ಬನ್ನಿ, ಬದುಕನ್ನು ದ್ಯಾನಿಸೋಣ!
ಎಂದಿನಂತೆ ಕ್ರಿಕೆಟ್ ಆಡಿ ಮನೆಗೆ ಹಿಂದಿರುಗುತ್ತಿದ್ದೆ. ಸಂಜೆಯಾದ್ದರಿಂದ ಸಹಜವಾಗಿಯೇ ವಾಕ್ ಮಾಡುತ್ತಿದ್ದ ವಯಸ್ಸಾದವರು, ಮದ್ಯವಯಸ್ಸಿನವರು ಅಲ್ಲಲ್ಲಿ ಗುಂಪು-ಗುಂಪಾಗಿ ಕುಳಿತು ಬದುಕಿನ ಕ್ಶಣಗಳನ್ನು ಮೆಲುಕು ಹಾಕುತ್ತಿದ್ದರು. ಕೆಲವರು ಪತಸಂಚಲನದಂತೆ ಶಿಸ್ತಿನಿಂದ ಕೈ ಬೀಸಿ ನಡೆಯುತ್ತಿದ್ದರು. ನಾನು ಹೋಗುತ್ತಿದ್ದ ದಾರಿಯಲ್ಲಿ ನನ್ನ ಮುಂದೆ ಮದ್ಯವಯಸ್ಸಿನ ಹೆಣ್ಣುಮಕ್ಕಳ ಗುಂಪು ರಸ್ತೆಯನ್ನು ಗುತ್ತಿಗೆ ಪಡೆದವರಂತೆ, ಆಮೆಗತಿಯಲ್ಲಿ ಹೋಗುತ್ತಿದ್ದರು. ಅವರನ್ನು ಹಿಂದೆ ಹಾಕಿ ಹೋಗುವುದು ನನಗೆ ದುಸ್ತರವಾಗಿ ಕಾಣಿಸಿತು. ಹಾಗೇ, ಅವರ ಮಾತು ಕೇಳುವುದು ನನಗೆ ಅನಿವಾರ‍್ಯವೂ ಆಯಿತು.
“ಏನ್ರೀ ರು… ಬೆಳಿಗ್ಗೆ ತಿಂಡಿ ಏನ್ಮಾಡಿದ್ರಿ?”
“ಎಲ್ಲಿ ತಿಂಡಿ ಜಾ…ಮ್ಮ, ನಾನು ದ್ಯಾನಕ್ಕೆ ಕುಳಿತಿದ್ದೆ, ನಮ್ಮನೆಯವ್ರು ಹೋಟೆಲ್ಲಿಂದ ತಂದ್ರು”
“ಹೌದಾ? ದಿನಾಲು ಹೀಗೇನಾ!?”
“ಏ ಇಲ್ಲಾ ರೀ, ಇವತ್ತು ಸಂಡೆ ಅಲ್ವಾ, ಹಾಗಾಗಿ ಬಹಳ ಹೊತ್ತು ದ್ಯಾನ ಮಾಡಿದೆ, ಅವರು ಡಿಸ್ಟರ‍್ಬ್ ಮಾಡೋದ್ಯಾಕೆ ಅಂತ ಹೋಗಿ ಹೋಟೆಲ್ಲಿಂದ ತಂದ್ರು”
“ಹುಂ ಕಣ್ರಿ ರು…. ದ್ಯಾನ ಮಾಡೋದ್ರಿಂದ ಮನಸ್ಸು ನಮ್ಮ ಕಂಟ್ರೋಲಲ್ಲಿ ಇರುತ್ತಂತೆ, ಹೌದಾ?”
“ಹೌದು ಕಣ್ರಿ ಜಾ….ಮ್ಮ, ನಾನು ದ್ಯಾನ ಮಾಡೋಕೆ ಶುರು ಮಾಡಿದಾಗಿಂದ ನಮ್ಮನೆಯವರ ಮೇಲೆ ಕೋಪಾನೆ ಮಾಡ್ಕೊಂಡಿಲ್ಲ, ಅವರಂತೂ ಪುಲ್ ಕುಶಿಯಾಗಿದಾರೆ”
ಹೀಗೆ ಅವರ ಮಾತುಗಳ ರೈಲು, ಗಂಡನೆಂಬ ಹಳಿಯ ಮೇಲೆ ಸಾಗುತ್ತಿತ್ತು. ಅವರ ಮಾತು ನನ್ನಲ್ಲಿ ಕೆಲವೊಂದು ಪ್ರಶ್ನೆಗಳನ್ನು ಹುಟ್ಟುಹಾಕಿತು. ಈಗಿನ ಒತ್ತಡದ ಜೀವನಕ್ಕೆ ಯೋಗ-ದ್ಯಾನ ಅನಿವಾರ‍್ಯ ಎನ್ನುತ್ತದೆ ಒಂದು ಅದ್ಯಯನ. ಅದಕ್ಕೆ ತಕ್ಕಂತೆ ಯೋಗ ದೊಡ್ಡ ವ್ಯಾಪಾರೀಕರಣದ ವಿಶಯ ವಸ್ತುವೂ ಆಗಿದೆ.
ಹೀಗೆ ಯೋಚಿಸುತ್ತಿರುವಾಗಲೆ ನನ್ನ ಮನಸ್ಸು ನಮ್ಮ ಹಳ್ಳಿಯ ಕುಶಲ ಕರ‍್ಮಿಗಳ ಕಡೆ ಹೋಯಿತು. ನಮ್ಮೂರಿನ ಕಮ್ಮಾರ ಸುಬ್ಬಣ್ಣ, ಬಡಗಿ ಕೆಂಚಣ್ಣ, ಕ್ರಿಶ್ಣಪ್ಪ, ತಿಪ್ಪಣ್ಣ, ಕುಂಬಾರ ಜೋಗಪ್ಪ, ಕಂಬಳಿ ಮಾಡುತ್ತಿದ್ದ ಬೀಮಣ್ಣ, ಕಾಡಪ್ಪ, ಕಟ್ಟಿಗೆ ಕಡಿದು ಬದುಕು ಕಟ್ಟಿಕೊಂಡ ಓಬಣ್ಣ, ಉಪ್ಪಾರ ಈರಕ್ಕ, ಮುಂಜಾನೆ ಐದಕ್ಕೆ ಎದ್ದು ಹೋಟೆಲ್ ಆರಂಬಿಸುತ್ತಿದ್ದ ರಾಚಪ್ಪ, ಬೆಳಿಗ್ಗೆ ಕೋಳಿ ಕೂಗುವುದರೊಳಗೇ ತರಕಾರಿ-ಸೊಪ್ಪು ಹೊತ್ತು ತರುತ್ತಿದ್ದ ಪಕ್ಕದ ಹಳ್ಳಿಯ ಹೆಣ್ಣುಮಕ್ಕಳು ಹಾಗೂ ರೈತರು ಇವರ‍್ಯಾರು ಒಂದು ದಿನಕ್ಕೂ ಯೋಗ-ದ್ಯಾನ ಮಾಡಲಿಲ್ಲ. ಬಹುತೇಕ ಕೂಡು ಕುಟುಂಬಗಳು ಇಲ್ಲವೇ, ಕನಿಶ್ಟ ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದ ಸಂಸಾರ ಅವರದು. ಬದುಕು ಒಂದು ದಿನಕ್ಕೂ ಅವರಿಗೆ ಒತ್ತಡ ಆಗಲಿಲ್ಲ, ಬಾರ ಎನ್ನಿಸಲಿಲ್ಲ, ಜೀವನ ನಿರ‍್ವಹಣೆ ಕಶ್ಟ ಎನ್ನಿಸಲಿಲ್ಲ, ಅವರ ಮುಕದ ಮೇಲಿನ ಮಂದಹಾಸ ಬತ್ತಲಿಲ್ಲ. ಅವರು ಬದುಕನ್ನು ದ್ಯಾನಿಸುವವರು. ಮಾಡುವ ಕೆಲಸವನ್ನೇ ಯೋಗ ಎಂದು ಕೊಂಡವರು. ಬಯಕೆ ಅವರ ಮೇಲೆ ಗದಾಪ್ರಹಾರ ಮಾಡಲು ಬಿಡಲಿಲ್ಲ. ಹೀಗೆ ಯೋಚಿಸುವಾಗಲೇ ನನ್ನ ಮನ ನಗರದ ಬದುಕಿನೆಡೆ ಬಂದಿತು.
ಸಾಮಾನ್ಯವಾಗಿ ನಗರದಲ್ಲಿ ಪುಟ್ಟ ಕುಟುಂಬಗಳೇ ಹೆಚ್ವು. ಇನ್ನೂ ನಗರದ ಜನರ ಆದಾಯವು ತುಸು ಹೆಚ್ಚಿರುತ್ತದೆ. ಕೆಲವು ಮನೆಗಳಲ್ಲಿ ಮನೆಗೆಲಸಕ್ಕೆ ಕೆಲಸದ ಆಳುಗಳು ಇರುತ್ತಾರೆ. ಇಶ್ಟೆಲ್ಲ ಇದ್ದಾಗ್ಯೂ ಅವರ ಒತ್ತಡ ಕಡಿಮೆಯಾಗಿಲ್ಲ. ಕಾರಣ ಬದುಕಿನ ಶೈಲಿ. ಬಹುತೇಕ ಮಕ್ಕಳು ಕಾನ್ವೆಂಟ್ ಶಾಲೆಗೆ ಹೋಗುತ್ತಾರೆ. ಅವರನ್ನು ಸಮಯಕ್ಕೆ ಸರಿಯಾಗಿ ಸಿದ್ದ ಮಾಡಿ ಶಾಲೆಗೆ ಕಳುಹಿಸುವುದು, ನಂತರ ಕರೆತರುವುದು ಟೆನ್ಶನ್ನೇ ಸರಿ. ಶಾಲಾ ಹೋಂ ವರ‍್ಕ್ ಮಾಡಿಸುವುದೇ ಒಂದು ಸವಾಲು. ಕಚೇರಿಯಲ್ಲಿ ಕೆಲಸದ ಒತ್ತಡವೂ ಹೆಚ್ಚು. ಮನೆಗೂ ಕಚೇರಿಯ ಕೆಲಸ ತಂದು ಮಾಡುವುದುಂಟು. ಪರಸ್ಪರ ಹೋಲಿಕೆಯ ಬದುಕು ನಗರ ಪ್ರದೇಶದಲ್ಲಿ ಹೆಚ್ಚಾಗಿದೆ.
ಇದನ್ನೆಲ್ಲಾ ನೋಡಿದಾಗ ನನಗೆ ಹೀಗೆ ಅನಿಸುತ್ತದೆ. ನಾವು ಮೊದಲು ಬದುಕನ್ನು ಪ್ರೀತಿಸಬೇಕು, ನಮ್ಮ ನಮ್ಮ ಕೆಲಸವನ್ನು ಆಸ್ತೆಯಿಂದ ಮಾಡಬೇಕು. ಕಚೇರಿ ಕೆಲಸವನ್ನು ಕಚೇರಿಗೆ ಮೀಸಲಾಗಿಸಿ ಉಳಿದ ಸಮಯವನ್ನು ಸಕುಟುಂಬದೊಂದಿಗೆ ಆನಂದಿಸಬೇಕು. ಪೇಸ್ಬುಕ್ಕು-ಟ್ವಿಟರು-ವಾಟ್ಸ್ಯಾಪು-ಮೊಬೈಲು ಎಶ್ಟು ಬೇಕೋ ಅಶ್ಟೇ ಬಳಸಬೇಕೇ ಹೊರತು ಅವುಗಳೇ ನಮ್ಮ ಜೀವನವಾಗಲು ಬಿಡಬಾರದು. ಬದುಕನ್ನು ಪ್ರೀತಿಸುವ ಮನಸು ಲವಲವಿಕೆಯಿಂದ ಇದ್ದರೆ ಜೀವನವೇ ಯೋಗವಾಗುತ್ತದೆ. ನಮ್ಮ ಸಂತೋಶವೇ ದ್ಯಾನವಾಗುತ್ತದೆ.
ಬನ್ನಿ ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯವನ್ನು ಕೊಡೋಣ. ಬದುಕನ್ನು ದ್ಯಾನಿಸೋಣ.
” ನಮ್ಮೂರಿನ ಕಮ್ಮಾರ ಸುಬ್ಬಣ್ಣ, ಬಡಗಿ ಕೆಂಚಣ್ಣ, ಕ್ರಿಶ್ಣಪ್ಪ, ತಿಪ್ಪಣ್ಣ, ಕುಂಬಾರ ಜೋಗಪ್ಪ, ಕಂಬಳಿ ಮಾಡುತ್ತಿದ್ದ ಬೀಮಣ್ಣ, ಕಾಡಪ್ಪ, ಕಟ್ಟಿಗೆ ಕಡಿದು ಬದುಕು ಕಟ್ಟಿಕೊಂಡ ಓಬಣ್ಣ, ಉಪ್ಪಾರ ಈರಕ್ಕ, ಮುಂಜಾನೆ ಐದಕ್ಕೆ ಎದ್ದು ಹೋಟೆಲ್ ಆರಂಬಿಸುತ್ತಿದ್ದ ರಾಚಪ್ಪ, ಬೆಳಿಗ್ಗೆ ಕೋಳಿ ಕೂಗುವುದರೊಳಗೇ ತರಕಾರಿ-ಸೊಪ್ಪು ಹೊತ್ತು ತರುತ್ತಿದ್ದ ಪಕ್ಕದ ಹಳ್ಳಿಯ ಹೆಣ್ಣುಮಕ್ಕಳು ಹಾಗೂ ರೈತರು ಇವರ‍್ಯಾರು ಒಂದು ದಿನಕ್ಕೂ ಯೋಗ-ದ್ಯಾನ ಮಾಡಲಿಲ್ಲ.” ತುಂಬಾ ಒಳ್ಳೆಯ ಮಾತುಗಳು .