ನೆನಪುಗಳ ಹೊತ್ತಿಗೆಯಲ್ಲಿಟ್ಟ ನವಿಲುಗರಿಗೆ…

– ರತೀಶ್ ಹೆಬ್ಬಾರ್.

ನೆನಪುಗಳ ಹೊತ್ತಿಗೆಯಲ್ಲಿಟ್ಟ ನವಿಲುಗರಿಗೆ…

ಮಗುಮನಸ್ಸಿನ ಮುಗ್ದತೆಯಿಂದ ಹೊರಬಂದಾಗ ಬರೀ ಮೈತ್ರಿಯ ನೆಪಮಾಡಿ ಮನಸೂರೆಗೊಂಡಿದ್ದಂತೂ ಸತ್ಯ. ಚಿಗುರೊಡೆದ ಪ್ರೀತಿಗೆ ಸ್ನೇಹದ ಲೇಪವಶ್ಟೇ. ಅದೊಂದು ಮದುರ ಬಾಂದವ್ಯ, ಚಿರ ನೆನಪುಗಳಿಗೆ ‘ಸ್ನೇಹ’ವೆಂಬ ನಾಮಕರಣ.

ಬಂದನದ ಬೆಸುಗೆಯಿಲ್ಲದೆ ಕನಸುಗಳ ಪುಶ್ಪವು ಅರಳುತ್ತಿರುವ ಸಮಯ. ಅದೇಕೋ ಆಳದಲ್ಲೊಂದು ಬಾವನೆ ಮೊಳೆಯುತ್ತಿರಲು ಸುಪ್ತವಾಗಿಯೇ ನಿಯಂತ್ರಿಸಲ್ಪಡುತ್ತಿರುವ ಅಪ್ರಾಪ್ತತೆಯ ಹಂಗು.

ಜೀವನದ ಅರ‍್ತ ತಿಳಿಯುವ ಮೊದಲು ಪ್ರೀತಿಯ ಹಣತೆಗೆ ಜ್ಯೋತಿಯಾದವಳು ನೀನು. ನಾ ನಿನ್ನ ಕಂಡಿದ್ದು ನಾನ್ಯಾರೆಂದು ಅರಿಯುವುದಕ್ಕೂ ಮೊದಲು. ಮೊದಲ ಬೇಟಿಯಲ್ಲ, ಅನುದಿನವೂ ಮುಕಾಮುಕಿಯಾದರೂ ಪರಸ್ಪರ ಕಾದಾಟ, ಸಂಬಾಶಣೆ, ವಾದ-ವಿವಾದಗಳು ನಡೆದರೂ ನನ್ನಲ್ಲಿ ಯಾವುದೇ ಕಲ್ಪನೆಗಳಿರಲಿಲ್ಲ ಅತವಾ ಅವು ಸ್ನೇಹಕ್ಕಶ್ಟೆ ಸೀಮಿತವಾಗಿದ್ದವು. ನಿನ್ನ ನಯನಗಳು ಪದೇ ಪದೇ ನನ್ನನ್ನು ಸೆಳೆಯುತ್ತಿದ್ದರೂ ಅದನ್ನು ಹತ್ತಿಕ್ಕಿದ್ದೆನೇನೋ. ನಿನ್ನೊಂದು ನೋಟಕ್ಕೆ ಚಡಪಡಿಸುತ್ತಲಿದ್ದರೂ ಅದು ಪ್ರೀತಿಯೇ ಎಂದು ತಿಳಿದಿರಲಿಲ್ಲ. ಎಲ್ಲ ಲಲನೆಯರ ಮುಕಗಳ ನಡುವೆ ನಿನ್ನ ಕದ್ದು ನೋಡುವಾಗ ಅದೆಶ್ಟು ಬಾರಿ ನಿನ್ನ ನೋಟಕ್ಕೆ ಬಲಿಯಾಗಿದ್ದೆನೋ?

ನಿನ್ನ ಸೌಂದರ‍್ಯಕ್ಕೆ ಅದಾಗಲೇ ನನ್ನ ಹ್ರುದಯ ಕಳೆದುಹೋಗಿತ್ತು. ನಿನ್ನ ಚೆಲುವು ಮಲೆನಾಡಿನ ಸೌಂದರ‍್ಯದ ಕಾಣಿಕೆಯೇ ಇರಬಹುದೇನೋ? ಅದೆಶ್ಟು ಸಿನಿಮಾ ನಾಯಕಿಯರಲ್ಲಿ ನಿನ್ನ ಮೊಗವನ್ನು ಹೋಲಿಸಿದ್ದೆನೋ? ಆದರೆ ಅವರೆಲ್ಲರನ್ನೂ ಒಳಗೊಂಡ ನಿನ್ನಲ್ಲಿ ನನ್ನ ಹ್ರುದಯ ಬಂದಿಸಲ್ಪಟ್ಟಿತ್ತು. ಮರುಬೂಮಿಯ ಒಯಸಿಸ್‌ನಂತೆ ನಿನ್ನ ರೂಪ ನನ್ನ ಕಣ್ಣನ್ನು ಸೆಳೆಯುತ್ತಿತ್ತು. ನಿನ್ನ ಬಳಿ ಮಾತನಾಡುವ ಅಬಿಲಾಶೆಯಿಂದ ಅದೆಶ್ಟು ದಿನ ನಿನ್ನನ್ನು ರೇಗಿಸಿದ್ದೆನೋ? ಆದರೆ ಒಡಲಾಳದ ಪ್ರೀತಿಯು ವ್ಯಕ್ತವಾಗಲು ಬರೀ ನೋಟ, ಮಾತುಗಳು ಸಾಲುವುದಿಲ್ಲವೇನೋ ಎಂದೆನಿಸುತ್ತದೆ.

ನಿನ್ನ ಕಂಗಳಲಿ ನೋಟ ನೆಟ್ಟರೆ ಅದೆಂತದೋ ಅಂಜಿಕೆ, ದೂರ ಸರಿಯುತ್ತಲಿದ್ದೆ. ನಿನ್ನ ಜೊತೆಗಿದ್ದ ಆ ದಿನಗಳು ಅದೆಶ್ಟು ಚಂದ, ನಿನ್ನ ನಗುವ ಬಿಟ್ಟು ಸ್ವರ‍್ಗ ಬೇರೊಂದಿಲ್ಲವೆನಿಸುತ್ತಿತ್ತು. ಕಳೆದ ಮೂರು ವರ‍್ಶಗಳು ಮೂರು ನಿಮಿಶಗಳಂತೆನಿಸುತ್ತಿದೆ ಜೀವನದ ರಸಮಯ ಕ್ಶಣಗಳು ಹಗಲುಗನಸಿನಂತೆ ಮಾಯವಾಯಿತೋ ಎಂದು ಬಾಸವಾಗುತ್ತಿದೆ.

ಇರುವಾಗ ಇಲ್ಲದ ಬಾವನೆ ಇಲ್ಲದಾಗ ವ್ಯಕ್ತವಾಗಿದೆ. ನಿನ್ನ ಸನಿಹಕ್ಕಾಗಿ ಪ್ರತಿ ಗಳಿಗೆ ಹ್ರುದಯ ಮಿಡಿಯುತ್ತಿದೆ. ಅದೆಂತಹ ಪ್ರೀತಿ ನಿನಗೆ ನನ್ನ ಮೇಲೆ? ಒಂದರೆಗಳಿಗೆ ನನ್ನ ದ್ರುಶ್ಟಿಯಾಚೆ ಹೋಗಲಾರೆಯೆನ್ನುವೆ. ಜಗತ್ತು ಜಾಲತಾಣದಲ್ಲಿ ಮುಳುಗಿರುವಾಗ ಜಂಗಮವಾಣಿಯು ಅಂಗೈಯನು ಆವರಿಸಿರುವಾಗ ನನ್ನ ಪರದೆಯಲಿ ಮೂಡುವುದು ನಿನ್ನ ಬಿಂಬ ಮಾತ್ರವೇ. ನಿನ್ನ ಹುಸಿಮುನಿಸು, ನಗೆಗಡಲಲಿ ಉಕ್ಕುವ ಪ್ರೀತಿಯ ದಾರೆಗೆ ಅಕ್ಶರಗಳ ಮಿತಿಯೆಲ್ಲಿ? ಪದಗಳೇ ಇಲ್ಲವೇನೋ ನನ್ನ ಅವ್ಯಕ್ತ ಪ್ರೀತಿಯನ್ನು ಹೊರಸೂಸಲು.

ನಾ ನಿನ್ನ ಅಗಲಿದ್ದು ಕ್ಶಣಮಾತ್ರದಲ್ಲಿ. ಬರೀ ಒಂದು ನೋಟದೊಡನೆ. ಆ ಕೊನೆಯ ನೋಟ ಇಂದೂ ನೆನಪಿದೆ. ಮನವರಿಕೆಯಾಗಿದೆ ನೀನಿಲ್ಲದ ಬಾಳಿಗೆ ಅರ‍್ತವಿಲ್ಲವೆಂದು. ನಾ ನಿನ್ನ ಇಶ್ಟಪಟ್ಟಿದ್ದು ಇಂದ್ರಿಯ ವ್ಯಾಮೋಹದಿಂದ  ಅಲ್ಲ. ನಿನ್ನ ಸಕ್ಯದಿಂದ ದೂರವಿರಲು ನನ್ನಿಂದ ಸಾದ್ಯವಿಲ್ಲ. ನಿನ್ನ ನೋಟದ ಸೆಳಹು ಅಂತದ್ದು. ಪ್ರೀತಿಯ ಆಳದಲ್ಲಿ ಸಿಲುಕಿದ್ದೇನೆ. ನಿನ್ನೊಂದಿಗೆ ಹೊಸ ಬದುಕು ಕಟ್ಟಬಯಸಿದ್ದೇನೆ.

ಬದುಕಿನ ಉದ್ದೇಶ ಹುಡುಕಿದಾಗ ನನಗೆ ಸಿಕ್ಕಿದ್ದು ಪ್ರೀತಿ ಮಾತ್ರ. ಅದು ಮಾನವನಿಗೆ ಮೂಲಬೂತ ಅವಶ್ಯಕತೆಯೂ ಹೌದು. ಪ್ರತಿಜೀವಿಯಲ್ಲಿಯೂ ಪ್ರೀತಿ ಕಾಣಬಹುದು. ಒಬ್ಬರನ್ನೊಬ್ಬರು ಅಗಲಿರಲಾರದ ಬಂದವದು ಪ್ರೀತಿ. ಬದುಕಿನ ಬಂಡಿಯ ಗಾಲಿಗಳ ನಡುವಿನ ಬೆಸುಗೆ.

ಜೀವನದ ಸಾರ‍್ತಕತೆಯನ್ನು ಹುಡುಕುವ ಯತ್ನದಲ್ಲಿ ಪ್ರೀತಿ-ಪ್ರೇಮದ ಜಂಜಾಟಗಳು ಅಡ್ಡಿಯೊಡ್ಡಬಲ್ಲವೆಂಬ ಅನಿಸಿಕೆ ನನ್ನದಾಗಿತ್ತೆಂಬುದು ನಿಜ. ಹಾಗೇ ಪ್ರೀತಿಯೂ ಬದುಕಿನ ಒಂದು ಬಾಗ, ಜೀವದ ಸ್ರುಶ್ಟಿಯೂ ಹೌದು ಎಂಬುದನ್ನು ನಾನೀಗ ಅರಿತಿದ್ದೇನೆ. ನನ್ನ ಜೀವನವನ್ನು ನಿನಗಾಗಿ ಅರ‍್ಪಿಸಲು ಸಿದ್ದನಿದ್ದೇನೆ. ಪ್ರೀತಿಯ ಬಾವನೆಗಳನ್ನು ಪದಗಳಿಗೆ ಒತ್ತೆಯಿಟ್ಟಿದ್ದೇನೆ.

ಪುಟ್ಟ ಹ್ರುದಯವು ಗೇಲಿಮಾಡುತ್ತಿದೆ, ನಿನ್ನ ಗೆಜ್ಜೆ ಸದ್ದಿಗೆ ನಾ ಹಾತೊರೆಯುವುದ ನೋಡಿ. ಮತ್ತೆಂದು ನಿನ್ನ ನೋಡುವೆನೆಂದು ಕನವರಿಸುತ್ತಿರುವಾಗ ಕಣ್ಣಂಚಿನಲ್ಲಿ ಕೋಲ್ಮಿಂಚಿನಂತೆ ನಿನ್ನ ದರ‍್ಶನವು ಜ್ವಾಲಾಮುಕಿಯಂತೆ ಸುಪ್ತವಾಗಿದ್ದ ನನ್ನ ಬಾವನೆಗಳಿಗೆ ಪದಗಳಲ್ಲಿ ಜೀವತುಂಬಿದೆ. ನಿನಗಾಗಿ ಬರೆದ ಅದೆಶ್ಟೋ ಕವನಗಳು ಓಲೆಗಳ ಬಂದನದಲ್ಲಿ ಮರೆಯಾಗಿ ಕಾಯುತ್ತಿವೆ.

‘ಬಾ ಅರಸಿ ನೀ ಎನ್ನ ಜೊತೆಯಾಗು
ನನ್ನೆಲ್ಲ ತಳಮಳಗಳಿಗೆ ಕೊನೆ ಹಾಡು’

ಇಂತಿ
ಅತ್ರುಪ್ತ ಹ್ರುದಯ

 

(ಚಿತ್ರಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: