ಆತ್ಮಶ್ರದ್ದೆಯ ಹಾದಿಯಲ್ಲಿ…

– ಡಿ. ಜಿ. ನಾಗರಾಜ ಹರ‍್ತಿಕೋಟೆ.

ಜೆನ್, ಶ್ರದ್ದೆ, zen, dedication

ಜೆನ್ ಕತೆಗಳೇ ಹೀಗೆ; ಕೆಲವೇ ಶಬ್ದಗಳಲ್ಲಿ ಅಗಾದವಾದುದನ್ನು ಅರ‍್ತೈಸುತ್ತವೆ.

ಒಮ್ಮೆ ಜೆನ್ ಗುರುವಿನ ಬಳಿ ಅವರ ಶಿಶ್ಯಂದಿರು ಪ್ರಶ್ನೆಗಳ ಸುರಿಮಳೆಗರೆಯುತ್ತಾರೆ.

ಮೊದಲನೇ ಶಿಶ್ಯ: ನಿಜವಾದ ಸಾದನೆಗೆ ದಾರಿ ಯಾವುದು?
ಎರಡನೇ ಶಿಶ್ಯ: ಗ್ನಾನೋದಯಕ್ಕೆ ಮಾರ‍್ಗ ಯಾವುದು..?
ಮೂರನೇ ಶಿಶ್ಯ: ಅಂತರಂಗದ ಪ್ರಶಾಂತತೆಗೆ ದಾರಿ ಯಾವುದು…?

ಗುರುಗಳು: (“ಲೆಕ್ಕವಿರದಶ್ಟು ಪ್ರಶ್ನೆಗಳು…” ಎಂದು ಗುನುಗುತ್ತಾ) ಶಿಶ್ಯಂದಿರೇ ಇಲ್ಲಿ ಕೇಳಿ, ನಿಮ್ಮ ಮುಂದಿರುವುದನ್ನು ನೀವು ಗಮನಿಸದೇ ಹೋದರೆ ನಾನು ನಿಮಗೆ ಮಾರ‍್ಗ ತೋರಿಸಲಾರೆ.

ಹೌದು, ನಿಜವಾಗಿಯೂ ಹೇಳಬೇಕೆಂದರೆ ಆತ್ಮಶ್ರದ್ದೆಯಿಂದ ನಮ್ಮ ಮುಂದಿರುವುದನ್ನು ಗಮನಿಸಿ ನಡೆದಾಗ ಮಾತ್ರ ಮಾರ‍್ಗಗಳು ಉಂಟಾಗುತ್ತವೆ.

ನೀನೊಮ್ಮೆ ಶ್ರದ್ದೆಯ ಹಾದಿಯಲಿ
ಪಯಣಿಸಿ ನೋಡು
ಗುನುಗುವೆ ನೀ ಬದುಕಲಿ
ಗೆಲುವಿನ ಹಾಡು

ಸಾಮಾನ್ಯನನ್ನು ಸಾದಕನಾಗಿಸಬಲ್ಲ, ಬದುಕಿಗೊಂದು ಚೈತನ್ಯಪೂರ‍್ಣ ಅರ‍್ತ ಒದಗಿಸಬಲ್ಲ, ಅಂತರಂಗದ ಶಕ್ತಿಯೇ ಆತ್ಮಶ್ರದ್ದೆ. ಜಗತ್ತಿನ ಮಹಾಪುರುಶರ ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲಾಗಿ ಅವರ ಅದ್ಬುತ ಕಾರ‍್ಯಶಕ್ತಿಗೆ ಪ್ರೇರಣೆಯಾಗಿ ಕೆಲಸ ಮಾಡಿದುದು ಈ ಆತ್ಮಶ್ರದ್ದೆಯೇ. ಇಂದು ಅಸಾಮಾನ್ಯರೆನಿಸಿಕೊಂಡವರು ಸಾದನೆಯ ಶಿಕರ ತಲುಪಿದ್ದರೆ ಅದಕ್ಕೆ ಅವರು ತಮ್ಮ ಜೀವನದ ಪಯಣದಲ್ಲಿ ನಿರಂತರವಾಗಿ ರೂಡಿಸಿಕೊಂಡ ಶ್ರದ್ದೆಯೇ ಕಾರಣ. ಹಾಗೆಯೇ ಆತ್ಮಶ್ರದ್ದೆಯ ಕೊರತೆ ಮನುಶ್ಯನನ್ನು ಬದುಕಿನಿಂದ ವಿಮುಕನನ್ನಾಗಿಸುತ್ತದೆ. ಎಶ್ಟೇ ಪ್ರತಿಬಾವಂತನಾಗಿದ್ದರೂ ಆತ್ಮಶ್ರದ್ದೆಯ ಅಬಾವವಿದ್ದರೆ ಅವನ ಬುದ್ದಿವಂತಿಕೆ ಪ್ರತಿಬೆಗಳೆಲ್ಲವೂ ಬೆಳಕಿಗೆ ಬಾರದೆ, ಉಪಯೋಗಕ್ಕೆ ಬಾರದೆ ನಿರರ‍್ತಕ ಎನಿಸಿಕೊಂಡು ಬಿಡುತ್ತವೆ.

ಶ್ರದ್ದೆಯೆಂದರೆ ಗಮನಹರಿಸುವಿಕೆ, ತೊಡಗಿಸಿಕೊಳ್ಳುವಿಕೆ. ಎಲ್ಲೆಲ್ಲೋ ಹರಿದಾಡುವ ಮನಸ್ಸನ್ನು ಒಂದೆಡೆ ತಂದು ಕೂರಿಸಿಕೊಳ್ಳುವಿಕೆ. ಇಲ್ಲಿ ದ್ರುಡತೆಯಿದೆ, ಬದ್ದತೆಯಿದೆ, ಏಕಾಗ್ರತೆಯಿದೆ, ನಿರಂತರತೆಯಿದೆ, ಆಲಸಿತನವನ್ನು ಹೊಡೆದೋಡಿಸುವ ಕ್ರಿಯಾಶೀಲತೆಯಿದೆ, ಎಲ್ಲಕ್ಕಿಂತ ಮಿಗಿಲಾಗಿ ಬದುಕಿಗೊಂದು ದಾರಿ ತೋರುವ ಅಂತರಂಗದ ಗುರುವಿದೆ. ಇಂತಹ ಆತ್ಮಶ್ರದ್ದೆ, ಪ್ರಮಾಣಿಕತೆಯಿಂದ ಮಾಡಿದ ಅತಿ ಸಣ್ಣ ಕೆಲಸಕ್ಕೂ ಶ್ರೇಶ್ಟ ಪ್ರತಿಪಲ ದೊರಕುತ್ತದೆ. ಮಹಾತ್ಮರೆನಿಸಿಕೊಂಡವರು ತಾವು ಮಾಡುವ ಸರಳಾತಿಸರಳ ಕೆಲಸಗಳಲ್ಲೆ ಶ್ರದ್ದೆ-ಶ್ರೇಶ್ಟತೆ ತೋರಿದವರಾಗಿದ್ದಾರೆ.

ನಾವು ಕೈಗೊಳ್ಳುವ ಪ್ರಾರ‍್ತನೆ, ಪೂಜೆ, ಮೌಲ್ಯಯುತ ಸಂಸ್ಕಾರಗಳು ಆತ್ಮಶ್ರದ್ದೆಯ ಪ್ರತೀಕವೇ ಆಗಿವೆ. ಅವು ನಮ್ಮ ಮನಸ್ಸನ್ನು ಬಲಯುತವನ್ನಾಗಿಸುತ್ತವೆ. ಗುರಿಯೆಡಗಿನ ಪಯಣವನ್ನು ಸ್ವಲ್ಪವೂ ಅಲುಗಾಡದಂತೆ ಪೂರಕಶಕ್ತಿಯಾಗಿ ಕೆಲಸ ಮಾಡುತ್ತವೆ. ನಮ್ಮ ಜೀವನದಲ್ಲಿ ನಾವು ತೋರಿದ ಶ್ರೇಶ್ಟತೆಗೆ ಆತ್ಮಶ್ರದ್ದೆಯೂ, ಹಿನ್ನೆಡೆಗೆ ಶ್ರದ್ದೆಯ ಕೊರತೆಯೂ ಕಾರಣವಾಗಿದೆ. ನಮ್ಮ ಮನದಾಳದಲ್ಲಿ ಅಪಾರವಾದ ಶಕ್ತಿಯಿದೆ. ಆತ್ಮಶ್ರದ್ದೆಯ ಮೂಲಕ ಅದನ್ನು ಜಾಗ್ರುತಗೊಳಿಸೋಣ. ಹಾಗಾದರೆ ಮತ್ತೇಕೆ ತಡ? ನಮ್ಮ ಅಂತರಂಗದ ಕಜಾನೆಯಲ್ಲಿ ಮೊಳಕೆಯೊಡೆಯುತ್ತಿರುವ ಎಶ್ಟೋ ವಿಚಾರದಾರೆಗಳು, ಆರಂಬಿಸಬೇಕೆಂದಿರುವ ಯೋಜನೆಗಳು, ಪಾಲಿಗೆ ಬಂದಿರುವ ಕೆಲಸಗಳು ಇವುಗಳಿಗೆಲ್ಲಾ ಶ್ರದ್ದೆಯ ಹಾದಿ ತೋರೋಣ. ನಮ್ಮೆಲ್ಲಾ ಕೆಲಸಗಳ ನಿಲುಗಡೆಗೆ ನೆಪ ಹೇಳುವುದನ್ನು ನಿಲ್ಲಿಸೋಣ.

ನಂಗೊತ್ತು ಕುಂಟುನೆಪವೇ
ಹೊಂಚುಹಾಕಿ ಸಂಚನೂಡಿ
ಹಿಂದೆ ಹಿಂದೆ ನೂಕುತಿರುವೆ.
ನಿನ್ನನೊಮ್ಮೆ ಹಿಂದೆ ನೂಕಿ
ಮುಂದೆ ಮುಂದೆ ಸಾಗಲು
ಎನ್ನ ಗುರಿಯ ಕಾಣಲು
ಶ್ರದ್ದೆಯುಂಟು ನನ್ನ ಬಳಿ

ಹೌದು ನಾವೆಲ್ಲಾ ಶ್ರದ್ದೆ, ಬದ್ದತೆಯಿಂದ  ಕೆಲಸ ಮಾಡೋಣ. ಇದು ನಮ್ಮ ಬದುಕಿಗೊಂದು ಶೋಬೆಯಾಗಲಿ, ನಮ್ಮ ಬದುಕಿಗೊಂದು ಮೌಲ್ಯವಾಗಲಿ.

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Thriveni L says:

    ಆತ್ಮಶ್ರದ್ಧೆ ಬಡಿದೆಬ್ಬಿಸುವ ಬರಹ. ಉತ್ತಮವಾಗಿ ಮೂಡಿ ಬಂದಿದೆ.

  2. MOHAN KUMAR says:

    ಬರಹ ಚೆನಾಗಿ ಮೂಡಿಬಂದಿದೆ

ಅನಿಸಿಕೆ ಬರೆಯಿರಿ: