‘ಒಳಿತು ಮಾಡು ಮನುಜ’

– ವೆಂಕಟೇಶ ಚಾಗಿ.

ಒಳ್ಳೆಯತನ, kindness

ಅದೊಂದು ಸುಂದರ ಅರಮನೆ. ಆ ಅರಮನೆಯಂತಹ ಮನೆ ಆ ಪ್ರದೇಶದ ಸುತ್ತಮುತ್ತ ಎಲ್ಲಿಯೂ ಇರಲಿಲ್ಲ . ಅರಮನೆಯಲ್ಲಿ ನಗ ನಾಣ್ಯ ಹೇರಳವಾಗಿ ಇತ್ತು. ಅರಮನೆಯಲ್ಲಿ ಒಬ್ಬ ರಾಜ ಇದ್ದ. ಅವನು ತುಂಬಾ ಲೋಬಿಯಾಗಿದ್ದ. ಜನರಿಂದ ಹೆಚ್ಚು ಹೆಚ್ಚು ಕರ ಸಂಗ್ರಹಿಸಿ ಅರಮನೆಯಲ್ಲಿ ಶೇಕರಿಸಿ ಇಡುತ್ತಿದ್ದ. ಬಂದುಗಳಿಗೆ, ಗೆಳೆಯರಿಗೆ, ಅತಿತಿಗಳಿಗೆ ಉಪಚಾರ ಮಾಡಿದರೆ ತನ್ನ ಸಂಪತ್ತು ಕರಗುತ್ತದೆ ಎಂಬ ಬಾವನೆಯಿಂದ ಅರಮನೆಗೆ ಯಾರನ್ನೂ ಕರೆಯುತ್ತಿರಲಿಲ್ಲ. ಸೇವಕರಿಗೆ ಕನಿಶ್ಟ ಸಂಬಳವನ್ನು ನೀಡುತ್ತಿದ್ದ.

ರಾಜನ ಬಗ್ಗೆ ಎಲ್ಲರಿಗೂ ಅಸಮಾದಾನ ಇದ್ದೇ ಇತ್ತು. ಆದರೂ “ರಾಜಾ ಪ್ರತ್ಯಕ್ಶ ದೇವತಹ” ಎನ್ನುವಂತೆ ರಾಜನಿಗೆ ಮರ‍್ಯಾದೆ ಕೊಡುತ್ತಿದ್ದರು. ವೈರಿಗಳಿಂದ ರಾಜನನ್ನು ರಕ್ಶಿಸುತ್ತಿದ್ದರು. ಹೀಗಿರುವಾಗ ರಾಜನಿಗೆ ಅದಾವುದೋ ಗಂಬೀರ ಕಾಯಿಲೆ ತಗುಲಿ ನರಳತೊಡಗಿದನು. ರಾಜನ ಮೇಲಿನ ಅಸಮಾದಾನದಿಂದಾಗಿ ಮಂತ್ರಿಗಳು ಮತ್ತು ಸೇವಕರು ರಾಜನನ್ನು ನೋಡಿಕೊಳ್ಳಲು ನಿರ‍್ಲಕ್ಶಿಸಿದರು. ರಾಜ ಹಣ ಕೊಡುತ್ತೇನೆಂದರೂ ಒಳ್ಳೆಯ ವೈದ್ಯರು ಅವನಿಗೆ ಚಿಕಿತ್ಸೆ ನೀಡಲು ಮುಂದೆ ಬರಲಿಲ್ಲ. ಕೊನಗೆ ರಾಜ ಕಾಯಿಲೆ ಹಾಗು ಒಂಟಿತನದ ನೋವಿನಿಂದ ನರಳುತ್ತಾ ಸತ್ತುಹೋದ.

ಇಲ್ಲಿ ರಾಜ ಕೂಡಿಟ್ಟದ್ದು ಸಂಪತ್ತು ಮಾತ್ರ. ಸಂಪತ್ತೇ ಶ್ರೇಶ್ಟ ಎಂಬ ಬಾವನೆ ರಾಜನಲ್ಲಿತ್ತು. ಆದರೆ ಅವನ ಕಶ್ಟ ಕಾಲದಲ್ಲಿ ತಾನು ಕೂಡಿಟ್ಟ ಸಂಪತ್ತು ಅವನ ಸಹಾಯಕ್ಕೆ ಬರಲಿಲ್ಲ. ಆತನ ನಡವಳಿಕೆಯಿಂದ ದೂರಾದ ಜನ ಅವನ ಹತ್ತಿರ ಸುಳಿಯಲಿಲ್ಲ. ಕೊನೆಗೆ ತಾನು ಕೂಡಿಟ್ಟ ಸಂಪತ್ತನ್ನೆಲ್ಲ ಬಿಟ್ಟು ಹೋಗಬೇಕಾಯಿತು.

ನಮ್ಮ ಜೀವನವೇ ರಾಜನಂತೆ ಆಗಿದೆ. ಜೀವನ ಪರ‍್ಯಂತ ಜೀತದಾಳುಗಳಂತೆ ದುಡಿಯುವ ಕಾರ‍್ಕಾನೆಗಳಾಗಿದ್ದೇವೆ. ಪ್ರೀತಿ, ವಾತ್ಸಲ್ಯ, ಬಂದುತ್ವ, ಸ್ನೇಹ , ಸಹೋದರತ್ವ ಮುಂತಾದ ಮಾನವೀಯ ಗುಣಗಳನ್ನು ಕ್ಶೀಣವಾಗಿಸಿಕೊಳ್ಳುತ್ತಿದ್ದೇವೆ. ಬದುಕಲು ಗಳಿಕೆ ಅವಶ್ಯಕ. ಗಳಿಕೆ ಎಂದರೆ ಕೇವಲ ಹಣ ಮಾತ್ರ ಅಲ್ಲ. ಮನಸ್ಸುಗಳ ಗಳಿಕೆಯೂ ಸೇರಿದೆ. ದುಡಿಯುವುದರಿಂದ ಹಣ ಗಳಿಕೆಯಾದರೆ ಮಾನವೀಯ ಮೌಲ್ಯಗಳಿಂದ ಮನಸ್ಸುಗಳ ಗಳಿಕೆಯಾಗುತ್ತದೆ. ಇಲ್ಲಿ ಎರಡೂ ಅವಶ್ಯಕ. ಹಣ ಗಳಿಕೆಯಲ್ಲಿ ಲೋಬ ಹೆಚ್ಚಾದರೆ ಅದು ನಕಾರಾತ್ಮಕ ದಿಕ್ಕಿನೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಆದರೆ ಮನಸುಗಳ ಗಳಿಕೆಯು ಹ್ರುದಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ.

ಶ್ರೀಮಂತನೊಬ್ಬ ತನ್ನ ಬಂಗಲೆಯಲ್ಲಿ ಒಂಟಿಯಾಗಿ ಬದುಕಿ ಸತ್ತರೂ ಅದೇ ಮನೆಯಲ್ಲಿ ಶವವಾಗಿ ಕೆಲವು ದಿನಗಳ ನಂತರ ಹೇಗೋ ಹೊರಜಗತ್ತಿಗೆ ವಿಶಯ ತಿಳಿದಂತಹ ಹಲವು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಹಾಗೆಯೇ ಒಬ್ಬ ಹ್ರುದಯವಂತನ ಎಲ್ಲಾ ಕಾರ‍್ಯಗಳಲ್ಲಿ ಜನಸಾಗರ ಸೇರುವುದನ್ನು ನೋಡಿದ್ದೇವೆ. ಬಾರೀ ಪ್ರವಾಹದಿಂದಾಗಿ ಬಂಗಲೆಯೊಂದು ಕೊಚ್ಚಿಕೊಂಡು ಹೋಗುವ ಹಾಗೆ ಸಂಪತ್ತು ಕಾಲಿಯಾಗಿ ಬೀದಿಗೆ ಬರುವ ಪರಿಸ್ತಿತಿ ಉಂಟಾಗಬಹುದು. ಆದರೆ ಹ್ರುದಯ ಸಂಪತ್ತು ಎಂದಿಗೂ ಕರಗುವುದಿಲ್ಲ ನಾಶವಾಗುವುದಿಲ್ಲ. ಇಂದಿನ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳ ಬೆಳವಣಿಗೆಯ ಅವಶ್ಯಕತೆ ತುಂಬಾ ಇದೆ. ಮಾನವ ದರ‍್ಮ ಪರಿಸರದ ಉಳಿವಿಗೆ ತೀರ ಅವಶ್ಯ.

ಹ್ರುದಯ ಶ್ರೀಮಂತಿಕೆ ಬೆಳೆಯಲಿ; ಮಾನವ ದರ‍್ಮ ಉಳಿಯಲಿ.

(ಚಿತ್ರ ಸೆಲೆ: pixabay.com)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.