ಕೋಗಿಲೆಯ ಬದುಕು

– ಅನಿಲ್ ಕುಮಾರ್.

ಕೋಗಿಲೆ, Cuckoo, Koel

ಕೋಗಿಲೆ ಹಾಡುವುದನ್ನು ಕೇಳಿರುತ್ತೇವೆ, ಆದರೆ ಕೋಗಿಲೆಯನ್ನು ನೋಡಿರುವುದು ಕಡಿಮೆಯೇ ಎನ್ನಬೇಕು. ದಿನನಿತ್ಯದ  ಜಂಜಾಟದಲ್ಲಿ ಕೋಗಿಲೆ‌ಯ ದನಿ ನಮ್ಮ ತಲೆಗೆ ಹೊಕ್ಕಿರುವುದಿಲ್ಲ ಕೂಡ. ಕೋಗಿಲೆಯೂ ಕೂಡ ತನ್ನನ್ನು ಮರೆಮಾಚಿಕೊಳ್ಳುವ ಹಕ್ಕಿ. ತನ್ನ ನೆಚ್ಚಿನ ಮರದ ದಟ್ಟ ಹಸಿರಿನೊಳಗೆ ಇದರ ಇಂಪಾದ ಕೂಗು. ಕೋಗಿಲೆ ಬಗ್ಗೆ ಒಂದಶ್ಟು ವಿಶಯಗಳನ್ನು ತಿಳಿಸುವ ಪ್ರಯತ್ನ ಈ ಬರಹ.

ಪರಿಚೆ (characteristics) :

ಗಂಡು ಕೋಗಿಲೆಯು ಹೊಳಪಿನ ಕಪ್ಪು ಬಣ್ಣದ್ದಾಗಿದ್ದು ಹಳದಿ ಬೆರೆತ ಕೊಕ್ಕು ಮತ್ತು ಕಡು ಕೆಂಪು ಕಣ್ಣು ಹೊಂದಿರುತ್ತದೆ. ಹೆಣ್ಣು ಕೋಗಿಲೆಯು ಕಂದು ಬಣ್ಣದ್ದಾಗಿದ್ದು, ಅದರ ಮೈಯ ತುಂಬೆಲ್ಲಾ ಬಿಳಿಯ ಸಣ್ಣ ಪಟ್ಟೆಗಳಿರುತ್ತವೆ.

ಎಲ್ಲೆಲ್ಲಿ ಕಂಡುಬರುವುದು:

ಕೋಗಿಲೆಯು ಬಾರತವಲ್ಲದೆ ನೆರೆಯ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್ ದೇಶಗಳಲ್ಲೂ ಕಂಡುಬರುತ್ತದೆ. ಈಶಾನ್ಯ ಬಾರತದ ಬಗೆಯ ಕೋಗಿಲೆಗಳು, ಉಳಿದ ಕಡೆಯವುಗಳಿಗಿಂತ ದೊಡ್ಡ ಮೈಕಟ್ಟು ಹೊಂದಿರುತ್ತವೆ.

ನೆಲೆ (habitat) :

ಕೋಗಿಲೆಯು ಹೆಚ್ಚಾಗಿ ತೋಟಗಳು, ತೋಪುಗಳು ಹಾಗು ದೊಡ್ಡ ಎಲೆಯ ಮರಗಳಿಂದ ಕೂಡಿದ ಬಯಲಿನಲ್ಲಿ ಕಂಡುಬರುತ್ತವೆ. ಹಳ್ಳಿಗಾಡಿಗಿಂತಲೂ ಪಟ್ಟಣಗಳ ಕೈತೋಟದ ಮರಗಳಲ್ಲೇ ಇವುಗಳು ಹೆಚ್ಚು ಕಾಣಸಿಗುತ್ತವೆ.

ಚಟುವಟಿಕೆಗಳು :

ಕೋಗಿಲೆಯು ಮರದಿಂದ ನೆಲಕ್ಕಿಳಿಯದಿರುವ ಹಕ್ಕಿ (arboreal). ಚಳಿಗಾಲದಲ್ಲಿ, ತಾನು ಇಲ್ಲವೇ ಇಲ್ಲವೇನೋ ಎನಿಸುವಶ್ಟರ ಮಟ್ಟಿಗೆ ಸದ್ದಿಲ್ಲದೆ ಬದುಕುತ್ತದೆ. ಸುಗ್ಗಿ ಕಾಲ (spring) ಮುಗಿದು ಬೇಸಿಗೆ ಹತ್ತಿರವಾಗುತ್ತಿದ್ದಂತೆ ಕೋಗಿಲೆಯು ಕೂಗಲು ಶುರುಮಾಡುತ್ತದೆ. ಬೇಸಿಗೆಯುದ್ದಕ್ಕೂ ಇದರದೇ ನಲ್ಲುಲಿಗಳು. ಇಂಪಾಗಿ ಹಾಡುವುದು ಗಂಡು ಕೋಗಿಲೆಯಶ್ಟೇ! “ಕೂ…ಕೂ..” ಎಂದು ಚಿಕ್ಕ ಸದ್ದಿನೊಂದಿಗೆ ತೊಡಗಿಸಿ, ಆಮೇಲೆ  ಒಂದೇ ಸಮನೆ ಸದ್ದು ಏರಿಸುತ್ತದೆ. ಕೆಲ ಗಳಿಗೆ ಬಿಡುವು ಕೊಟ್ಟು ಮತ್ತೆ ಉಲಿಯುತ್ತಿರುತ್ತದೆ. ಹೆಣ್ಣು ಕೋಗಿಲೆಯು ಗಂಡಿನಶ್ಟು ಸೊಗಸಾಗಿ ಕೂಗದೆ ಬರೀ “ಕಿಕ್..ಕಿಕ್..” ಎಂದು ಮೊನಚಾಗಿ ಅರಚುತ್ತದೆ. ಜೋಡಿಗಳು ಒಟ್ಟು ಕೂಗುವುದೂ ಉಂಟು.

ಊಟ :

ಹಣ್ಣುಗಳೇ ಇವುಗಳಿಗೆ ಅರಿದಾದ ಊಟ (main food). ಇದಲ್ಲದೇ ಹುಳ, ರೆಕ್ಕೆಹುಳಗಳನ್ನೂ ಸಹ ಹಿಡಿದು ತಿನ್ನುತ್ತವೆ.

ಮರಿ ಮಾಡುವ ದಿನಗಳು ಮತ್ತು ಬಗೆ :

ಕೋಗಿಲೆಗಳು ಪರಾವಲಂಬಿಗಳು. ಇದುವೇ ಈ ಹಕ್ಕಿಗಳ ಬೆರಗಾಗಿಸುವ ಪರಿಚೆ (feature). ಮರಿ ಮಾಡಲಿಕ್ಕೆ ಕೋಗಿಲೆಗಳು ಎಂದಿಗೂ ಗೂಡು ಕಟ್ಟುವುದಿಲ್ಲ. ಹೆಣ್ಣು ಕೋಗಿಲೆಯು ಕಾಗೆಯ ಗೂಡಿಗೆ ಕದ್ದು ಹೋಗಿ, ಮೊಟ್ಟೆ ಇಟ್ಟು ಬರುತ್ತದೆ. ಅದಕ್ಕಂತಲೇ ಕೋಗಿಲೆಗಳ ಮರಿ ಮಾಡುವ ದಿನಗಳು ಕಾಗೆಗಳು ಮರಿ ಮಾಡುವ ದಿನಗಳೊಂದಿಗೆ ತಳುಕು ಹಾಕಿಕೊಂಡಿದೆ. ಕಾಗೆಗಳು ಬೆರೆತು, ಮೊಟ್ಟೆಯಿಡಲು ಗೂಡು ಕಟ್ಪುವುದು ಏಪ್ರಿಲ್ ಇಂದ ಆಗಸ್ಟ್ ವರೆಗಿನ ಹೊತ್ತಿನಲ್ಲಿ. ಕೋಗಿಲೆಗಳೂ ಸಹ ಈ ತಿಂಗಳುಗಳಲ್ಲೇ ಬೆರೆತು ಮೊಟ್ಟೆ ಇಡಲು ಅಣಿಯಾಗುತ್ತವೆ.

ಗಂಡು ಕೋಗಿಲೆಯು ಕಾಗೆಯ ಗೂಡಿನ ಬಳಿ ಬಂದು, ಮೊಟ್ಟೆಗಳನ್ನ ಜೋಪಾನಿಸುತ್ತ ಕುಳಿತ ಗಂಡು-ಹೆಣ್ಣು ಕಾಗೆಗಳನ್ನು ಅಣಕಿಸಿ ತನ್ನನ್ನ ಅಟ್ಟಿ ಬರುವಂತೆ ಮಾಡುತ್ತದೆ. ಇದನ್ನೇ ಕಾದು ಕುಳಿತ ಹೆಣ್ಣು ಕೋಗಿಲೆ, ಕದ್ದುಹೋಗಿ, ಕಾಗೆಗಳ ಮೊಟ್ಟೆಗಳ ನಡುವೆ ಅವುಗಳನ್ನೇ ಹೋಲುವಂತಿರುವ ತನ್ನ ಮೊಟ್ಟೆಗಳನ್ನು ಇಟ್ಟು ಬರುತ್ತದೆ.  ಈ ಸಾಹಸದ ಕೆಲಸದಲ್ಲಿ ಎಶ್ಟೋ ಬಾರಿ ಗಂಡು ಕೋಗಿಲೆ ಸಿಕ್ಕಿಬಿದ್ದು ಕಾಗೆಗಳ ದಾಳಿಯಿಂದ ಸಾಯುತ್ತದೆ.  ಗೂಡಿಗೆ ಮರಳಿ ಬಂದ ಜೋಡಿ ಕಾಗೆಗಳು ತಮಗರಿವಿಲ್ಲದೆಯೇ ಕೋಗಿಲೆಯ ಮೊಟ್ಟೆಗಳಿಗೂ ಕಾವು ನೀಡಿ ಮರಿಮಾಡುತ್ತವೆ. ಮೊಟ್ಟೆ ಒಡೆದು ಬಂದ ಕೋಗಿಲೆ ಮರಿಗಳೂ ತಮ್ಮ ಮಕ್ಕಳೇ ಎನ್ನುವ ಬೆಪ್ಪಿನಲ್ಲಿ, ತಮ್ಮ ಇತರ ಮರಿಗಳೊಂದಿಗೆ ಕೋಗಿಲೆ ಮರಿಗಳಿಗೂ ತಿನಿಸಿ ಸಲಹುತ್ತವೆ.

ಹೊಟ್ಟೆಬಾಕಗಳಾದ ಕೋಗಿಲೆ ಮರಿಗಳು ಕಾಗೆಯ ಮರಿಗಳಿಗಿಂತಲೂ ಹೆಚ್ಚು ಉಂಡು ತಿಂದು, ಬೇಗ ಬೆಳೆದು, ರೆಕ್ಕೆ ಬಲಿತ ಕೂಡಲೇ ಗೂಡು ಬಿಟ್ಟು ಹಾರುತ್ತವೆ. ಕೋಗಿಲೆ ಮತ್ತು ಕಾಗೆಯ ಮೊಟ್ಟೆಗಳು ತಿಳಿ ಬೂದು ಬಣ್ಣ ಮತ್ತು ಕೆಂಪು ಚುಕ್ಕೆಗಳಿಂದ ಕೂಡಿದ್ದು, ಗಾತ್ರದಲ್ಲಿ ತುಸು ಏರುಪೇರು ಹೊಂದಿರುತ್ತವೆ.

ಕಾಗೆಗಳು ಇತರ ಹಕ್ಕಿಗಳಿಗೆ ಕಿರುಕುಳ ಕೊಟ್ಟರೆ, ಈ ಕೋಗಿಲೆಗಳು ಕಾಗೆಗಳಿಗೇ ಚಳ್ಳೆಹಣ್ಣು ತಿನಿಸುತ್ತವೆ! ಪ್ರಕ್ರುತಿಯಲ್ಲಿ ಏನೆಲ್ಲಾ ಸೋಜಿಗದ ವಿಶಯಗಳಿವೆ. ಅಲ್ಲವೇ!

( ಚಿತ್ರಸೆಲೆ: besgroup.org )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.