‘ಈ-ಪ್ಯಾಲೆಟ್’ – ಟೊಯೋಟಾದ ಹೊಸ ಹೊಳಹು

– ಜಯತೀರ‍್ತ ನಾಡಗವ್ಡ.

ತಾನೋಡದ ಜಗತ್ತು ಸಾಕಶ್ಟು ಬೆಳವಣಿಗೆ ಕಾಣುತ್ತಿದೆ. ಕಟ್ಟುಜಾಣ್ಮೆ(Artificial Intelligence) ಮತ್ತು ಇರುಕಗಳ ಮಿಂಬಲೆಯಂತಹ(Internet of Things) ಚಳಕಗಳ ಬಳಕೆ ತಾನೋಡದ ಕಯ್ಗಾರಿಕೆಯಲ್ಲಿಯೂ ಹೆಚ್ಚುತ್ತಿದೆ. ಸಾರಿಗೆ ಏರ‍್ಪಾಟಿನಲ್ಲಿ ಹೊಸ ಹೊಸ ಅರಕೆಗಳು(Research) ನಡೆಯುತ್ತಿವೆ, ಮುಂಬೊತ್ತಿನ(Future) ಸಾರಿಗೆ ಏರ‍್ಪಾಟಿನ ಬದಲಾವಣೆಗೆ ಮುನ್ನುಡಿ ಬರೆದಾಗಿದೆ. ಈ ನಿಟ್ಟಿನಲ್ಲಿ ಸಾಕಶ್ಟು ಹೊಸ ಅರಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ, ಟೊಯೋಟಾ ಕೂಟವು ತಾನೋಡದ ಉದ್ದಿಮೆಯಲ್ಲಿ ಮುಂಚೂಣಿ ಸ್ತಾನ ಕಾಯ್ದುಕೊಂಡಿದೆ. ಇದೀಗ ಹೊಸದೊಂದು ಹೊಳಹನ್ನು(Concept) ಜಗತ್ತಿಗೆ ತೋರ‍್ಪಡಿಸುವ ಮೂಲಕ ಸುದ್ದಿಯಲ್ಲಿದೆ. ಈ-ಪ್ಯಾಲೆಟ್(E-Palette) ಹೆಸರಿನ ವಿಶೇಶ ಬಂಡಿಗಳ ತಯಾರಿಕೆಗೆ ಟೊಯೋಟಾ ಮುಂದಾಗಿದೆ.

ಬರುವ ದಿನಗಳಲ್ಲಿ ಸರಕು ಸಾಗಣೆ ಮತ್ತು ಮಂದಿ ಓಡಾಟದ ಸವಾಲುಗಳನ್ನು ಎದುರಿಸಲು ಅಣಿಗೊಂಡಿರುವ ಬಂಡಿಗಳನ್ನೇ ನಾವು ಈ-ಪ್ಯಾಲೆಟ್ ಹೆಸರಲ್ಲಿ ಅಣಿಗೊಳಿಸುತ್ತಿದ್ದೇವೆ ಎಂದು ಟೊಯೋಟಾ ಕೂಟ ಹೇಳಿಕೊಂಡಿದೆ. ಕೊಳ್ಳುಗರ, ಪಯಣಿಗರಿಗೆ ಎಲ್ಲ ಬಗೆಯ ಅನುಕೂಲಗಳನ್ನು ಒದಗಿಸಿಕೊಡಲಿದೆಯಂತೆ ಈ-ಪ್ಯಾಲೆಟ್. ಈ-ಪ್ಯಾಲೆಟ್ ಅನ್ನು ಸರಕು ಸಾಗಣೆಯ ದೊಡ್ಡ ಲಾರಿಗಳ ಬದಲು, ಮಂದಿ ಸಾಗಣೆಯ ಉದ್ದದ ಬಸ್‌ಗಳ ಬದಲು ಬಳಕೆ ಮಾಡಬಹುದು. ಅಶ್ಟೇ ಅಲ್ಲದೇ ಓಡಾಡುವ ಅಂಗಡಿ, ತಿಂಡಿ ಬಂಡಿಗಳ ರೂಪದಲ್ಲೂ ಈ-ಪ್ಯಾಲೆಟ್ ಬಳಸಬಹುದಾಗಿದೆ. ಹೀಗೆ ಎಲ್ಲ ಬಗೆಯ ಮಂದಿಗೆ ಇದನ್ನು ಬಳಸಲು ಅಣಿಗೊಳಿಸಲಾಗುತ್ತಿದೆ.

ಈ ಹಮ್ಮುಗೆಗೆ ನೆರವು ನೀಡುತ್ತಿರುವವರಾರು?

ಈ-ಪ್ಯಾಲೆಟ್ ತಂತಾನೇ ಓಡುವ ಮಿಂಚಿನ ಬಂಡಿಯಾಗಿರುತ್ತದೆ(Electric Vehicle) ಎಂದು ಟೊಯೋಟಾ ತಿಳಿಸಿದೆ. ಜಗತ್ತಿನ ದೊಡ್ಡ ಕೂಟಗಳಾದ ಅಮೆಜಾನ್(Amazon), ಚೀನಾದ ದೊಡ್ಡ ಟ್ಯಾಕ್ಸಿ ಕೂಟ ಡಿಡಿ(Didi), ಅಮೇರಿಕಾದ ಊಬರ್(Uber), ಬಂಡಿ ತಯಾರಕ ಮಜ್ದಾ(Mazda) ಮತ್ತು ಪಿಜ್ಜಾ ಹಟ್(Pizza hut) ಕಂಪನಿಗಳು ಈ-ಪ್ಯಾಲೆಟ್ ತಯಾರಿಕೆಗೆ ತಮ್ಮ ನೆರವು ನೀಡಲಿವೆ. ಅಮೆಜಾನ್ ಹೆಚ್ಚಿನ ಸಂಕ್ಯೆಯಲ್ಲಿ ತನ್ನ ಕೊಳ್ಳುಗರಿಗೆ ಸರಕು ಸಾಗಿಸುವ ಕೆಲಸದಲ್ಲಿರುವ ಕೂಟ. ಹೀಗಾಗಿ ಅವರು ನೀಡುವ ಸಲಹೆ, ಸೂಚನೆಗಳನ್ನು ಪಡೆಯಲಾಗುತ್ತದೆ. ಇದೇ ರೀತಿ ಪಿಜ್ಜಾ ಸಾಗಿಸುವ ಪಿಜ್ಜಾ ಹಟ್ ಕೂಟ, ಈ-ಪ್ಯಾಲೆಟ್ ಬಂಡಿ ತಯಾರಿಕೆಯಲ್ಲಿ ಟೊಯೋಟಾ ಜೊತೆ ಪಾಲ್ಗೊಳ್ಳಲಿದೆ. ಮಂದಿ ಸಾಗಣೆ, ಟ್ಯಾಕ್ಸಿಗಳ ಸೇವೆ ಒದಗಿಸುವ ಊಬರ್ ಮತ್ತು ಡಿಡಿ ಕೂಟಗಳು ಮಂದಿ ಸಾರಿಗೆ ಏರ‍್ಪಾಟನ್ನು ಸುಳುವಾಗಿಸುವಲ್ಲಿ ಟೊಯೋಟಾಗೆ ನೆರವಿನ ಕೈ ನೀಡಲಿವೆ.

ಈ-ಪ್ಯಾಲೆಟ್ ನ ವಿಶೇಶತೆಗಳು

  •  ಈ ಬಂಡಿಯು ಮೂರು ಬಗೆಯಲ್ಲಿ, ಬೇರೆ ಬೇರೆ ಗಾತ್ರದಲ್ಲಿ ಸಿಗಲಿದೆ. ಮಂದಿ ಸಾರಿಗೆಯ ದೊಡ್ಡ ಬಸ್ ಗಾತ್ರದಲ್ಲಿ, ಸರಕು ಮತ್ತು ಸರಬರಾಜು ಪೂರೈಕೆ ಮಾಡುವ ದೊಡ್ಡ ಟ್ರಕ್ ಗಾತ್ರದಲ್ಲಿ ಮತ್ತು ಕಿರು ಕಾರಿನ ಗಾತ್ರ – ಹೀಗೆ ಎಲ್ಲರ ಬೇಡಿಕೆಗೆ ತಕ್ಕಂತೆ ಮಾಡಲಾಗುತ್ತದೆ.
  • ಈ-ಪ್ಯಾಲೆಟ್ ಬಂಡಿಯ ಒಳಬಾಗವನ್ನು ಬೇಡಿಕೆಗೆ ತಕ್ಕಂತೆ ಬದಲಾಯಿಸಿಕೊಳ್ಳುವ ಆಯ್ಕೆ ಇರುತ್ತದೆ. ಪಿಜ್ಜಾ ಹಟ್ ಬಳಕೆಗೆ ಬಂಡಿಯ ಒಳಗೆ ಅಡುಗೆಮನೆಯನ್ನು ಮಾಡಿಕೊಳ್ಳಬಹುದು. ನಮ್ಮ ಹತ್ತಿರದ ಎತ್ತುಗೆಯೆಂದರೆ ಮಂಗಳೂರಿನ ಹಳ್ಳಿ ಮನೆ ರೊಟ್ಟಿ‌ಸ್‌ನ ತಿಂಡಿ ಬಂಡಿಯಂತೆ, ಈ-ಪ್ಯಾಲೆಟ್ ಒಳಮೈ ಬದಲಿಸಬಹುದು. ನಿಮ್ಮ ಮನೆಯೊಳಗೆ ಕೂತು ಮಿನ್ಕೊಳುಕೊಡೆಯ(E-commerce) ಮೂಲಕ ನಿಮಗಿಶ್ಟದ ಅಂಗಿಯೊಂದನ್ನು ಆರ‍್ಡರ್ ಮಾಡುತ್ತಿದ್ದೀರಿ, ಅತ್ತಕಡೆಯಿಂದ ಕೆಲವೇ ಗಂಟೆಗಳಲ್ಲಿ ಓಡಾಡುವ ಮಳಿಗೆಯಲ್ಲಿ (Mobile Store) ನಿಮ್ಮ ಮನೆ ಮುಂದೆ ಆರ‍್ಡರ್ ಬರುತ್ತದೆ. ಕೂಡಲೇ ಬಂಡಿಯೊಳ ಹೊಕ್ಕು ಅಂಗಿಯ ಸೈಜು ಬಣ್ಣ ಎಲ್ಲವನ್ನು ಓಡಾಡುವ ಮಳಿಗೆಯಲ್ಲಿಯೇ ನೋಡಿಕೊಂಡು ದುಡ್ಡು ಕೊಟ್ಟು ಹೊರಬರಬಹುದು. ಈ-ಪ್ಯಾಲೆಟ್ ಅನ್ನು ಹೀಗೆ ಓಡಾಡುವ ಮಳಿಗೆಯಾಗಿ ಮಾರ‍್ಪಡಿಸಬಹುದು. ಇದೇ ರೀತಿ ಈ-ಪ್ಯಾಲೆಟ್ ನಿಮ್ಮ ಕಚೇರಿಯಿಂದ ಮನೆಗೆ ಓಡಾಡುವ ಆಪೀಸ್ ಬಸ್ ಆಗಿ ಅಶ್ಟೇ ಅಲ್ಲದೇ, ಕಚೇರಿಯಿಂದ ಮನೆಗೆ ತೆರಳುವ, ಮನೆಯಿಂದ ಕಚೇರಿಗೆ ತೆರಳುವ ಹೊತ್ತಿನಲ್ಲಿ ಓಡಾಡುವ ಆಪೀಸ್(Mobile Office) ಆಗಿ ಬದಲಾಯಿಸಿಕೊಳ್ಳಬಹುದು. ಇದರಲ್ಲಿ ಕೆಲಸಕ್ಕೆ ಸಂಬಂದಿಸಿದ ಮೀಟಿಂಗ್, ಕಾನ್ಪರೆನ್ಸ್ ಕಾಲ್‌ಗಳನ್ನು ನಡೆಸಬಹುದು, ಈಡುಗಾರಿಕೆಯ ಅರಕೆಮನೆಯಾಗಿಯೂ(Design Laboratory) ಕೂಡ ಮಾರ‍್ಪಡಿಸಬಹುದು.
  • ಈ-ಪ್ಯಾಲೆಟ್ ಬಂಡಿಯ ಬಳಸುಗರು, ಬಂಡಿಯ ಹದುಳತೆ(Health), ಬಂಡಿಯ ಸ್ತಿತಿ, ಅದರಲ್ಲಿನ ಮೆದುಸರಕು(Software), ತಿಟ್ಟಕ(Camera) ಮತ್ತು ಅರಿವುಕಗಳು(Sensors) ಹೇಗೆ ಕೆಲಸ ಮಾಡುತ್ತಿವೆಯೆಂದು ತಾವಿದ್ದಲ್ಲಿಂದ ತಿಳಿಯಬಹುದಾಗಿರುತ್ತದೆ. ಬಂಡಿಯ ಈ ಎಲ್ಲ ಮಾಹಿತಿ ಹಂಚಿಕೆಗೆ ಬಂಡಿಯಲ್ಲಿ ಡಾಟಾ ಕಮ್ಯುನಿಕೇಶನ್ ಮಾಡ್ಯೂಲ್‌ವೊಂದನ್ನು(Data Communication Module-DCM) ಜೋಡಿಸಿರಲಾಗಿರುತ್ತದೆ. ಇದು ಟೊಯೋಟಾದ “ಟೊಯೋಟಾ ಬಿಗ್ ಡಾಟಾ ಸೆಂಟರ್”(Toyota Big Data Center) ಜೊತೆಗೂ ಮಾಹಿತಿ ಹಂಚಿಕೊಳ್ಳುವುದರಿಂದ, ಟೊಯೋಟಾದ ಬಂಡಿ ಮಾರಾಳಿಗರು(Toyota Dealer) ಲಾಬ ಪಡೆಯಬಹುದು. ಬಂಡಿ ಕೆಟ್ಟು ನಿಂತಾಗ ಅದನ್ನು ಸರಿಪಡಿಸಲು ನೇರವಾಗಿ ಟೊಯೋಟಾ ಬಿಗ್ ಡಾಟಾ ಸೆಂಟರ್ ನಲ್ಲಿರುವ ಬಂಡಿಯ ಸ್ತಿತಿ-ಗತಿ ಬಗೆಗಿನ ಮಾಹಿತಿಯನ್ನು ಮಾರಾಳಿಗರು ಬಳಸಿಕೊಳ್ಳಬಹುದು.

ಟೊಯೋಟಾದ ಈ ಹೊಸ ಹಮ್ಮುಗೆ ಸಾಕಶ್ಟು ಸುದ್ದಿ ಮಾಡಿದೆ. ಬರುವ ದಿನಗಳಲ್ಲಿ ಈ ಹಮ್ಮುಗೆ ನಿಜರೂಪ ತಾಳಿ, ಸಾರಿಗೆ ಏರ‍್ಪಾಟನ್ನು ಇನ್ನಶ್ಟು ಸುಳುವಾಗಿಸಿದರೆ ಅಚ್ಚರಿ ಏನಿಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ: toyota.co.jp, weforum.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: