ಚಿತ್ರದುರ‍್ಗದ ಮರಡಿಹಳ್ಳಿಯಲ್ಲಿ ಪಿಲ್ಲೋ ಲಾವಾದ ಬೆರಗು

– ಡಿ. ಜಿ. ನಾಗರಾಜ ಹರ‍್ತಿಕೋಟೆ.

ಪಿಲ್ಲೋ ಲಾವಾ, Pillow Lava

ಅದೆಶ್ಟೋ ರೋಚಕತೆ ಮತ್ತು ಬೆರಗುಗಳನ್ನು ತನ್ನೊಡಲಲ್ಲಿ ತುಂಬಿಕೊಂಡಿರುವ ನಮ್ಮ ಬೂಮಿಯ ಕತೆಯೇ ಕುತೂಹಲಕಾರಿ. ಈ ವಿಶಾಲ ಬ್ರಹ್ಮಾಂಡದಲ್ಲಿ ಬೂಮಿ ರೂಪುಗೊಂಡ ಪರಿಯೇ ಅದ್ಬುತ. 450 ಕೋಟಿ ಇತಿಹಾಸವಿರುವ ಬೂಮಿ ತನ್ನ ಉಗಮ ಮತ್ತು ವಿಕಾಸದ ಹಾದಿಯಲ್ಲಿ ಹಲವಾರು ಅಚ್ಚರಿಗಳನ್ನು ಸ್ರುಶ್ಟಿಸಿದೆ. ಹೌದು, ನಾನು ಈಗ ಹೇಳಹೊರಟಿರುವುದು 220 ಕೋಟಿ ವರ‍್ಶಗಳ ಹಿಂದೆ ಪ್ರುತ್ವಿ ತನ್ನ ವಿಕಾಸದ ಹಾದಿಯಲ್ಲಿ ಮೂಡಿಸಿದ ಹೆಜ್ಜೆಗುರುತಿನ ಬಗ್ಗೆ. ಅದೇ ಚಿತ್ರದುರ‍್ಗ ಜಿಲ್ಲೆಯ ಮರಡಿಹಳ್ಳಿಯ ಬಳಿಯಿರುವ ಪಿಲ್ಲೋ ಲಾವಾ. ಜಗತ್ತಲ್ಲೇ ಅತ್ಯುತ್ತಮ ರಚನೆಯಿಂದ ಕೂಡಿದ ದಿಂಬಿನಾಕಾರದ ಶಿಲಾ ಪ್ರವಾಹವೆಂದು ಗುರುತಿಸಲ್ಪಟ್ಟಿದೆ. ಇದು ಬೌಗೋಳಿಕ ವಿಶೇಶತೆಯ ನಾಮಾವಳಿ ಹೊತ್ತ ಮರಡಿ( ಮಣ್ಣಿನ ದಿಬ್ಬ) ಹಳ್ಳಿಯ ವಿಶೇಶ ಸ್ಮಾರಕ.

ಕೆಲಸದ ನಿಮಿತ್ತ ಹಿರಿಯೂರಿನಿಂದ ಚಿತ್ರದುರ‍್ಗಕ್ಕೆ ಆಗಾಗ್ಗೆ ಹೋಗುವಾಗ ಮರಡಿಹಳ್ಳಿ ಎಂಬ ಹೆಸರು ಕಣ್ಣಿಗೆ ಬಿದ್ದೊಡನೆ ಅದರ ಜೊತೆಜೊತೆಗೆ ಪಿಲ್ಲೋ ಲಾವಾ ಎಂಬ ಹೆಸರು ನೆನಪಾಗುತ್ತಿತ್ತು. ಆದರೆ ನೋಡಲಾಗಿರಲಿಲ್ಲ. ಗೆಳೆಯರೊಟ್ಟಿಗೆ ಚಿತ್ರದುರ‍್ಗಕ್ಕೆ ಸವಾರಿ ಹೊರಟಿದ್ದ ನನಗೆ ಇದ್ದಕ್ಕಿದ್ದಂತೆ ಪಿಲ್ಲೋ ಲಾವಾದ ನೆನಪಾಗಿ ನಮ್ಮ ಬೈಕಿನ ಚಕ್ರಗಳಿಗೆ ಆ ಹಾದಿ  ತೆರೆದುಕೊಂಡಿತು. ಅಲ್ಲಿನ ಸ್ತಳೀಯರನ್ನ ವಿಚಾರಿಸಲಾಗಿ ಅಲ್ಲೇ ಪ್ರಾತಮಿಕ ಆರೋಗ್ಯಕೇಂದ್ರದ ಹಿಂಬದಿಯಲ್ಲಿನ ಪುಟ್ಟಗುಡ್ಡದ ಕಡೆ ಕೈ ತೋರಿದರು. ತಂತ್ರಗ್ನಾನ ಎಶ್ಟೇ ಮುಂದುವರಿದಿದ್ದರೂ ಸ್ತಳೀಯರನ್ನ ಮಾತನಾಡಿಸುತ್ತಾ ದಾರಿ ಕೇಳುವುದೆ ಚೆಂದದ ಅನುಬವ. ಆ ಕ್ಶಣಕಾಲದ ಆತ್ಮೀಯತೆ ಮತ್ತು ಮಾತುಕತೆ ಮನಸಿಗೆ ಮುದ ನೀಡುತ್ತದೆ.

ಗುಡ್ಡದ ಮೇಲಿನ ಪಿಲ್ಲೋ ಲಾವಾ, Pillow Lavaಏರುದಾರಿಯನ್ನು ಬಳಸುತ್ತಾ ಮೇಲೆ ಸಾಗಿದಾಗ ತುಕ್ಕುಹಿಡಿದ ಸ್ವಲ್ಪ ಹಾಳಾದ ಮಾಹಿತಿಪಲಕಗಳು ನಮ್ಮನ್ನು ಸ್ವಾಗತಿಸಿದವು. ಪಕ್ಕದಲ್ಲಿ ಚಪ್ಪಡಿಕಲ್ಲುಗಳಿಂದ ಕಟ್ಟಲಾಗಿದ್ದ ಸಣ್ಣದೊಂದು ಗುಡಿಯಿಂದ ಗಂಟೆಯ ನೀನಾದ ಕೇಳಿಬರುತ್ತಿತ್ತು. ಇಳಿಸಂಜೆಯಾದ್ದರಿಂದ ದನಗಾಹಿಗಳು ತಮ್ಮ ದನಕರು ಎಮ್ಮೆಗಳೊಂದಿಗೆ ತೆರಳುತ್ತಿದ್ದರು. ಗುಡ್ಡದ ಮೇಲಿಂದ ಚಿತ್ರದುರ‍್ಗದ ಕಡೆ ಕಣ್ಣು ಹಾಯಿಸಿದಾಗ ದಿಗಂತಕ್ಕಂಟಿಕೊಂಡಂತಿದ್ದ ನೂರಾರು ಕಿ.ಮೀ ಉದ್ದಕ್ಕೂ ಚಾಚಿರುವ ಬೆಟ್ಟಸಾಲುಗಳೂ, ಬೆಟ್ಟದ ಮೇಲಿರುವ ಗಾಳಿ ವಿದ್ಯುತ್ ಯಂತ್ರಗಳೂ, ತಂಪಾದ ತಂಗಾಳಿಯೂ ಪ್ರಕ್ರುತಿಯ ಚೆಲುವನ್ನು ಹೆಚ್ಚಿಸಿತ್ತು.

ಹತ್ತಿರ ಹೋಗುತ್ತಲೇ ವಿಶಿಶ್ಟವಾದ ಕೆಂಪುಬಣ್ಣ ಮತ್ತು ಕಲ್ಲಿನ ಮೇಲಿದ್ದ ಸೀಳಿನಾಕಾರದ ರಚನೆಗಳು ನಮ್ಮನ್ನು ಗಮನಸೆಳೆದವು. ದಿಂಬಿನಾಕಾರದ ಶಿಲಾಪ್ರವಾಹ ಎಂದೇ ಕರೆಯಲ್ಪಡುವ ಇದು ಪುರಾತನ ಬೂಮಿಯ ಅಪರೂಪದ ನೈಸರ‍್ಗಿಕ ಶಿಲಾಕಲಾಕ್ರುತಿ. ಮಾಹಿತಿಯನ್ನು ಹೆಕ್ಕುತ್ತಾ ಹೋದಾಗ ತಿಳಿದುಬಂದಿದ್ದು 220 ಕೋಟಿ ವರ‍್ಶಗಳ ಹಿಂದೆ ಅಪಾರ ನೀರಿನಿಂದ ಆವ್ರುತವಾದ ಬೂತಳದಿಂದ ಅಗ್ನಿಪರ‍್ವತವು ಹೊರಚೆಲ್ಲಿದ ಲಾವಾದಿಂದ ಉಂಟಾದ ಶಿಲಾರೂಪದ ದಿಂಬಿನಾಕ್ರುತಿಗಳು ಎಂದು. ಸಮುದ್ರದಡಿಯ ಅಗ್ನಿ ಪರ‍್ವತ ಸಿಡಿದಾಗ ಹೊರಬಂದಂತಹ ಅತ್ಯುಶ್ಣಾಂಶದ ಲಾವಾ, ತತ್ಕ್ಶಣದಲ್ಲಿ ತಣ್ಣನೆಯ ನೀರಿಗೆ ತಾಗಿದ ಕೂಡಲೇ ದುಂಡಗಿನ ದಿಂಬಿನಾಕಾರದ, ಬನ್ ರೂಪದ ರಚನೆಗಳಾಗಿ ಒಂದರ ಮೇಲೊಂದು ಪೇರಿಸಲ್ಪಡುತ್ತವೆ. ಇದರಿಂದಾಗಿ ದಿಂಬಿನಾಕ್ರುತಿಗಳ ತಳಬಾಗವು ಸಮತಟ್ಟಾಗಿ ಮೇಲ್ಬಾಗವು ಮಸೂರಾಕ್ರುತಿಯಲ್ಲಿರುತ್ತದೆ. ಕೊನೆಗೆ ಅವೆಲ್ಲಾ ಒಂದರ ಮೇಲೊಂದಂರಂತೆ ದಿಂಬಿನಾಕ್ರುತಿಗಳಂತೆ ಗೋಚರಿಸುವುದರಿಂದ ದಿಂಬಿನಾಕಾರದ ಶಿಲಾ ಪ್ರವಾಹ ಎಂದೇ ಗುರುತಿಸಲ್ಪಟ್ಟಿದೆ.

ಶಿಲಾವರ‍್ಗಗಳ ಹಳಮೆಯನ್ನು, ಅಂದು ಅವು ರೂಪುಗೊಂಡ ಪರಿಸರವನ್ನು ಗೊತ್ತುಮಾಡಿಕೊಳ್ಳಲು ಜಗತ್ತಿನ ಬೂವಿಗ್ನಾನಿಗಳಿಗೆ ಇದೊಂದು ಅದ್ಯಯನದ ತಾಣವಾಗಿದೆ. ನಮ್ಮ ಅಚ್ಚರಿಗೆ ಕಾರಣವಾಗಿದ್ದು ನಾವು ನಿಂತಿದ್ದ ನೆಲ ಹಾಗೂ ಸುತ್ತಲಿನ ಬಹುಬಾಗವೆಲ್ಲಾ ಅಪಾರವಾದ ಜಲರಾಶಿಯಿಂದಲೋ ಅತವಾ ಸಮುದ್ರದಿಂದ ಆವ್ರುತ್ತವಾಗಿತ್ತು ಎಂಬುದು. ಅಂದಿನ ಪರಿಸರವನ್ನೊಮ್ಮೆ ಮನದಲ್ಲೆ ನೆನೆದು ನಿಟ್ಟುಸಿರು ಬಿಡುವ ಸರದಿ ನಮ್ಮದಾಗಿತ್ತು. ಅದಕ್ಕೆ ವೈಗ್ನಾನಿಕ ಸಾಕ್ಶಿಯೆಂಬಂತೆ ಗೋಚರಿಸುತ್ತಾ ತನ್ನೆಲ್ಲಾ ಕತೆ ಹೇಳುತ್ತಿತ್ತು ಪಿಲ್ಲೋ ಲಾವಾ.

ಪಿಲ್ಲೋ ಲಾವಾ, Pillow Lava 1978 ರಲ್ಲಿ ಬಾರತೀಯ ಬೂ ವೈಗ್ನಾನಿಕ ಸರ‍್ವೇಕ್ಶಣಾ ಇಲಾಕೆಯು ಇದನ್ನು “ರಾಶ್ಟ್ರೀಯ ಬೂ ವೈಗ್ನಾನಿಕ ಸ್ಮಾರಕ” ವೆಂದು ಗೋಶಿಸಿದೆ. ಜಗತ್ತಿನ ಕೆಲವು ಕಡೆ ಈ ವಿಶಿಶ್ಟ ಶಿಲಾರಚನೆಗಳಿದ್ದರೂ ,ತನ್ನ ರಚನೆಯ ಶೈಲಿಯಿಂದಾಗಿ ಇಲ್ಲಿರುವ ಪಿಲ್ಲೊ ಲಾವಾ ಅತ್ಯಂತ ಅಪೂರ‍್ವವಾದುದು ಎಂದು ಗುರುತಿಸಲ್ಪಟ್ಟಿದೆ. ದುರಂತವೆಂದರೆ ಮಾಹಿತಿಪಲಕವನ್ನು ಹೊರತುಪಡಿಸಿ ಇನ್ನಾವುದೇ ಕನಿಶ್ಟ ಮೂಲರಕ್ಶಣೆಯೂ ಸಹ ಇಲ್ಲಿಲ್ಲ. ಗೊತ್ತಿಲ್ಲದೆಯೋ ಅತವಾ ಗೊತ್ತಿದ್ದೊ ಪಿಲ್ಲೋ ಲಾವಾಕ್ಕೆ ಹಾನಿಯಾಗುವ ಆತಂಕ, ನೋಡಲು ಬಂದವರ ಮನದಲ್ಲಿ ಕಾಡದೇ ಇರದು. ಕೋಟ್ಯಾಂತರ ವರ‍್ಶಗಳ ಕತೆಗೆ ಸಾಕ್ಶಿಯಾಗಿರುವ ಶಿಲೆಯನ್ನು ಜತನದಿಂದ ಕಾಯ್ದಿಟ್ಟುಕೊಳ್ಳುವ ಬಗ್ಗೆ ಸಂಬಂದಿಸಿದವರು ಗಮನಹರಿಸಬೇಕಾದ ಅನಿವಾರ‍್ಯತೆಯೂ ಇದೆ. ಮೇಲ್ನೋಟಕ್ಕೆ ಸಾಮಾನ್ಯ ಸ್ತಳವೆಂಬಂತೆ ಕಾಣುವ ಇದು ವಸುಂದರೆಯ ಹುಟ್ಟು ಮತ್ತು ವಿಕಾಸದ ಬಗೆಗಿನ ಅಚ್ಚರಿಯ ತಾಣ.

ತಲುಪುವ ದಾರಿ:

ಬೆಂಗಳೂರು-ಪೂನಾ ರಾಶ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಚಿತ್ರದುರ‍್ಗ ಮತ್ತು ಹಿರಿಯೂರಿನ ಮದ್ಯದಲ್ಲಿದೆ ಮರಡಿಹಳ್ಳಿ. ಚಿತ್ರದುರ‍್ಗದಿಂದ ಬೆಂಗಳೂರಿಗೆ ಹೋಗುವ ದಾರಿಯಲ್ಲಿ 18 ಕಿ.ಮೀ ಚಲಿಸಿ ಗಣೇಶ ದೇವಸ್ತಾನದ ಬಳಿ ಎಡಕ್ಕೆ ತಿರುವು ಪಡೆದು 2 ಕಿ.ಮೀ ಚಲಿಸಿದರೆ ಮರಡಿಹಳ್ಳಿಯ ಪಿಲ್ಲೋ ಲಾವಾ ತಲುಪಬಹುದು.

( ಚಿತ್ರ ಸೆಲೆ: ಬರಹಗಾರರ ಆಯ್ಕೆ )

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. eshwar Hadapada says:

    ಅದ್ಭುತವಾದ ಮಾಹಿತಿ.ನಿಮ್ಮ ಬರಹದಿಂದಲೇ ಗೊತ್ತಾಗಿದ್ದು ಹೀಗೂ ಒಂದು ಸ್ಥಳವಿದೆ ಎಂದು.

  2. Dg Harthi says:

    ಹೌದು ಕರ್ನಾಟಕದ ನಾಲ್ಕು ಭೂ ವೈಜ್ಞಾನಿಕ ಸ್ಮಾರಕಗಳಲ್ಲಿ ಇದು ಒಂದಾಗಿದೆ.ಉಳಿದ ಮೂರು ಸ್ಮಾರಕಗಳೆಂದರೆ ಬೆಂಗಳೂರಿನ ಲಾಲ್ಬಾಗನಲ್ಲಿರುವ ಪೆನಿನ್ಸುಲರ್ ಬಂಡೆ, ಮಲ್ಪೆ ಬಳಿಯ ಸಂತಮೇರಿ ದ್ವಿಪದ ಸ್ತಂಬಾಕಾರದ ಶಿಲೆಗಳು ಹಾಗೂ ಕೋಲಾರದ ಚಿನ್ನದ ಗಣಿ ಮೈದಾನದಲ್ಲಿರುವ ಪೆದ್ದಪಳ್ಳಿಯ ಪೈರೋಕ್ಲಾಸ್ಟಿಕ್ ಬಂಡೆಗಲ್ಲುಗಳು

  3. MANJUNATHA Y says:

    ಗುರುತು ತುಂಬಾ ಚೆನ್ನಾಗಿದೆ

  4. ashu says:

    Thumba adbutavada mahithi nammuru maradihalli helkoloke khushi agutte

ಅನಿಸಿಕೆ ಬರೆಯಿರಿ: