ನೇರಳೆ ಮರದೊಂದಿಗೆ ಕಳೆದ ದಿನಗಳು

ನೇರಳೆ ಮರ

ಈ ನೇರಳೆ ಮರವನ್ನು ನನ್ನ ತಾತನಾಗಲಿ ಅಜ್ಜಿಯಾಗಲಿ ನೆಡಲಿಲ್ಲ, ತಾನೇ ಬೆಳೆಯಿತು.ನನ್ನ ತಾಯಿಯ ತಂದೆತಾಯಿಯನ್ನು ತಾತಾ ಅಜ್ಜಿ ಎಂದೇ ಕರೆಯುತ್ತಿದ್ದೆವು,ನನ್ನ ಸೋದರ ಮಾಮಂದಿರ ಮಕ್ಕಳು ಅವರನ್ನು ಅವ್ವ ಬಾಬಾ ಅಂತ ಕರೆಯುತ್ತಿದ್ದರು. ಇದೊಂದು ತರಹ ಹೆಣ್ಮಕ್ಕಳ ಮಕ್ಕಳು, ಗಂಡ್ಮಕ್ಕಳ ಮಕ್ಕಳ ಬೇದದ ಸಂಕೇತವಾಗಿತ್ತು. ನನ್ನ ತಾಯಿ ಚಿಕ್ಕವಳಿದ್ದಾಗ ಅವರ ಮನೆ ಮುಂದಿನ ಕಲ್ಲುಕುಪ್ಪೆಯಲ್ಲಿ ಬಿದ್ದ ಬೀಜ ಮುಂದೆ ಸಸಿಯಾಗಿ ಹೊರಗೆ ಇಣುಕಿತು. ಎಂಟು ಮಕ್ಕಳಿದ್ದ ಮನೆಯಲ್ಲಿ ಆ ಸಸಿ ಉಳಿದದ್ದೇ ಹೆಚ್ಚು. ಆ ಕಲ್ಲುಗಳನ್ನು ಸರಿಸಿ ಸಸಿ ಸುತ್ತಲೂ ಪಾತಿ ಮಾಡಿ ಕಲ್ಲುಮುಳ್ಳು ಬೇಲಿಹಾಕಿದೆವು ಅಂತ ನನ್ನ ತಾಯಿ ಒಮ್ಮೆ ಹೇಳಿದ್ದಳು. ನಾನು ಬೇಸಿಗೆ ರಜಾ ದಿನಗಳನ್ನು ತಾತಾ ಅಜ್ಜಿ ಮನೆಯಲ್ಲೇ ಕಳೆದದ್ದು. ಶಾಲೆ ಕೊನೆ ದಿನ ಕ್ಲಾಸ್ ನಲ್ಲಿ “ನಾಳೆ ಚುಟ್ಟಿ,ತಲೆಮೇಲೆ ಬುಟ್ಟಿ” ಅಂತ ಗಂಟಲು ಹರಿಯುವವರೆಗೂ ಇಲ್ಲಾ ಶಾಲೆ ಬಿಟ್ಟ ಮೇಲೂ ಓವರ್ ಟೈಂ ಇರುತ್ತಿದ್ದ ಹೆಡ್ ಮಾಸ್ಟರ್ ಬಂದು ಬೈಯ್ಯುವವರೆಗೂ ಚೀರುತ್ತಿದ್ದೆವು. ಅವತ್ತು ಕೊನೆ ದಿನವಾಗಿದ್ದರಿಂದ ಯಾರೂ ಅಶ್ಟೊಂದು ಹೆದರುತ್ತಿರಲಿಲ್ಲ.

ನಾನು ನನ್ನ ತಂದೆಯ ತಾಯಿಯ ಜೊತೆ ರಜಾದಿನಗಳನ್ನು ಕಳೆದದ್ದು ತುಂಬಾ ಕಡಿಮೆ. ತಾತಾ ಅಜ್ಜಿಯ ಮನೆ ಹತ್ತಿರದಲ್ಲೂ ಇತ್ತು. ನನಗೆ ಗಿಡ-ಮರ-ಮನುಶ್ಯ ನಡುವಿನ ವ್ಯತ್ಯಾಸ ಗೊತ್ತಾಗುವ ಹೊತ್ತಿಗೆ ಮರ ತುಂಬಾ ದೊಡ್ಡದಾಗಿತ್ತು. ಈಗಲೂ ಕೂಡ ದೊಡ್ಡದಾಗಿಯೇ ಇದೆ. ಆಗಂತೂ ನಾನು ಚಿಕ್ಕವನಿದ್ದೆ ಕಾಡನ್ನು ನೋಡಿರಲಿಲ್ಲ. ಈ ನೇರಳೆಮರ ದಟ್ಟವಾಗಿ ಹರಡಿ ಬೆಳೆದು ಅದರ ಕೆಳಗಿದ್ದ ಮಾಮನ ರೂಮನ್ನು ಮುಚ್ಚಿಬಿಟ್ಟಿತ್ತು. ಚಳಿಗಾಲ ಹತ್ತಿರ ಬರುತ್ತಿದ್ದಂತೆ ಮರದಿಂದ ದಾರಾಕಾರ ಎಲೆಗಳು ಉದುರುತ್ತಿದ್ದವು. ಆದರೆ, ಅದು ಕೊಡುತ್ತಿದ್ದ ತಂಪಾದ ನೆರಳು ಹಾಗೂ ರುಚಿಯಾದ ಕಡುಕಪ್ಪು ಹಣ್ಣುಗಳಿಂದ ಅಜ್ಜಿಯ ಮನಗೆದ್ದಿತ್ತು. ಅಂಗಳದ ಕಸ, ಆ ಎಲೆ ರಾಶಿ ಅವಳೇ ತೆಗೆಯುತ್ತಿದ್ದಳು.

ಗಿಡ ತುಂಬಾ ದೊಡ್ಡದ್ದಾಗಿತ್ತು, ಆದ್ದರಿಂದ ಅಜ್ಜಿ ಮನೆಗೂ ಸುತ್ತಮುತ್ತಲಿನ ಹತ್ತು ಮನೆಗಳಿಗೂ ಅದೇ ಲ್ಯಾಂಡಮಾರ‍್ಕ್ ಆಗಿತ್ತು. ಹಳ್ಳಿಯಲ್ಲಿ ಯಾರಾದರೂ ಸತ್ತುಹೋಗಿದ್ದರೆ ನನಗೆ ತುಂಬಾ ಗಾಬರಿಯಾಗುತ್ತಿತ್ತು. ಸತ್ತವರು ನೇರಳೆ ಹಣ್ಣಿನ ಆಸೆಗಾಗಿ ಮೂರು ದಿನ ಮರದ ತುದಿಯಲ್ಲಿ ದೆವ್ವವಾಗಿ ಕೂತಿರುತ್ತಾರೆ ಅಂತ ಗೆಳೆಯರೂ, ಕೀಟಲೆ ಮಾಡಿ ಕಾಲೆಳೆಯುವುದಕ್ಕೆ ಪ್ರಸಿದ್ದವಾಗಿದ್ದ ಆ ಹಳ್ಳಿಯ ಜನರೂ ನನ್ನ ನಂಬಿಸಿಬಿಟ್ಟಿದ್ದರು. ನನಗೆ ಆಗ ಗಡಿಯಾರದಲ್ಲಿ ಟೈಂ ಹೇಳಲೂ ಬರುತ್ತಿರಲಿಲ್ಲ. ರಾತ್ರಿ 12 ಗಂಟೆಗೆ ಅವರು ಕಾಣಿಸುತ್ತಾರೆ ಅಂದಿದ್ದರು. ನನಗೆ 12 ಗಂಟೆ ಅಂದರೆ ಅದು ಏನೋ ಒಂದು ಬಯಾನಕ ವಿಶಯ, ಅದನ್ನು ದೆವ್ವ ತಗೊಂಡು ಬರುತ್ತೆ ಅಂದುಕೊಂಡಿದ್ದೆ. ಚಿಕ್ಕವನಿದ್ದಾಗ ಹನ್ನೆರಡು ಗಂಟೆ ವರೆಗೆ ಎಚ್ಚರವಾಗಿದ್ದದ್ದು ಗೊತ್ತಿಲ್ಲ, ಎಂಟೂವರೆಗೆಲ್ಲ ತಾಳಲಾಗದ ನಿದ್ದೆ ಬಂದುಬಿಡುತ್ತಿತ್ತು.

ನಾನು ರಜೆಗೆಂದು ಅಜ್ಜಿ ಮನೆಗೆ ಹೋದಾಗೆಲ್ಲ ಆ ಹಳ್ಳಿಯಲ್ಲಿ ಯಾರಾದರೊಬ್ಬರು ಸಾಯುತ್ತಿದ್ದರು. ನಾನಾಗ ಮೂರನೇ ಕ್ಲಾಸ್ ನಲ್ಲಿದ್ದೆ. ಅಜ್ಜಿ ಮನೆ ಹಿಂದುಗಡೆ ಮನೆಯಲ್ಲಿ ಒಬ್ಬ ಮುದುಕ ಸತ್ತಿದ್ದ. ಆ ಮುದುಕನ ಮಕ್ಕಳು ಬೆಂಗಳೂರು ಹೈದ್ರಾಬಾದ್ ನಲ್ಲಿ ವಾಸವಾಗಿದ್ದರು. ಅವರು ಬರುವವರೆಗೂ ಮಣ್ಣು ಮಾಡಬಾರದು ಅಂತ ಪೋನ್ ನಲ್ಲಿ ತಿಳಿಸಿದ್ದರು. ಮುದುಕ ಆಸ್ಪತ್ರೆಯಲ್ಲಿ ಸತ್ತಿದ್ದ, ಸಂಜೆಗೆ ಹೆಣ ಮನೆಗೆ ಬಂದಿತ್ತು. ನೆರೆಹೊರೆಯ ಮಂದಿ, ಹತ್ತಿರದಲ್ಲಿದ್ದ ನೆಂಟರು, ಹಳ್ಳಿಯಲ್ಲಿನ ಜನ ಅವನ ಮನೆಯಲ್ಲಿ ಸೇರಿದ್ದರು. ಅವನ ಹೆಣ್ಣುಮಕ್ಕಳು ತುಂಬಾ ಕೂಗಾಡುತ್ತ ಅಳುತ್ತಿದ್ದರಿಂದ ನನಗೆ ಹೆದರಿಕೆಯಾಗಿ ಅವರ ಮನೆಯೊಳಗೆ ಹೋಗಲಿಲ್ಲ. ಹೆಂಗಸರು ಒಳಗೆ ಅಳುತ್ತಿದ್ದರು ಗಂಡಸರು ಹೊರಗೆ ಕೂತುಕೊಂಡು ಸತ್ತವನ ಬಗ್ಗೆ ಒಳ್ಳೆಯ, ಕೆಟ್ಟದಾದ ಮಾತುಗಳನ್ನು ಆಡುತ್ತಿದ್ದರು.

ಮನೆಗೆ ಬರುತ್ತಿದ್ದಾಗ ಗೆಳೆಯರು ನೇರಳೆ ಮರವನ್ನೇ ನನಗೆ ತೋರಿಸುತ್ತಾ ರಾತ್ರಿ ಹನ್ನೆರಡಕ್ಕೆ ಆ ಮುದುಕ ಪಕ್ಕಾ ಬರುತ್ತಾನೆ ಅಂದರು. ನಾನು ನಂಬದವನ ಹಾಗೆ ಮಾಡಿದೆ. ಅವರು ಹೋದರು. ಆಗ ಕತ್ತಲಾಗುತ್ತಿತ್ತು. ಮನೆ ಒಳಗೆ ಹೋಗುತ್ತಲೇ ಊಟ ಮಾಡಿ ಮರು ದಿನ ಮುಂಜಾನೆ ಬೇಗ ಆಗಲಿ ಅಂತ ನೆನೆಯುತ್ತಾ ಮಲಗಿಕೊಂಡೆ ಆದರೆ ರಾತ್ತಿ ಎಚ್ಚರವಾಯ್ತು. ಎದ್ದು ಹೊರಗೆ ಬಂದೆ, ಎಲ್ಲರೂ ಮಲಗಿದ್ದರು. ನೇರಳೆ ಮರವನ್ನು ದಾಟಿಯೇ ಟಾಯ್ಲೆಟ್ ಗೆ ಹೋಗಬೇಕಾಗಿತ್ತು, ದೈರ‍್ಯ ಸಾಲಲಿಲ್ಲ ಒಳಗೆ ಬಂದೆ.ಅಜ್ಜಿ ತಿಳಿದುಕೊಂಡು ತಾತನನ್ನು ಎಬ್ಬಿಸಿದಳು. ತಾತ ಬ್ಯಾಟರಿ ತಗೊಂಡು ನನ್ನ ಹಿಂದೆ ಬಂದ. ನಾನು ನೇರಳೆ ಮರ ದಾಟಿ ಮುಂದೆ ಹೋಗಿ ಟಾಯ್ಲೆಟ್ ಮುಗಿಸಿಕೊಂಡು ಹೊರಬಂದೆ, ತಾತ ಹೊರಗೇ ನಿಂತಿದ್ದ. ನನಗೆ ತಾತನ ಪರಿವೆಯೇ ಇರಲಿಲ್ಲ, ಅವನನ್ನು ಮರದ ತುದಿಯಲ್ಲಿ ದೆವ್ವವಾಗಿ ಬಂದು ಆಗಲೇ ಕೂತಿದ್ದ ಮುದುಕನ ವಶಕ್ಕೆ ಕೊಟ್ಟು ಒಂದೇ ಓಟಕ್ಕೆ ಮನೆ ಸೇರಿದ್ದೆ!

ಬೇಸಿಗೆ ಕೊನೆಗೆ ನೇರಳೆ ಮರಕ್ಕೆ ಹೂವು ಬಂದು ಸಣ್ಣಸಣ್ಣ ಕಾಯಿಗಳಾಗುತ್ತವೆ. ಆದರೆ ಹಣ್ಣಾಗಲು ಜೂನ್ ತಿಂಗಳಲ್ಲಿ ಬೀಳುವ ದಾರಾಕಾರ ಮಳೆಯೇ ಬೇಕು. ಮೊದಲು ಹಸಿರು ಕಾಯಿಗಳು ರಾಣಿ ಬಣ್ಣ ಅಂದರೆ ಪಿಂಕ್ ಬಣ್ಣಕ್ಕೆ ತಿರುಗುತ್ತವೆ. ಮಳೆ ಚೆನ್ನಾಗಿ‌ ಬೀಳುತ್ತಿದ್ದರೆ ಕಡುಕಪ್ಪು ಬಣ್ಣಕ್ಕೆ ತಿರುಗುತ್ತವೆ. ನಾನು ಚಿಕ್ಕವನಿದ್ದಾಗ ಚೆನ್ನಾಗಿ ಮಳೆ ಬಂದು ದಪ್ಪಗಾಗಿ ಸೀಳು ಬಿದ್ದ ನೇರಳೆ ಹಣ್ಣುಗಳನ್ನೇ ಸೀದಾ ಮರದಿಂದ ಕಡಿಯುತ್ತಿದ್ದೆ, ಅವು ತುಂಬಾ ರುಚಿಯಾಗಿರುತ್ತಿದ್ದವು. ಜೋರು ಮಳೆ ಬೀಳುತ್ತಿದ್ದಾಗ ನಾವು ಬಟ್ಟಲು ಪ್ಲೇಟುಗಳನ್ನು ಹಿಡಿದುಕೊಂಡು ಮಳೆಯಲ್ಲೇ ಮರದಿಂದ ತೊಪತೊಪನೇ ಉದುರುತ್ತಿದ್ದ ಹಣ್ಣು ಹೆಕ್ಕಿಕೊಳ್ಳುತ್ತಿದ್ದೆವು. ತಲೆ ಮೇಲೆ ಮೇಲಿಂದ ಬೀಳುತ್ತಿದ್ದ ಹಣ್ಣುಗಳು ತಿನ್ನುವಾಗ ಆಗುವ ಕುಶಿಯೇ ಬೇರೆಯಾಗಿತ್ತು.

ಮನೆ ಮುಂದೆ ಆಗ ಅಜ್ಜಿ ಕಡಚಿ ಅಂದರೆ ಮೊಗಚುಕೈ ಬಿಸಾಡುತ್ತಿದ್ದಳು, ಸಿಡಿಲು ಬೀಳಬಾರದೆಂದು! ಸಿಡಿಲು ಎಲ್ಲೋ ಗುಡುಗುತ್ತಿದ್ದರೆ ನಮಗೆ ಅದರ ಅಂಜಿಕೆ. ಮಳೆಯ ಹನಿಗಳು, ಉದುರುತ್ತಿದ್ದ ಹಣ್ಣುಗಳು, ಗಾಳಿ, ಹುಡುಗಾಟಿಕೆ, ಕೆಸರು ಇವೆಲ್ಲ ಸೇರಿ ಕೊಡುತ್ತಿದ್ದ ಕುಶಿಯ ಮುಂದೆ ಜಗತ್ತಿನ ಯಾವ ಕುಶಿಯೂ ದೊಡ್ಡದಲ್ಲ. ಎಶ್ಟೋ ಹಣ್ಣುಗಳು ನೆಲಕಚ್ಚಿ ಕೆಸರಿನಲ್ಲಿ ಮುಳುಗುತ್ತಿದ್ದವು. ಅಂಗಳಕ್ಕೆ ಸೇಡಿಮಣ್ಣು ಅಂದರೆ ಬಿಳಿಮಣ್ಣು ಹಾಕಿದ್ದರಿಂದ ಮಳೆಬಿದ್ದಾಗ ತುಂಬ ಜಿಗುಟು ಕೆಸರಾಗುತ್ತಿತ್ತು. ಅದನ್ನು ಲೆಕ್ಕಿಸದೇ ಕೆಸರು ಒರೆಸಿಹಾಕಿ ಒಡೆದ ನೇರಳೆಹಣ್ಣು ಬಾಯಿಗೆ ಹಾಕ್ಕೊಳ್ಳುತ್ತಿದ್ದೆ. ಅಜ್ಜಿಗೆ ಹಣದ ಅವಶ್ಯಕತೆ ಇಲ್ಲದಿದ್ದರೂ ಮನೆ ಕರ‍್ಚಿನ ಪುಡಿಗಾಸಿಗೆ ನೇರಳೆ ಹಣ್ಣುಗಳನ್ನು ಮಾರುತ್ತಿದ್ದಳು, ಹಾಗೆಯೇ ಕೊಟ್ಟರೆ ಜನ ತುಂಬ ಹಗುರವಾಗಿ ತಗೊತಾರೆ ಅನ್ನೋ ಯೋಚನೆ ಕೂಡ ಇದ್ದಿರಬಹುದು. ಮಂದಿ ಕೂಡ ಪುಗಸಟ್ಟೆ ಕೊಟ್ಟರೆ ತುಂಬ ಉಡಾಪೆಯಿಂದ ತೆಗೆದುಕೊಳ್ಳುತ್ತಿದ್ದರು, ಆದರೆ ಹಣ ಕೊಟ್ಟೊಡನೆ ಹಣ್ಣು ತುಂಬಾ ರುಚಿಯಾಗುತ್ತಿದ್ದವು.

ನೇರಳೆ ಎಲೆಗಳಿಂದ ಪೀಪಿ ಮಾಡುತ್ತಿದ್ದೆವು.ಎಲೆಯನ್ನು ಸುರುಳಿ ಸುತ್ತಿ ಬಾಯಲ್ಲಿ ಹಿಡಿದು ಊದಿದರೆ ಪೀ…. ಅನ್ನೋ ಕರ‍್ಕಶ ಸಂಗೀತ ಹೊಮ್ಮುತ್ತಿತ್ತು. ಈ ಬ್ಯಾಂಡ್ ಸ್ವರ ಕೇಳಿದಾಗ ದೊಡ್ಡವರೆನಿಸಿಕೊಂಡವರು ಬೈಯ್ಯುತ್ತಿದ್ದರು. ನಮಗೆ ಪೀಪಿ ಮಾಡಿ ಊದಿದ್ದಕ್ಕಿಂತಲೂ ದೊಡ್ಡವರಿಗೆ ಕೀಟಲೆ ಕೊಟ್ಟು ಅವರ ತಲೆ ಚಿಟ್ಟು ಹಿಡಿಯುವಂತೆ ಮಾಡಿ ಅವರ ಬಾಯಿಂದ ಬೈಗುಳ ತರಿಸಿದ ಸಿನಿಸ್ಟರ್ ಕುಶಿ ದೊಡ್ಡದಾಗಿತ್ತು.

ಮನೆಯ ಪಡಸಾಲೆಯಲ್ಲಿ ಕುಳಿತು ಅಜ್ಜಿ ಸ್ಟವ್ ಮೇಲೆ ಚಹಾ ಮಾಡುತ್ತಿದ್ದಳು.ತಾತ ಸ್ಟವ್ ಪುಟಿಹಚ್ಚಿ ಕೊಡುತ್ತಿದ್ದ, ಅಜ್ಜಿ ಅದರ ಮೇಲೆ ಸ್ಲೀಲ್ ಪಾತ್ರೆಯಲ್ಲಿ ಹಾಲು ಸಕ್ಕರೆ ಸರಿಯಾದ ಅಳತೆಯ ಚಾಪುಡಿ ಹಾಕಿ ಕುದಿಸುತ್ತಿದ್ದಳು. ಅಶ್ಟು ರುಚಿಯಾದ ಚಹಾ ನಾನು ಇಲ್ಲಿಯವರೆಗೂ ಎಲ್ಲೂ ಕುಡಿದಿಲ್ಲ. ಮಳೆ ಬೀಳುತ್ತಿದ್ದಾಗ ಚಹಾ ಕುಡಿಯುತ್ತಾ ನೇರಳೆ ಮರವನ್ನೇ ನೋಡುತ್ತಿದ್ದೆ. ಗಾಳಿ ಮಳೆಗೆ ಅತ್ತಿತ್ತ ಹೊಯ್ದಾಡುತ್ತ, ಅಲ್ಲಾಡುತ್ತ ಅದರ ಎಲೆಗಳ ಸಪ್ಪಳ, ಎಲೆಗಳ ಮೇಲೆ ಬೀಳುತ್ತಿದ್ದ ಮಳೆಯ ಸಪ್ಪಳ, ಮರದಿಂದ ಗಾಳಿಯ ಹೊಡೆತಕ್ಕೆ ಟಪ್ ಟಪ್ ಎಂದು ಬೀಳುತ್ತಿದ್ದ ನೇರಳೆ ಹಣ್ಣುಗಳು,ಅವು ಬಿದ್ದ ಜಾಗದಲ್ಲಿ ಆಗುತ್ತಿದ್ದ ಕಲೆಗಳು, ಬಿಳಿ ಸೇಡಿಮಣ್ಣಿನ ಆಕಾಶದಲ್ಲಿ ಮೂಡುತ್ತಿದ್ದ ಕರಿಚುಕ್ಕೆಗಳು ನಾನು ಎಂದೆಂದೂ ಮರೆಯಲಾಗದ ಸಂಗತಿಗಳು, ಅನುಬವಗಳು.

ತಾತ ಅಜ್ಜಿಯ ಮನೆಯ ಅಂಗಳದಲ್ಲಿ ನೇರಳೆ ಮರವೊಂದೇ ಇರಲಿಲ್ಲ.ಮಾಮನ ಕೋಣೆ ಪಕ್ಕ ಹಿಪ್ಪುನೇರಳೆಯ ಗಿಡವಿತ್ತು, ಅದಕ್ಕೆ ತೂತೆಕಾಯಿ ಗಿಡ ಅನ್ನುತ್ತಿದ್ದರು. ಒಂದು ಮೂಲೇಲಿ ಕಾಡುಗಿಡವಿತ್ತು, ಮೋಸಂಬಿ ಗಿಡ, ಮೂರು ಸೀಬೆ ಗಿಡಗಳು, ಒಂದು ಕರಿಬೇವಿನ ಮರ, ಸೀತಾಪಲ ಗಿಡ,ಮಳೆಗೆ ಬಿದ್ದುಹೋದ ಬಾದಾಮಿ ಮರ, ಹಣ್ಣುಕೊಡದ ಮಾವಿನ ಮರ(ಅದಕ್ಕೆ ಎಂಜಲುಕಾಯಿ ಮರ ಅನ್ನುತ್ತಿದ್ದರು), ಹಳೆ ಬಾವಿಯ ಪಕ್ಕದಲ್ಲೇ ಬಾಳೆಹಣ್ಣಿನ ಗಿಡವೊಂದಿತ್ತು, ಎರಡು ಬೇವಿನ ಮರಗಳು ಇದ್ದವು. ಈಗ ನೇರಳೆ ಮರವೊಂದನ್ನು ಬಿಟ್ಟು ಬೇರೆ ಯಾವ ಗಿಡಗಳೂ ಇಲ್ಲ. ತಾತಾ ಹೋದ, ಮದ್ಯವಯಸ್ಸಿಗೇ ಮಾಮಾ ಹೋದ, ಅಜ್ಜಿ ಬೇರೆ ಊರಲ್ಲಿ ಒಬ್ಬ ಸೋದರಮಾವನ ಮನೆಯಲ್ಲಿ ಇದ್ದಾಳೆ. ಆದರೆ ನೇರಳೆ ಮರ ಮಾತ್ರ ಅಲ್ಲೇ ಇದೆ, ಇನ್ನೂ ಅಶ್ಟೇ ರುಚಿಯಾದ ಹಣ್ಣುಗಳನ್ನು ಕೊಡುತ್ತಾ ಇದೆ. ಒಂದು ದಿನ ಅದನ್ನು ಬೇಟಿ ಮಾಡಲು ಮತ್ತೆ ಹೋಗುತ್ತೇನೆ.

( ಚಿತ್ರ ಸೆಲೆ:  drawingninja.com )

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Pavamanaprasad Athani says:

    ಓದುತ್ತಾ ಓದುತ್ತಾ ನನಗೂ ನನ್ನ ಚಿಕ್ಕಂದಿನ ದಿನಗಳು ಸೀಬೇ ಮರದ ಸುತ್ತೇ ಸುತ್ತುತ್ತಿದ್ದಿದ್ದು ನೆನಪಿಗೆ ಬಂತು. ತುಡಿತದ ಓಟಕ್ಕೆ ಎಲ್ಲೂ ತಡೆ ಬಾರದಂತೆ ಬರೆದಿದ್ದೀರಿ. ಅಬಿನಂದನೆಗಳು

  2. ಮಾರಿಸನ್ ಮನೋಹರ್ says:

    ದನ್ಯವಾದಗಳು ಪವಮಾನ ಪ್ರಸಾದ್ ಅವರೇ.

ಅನಿಸಿಕೆ ಬರೆಯಿರಿ:

%d bloggers like this: