು. ಅವಳು ಮನೆಯಿಂದ ಆಚೆಗೆ ಇಣುಕಿ ನೋಡಿ, ಅವರು ಬರುತ್ತಿರುವುದನ್ನು ಕಾತ್ರಿ ಮಾಡಿಕೊಂಡು ಮನೆ ಮುಂದಿನ ಅಂಗಳದಲ್ಲಿ ಸ್ನಾನಕ್ಕೆ ಅಣಿಮಾಡುತ್ತಿದ್ದಳು. ದ್ಯಾವನ ಹೆಗಲ ಮೇಲಿದ್ದ ಚೀಲವನ್ನು, ಕಂಕುಳಲ್ಲಿದ್ದ ತಮಟೆಯನ್ನು ಕೆಳಗಿಳಿಸಲು ರಾಮಿ ಕೈಚಾಚುವಶ್ಟರಲ್ಲಿ ಬಾರವನ್ನು ತಡೆಯದೆ ಅವಾಗಿಯೇ ಕಳಚಿಕೊಂಡು ನೆಲ ಸೇರಿದವು. ಕಣ್ಣಲ್ಲೇ ದುರುಗುಟ್ಟಿದ ದ್ಯಾವನನ್ನು ಅವನ ಅಕ್ಕ ಸಂಕಾಳಿ ಕುಂತಲ್ಲೇ ಗಮನಿಸಿ “ಇಳ್ಸೋಗಂಟ ಏನಮ್ಮಿ ಮಾಡ್ತಿದ್ದೆ? ಬರ‍್ಬಾರ‍್ದಾ ಬಿರ‍್ಬಿರ‍್ರನೆ. ಹೋಗ್ಲಿ ಬಿಡು. ರಾಗಿ ಚೆಲ್ಲೋದ್ವಾ, ತಕ ಬಮ್ಮಿ ಗೋರ‍್ಕಂಡು ವಂದ್ರಾಡವಾ, ಯಂಗೂ ರಾಗಿನೂ ಬತ್ತಾನೂ ಬೆರ‍್ಸಿರ‍್ತರಲ್ವಾ” ಅಂತ ಕುಂತಲ್ಲಿಂದಲೇ ಕೂಗಿಕೊಂಡಳು.

ರಾಮಿ ಮೊರ ತೆಗೊಂಡು ಚೆಲ್ಲಿರೋ ದಾನ್ಯನೆಲ್ಲಾ ತುಂಬುತ್ತಿದ್ದಳು. ಹೊರಗೆ ಹಂಡೆಯಲ್ಲಿ ನೀರು ಗಣಗಣನೆ ಕಾಯ್ದು ದ್ಯಾವನನ್ನು ಸ್ನಾನಕ್ಕೆ ಆಹ್ವಾನಿಸುತ್ತಿದ್ದುದನ್ನು ನೋಡಿದನು. ನೀರಿನ ಹೊಗೆ ಗಾಳಿಯಲ್ಲಿ ತೇಲಿ ಆಕಾಶವನ್ನು ಆವರಿಸುತ್ತಿತ್ತು. ಸಿದ್ದಿಯು ತನ್ನ ಸೆರಗಿನೊಳಗೆ ಮುಚ್ಚಿಟ್ಟುಕೊಂಡು ತಂದಿದ್ದ ಕೋಳಿಮರಿಯನ್ನು ಹೊರತೆಗೆದು ಅದರ ಕಾಲಿಗೆ ಬಿಗಿಯಲು ದಾರಕ್ಕಾಗಿ ಸುತ್ತಾಡಿದಳು. ಬೂತಾಳಿ ಹಂಬಿನಿಂದ ಅದನ್ನು ಆಡಿನಗೂಟಕ್ಕೆ ಬಿಗಿದು, ಕೈ ತೊಳೆದುಕೊಳ್ಳಲು ಹಂಡೆ ನೀರಿಗೆ ಕೈ ಹಾಕಿ ಕೈಸುಟ್ಟುಕೊಂಡು ‘ಮುಂಡೆ, ಹೆಣ ತೊಳೆಯೋ ನೀರಂಗೆ ಕಾಯ್ಸಿದ್ದಿಯಲ್ವಾ, ನಿಂಗೆ ಬುದ್ದಿ ಇದ್ದದಾ, ವತಾರಿಂದ ಗುದ್ದ ತೆಗೆದು, ಹೆಣ ಊತು, ದಪ್ನಮಾಡಿ ಸುಸ್ತಾಗಿ ಬಂದೋರ‍್ಗೆ ಇಂಗಾ ನೀರ‍್ಕಾಯ್ಸೋದು, ನಮ್ಮನು ಸುಟ್ಟು ದಪ್ನಾ ಮಾಡ್ತಿ ಬುಡು, ಹೋಗು ಅಣ್ಕೆಗೆ ನೀರ್ ತಗಬಾ’ ಎಂದು ಹಲುಬಿದಳು. ಕಟ್ಟಿದ ಕೋಳಿಮರಿ ಪಿಳಪಿಳ ಅಂತ ಅರ‍್ಚ್ಗೊತಿತ್ತು. ಸಂಕಾಳಿ ವಂದ್ರಿಯಿಂದ ನಾಕಾಳು ರಾಗಿ ತೆಗೆದು ಕೋಳಿ ಕಡೆಗೆ ಕುಂತಲ್ಲಿಂದಲೇ ಎಸೆದಳು. ಅದು ಕುಬುಕ್ ಕುಬುಕ್ ಅಂತ ತಿನ್ನುತಿತ್ತು. ರಾಮಿ ತಣ್ಣೀರು ತಂದು ಅಣ್ಕೆ ಹಾಕತಿದ್ಲು, ಸಂಕಾಳಿ ವಂದ್ರಿ ಹಿಡಿದು ಬೆರೆತಿರೋ ಬತ್ತಾನೂ, ರಾಗಿನು ಬೇರೆ ಬೇರೆ ಮಾಡ್ತಿದ್ಲು. ಸಿದ್ದಿ ತನ್ನ ಗಂಡನ ಕರೆದು ಕೂಗಿ, ತಲೆಗೆ ಎಣ್ಣೆತಿಕ್ಕಿ, ಸ್ನಾನಕ್ಕೆ ಕೂರಿಸಿ ತಲೆ ಮೇಲೆ ನೀರಾಕಿ ಮೈತೊಳೆಯುತ್ತಿದ್ದಳು. ‘ಹಾಳು ಗುದ್ದದ ಮಣ್ಣು ಮೈಲೇ ಇದೆ. ಆ ಕಲ್ಲೊಳಗೆ ಗುದ್ದತೆಗೆದಲ್ಲಾ ನೀ ಏನಾ ಮನುಶ್ಯನಾ ದೆವ್ವನಾ ಅಂತ ಬೆನ್ನನ್ನಾ ಬರಬರನೆ ತಿಕ್ಕುತ್ತಿದ್ದಳು.

ಆ ಮುಂಜಾನೆಕೋಳಿ ಕೂಗಿದಾಗ ಎದ್ದು ಹೋಗಿದ್ದ ದ್ಯಾವನು ತನ್ನ ಹೆಂಡತಿ ಸಿದ್ದಿಗೆ ತಮಟೆ ತರಲು ಹೇಳಿ ಸೀತವ್ವನ ಮನೆಕಡೆಗೆ ನಡೆದನು. ಸೀತವ್ವ ಹಿರೆಗೌಡನ ತಾಯಿ. ವಯಸ್ಸಾಗಿ ಹಾಸಿಗೆ ಹಿಡಿದಿದ್ದ ಮುದುಕಿ. ಅವಳನ್ನು ನೋಡಿಕೊಳ್ಳುವುದು ಸುಲಬದ ಕೆಲಸವಲ್ಲ. ಉಣ್ಣುವುದು ಮಲಗಿದ್ದಲ್ಲಿಯೆ, ಜಲಮಲ ಎಲ್ಲವೂ ಅಲ್ಲಿಯೆ. ಇದರಿಂದ ಹಿರೆಗೌಡನ ಹೆಂಡತಿ ಪುಟ್ಟವ್ವನಿಗೆ ರೋಸಿ ಹೋಗಿತ್ತು. ಅವಳನ್ನು ಎತ್ತಲು ಇಳಕಲು ಗಂಡಸರೇ ಬೇಕಿತ್ತು. ಆ ಕೆಲಸವನ್ನು ಜೀತದಾಳು ದ್ಯಾವನಿಗೆ ವಹಿಸಿ, ಅವಳ ಹಾಸಿಗೆಯನ್ನು ಶುಚಿ ಮಾಡಲು, ಗಲೀಜು ಗೋರಲು ಸಿದ್ದಿಗೆ ವಹಿಸಿದ್ದಳು. ಇವರು ಕೀಳು ಜಾತಿಯವರಾಗಿದ್ದು ಮನೆ ಒಳಗೆ ಬರಬಾರದೆಂದು ಸೀತವ್ವನ ಮಂಚವನ್ನೇ ಕೊಟ್ಟಿಗೆಯಲ್ಲಿ ದನಕಟ್ಟುವ ಮೂಲೆಯೊಂದರಲ್ಲಿ ಇರಿಸಲಾಗಿತ್ತು. ಸಿದ್ದಿ ದನದ ಸಗಣಿಯೊಂದಿಗೆ ಸೀತವ್ವನ ಗಲೀಜನ್ನು ತುಂಬಿ ತಿಪ್ಪೆಗೆ ಸುರಿದು ಮೂಗು ಮುಚ್ಚಿಕೊಂಡು ಒಳಗೆ ಬರುತ್ತಿದ್ದಳು. ಕೊಟ್ಟಿಗೆಯಲ್ಲೇ ಅವಳನ್ನು ದನ ತೊಳೆದಂತೆ ತೊಳೆಯುತ್ತಿದ್ದಳು. ಆ ಕೈಯಿಂದಲೇ ಸಿದ್ದಿ ಅನ್ನ ತಿನ್ನ ಬೇಕಿತ್ತು. ಇದೊಂದು ಎಲ್ಲರಿಗೂ ನರಕ ಎನ್ನುವಂತಿತ್ತು. ಸೀತವ್ವನ ಸೊಸೆ ಪುಟ್ಟವ್ವನಂತೂ ದಿನಾಲೂ ದೇವರಿಗೆ ದೀಪ ಹಚ್ಚುವಾಗ ಇವಳ ಸಾವನ್ನು ಬೇಗ ಕರುಣಿಸು ದೇವರೆ ಎಂದು ತಪ್ಪದೆ ಬೇಡಿಕೊಳ್ಳುತ್ತಿದ್ದಳು.

ಸೀತವ್ವನ ಸಾವು ಆ ಮನೆಗೆ ಸಂತೋಶವನ್ನು ತಂದಿತ್ತಂತಿತ್ತು. ದ್ಯಾವನು ಅವಳ ದೇಹವನ್ನು ಮನೆಯಿಂದ ಹೊರಗೆ ತಂದು ಇರಿಸಿ, ಸೌದೆ ತುಂಡುಗಳಿಗೆ ಬೆಂಕಿ ಹಚ್ಚಿ ಹೊಗೆ ಹಾಕಿದನು. ಹಿರೆಗೌಡನು ಸಾವಿನ ಸುದ್ದಿ ಕೊಡುವ ಬರಾಟೆಯಲ್ಲಿದ್ದನು. ಸಿದ್ದಿ ಅಶ್ಟರಲ್ಲಿ ತಮಟೆ ಹೊತ್ತುಕೊಂಡು ಕೈಲಿ ಚೀಲ ಹಿಡಿದುಕೊಂಡು ಬಂದು ಅಲ್ಲಿರಿಸಿದಳು. ದ್ಯಾವನು ಹಾರೆ ಗುದ್ದಲಿ ತೆಗೆದುಕೊಂಡು ಸಿದ್ದಿಯೊಂದಿಗೆ ತೋಟದ ಬಯಲಿಗೆ ನಡೆದು ಇಬ್ಬರೂ ಗುದ್ದ ತೋಡಲು ಆರಂಬಿಸಿದರು. ಸುಮಾರು ಮದ್ಯಾಹ್ನದೊತ್ತಿಗೆ ಮುಗಿಸಿ ಹಿಂದಿರುಗಿ ತಮಟೆಯ ಸಾರತ್ಯವನ್ನು ದ್ಯಾವ ವಹಿಸಿದರೆ, ಸಿದ್ದಿಯು ಅವನ ಹಿಂದೆ ಪುರಿ ಎರಚುತ್ತಾ ನಡೆದು ತೋಟದ ಹಾದಿಯಲ್ಲಿ ಸಾಗಿ ಜನರ ದಂಡಿನೊಂದಿಗೆ ಗುದ್ದದ ಬಳಿಗೆ ಬಂದರು. ಗೌಡರ ಆಣತಿಯಂತೆ ಮಣ್ಣು ಮಾಡಿಗುದ್ದದ ಮೇಲೆ ಬಾಳೆ ಎಲೆಹಾಸಿ ಎಳ್ಳು ಅಕ್ಕಿ ಚೆಲ್ಲಿ, ಅದನ್ನು ಆಯ್ದುತಿನ್ನಲು ಕೋಳಿ ಮರಿಯೊಂದನ್ನು ಬಿಟ್ಟನು. ಅದು ಪಿಳ್ ಪಿಳ್ ಎನ್ನುತ್ತಾ ಎಳ್ಳು ಅಕ್ಕಿಯನ್ನು ಕುಕ್ಕಿ ಕುಕ್ಕಿ ತಿನ್ನುತ್ತಿರುವಾಗಲೆ ದ್ಯಾವನು ಅದೇನೋ ನೆನಸಿಕೊಂಡು ‘ಕುಳವಾಡಿಕೆ ಕೋಳಿ ಯಾರಿಗೆ ಬನ್ನಿ’ ಎಂದು ಕೂಗಿದೊಡನೆ ಸಿದ್ದಿಯು ಮಡಿಲ ಸೆರಗನ್ನು ಒಡ್ಡಿ ‘ನಾವೇ ಕುಳವಾಡ್ರೂ ಕೊಡಿ ಸ್ವಾಮಿ’ ಎಂದಳು. ಕೋಳಿಮರಿಯನ್ನು ಅವಳ ಮಡಿಲಿಗಿರಿಸಿ ನಂತರ ದ್ಯಾವನು ಸಾವಿಗೆ ಬಂದವರಿಗೆಲ್ಲಾ ಗೌಡರ ಕೈಯಿಂದ ಬತ್ತ, ರಾಗಿ, ಕಾಳು ಬೆರಸಿದ ದಾನ್ಯವನ್ನು ದಾನವಾಗಿ ಕೊಡಿಸಿದನು. ಆದರೆ ಸಾವಿನ ದಾನ್ಯವನ್ನು ಪಡೆದ ಜನರೆಲ್ಲರು ಅದನ್ನು ಪಡೆದವರಂತೆ ಪಡೆದು ಇತ್ತಕಡೆ ಸಿದ್ದಿಯ ಚೀಲಕ್ಕೆ ಸುರಿದು ಅದನ್ನು ಪಾಪದ ದಾನ್ಯದಂತೆ ಹಿಂದಿರುಗಿಸಿ ಹೋಗುತ್ತಿದ್ದರು. ಎಲ್ಲಾ ಕಾರ‍್ಯವನ್ನು ಮುಗಿಸಿದ ದ್ಯಾವ ಮತ್ತು ಸಿದ್ದಿ ಈಗ ಮನೆಯೆಡೆಗೆ ಬಂದು ಸೀತವ್ವನಿಂದಾದ ಎಲ್ಲಾ ಸೂತಕವನ್ನು ಕಳೆಯುವ ಸಲುವಾಗಿ ಸ್ನಾನ ಮಾಡಿದರು. ಅಶ್ಟರಲ್ಲಿ ರಾಮಿ ಬೇಯಿಸಿದನ್ನು ಎಲ್ಲರು ತಿನ್ನುವಾಗ ಆ ರಾತ್ರಿ ಕಳೆಯಿತು.

ದ್ಯಾವ ಮತ್ತು ಸಿದ್ದಿ ಬಡಗಣ ಸೀಮೆಯಿಂದ ಬಂದು ಊರ ಹಿರಿಯರಾದ ಹಿರೆಗೌಡನ ಕಂಡು ತಮ್ಮ ವಾಸಕ್ಕೆ ನೆಲೆ ಕೇಳಿದಾಗ, ‘ಯಾವ ಜಾತಿಕುಲ ನಿಮ್ದು’ ಅಂತ ವಿಚಾರಿಸಿದ ಅವರು, ಇವರ ಯೋಗ್ಯತೆಗೆ ತಕ್ಕಂತೆ ಕುಳವಾಡಿಕೆ ವ್ರುತ್ತಿಕೊಟ್ಟು, ಜೀವನಕ್ಕೆ ಅಂತ ಮುಕ್ಕಾಲು ಎಕರೆ ಕುಳವಾಡಿಕೆ ನೆಲನೂ ಕೊಟ್ಟ ಮೇಲೆ ಅವರು ನೆಲೆನಿಂತರು. ತನ್ನ ತಮ್ಮನನ್ನು ಹುಡುಕಿಕೊಂಡು ಬಂದ ಸಂಕಾಳಿನು ಜೊತೆಯಾಗಿ ಸಾಯೋ ಕಾಲದಲ್ಲಿ ತಮ್ಮನ ಆಸರೆ ಪಡೆದಳು. ಕುಳವಾಡಿಕೆ ಜೊತೆಗೆ ಕೂಲಿನಾಲಿ ಮಾಡ್ಕೊಂಡು ಜೀವನ ಮಾಡುವಾಗ ಬಡತನದ ಲೆಕ್ಕವಿಲ್ಲದೆ ಹುಟ್ಟಿದ ಮಕ್ಕಳು ದೇವಿ, ರಾಮಿ, ಕೆಂಚ, ಗುಳ್ಳ. ನಾಲ್ಕು ಮಕ್ಕಳ ತುಂಬಿದ ಸಂಸಾರ ನಿಬಾಯಿಸಲು ದ್ಯಾವನಿಗೆ ಗೌಡರ ಮನೆಯ ಜೀತವೇ ಆಸರೆಯಾಗಿತ್ತು. ಏನೆಲ್ಲಾ ಮಾಡಿದರು ಹೊಟ್ಟೆ ತುಂಬಿಸಿಕೊಳ್ಳಲು ಒಬ್ಬನ ದುಡಿಮೆ ಸಾಲದೆ ಸಿದ್ದಿಯು ಗೌಡರ ಮನೆಯ ಕಸ ಸುರಿಯುವ ಮೂಲಕ ನೆರವಾದರೂ ಏಳು ಜನರ ಹೊಟ್ಟೆಗೆ ಅರೆಯೂಟ, ಚಿಂದಿ ಬಟ್ಟೆಯೆ ಗತಿ ಎನ್ನುವಂತಾಗಿತ್ತು. ಹಿರಿಯಳಾದ ದೇವಿಗೆ ಮದುವೆ ಮಾಡುವ ಸಲುವಾಗಿ ಮಾಡಿದ ಸಾಲ ತೀರಿಸಲು ಹಿರೆಗೌಡರ ಸಂಬಂದಿಕರ ಮನೆಗೆ ಕೆಂಚ ಮತ್ತು ಗುಳ್ಳನನ್ನು ದನಕಾಯಲು ಹಾಕಿ ಬಂದದ್ದು ಆಯಿತು. ಮಕ್ಕಳ ಮುಕ ನೋಡಿ ಅದೆಶ್ಟೋ ದಿನ ಕಳೆದಿದ್ದರು ಪುರುಸೊತ್ತಿಲ್ಲದ ದುಡಿಮೆ ಇವರದು. ನಡುನಡುವೆ ಹಬ್ಬ ಹುಣ್ಣಿಮೆಗೆ ತಮಟೆ ಬಡಿಯುವುದು, ಸತ್ತ ಹೆಣ ಮಣ್ಣು ಮಾಡುವುದು, ಮದುವೆ ಮುಂಜಿಗೆ ಚಪ್ಪರ ಹಾಕುವುದು ಇವೆಲ್ಲಾ ಸಂಬಳವಿಲ್ಲದ ಉಪಕಸುಬುಗಳು. ಅವರಿವರು ಕೊಟ್ಟ ತಂಗಳ ಅನ್ನ, ಉಳಿದ ಊಟ, ಹಳೆ ಬಟ್ಟೆಗಳಶ್ಟೆ ಇವರ ಶ್ರಮಕ್ಕೆ ತಕ್ಕುತ್ತಿದ್ದ ಪಗಾರವಾಗಿರುತ್ತಿದ್ದವು. ಬಿಡುವಿಲ್ಲದ ಕೆಲಸದೊಳಗೆ ಅವನ ಮುಕ್ಕಾಲು ಎಕರೆ ಹೊಲ ಪಾಳು ಬಿದ್ದು, ಉಳಲು ದನವಿಲ್ಲದೆ ಊರ ದನಗಳಿಗೆ ಗೋಮಾಳವಾಗುತಿತ್ತು. ಇವೆಲ್ಲವನ್ನು ದ್ಯಾವ ಎಂದೂ ಲೆಕ್ಕಿಸಿದವನಲ್ಲ. ತೋಚಿದ ಕೆಲಸ ಮಾಡಿಕೊಂಡು ಸಿಕ್ಕಿದನ್ನು ತಿಂದು, ಮಕ್ಕಳಿಗೂ ತಿನ್ನಲು ತಂದು ಜೀವನ ಕಳೆಯುವುದು ಅವನ ಕಾಯಕವಾಗಿತ್ತು.

ಸಂಕಾಳಿಯು ಕೋಳಿಮರಿಯ ಕಾಲಿಗೆ ಹದವಾದ ಒಂದು ಹಗ್ಗವನ್ನು ವಸೆದು ಅದನ್ನುಗೂಟಕ್ಕೆ ಕಟ್ಟಿ, ವಂದ್ರಾಡಿ ಬಂದ ಕಲ್ಲು ಮಣ್ಣು ರಾಗಿಯನ್ನು ಅದಕ್ಕೆ ಹಾಕಿ ನೀರನ್ನು ಇಟ್ಟು, ಹದ್ದು ಕಾಗೆಗಳ ಕಣ್ಣಿಗೆ ಬೀಳದಂತೆ ಜೋಪಾನ ಮಾಡಿದಳು. ಸೀತವ್ವನ ಸಾವಿನ ದಾನ್ಯವನ್ನು ಒಂದಶ್ಟು ಎತ್ತಿಟ್ಟು ಗಂಟುಕಟ್ಟಿ ಕೋಳಿಗಾಗಿ ಮೀಸಲಿಟ್ಟಳು. ಯಾವಾಗಲು ಅದರ ಮುಂದೆಯೇ ಕುಳಿತು ಅದರ ಯೋಗಕ್ಶೇಮವನ್ನು ನೋಡಿಕೊಳ್ಳುತ್ತಿದ್ದಳು. ಇನ್ನು ರಾಮಿಯು ಅತ್ತೆ ಹೇಳಿದಂತೆ ಕೋಳಿಯ ನಿಗಾ ವಹಿಸುತ್ತಿದ್ದಳು. ಕೋಳಿಯು ನೋಡು ನೋಡುತ್ತಿದ್ದಂತೆ ಬೆಳೆದು ಮೈದುಂಬಿಕೊಳ್ಳುತಿತ್ತು. ಸಂಕಾಳಿಗೆ ಅದನ್ನು ಸಾಕುವುದೆಂದರೆ ಮಕ್ಕಳನ್ನು ಸಾಕಿದಂತೆ ಎನಿಸುತಿತ್ತು. ಹಿರೆಗೌಡರ ಮಗ ಕಾಂತನಿಗೆ ಹೆಂಗಸರ ಚಟವಿದೆ ಎನ್ನುವುದು ಊರಿಗೆಲ್ಲಾ ಸುದ್ದಿ ಹಬ್ಬಿ ದ್ಯಾವನ ಮನೆಗೂ ತಲುಪಿತು. ಅವನು ಆಗಾಗ ದ್ಯಾವನನ್ನು ಸಿದ್ದಿಯನ್ನು ಕೆಲಸಕ್ಕೆ ಕರೆಯುವ ನೆಪ ಮಾಡಿಕೊಂಡು ರಾಮಿಯನ್ನು ಮಾತಾಡಿಸುತ್ತಿದ್ದ. ಸಂಕಾಲಿಯು ಇದನ್ನು ಕಂಡು ಕೆಂಡಾಮಂಡಲವಾಗಿ ತನ್ನ ದೊಣ್ಣೆಬೀಸಿ ‘ಹಾಳು ಹುಂಜ ನನ್ನ ಕೋಳಿ ಮೇಲೆ ಕಣ್ಣಾಕುತ್ತೆ ಅದರ ತಲೆ ಸಿಡಿಯಾ’ ಅಂತ ಊರ ಕೋಳಿಗಳಿಗೆ ಬೈಯ್ಯುವಂಗೆ ಶಪಿಸುತ್ತಿದ್ದಳು. ರಾಮಿಯಂತೂ ಮನೆಯಿಂದ ಹೊರಬಂದು ಮಾತನಾಡುವ ಚಾತಿಯವಳಲ್ಲ. ದ್ಯಾವ ಸಿದ್ದಿ ಮುಂಜಾನೆಯೇ ಕೆಲಸಕ್ಕೆ ಹೋದದ್ದು ತಿಳಿದ ಮೇಲೆಯೇ ಕಾಂತ ಇಂತಹ ನಾಟಕವಾಡುತ್ತಿದ್ದ ಎಂಬುದು ಸಂಕಾಳಿಗೆ ಅರ‍್ತವಾಗುತಿತ್ತು.

ಹಿರೆಗೌಡರ ಮಗಳು ಸುಮ ಪೇಟೆಯಲ್ಲಿ ಓದುವಾಗಲೆ ಪ್ರೇಮಿಸಿ ಮದುವೆಯಾಗಿ ಊರಿನತ್ತ ತಲೆಯಾಕದೆ ಅಲ್ಲೇ ಉಳಿದಿದ್ದಳು. ಇನ್ನು ದ್ಯಾವನ ಮಗಳು ದೇವಿ ಮೈತುಂಬಿಕೊಂಡಿರುವ ಸುದ್ದಿಯು ಊರಿಗೆಲ್ಲಾ ಹರಡಿತ್ತು. ಸಂಕಾಳಿಯ ಆರೈಕೆಯಲ್ಲಿ ಕೋಳಿಯು ದಿನೇ ದಿನೇ ಕೊಬ್ಬುತಿತ್ತು. ಅದು ಬೀದಿಯಲ್ಲಿ ಆಡುವುದನ್ನು ನೋಡುವುದೇ ಒಂದು ಸೊಗಸಾಗಿತ್ತು. ಅದರ ಪುಕ್ಕಗಳು ನವಿಲಗರಿಗಳಂತೆ ಮಿರುಗುತಿದ್ದವು. ಸಂಕಾಳಿ ಮತ್ತು ರಾಮಿ ಅದರ ಮೈಮಾಟವನ್ನು ಗುಣಗಾನಿಸುತ್ತಾ ದಿನ ಕಳೆಯುತಿದ್ದರು. ಸಂಕಾಳಿಯು ಕೋ… ಕೋ.. ಕೋ.. ಎಂದು ಕೈಮುಂದೆ ಮಾಡಿದರೆ ಸಾಕು, ಅದು ಒಂಟಿಕಾಲಿನಲ್ಲಿ ಕುಣಿದು ಬಂದು ಕಾಳು ತಿನ್ನುತಿತ್ತು. ಈಗ ಊರಿನವರ ಕಣ್ಣೆಲ್ಲಾ ಈ ಕುಳವಾಡಿಕೆ ಕೋಳಿಯ ಮೇಲೆ ನೆಟ್ಟು ಅದರ ಮೂಳೆ ಚೀಪುವ ಕನಸುಕಾಣುತಿದ್ದರು. ಸಂಕಾಳಿ ಹತ್ರ ಬಂದು ‘ಈ ಕೋಳಿ ಕುಯ್ದಾಗ ನಮ್ನು ಉಣ್ಣಕ್ಕೆ ಕರಿಬೇಕು ಅಜ್ಜಿ’ ಅಂತ ತಮ್ಮ ಆಸೆ ತೋಡ್ಕೋತಿದ್ದರು.

ಆ ದಿನ ರಾತ್ರಿ ಉಂಡು ಮಲಗುವಾಗ ದ್ಯಾವನಿಗೆ ಸಿದ್ದಿಯು ತನ್ನ ಮಗಳು ದೇವಿ ಬಸಿರಾಗಿರುವ ಸುದ್ದಿಯನ್ನು ಹೇಳಿ ಅವಳನ್ನು ಕರೆತಂದು ಆರೈಕೆ ಮಾಡುವ ವಿಚಾರವನ್ನು ಮಾಡಿದಳು. ಅದಕ್ಕೆ ದ್ಯಾವನು ‘ಹೂಂ’ ಎಂದು ಸಮ್ಮತಿಸಿದನು. ರಾಮಿಯು ‘ಅಕ್ಕ ಬಂದಾಗ ಬಾವನನ್ನು ಕರಿಯವ್ವ, ಕೋಳಿ ಕುಯ್ಯುವ ಕಣವ್ವಾ’ ಎಂದಳು. ಜೀತಕ್ಕೆ ಹೋಗಿರುವ ‘ಕೆಂಚ, ಗುಳ್ಳರನ್ನು ಕರಿಯಪ್ಪಾ’ ಎಂದಳು ಸಂಕಾಲಿ. ರಾಮಿಯು ಕೋಳಿಯನ್ನು ಕವುಚಿರುವ ಕುಕ್ಕೆಯ ಕಡೆಗೆ ಒಮ್ಮೆ ನೋಡಿದಳು ಅದು ಗಾಡಾ ನಿದ್ದೆಯಲ್ಲಿತ್ತು. ಇಲ್ಲಿ ನಿದ್ದೆ ಯಾರಿಗೂ ಹತ್ತಿರಲಿಲ್ಲ, ಎಲ್ಲರೂ ಸುಮ್ಮನೆ ಮಲಗಿದರು. ಮತ್ತೆ ಸಿದ್ದಿಯು ಮಲಗಿಕೊಂಡೇ ‘ಬರೋ ಸೋಮಾರ ಗೌಡ್ರಗೆ ಹೇಳ್ಬುಟ್ಟು ಹೋಗಿ, ನೀವು ಮಕ್ಕಳ ಕರ‍್ಕೊಂಡು ಬನ್ನಿ, ನಾನು ದೇವಿನೂ ಅವಳ ಗಂಡನ್ನೂ ಕರ‍್ದು ಬರ‍್ತಿನಿ, ಆದ್ರೆ ಬೆಯಸ್‍ತ್ವಾರ ಕೋಳಿ ಕುಯ್ಯೋವಾ, ಇನ್ನು ಗದ್ದೆ ಕುಯುಲು ಸುರುವಾದ್ರೆ ಪುರುಸೊತ್ತಿರಲ್ಲ’ ಎಂದಳು. ದ್ಯಾವನ ಮೌನ ಎಲ್ಲದಕ್ಕೂ ಸಮ್ಮತಿಸಿದ ಮೇಲೆ ಅವಳು ದೀಪ ಆರಿಸಿದಳು.

ಹಿರೆಗೌಡರು ಪೇಟೆಗೆ ಹೋಗಿ ತಮ್ಮಮಗಳು ಸುಮಳನ್ನು ಕರೆದು ತಂದಿರುವ ಸುದ್ದಿ ಊರಿಗೆಲ್ಲಾ ಹಬ್ಬಿತು. ಅವಳು ಬೇರೆಜಾತಿಯ ಯಾರನ್ನೋ ಪ್ರೇಮಿಸಿ ಮದುವೆ ಆಗಿದ್ದಾಳೆ ಎಂದು ತಿಳಿದಿದ್ದ ಜನರು ಹಿಂಡು ಹಿಂಡಾಗಿ ಬಂದು ಗೌಡರ ಮನೆಯ ಮುಂದೆ ನೆರದಿದ್ದರು. ಗೌಡರು ತಮ್ಮ ಮೀಸೆ ನುಲಿಯುತ್ತಾ, ‘ಅವಳು ನನ್ನ ಮಗಳು. ಮರ‍್ಯಾದೆ ಹೋಗೋ ಕೆಲ್ಸ ಮಾಡಾಳಾ, ನಮ್ಮ ಸಂಬಂದಿಕರ ಹುಡುಗನ್ನೇ ಮದುವೆ ಆಗಿರೋದು’ ಎಂದು ಕೇಳಿದವರ ಬಾಯಿ ಮುಚ್ಚಿಸುವ ಪ್ರಯತ್ನದಲ್ಲಿದ್ದರು.

ಸಂಕಾಳಿಯು ದೊಣ್ಣೆ ಊರಿಕೊಂಡು ರಾಮಿಯೊಂದಿಗೆ ಬಂದು ಸುಮಳನ್ನು ಮಾತನಾಡಿಸಿದಾಗ, ಗೌಡರು ‘ದ್ಯಾವ ಹೋದ್ನ ತನ್ನ ಐಕ್ಳ ನೋಡೋಕೆ’ ಎಂದರು. ಅಲ್ಲೇ ಇದ್ದ ಗೌಡರ ಮಗ ಕಾಂತನು ರಾಮಿಯನ್ನು ನೋಡಿ ಜೋಲ್ಲು ಸುರಿಸುತ್ತಿದ್ದ. ಸಂಕಾಳಿಯು ಹೂಂ ಎನುತ ಹಿಂದಿರುಗಿ ನಡೆದಳು. ರಾಮಿಯು ಹಿಂಬಾಲಿದಳು. ಮನೆಗೆ ಬಂದು ಕೋಳಿಗೆ ಮೇವು ಹಾಕುತ್ತಾ ಸಂಕಾಳಿಯು ‘ತಿನ್ನು ತಿನ್ನು ನನ್ನ ಬಂಗಾರ ಇನ್ನೆಶ್ಟು ದಿನ ಇದ್ದಿಯೇ ಈ ಮುದುಕಿ ಸಾಯೋಶ್ಟರಲ್ಲಿ ವಸಿ ರಸಕುಡ್ಕೊತಿನಿ’ ಅಂತ ತನ್ನ ಆಸೆಯನ್ನು ಅದರ ಮುಂದೆ ಹೇಳಿಕೊಂಡಳು. ಕೇಳಿಸಿಕೊಂಡ ರಾಮಿಯು ‘ರಸ ಏನು ಒಂದ್ ಸೌಟು ಬಾಡೇ ತಿನ್ನುವಂತೆ ಬುಡು ಅತ್ತೆ’ ಎಂದಳು.

ಎಲ್ಲರ ನಿರೀಕ್ಶೆಯ ಗುರುವಾರ ತಡಮಾಡದೆ ಬಂದಿತು. ದ್ಯಾವನ ಮನೆ ಈಗ ತುಂಬಿ ತುಳುಕುತ್ತಿದೆ. ಅಳಿಯ ಮಗಳು, ಎಲ್ಲಾ ಮಕ್ಕಳು ಸೇರಿಕೊಂಡು ಸಡಗರ ತುಂಬಿ ಹಬ್ಬದ ವಾತಾವರಣ ಮೂಡಿತು. ಕೆಂಚ ಗುಳ್ಳರಿಗೆ ದ್ಯಾವನು ಕುಡುಗೋಲು ಮಸೆಯುವಂತೆ ತಿಳಿಸಿ, ದೇವಿ ರಾಮಿಯರಿಗೆ ಕೋಳಿ ಸುಲಿಯಲು ಬಿಸಿನೀರು ಕಾಯಿಸುವಂತೆ ಹೇಳಿದನು. ಸಿದ್ದಿಯು ಚಕ್ಕೆ ಲವಂಗದ ಮಸಾಲೆ ಕುಟ್ಟುತ್ತಿದ್ದಳು. ಸಂಕಾಳಿಯು ದ್ಯಾವನು ಹರಟುತ್ತಾ ಬೀದಿಯಲ್ಲಿ ಕುಳಿತಿದ್ದರು. ದ್ಯಾವನು ದೂರಕ್ಕೆ ದಿಟ್ಟಿಸಿದನು. ಬಿಳಿ ಪಂಚೆಯ ಎತ್ತರದ ಆಳು ಅವನ ಕಡೆಗೆ ಬರುವಂತೆ ಕಂಡನು. ‘ಹೌದು ಅದುಗೌಡರೇ… ಹಿರೆಗೌಡರೇ ಇತ್ತ ಬರುತ್ತಿದ್ದಾರೆ’ ಎಂದುಕೊಂಡು ಎದ್ದು ನಿಂತನು. ‘ದ್ಯಾವ’ ಎನ್ನುವ ಗಟ್ಟಿಯಾದ ದನಿಯು ಕೇಳುತ್ತಿದ್ದಂತೆ ‘ಬುದ್ದಿಯಾರ ನೀವು ಇಲ್ಲಿ’ ಎಂದನು. ಬಸುರಾಗಿದ್ದ ಮಗಳು ದೇವಿ ಹೊರಗೆ ಬಂದು ‘ಅತ್ತೇ ಕೋಳಿ ಹಿಡ್ಕೋ ನೀರು ಕಾದೋದೋ’ ಎಂದಳು. ಸಂಕಾಳಿ ಕೋಳಿ ಇರುವ ಕುಕ್ಕೆ ಕಡೆಗೆ ನಡೆದು ಕೋಳಿಯನ್ನು ಹಿಡಿದು ಕೊಂಡಳು. ಕೆಂಚನು ಕುಡುಗೋಲನ್ನು ಮಸೆದು ತಂದನು. ದ್ಯಾವನ ಕಡೆಗೆ ನೋಡಿದ ಗೌಡರು ‘ದ್ಯಾವ ನಿಮ್ಮ ಸುಮವ್ವಂಗೆ ಕೋಳಿ ತಿನ್ನೋ ಆಸೆಯಂತೆ ಕಣ್ಲಾ… ಬಸುರಿ ಹೆಂಗ್ಸು ಬೇರೆ ನೋಡು, ಅವ್ಳ ಬಯಕೆ ತೀರುಸ್ಬೇಕಲ್ವಾ, ಅದ್ಕೆ ಬಂದೆ, ನಿಮ್ಮನೆ ಒಳ್ಳೆ ಕೋಳಿ ಇದೆಯಂತೆ, ಪ್ಯಾಟೆಯಿಂದ ಅಳಿದೇವ್ರೂ… ಬಂದವ್ರೆ, ಕೋಳಿ ಕುಯ್ಯೋಣ.’ ಎನ್ನುತಿದ್ದಂತೆ ಕೋಳಿ ಹಿಡಿದಿದ್ದ ಸಂಕಾಳಿ ಕೈ ನಡುಗುತಿತ್ತು. ದ್ಯಾವನ ಬಾಯಿಂದ ಮಾತೇ ಹೊರಡದಾಯಿತು. ಕೆಂಚನ ಕೈಯಿಂದ ಕುಡುಗೋಲು ಜಾರಿ ಕೆಳಗೆ ಬಿತ್ತು. ದೇವಿ ರಾಮಿಯರು ಹಂಡೆಯ ಬಾಯಿಗೆ ಬಟ್ಟೆ ಹಾಕಿಕೊಂಡು ಹಿಡಿದು ಹೊರತಂದು ಇಟ್ಟ ಬಿಸಿ ನೀರು ತುಳುಕುತಿತ್ತು. ಈಗ ಗೌಡರ ಕೈ ಮುಂದೆ ಬಂದು ಸಂಕಾಳಿಯ ಕೈಲಿದ್ದ ಕೋಳಿಯನ್ನು ಹಿಡಿದುಕೊಂಡಿತು. ಸಂಕಾಳಿಯ ಕೈ ಸಡಿಲಾಗಿ ಕೋಳಿಯು ಗೌಡರ ಕೈ ಸೇರಿತು. ಗೌಡರು ಕೋಳಿ ಹಿಡಿದು ತಮ್ಮ ಮನೆಯ ಕಡೆಗೆ ನಡೆದರು. ದ್ಯಾವ ಸಿದ್ದಿಯರು ತಲೆ ಬಗ್ಗಿಸಿ ನಿಂತಿದ್ದರು. ಹಂಡೆಯೊಳಗೆ ನೀರು ಕುದಿಯುತ್ತಲೇ ಇತ್ತು. ಮಕ್ಕಳ ಎದೆಯೊಳಗೂ…

(ಚಿತ್ರ ಸೆಲೆ: maxpixel)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. eshwar Hadapada says:

    ತುಂಬಾ ಚನ್ನಾಗಿದೆ ಕತೆ.

  2. ಶಂಕರ್ಲಿಂಗೇಶ್ ತೊಗಲೇರ್ says:

    ಅದ್ಬುತವಾಗಿ ಬರೆದಿದ್ದೀರಿ ಮಾದು ಪ್ರಸಾದ್ ಅವರೇ … ಕಣ್ಣಿಗೆ ಕಟ್ಟುವಂತಿದೆ ಈ ಕಥೆಯ ವರ್ಣನೆ … ಹೀಗೇ ಮುಂದುವರೆಸಿ

ಅನಿಸಿಕೆ ಬರೆಯಿರಿ:

Enable Notifications OK No thanks