ಜಪಾನಿನ ಬೆಕ್ಕಿನ ದ್ವೀಪ – ಅವೊಶಿಮಾ

– ಕೆ.ವಿ.ಶಶಿದರ.

ಅವೊಶಿಮಾ cat island

ಜಪಾನ್ ಪ್ರಾಣಿಗಳ ಆಕರ‍್ಶಣೆಗೆ ಹೆಸರುವಾಸಿಯಾದ ದೇಶ. ನಾರಾ ದ್ವೀಪದಲ್ಲಿನ ಅತ್ಯಂತ ಸಾದು ಪ್ರಾಣಿ ಜಿಂಕೆ, ನಗಾನೊ ದ್ವೀಪದಲ್ಲಿನ ಬಿಸಿ ನೀರಿನ ಬುಗ್ಗೆಗಳನ್ನು ಪ್ರೀತಿಸುವ ಮಂಗಗಳು, ನಗರ ಪ್ರದೇಶದಲ್ಲಿ ಹರಡಿರುವ ಅನೇಕ ಪ್ರಾಣಿಗಳ ಕೆಪೆ ಮುಂತಾದವುಗಳು ಜಪಾನೀಯರಿಗೆ ಪ್ರಾಣಿಗಳ ಬಗ್ಗೆ ಇರುವ ಪ್ರೀತಿಯ ಕುರುಹು. ಬೆಕ್ಕುಗಳನ್ನು ಪ್ರೀತಿಸುವವರಿಗೆ ಅತ್ಯಂತ ಪ್ರಶಸ್ತವಾದ ದ್ವೀಪ ಅವೊಶಿಮಾ. ಜಪಾನ್ ದ್ವೀಪ ಸಮೂಹದಲ್ಲಿ ಬೆಕ್ಕಿನ ದ್ವೀಪಗಳು ತುಂಬಾ ಇವೆ. ಆದರೆ ಅವೊಶಿಮಾ ಬೆಕ್ಕಿನ ದ್ವೀಪ ತನ್ನದೆ ಆದ ಚಾಪನ್ನು ಬೆಳಸಿಕೊಂಡಿದೆ. ಹಲವಾರು ಪ್ರವಾಸಿಗರನ್ನು ಇದು ತನ್ನಡೆಗೆ ಸೆಳೆಯುತ್ತಿದೆ. ಈ ದ್ವೀಪ ಬೆಕ್ಕು ಪ್ರಿಯರಿಗೆ ಹಾಗು ಬೆಕ್ಕುಗಳಿಗೆ ಸ್ವರ‍್ಗ.

ಇಲ್ಲಿ ಬೆಕ್ಕುಗಳ ಸಂಕ್ಯೆ ಜನಸಂಕ್ಯೆಗಿಂತ ಅಂದಾಜು ಹತ್ತು ಪಟ್ಟು ಹೆಚ್ಚಿದೆ!

ಅವೊಶಿಮಾ, ದಿ ಕ್ಯಾಟ್ ಐಲೆಂಡ್, ಸದ್ದು ಗದ್ದಲವಿಲ್ಲದ, ಆಡಂಬರವಿಲ್ಲದ, ನಿಶ್ಯಬ್ದ ವಾತಾವರಣದ ಒಂದು ಪುಟ್ಟ ದ್ವೀಪ. ಸ್ತಳೀಯರ ಪಾಲಿಗೆ ಇದು ‘ಕ್ಯಾಟ್ ಐಲೆಂಡ್’. ಯಾಕೆಂದರೆ ಈ ದ್ವೀಪದಲ್ಲಿನ ಕಾಯಂ ನಿವಾಸಿಗಳ ಜನಸಂಕ್ಯೆಯನ್ನು ಮೀರಿಸುವ ಸಂಕ್ಯೆ ಬೆಕ್ಕಿನದು.

1945ರಲ್ಲಿ 900 ಇದ್ದ ಕಾಯಂ ನಿವಾಸಿಗಳ ಸಂಕ್ಯೆ 1955ರ ವೇಳೆಗೆ 798ಕ್ಕೆ ಇಳಿಯಿತು. 2013ರಲ್ಲಿ ಮತ್ತೂ ಇಳಿದು ಕೇವಲ 50 ಕ್ಕೆ ಮುಟ್ಟಿತು. ಇತ್ತೀಚಿನ ವಿವರಗಳ ಪ್ರಕಾರ ಈ 1.5 ಕಿ.ಮೀ. ಉದ್ದದ ದ್ವೀಪದಲ್ಲಿ ಕಾಯಂ ನಿವಾಸಿಗಳ ಸಂಕ್ಯೆ ಕೇವಲ 13-15 ಮಾತ್ರ. ಜನರ ಎಣಿಕೆ ಕಡಿಮೆಯಾಗುತ್ತಿದ್ದರೂ ಬೆಕ್ಕುಗಳ ಎಣಿಕೆ ಮಾತ್ರ ವರ‍್ಶದಿಂದ ವರ‍್ಶಕ್ಕೆ ಹೆಚ್ಚುತ್ತಲೇ ಇದೆ. ವಿಚಿತ್ರವೆಂದರೆ ಇಲ್ಲಿನ ನಿವಾಸಿಗಳಲ್ಲಿ ಬಹುತೇಕ ಮಂದಿ ನಿವ್ರುತ್ತಿಯಾದ ಹಿರಿಯ ನಾಗರಿಕರು. ಅವರ ಸರಾಸರಿ ವಯಸ್ಸು 75 ವರ‍್ಶ!!

ಹಿಂದೆಂದೂ ಈ ದ್ವೀಪವು ಈಗಿನಶ್ಟು ನಿರ‍್ಜನವಾಗಿರಲಿಲ್ಲ. ಇದನ್ನು ಬೆಕ್ಕುಗಳ ಸ್ವರ‍್ಗ ಎಂದೂ ಸಹ ಕರೆಯುತ್ತಿರಲಿಲ್ಲ. ಅಂದಾಜು 380 ವರ‍್ಶಗಳ ಹಿಂದೆ ಹ್ಯಾಯೋಗೊ ನಿವಾಸಿಗಳು ಅವೊಶಿಮಾಗೆ ವಲಸೆ ಬಂದರು. ಸಾರ‍್ಡಿನ್ ಎಂಬ ಜಾತಿಯ ಮೀನು ಇಲ್ಲಿನ ನೀರಿನಲ್ಲಿ ಬೇಕಾದಶ್ಟು ದೊರಕುತ್ತಿದ್ದುದೇ ಅವರ ವಲಸೆಗೆ ಮೂಲ ಕಾರಣ. ಸಾರ‍್ಡಿನ್ ಮೀನು ನಾವು ವ್ಯಾಪಕವಾಗಿ ಸೇವಿಸುವ ಅತ್ಯಂತ ಪೌಶ್ಟಿಕಾಂಶ ಬರಿತ ಮೀನು.

ಈ ದ್ವೀಪಕ್ಕೆ ಇಶ್ಟೊಂದು ಬೆಕ್ಕುಗಳು ಬಂದಿದ್ದಾದರೂ ಹೇಗೆ?

ಹಿಂದೆ ಒಂದು ಕಾಲದಲ್ಲಿ ಈ ದ್ವೀಪ ಅತ್ಯಂತ ಹೆಚ್ಚು ಚಟುವಟಿಕೆಯುಳ್ಳ ದ್ವೀಪವಾಗಿತ್ತು. ಮೀನುಗಾರರಿಗೆ ಕೈತುಂಬಾ ಕೆಲಸವಿದ್ದ ಕಾಲ. ಹಲವು ಬೋಟುಗಳ ಮೂಲಕ ಮೀನುಗಳನ್ನು ಹಿಡಿದು ತರುತ್ತಿದ್ದರು. ಬೋಟ್‍ಗಳಲ್ಲಿದ್ದ ಮೀನು ಹಿಡಿಯುವ ಬಲೆಗಳನ್ನು ಇಲಿಗಳು ಕಡಿದು ಹಾಕುತ್ತಿದ್ದದು ಮೀನುಗಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇಲಿಗಳ ಹಾವಳಿಯಿಂದ ಪಾರಾಗಲು ಅವರು ಉಪಯೋಗಿಸಿದ ಅಸ್ತ್ರವೇ ಬೆಕ್ಕು. ಇವರೇ ಈ ದ್ವೀಪಕ್ಕೆ ಬೆಕ್ಕನ್ನು ಪರಿಚಯಿಸಿದ್ದು.

ಈ ಪುಟ್ಟ ದ್ವೀಪದಲ್ಲಿ ಯಾವುದೇ ರೆಸ್ಟಾರೆಂಟುಗಳಿಲ್ಲ, ಹೋಟೆಲ್‍ಗಳಿಲ್ಲ. 30 ನಿಮಿಶಗಳ ಪೆರ‍್ರಿ ಪ್ರಯಾಣವೊಂದೇ ಇಲ್ಲಿಗೆ ಇರುವ ಕೊಂಡಿ. ಏನೇ ಬೇಕಿದ್ದರೂ ನಗಾಹಮಾದಲ್ಲಿ ಪೆರ‍್ರಿ ಹತ್ತುವುದಕ್ಕೆ ಮುನ್ನವೇ ಕೊಳ್ಳಬೇಕು. ಬೆಕ್ಕುಗಳಿಗೆ ನೀಡಬಯಸುವ ತಿಂಡಿ ತಿನಿಸುಗಳನ್ನೂ ಸಹ. ಏನಾದರೂ ಮರೆತರೆ ಹಿಂದಿರುಗುವವರೆಗೂ ಅದನ್ನು ಪೂರ‍್ಣ ಮರೆತು ಬಿಡುವುದೇ ಲೇಸು.

ದ್ವೀಪದೊಳಗೆ ಕಾಲಿಟ್ಟರೆ ಬೆಕ್ಕುಗಳ ಹಿಂಡು ಹಿಂಡೇ ಸ್ವಾಗತ ಬಯಸುತ್ತವೆ. ಪ್ರವಾಸಿಗರಿಂದ ತಿಂಡಿ ತಿನಿಸುಗಳನ್ನು ಎದುರುನೋಡುವ ಅವು ಕಾಲಿನ ಬುಡದಲ್ಲೇ ಮೊಕ್ಕಾಂ ಮಾಡುತ್ತವೆ. ಹೆಜ್ಜೆಹಾಕಲು ಬಿಡದೆ ಕಾಲನ್ನು ಮುತ್ತುತ್ತವೆ. ಸಾಕಶ್ಟು ಪ್ರವಾಸಿಗರು ಅವೊಶಿಮಾ ದ್ವೀಪಕ್ಕೆ ಬರುವುದರಿಂದ ಬೆಕ್ಕುಗಳು ಅವರೊಂದಿಗೆ ಸಹಜವಾಗಿ ಸಲೀಸಾಗಿ ಬೆರೆಯುವುದನ್ನು ರೂಡಿಸಿಕೊಂಡಿವೆ.

ಅವೊಶಿಮಾ ದ್ವೀಪವು ಕೇವಲ ಒಂದು ಮೈಲಿಯಶ್ಟು ಉದ್ದವಿದೆ. ಕಾಡು ಮತ್ತು ಬೆಕ್ಕನ್ನು ಹೊರೆತು ಪಡಿಸಿದರೆ ಇಲ್ಲಿ ಬೇರೇನು ನೋಡಲು ಇಲ್ಲ.

(ಮಾಹಿತಿ ಸೆಲೆ: hisgo.com )
(ಚಿತ್ರ ಸೆಲೆ: wiki )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: