ಕುಶ್ಟಗಿ ಕರಿಬಸವೇಶ್ವರನ ವಚನದ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas
ಹೆಸರು: ಕುಶ್ಟಗಿ ಕರಿಬಸವೇಶ್ವರ
ಕಾಲ: ಕ್ರಿ.ಶ.1700
ಊರು: ಕುಶ್ಟಗಿ, ತಾಲ್ಲೂಕು ಕೇಂದ್ರ, ಕೊಪ್ಪಳ ಜಿಲ್ಲೆ
ದೊರೆತಿರುವ ವಚನಗಳು: 99
ವಚನಗಳ ಅಂಕಿತನಾಮ: ಅಖಂಡ ಪರಿಪೂರ್ಣ ಘನಲಿಂಗಗುರು
                                                ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ

==========================================================

ಉಳ್ಳಿ ಇಂಗು ಬೆಲ್ಲ ಮೆಣಸು
 ಇವ ಕೊಳ್ಳಬಾರದುಯೆಂಬ 
 ಒಳ್ಳೆ ವ್ರತಿಗಳು ನೀವು ಕೇಳಿರೊ
 ಸುಳ್ಳು ಸಟೆಯ ಬಿಟ್ಟು 
 ತಳ್ಳಿಬಳ್ಳಿಯ ಬಿಟ್ಟು
 ಒಳ್ಳಿತಾಗಿ ನಡೆಯಬಲ್ಲಡೆ
 ಬಳ್ಳೇಶ್ವರನ ಭಕ್ತರೆಂಬೆ ಕಾಣಾ
 ಅಖಂಡ ಪರಿಪೂರ್ಣ ಘನಲಿಂಗಗುರು
 ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ

ದೇವರ ದಯೆ/ಕರುಣೆ/ಅನುಗ್ರಹಕ್ಕೆ ಪಾತ್ರರಾಗಬೇಕೆಂಬ ಹಂಬಲದಿಂದ ವ್ಯಕ್ತಿಗಳು ತಾವು ಉಣ್ಣುವ/ತಿನ್ನುವ ವಸ್ತುಗಳಲ್ಲಿ ಕೆಲವನ್ನು ಬಿಡುವುದರ ಬದಲು, ತಮ್ಮ ದಿನನಿತ್ಯದ ಸಾಮಾಜಿಕ ವ್ಯವಹಾರಗಳಲ್ಲಿ/ಜನರ ಒಡನಾಟದಲ್ಲಿ ಸುಳ್ಳು/ತಟವಟ/ವಂಚನೆ/ಕ್ರೂರತನದ ನಡೆನುಡಿಗಳನ್ನು ಬಿಟ್ಟು, ಒಳ್ಳೆಯತನದಿಂದ ಬಾಳುವುದು ದೊಡ್ಡದು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

“ಒಳ್ಳಿತಾಗಿ ನಡೆಯಬಲ್ಲಡೆ/ಒಳ್ಳೆಯತನದಿಂದ ಬಾಳುವಂತಾದರೆ “ ಎಂದರೆ ವ್ಯಕ್ತಿಯು ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವ ನಡೆನುಡಿಗಳನ್ನು ಹೊಂದಿರುವುದು.

( ಉಳ್ಳಿ=ಈರುಳ್ಳಿ/ಬೆಳ್ಳುಳ್ಳಿ; ಇಂಗು=ತಿನಸು/ಉಣಿಸುಗಳನ್ನು ತಯಾರಿಸುವಾಗ ಜತೆಯಲ್ಲಿ ಬಳಸುವ ವಸ್ತು. ಇದು ಒಂದು ಬಗೆಯ ಮರದ ಹಾಲಿನಿಂದ ದೊರೆಯುತ್ತದೆ; ಬೆಲ್ಲ=ಕಬ್ಬಿನ ರಸವನ್ನು ಕಾಯಿಸಿ ತಯಾರಿಸಿದ ಸಿಹಿಯುಳ್ಳ ವಸ್ತು; ಮೆಣಸು=ಒಂದು ಬಗೆಯ ಕಪ್ಪನೆಯ ಕಾಳು/ಕಾಯಿ. ಇದನ್ನು ಅಡುಗೆಯಲ್ಲಿ ಮಸಾಲೆಯ ವಸ್ತುವಾಗಿ ಬಳಸುತ್ತಾರೆ; ಇವ=ಇವನ್ನು/ಈ ವಸ್ತುಗಳನ್ನು; ಕೊಳ್ಳಬಾರದು+ಎಂಬ; ಕೊಳ್/ಕೊಳ್ಳು=ಪಡೆಯುವುದು/ಹೊಂದುವುದು/ಸ್ವೀಕರಿಸುವುದು; ಕೊಳ್ಳಬಾರದು=ತಿನ್ನಬಾರದು/ಉಣ್ಣಬಾರದು/ಸೇವಿಸಬಾರದು; ಎಂಬ=ಎನ್ನುವ/ಎಂದು ಹೇಳುವ;

ಇವ ಕೊಳ್ಳಬಾರದುಯೆಂಬ=ಈರುಳ್ಳಿ/ಬೆಳ್ಳುಳ್ಳಿ/ಇಂಗು/ಬೆಲ್ಲ/ಮೆಣಸು ಮುಂತಾದವನ್ನು ತಿನ್ನಬಾರದು ಎಂಬ ನಿಲುವನ್ನು ಕೆಲವೊಂದು ಜಾತಿ/ವರ‍್ಗ/ಗುಂಪಿನ ಜನರು ತಳೆದು, ಅದನ್ನು ಒಂದು ವ್ರತದಂತೆ ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಕನ್ನಡ ನುಡಿಸಮುದಾಯವು ಮೇಲು/ಕೀಳಿನ ಜಾತಿ ಮೆಟ್ಟಿಲುಗಳಿಂದ ಕೂಡಿದೆ. ಪ್ರತಿಯೊಂದು ಜಾತಿಯ ಜನರು “ ತಮ್ಮ ಜಾತಿಯು ಮೇಲು, ಮತ್ತೊಂದು ಜಾತಿಯು ಕೀಳು “ ಎಂಬ ಒಳಮಿಡಿತಗಳಿಂದ ಕೂಡಿದ್ದಾರೆ. ಇದೇ ಬಗೆಯ ಒಳಮಿಡಿತಗಳನ್ನು ತಿನ್ನುವ/ಉಣ್ಣುವ ವಸ್ತುಗಳ ಬಗ್ಗೆಯೂ ಹೊಂದಿರುವುದರಿಂದ , ಕೆಲವು ಬಗೆಯ ಉಣಿಸು/ತಿನಸುಗಳ ಸೇವನೆಯನ್ನು ಮೇಲು/ಒಳ್ಳೆಯದು/ಪವಿತ್ರವೆಂದು , ಮತ್ತೆ ಕೆಲವನ್ನು ಸೇವಿಸುವುದು ಕೀಳು/ಕೆಟ್ಟದ್ದು/ಅಪವಿತ್ರವೆಂದು ನಂಬಿದ್ದಾರೆ.

ಒಳ್ಳ್+ಎ; ಒಳ್ಳೆ=ಒಳ್ಳೆಯ/ಯೋಗ್ಯರಾದ/ಉತ್ತಮರಾದ; ವ್ರತ=ಕೆಲವೊಂದು ಬಗೆಯ ಕಟ್ಟುಪಾಡುಗಳಿಗೆ/ನಿಯಮಗಳಿಗೆ ಒಳಪಟ್ಟ ಆಚರಣೆ/ನಡವಳಿಕೆ/ಆಚಾರ; ವ್ರತಿ=ಕಟ್ಟುನಿಟ್ಟಿನ ಆಚರಣೆಗಳನ್ನು ನಿಯಮ ತಪ್ಪದೆ ಮಾಡುತ್ತಾ ದೇವರನ್ನು ಪೂಜಿಸುವವರು; ಒಳ್ಳೆ ವ್ರತಿಗಳು=ವ್ರತಕ್ಕೆ ಗಂಟುಬಿದ್ದವರು/ಪೂಜೆಯ ಕಟ್ಟುಪಾಡುಗಳನ್ನೇ ದೊಡ್ಡದೆಂದು ನಂಬಿದವರು;

ನೀವು=ದೇವರ ಹೆಸರಿನಲ್ಲಿ ಉಣ್ಣುವ/ತಿನ್ನುವ ವಸ್ತುಗಳಲ್ಲಿ ಕೆಲವನ್ನು ಸೇವಿಸದಿರುವ ವ್ಯಕ್ತಿಗಳು; ಕೇಳ್/ಕೇಳು=ಆಲಿಸುವುದು/ಗಮನಿಸುವುದು/ಕಿವಿಗೊಡುವುದು; ಕೇಳಿರೊ=ಗಮನವಿಟ್ಟು ಕೇಳಿರಿ/ಹೇಳುವ ಸಂಗತಿಯನ್ನು ಚೆನ್ನಾಗಿ ತಿಳಿಯಲು ಪ್ರಯತ್ನಿಸಿ; ಸುಳ್ಳು=ಇರುವುದನ್ನು ಇಲ್ಲವೆಂದು ಹೇಳುವುದು, ಇಲ್ಲದ್ದನ್ನು ಇದೆಯೆಂದು ಹೇಳುವುದು/ಕಂಡದ್ದನ್ನು ಕಾಣೆನು ಎನ್ನುವುದು, ಕಾಣದ್ದನ್ನು ಕಂಡೆನು ಎನ್ನುವುದು; ಸಟೆ=ಸುಳ್ಳು/ಹುಸಿ/ದಿಟವಲ್ಲದ್ದು/ನಿಜವಲ್ಲದ್ದು; ಬಿಟ್ಟು=ತೊರೆದು/ತ್ಯಜಿಸಿ/ಬಿಟ್ಟು; ತಳ್ಳಿಬಳ್ಳಿ=ಚಾಡಿಕೋರತನ/ಇಬ್ಬರ ನಡುವೆ ಇಲ್ಲಸಲ್ಲದ್ದನ್ನು ಹೇಳಿ ಅವರಲ್ಲಿ ಜಗಳವನ್ನು ತಂದಿಕ್ಕುವುದು/ನಯವಂಚನೆಯ ನಡೆನುಡಿ;

ಒಳ್ಳಿತು+ಆಗಿ; ಒಳ್ಳಿತು=ಒಳ್ಳೆಯದು/ಉತ್ತಮವಾದುದು/ಯೋಗ್ಯವಾದುದು; ನಡೆ=ವರ‍್ತನೆ/ಆಚರಣೆ/ವ್ಯವಹಾರ/ಮಾಡುವ ಕೆಲಸ/ಗೇಮೆ; ಬಲ್=ತಿಳಿ/ಅರಿ/ಕಸುವು; ಬಲ್ಲಡೆ=ತಿಳಿದಿದ್ದರೆ/ಅರಿತಿದ್ದರೆ/ಕಸುವು ಇದ್ದರೆ; ನಡೆಯಬಲ್ಲಡೆ=ನಡೆದುಕೊಳ್ಳುವಂತಾದರೆ; ಬಳ್ಳೇಶ್ವರ=ಶಿವ/ಈಶ್ವರ; ಭಕ್ತರ‍್+ಎಂಬೆ; ಭಕ್ತ=ಒಳ್ಳೆಯ ನಡೆನುಡಿಗಳಿಂದ ದೇವರನ್ನು ಒಲಿದವನು/ಒಳ್ಳೆಯ ನಡೆನುಡಿಗಳೇ ದೇವರೆಂದು ನಂಬಿದವನು; ಎಂಬೆ=ಎನ್ನುತ್ತೇನೆ/ಎಂದು ಹೇಳುತ್ತೇನೆ ; ಕಾಣ್+ಆ; ಕಾಣ್/ಕಾಣು=ನೋಡು/ತಿಳಿ; ಕಾಣಾ=ತಿಳಿದು ನೋಡು/ಅರಿತು ನೋಡು/ವಿಚಾರಿಸಿ ನೋಡು;

ಅಖಂಡ=ತುಂಡುತುಂಡಾಗಿರದ/ಚೂರುಚೂರಾಗಿರದ/ಎಲ್ಲವನ್ನು ಒಂದಾಗಿ ಒಳಗೊಂಡಿರುವ; ಪರಿಪೂರ್ಣ=ಪೂರ‍್ತಿಯಾಗಿ ತುಂಬಿರುವ/ಸಮಗ್ರವಾಗಿರುವ; ; ಘನ=ದೊಡ್ಡದಾದ/ಅಳತೆಯನ್ನು ಮೀರಿದ/ಮಂಗಳಕರವಾದ; ಲಿಂಗ=ಶಿವ/ಈಶ್ವರ/ದೇವರು; ಗುರು=ಒಳ್ಳೆಯ ನಡೆನುಡಿಗಳನ್ನು ತಿಳಿಯ ಹೇಳುವವನು/ಕಲಿಸುವವನು; ಚೆನ್ನಬಸವೇಶ್ವರ=ವಚನಕಾರ ಕರಿಬಸವೇಶ್ವರನ ಗುರು;

ಶಿವ+ಸಾಕ್ಷಿ+ಆಗಿ; ಸಾಕ್ಷಿ=ಯಾವುದೇ ಒಂದು ಸಂಗತಿಯನ್ನು ಕಣ್ಣಾರ ಕಂಡು/ತಿಳಿದುಕೊಂಡು/ಅರಿತುಕೊಂಡು, ಅಗತ್ಯವಿದ್ದ ಸನ್ನಿವೇಶದಲ್ಲಿ ಮತ್ತೆ ಅದನ್ನು ಹೇಳುವವನು; ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ=ಮಾನವರ ನಡೆನುಡಿಗಳನ್ನು ದೇವರು ಸದಾಕಾಲ ನೋಡುತ್ತಿರುತ್ತಾನೆ ಎಂಬ ನಂಬಿಕೆಯು ಜನಮನದಲ್ಲಿರುವುದನ್ನು ಈ ನುಡಿಗಳು ಸೂಚಿಸುತ್ತಿವೆ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ =ಇದು ಕರಿಬಸವೇಶ್ವರನ ವಚನಗಳ ಅಂಕಿತನಾಮ)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Geeta says:

    Very nice and simple summary. Thanks

ಅನಿಸಿಕೆ ಬರೆಯಿರಿ:

%d bloggers like this: