ಮಹೀಂದ್ರಾದ ಶಾರ‍್ಕ್ ಮೀನು – ಮರಾಜೊ

– ಜಯತೀರ‍್ತ ನಾಡಗವ್ಡ.

Mahindra Marazzon, ಮಹಿಂದ್ರಾ ಮರಾಜೋ

ಮೀನಿನ ಹೆಜ್ಜೆ ಗುರುತಿಸುವುದು ಕಶ್ಟ ಎನ್ನುವ ಮಾತು ನಮ್ಮೆಲ್ಲರಿಗೆ ಗೊತ್ತೇ ಇದೆ. ಮೀನಿನ ಹೆಜ್ಜೆ ಗುರುತು ಕಂಡು ಹಿಡಿಯಲು ಆಗದೇ ಇರಬಹುದು, ಆದರೆ ಅದರ ಮೈಮಾಟದಂತೆ ವಸ್ತುಗಳನ್ನು ತಯಾರಿಸಬಹುದಲ್ಲವೇ? ಬಂಡಿಯೊಂದನ್ನೇ ಮೀನಿನಂತೆ ತಯಾರಿಸಿದರೆ? ಕಡಲಿನ ಹುಲಿಯೆಂದೇ ಹೆಸರುವಾಸಿಯಾಗಿರುವ ಶಾರ‍್ಕ್ ಮೀನು ಬೇಟೆ ಹಿಡಿಯಲು ಸದ್ದಿಲ್ಲದೇ, ಸರಾಗವಾಗಿ ಬರುವುದು. ಇದರಿಂದ ಪ್ರೇರಣೆ ಪಡೆದು ಈ ಶಾರ‍್ಕ್ ಮೀನಿನ ಮೈಮಾಟ ಬಳಸಿಕೊಂಡು ಮಹೀಂದ್ರಾ ಮತ್ತು ಮಹೀಂದ್ರಾ ಕೂಟದವರು ಇದೀಗ “ಮರಾಜೊ” (Marazzo) ಹೆಸರಿನ ಬಂಡಿಯನ್ನು ಬಿಡುಗಡೆಗೊಳಿಸಿದ್ದಾರೆ.

ಈಡುಗಾರಿಕೆಯ ಕುರಿತು:

ಮರಾಜೊ ಬಂಡಿಯ ಈಡುಗಾರಿಕೆಯಲ್ಲಿ(Design) ಮಹೀಂದ್ರಾ ಬಾರತದ ಅರಕೆಮನೆ, ಮಹೀಂದ್ರಾ ಅಮೇರಿಕಾದ ಅರಕೆಮನೆ(Research Centre) ಮತ್ತು ಪಿನಿನ್ ಪರಿನಾ(Pinin Farina) ಸ್ಟುಡಿಯೋ ಸೇರಿ ಕೆಲಸ ಮಾಡಿವೆ. ಕಳೆದ 4 ವರುಶ ಮಹೀಂದ್ರಾದ ನೂರಾರು ಬಿಣಿಗೆಯರಿಗರು(Engineers) ಇದಕ್ಕೆ ಬೆವರು ಸುರಿಸಿ, ಈ ಶಾರ‍್ಕ್ ಮೀನು ಹೋಲುವ ಬಂಡಿಯನ್ನು ತಯಾರಿಸಿದ್ದಾರೆ. ಈ ಹಮ್ಮುಗೆಗೆ ತಗುಲಿದ್ದು 200 ಮಿಲಿಯನ್ ಡಾಲರ್ ಹಣವಂತೆ! ಬಿಣಿಗೆ, ಬಂಡಿಯ ಮೈಮಾಟ, ಅಡಿಗಟ್ಟು(Chassis) ಹೀಗೆ ಹಲವು ಹೊಸತುಗಳನ್ನು ಹೊತ್ತು ತಂದಿರುವ ಮರಾಜೊ ತನ್ನ ಹೆಸರು ಪಡೆದಿದ್ದು ಸ್ಪೇನ್ ನಾಡಿನಿಂದ. ಸ್ಪ್ಯಾನಿಶ್ ನುಡಿಯಲ್ಲಿ ಮರಾಜೊ ಎಂದರೆ ಶಾರ‍್ಕ್ ಎಂದರ‍್ತ. ಆಟೋಟದ ಬಳಕೆಯ ಬಂಡಿಗಳಲ್ಲಿ ಮುಂಚೂಣಿ ಸ್ತಾನ ಕಾಯ್ದುಕೊಂಡಿರುವ ಮಹೀಂದ್ರಾ ಕೂಟ ಇದೀಗ, 7-8 ಮಂದಿ ಕೂತು ಸಾಗಿಸಬಲ್ಲ ಹಲಬಳಕೆಯ ಬಂಡಿಗಳ ಗುಂಪಿನಲ್ಲೂ ತನ್ನ ಗುರುತು ಮೂಡಿಸುವತ್ತ ಸಾಗಿದೆ. ಅದಕ್ಕೆ ಉತ್ತರವೆಂಬಂತೆ ಮರಾಜೊ ಬಂಡಿ ನಮ್ಮ ಮುಂದಿದೆ. ಮಹೀಂದ್ರಾದವರ ಈ ಶಾರ‍್ಕ್ ಮೀನು ಹೇಗಿರಲಿದೆ ನೋಡೋಣ ಬನ್ನಿ.

ಬಿಣಿಗೆ ಮತ್ತು ಸಾಗಣಿ(Engine and Transmission):

ಮರಾಜೊ ಬಂಡಿಗೆಂದೇ ಮಹೀಂದ್ರಾದವರು ಹೊಸ ಬಿಣಿಗೆಯೊಂದನ್ನು ಹೊರತಂದಿದ್ದಾರೆ. 1.5ಲೀಟರ್ ಅಳತೆಯ -4 ಉರುಳೆಯ ಈ ಡೀಸೆಲ್ ಬಿಣಿಗೆ, 121 ಕುದುರೆಬಲ ಕಸುವು ನೀಡುವಂತ ಬಲಶಾಲಿ. 300 ನ್ಯೂಟನ್ ಮೀಟರ್ ತಿರುಗುಬಲ(Torque) ಉಂಟುಮಾಡುವ ಮೂಲಕ ಬಲು ಗಟ್ಟಿಯಾದ ಬಿಣಿಗೆಯನ್ನು ಮರಾಜೊ ಪಡೆದಿದೆ. ಬಿಣಿಗೆಗೆ ಹೊಸ ಬಗೆಯ ಗಾಳಿದೂಡುಕಗಳನ್ನು(Turbocharger) ಜೋಡಿಸಿದ್ದು, ಇದರಿಂದ ಕಡಿಮೆ ವೇಗದಲ್ಲೂ ಹೆಚ್ಚಿನ ತಿರುಗುಬಲ ಉಂಟು ಮಾಡಬಲ್ಲದು. 6 ವೇಗದ ಓಡಿಸುಗನಿಡಿತದ ಸಾಗಣಿ(6-speed manual transmission), ಕಡಿಮೆ ಸದ್ದುಂಟು ಮಾಡುವಂತ ಬಂಡಿ ತಯಾರಿಸಲು ನೆರವಿಗೆ ಬಂದಿದೆಯೆಂದು ಮಹೀಂದ್ರಾ ಕೂಟದವರು ಹೇಳಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಪೆಟ್ರೋಲ್ ಬಿಣಿಗೆ ಮತ್ತು ತನ್ನಿಡಿತದ ಸಾಗಣಿಗಳ(Automatic Transmission) ಮಾದರಿಗಳು ಬರಲಿರುವುದನ್ನು ಕಚಿತಪಡಿಸಿದೆ ಮಹೀಂದ್ರಾ.

ಮೈಮಾಟ:

ಮೊದಲೇ ತಿಳಿಸಿದಂತೆ ಶಾರ‍್ಕ್ ಮೀನೇ ಮರಾಜೊ ಬಂಡಿಯ ಮೈಮಾಟ. ಮಂಜಿನ ದೀಪಗಳು, ಮುಂದೀಪ-ಹಿಂದೀಪಗಳು, ಬಂಡಿ ಮುಂದಿನ ಮುನ್ಕಂಬಿ ತೆರೆ ಹೀಗೆ ಎಲ್ಲವೂ ಶಾರ‍್ಕ್ ಮೀನಿನ ರೆಕ್ಕೆ, ಮೊಗ ಹೋಲುವಂತೆ ಕಾಣುತ್ತವೆ. ಮುನ್ಕಂಬಿ ತೆರೆಗೆ ಜೋಡಿಸಿದ ಕ್ರೋಮ್ ಇನ್ಸರ‍್ಟ್‌ಗಳು ಶಾರ‍್ಕಿನ ಹಲ್ಲಿನಂತೆ ಕಾಣುತ್ತವೆ. ಬಂಡಿಯ ಮೇಲೆ ನೆಟ್ಟಿರುವ ನುಣುಪಾದ ಅಲೆಪಿಡಿ ಕೂಡ ಶಾರ‍್ಕ್‌ನ ರೆಕ್ಕೆಯಂತಿದೆ. ಒಂದೊಮ್ಮೆ ಮರಾಜೊ ಬಂಡಿ ಟೊಯೋಟಾದ ಇನ್ನೋವಾದಂತೆ ಕಂಡರೂ, ಬಂಡಿಯ ಹೊರನೋಟ ಬಲು ಸೊಗಸಾಗಿ ಮತ್ತು ಅಚ್ಚುಕಟ್ಟಾಗಿ ಮಾಡಲಾಗಿದೆ. 17 ಇಂಚಿನ ದೊಡ್ಡದಾದ ಗಾಲಿ ಕಮಾನುಗಳು, ಉಕ್ಕಿನ ಈ ಬಂಡಿಗೆ ತಕ್ಕುದಾಗಿ ಕಾಣುತ್ತವೆ. ಅಗಲವಾಗಿ ಚಾಚಿಕೊಳ್ಳುವ ಬಂಡಿಯ ಕನ್ನಡಿಗಳು ಮರಾಜೊಗೆ ಹೇಳಿಮಾಡಿಸಿದಂತಿವೆ. ಇದೇ ಮೊದಲ ಬಾರಿ ಮಹೀಂದ್ರಾ ಕೂಟದವರು ಬೆರಕೆಯ ಅಡಿಗಟ್ಟನ್ನು(Hybrid Chassis) ಈ ಬಂಡಿಗೆಂದು ಬಳಸಿದ್ದಾರೆ. 2760 ಮಿ.ಮೀ.ಗಳ ಗಾಲಿಗಳ ನಡುವಿನ ದೂರ, 4585 ಮಿ.ಮೀ.ಗಳ ಉದ್ದ, 1866 ಮಿ.ಮೀ.ಗಳಶ್ಟು ಅಗಲ ಮತ್ತು 1774 ಮಿ.ಮೀ.ಗಳ ಎತ್ತರ-ಇವು ಮರಾಜೊ ಬಂಡಿಯ ಪ್ರಮುಕ ಆಯಗಳು.

ನುಣುಪಾದ ಹೊರ ಮೈಕಟ್ಟಿನಿಂದ ಗಮನ ಸೆಳೆಯುವ ಮರಾಜೊ, ಒಳನೋಟದಲ್ಲೂ ಸಾಕಶ್ಟನ್ನು ಹೊತ್ತು ತಂದಿದೆ. ಕಪ್ಪು ಮತ್ತು ಬೀಜ್(Beige) ಬಣ್ಣದಿಂದಾದ ಬಂಡಿಯ ಒಳನೋಟ ಗುಣಮಟ್ಟದ್ದಾಗಿದೆ. ಚೆಂದವಾಗಿ ಜೋಡಿಸಲ್ಪಟ್ಟ ತೋರುಮಣೆ(Dash board) ಇದೆ. 7 ಇಂಚಿನ ಸೋಕುತೆರೆಯ(Touchscreen) ತಿಳಿನಲಿ ಏರ‍್ಪಾಟು(Infotainment System) ಹಾಡು, ತಲುಪುದಾರಿ(Navigation) ಮುಂತಾದವುಗಳನ್ನು ಪಡೆದಿದೆ. ಇದರ ಜೊತೆ ಅಂಡ್ರಾಯ್ಡ್ ಆಟೋದೊಂದಿಗೆ ಸೇರಿಸಬಹುದಾದ ಏರ‍್ಪಾಟನ್ನು ಒದಗಿಸಲಾಗಿದೆ. ಆಪಲ್ ಕಾರ್ ಪ್ಲೇ ಮುಂದಿನ ದಿನಗಳಲ್ಲಿ ಬರಬಹುದೇನೋ! ಮುಂಬದಿಯ ಓಡಿಸುಗರಿಗೆ ಕೈ-ಕಾಲು ಚಾಚಲು ಸಾಕಶ್ಟು ಜಾಗ ಒದಗಿಸಲಾಗಿದೆ. ಹಲಬಳಕೆಯ ಕಾರಿಗೆ ತಕ್ಕಂತೆ ಬಂಡಿಯಲ್ಲಿ ಸರಕು ಸೇರಿಸಿಡಲು ಹಲವು ಸರಕುಗೂಡುಗಳನ್ನು(Glove box) ಕೊಡಮಾಡಿದ್ದಾರೆ. ಮುಂಬದಿಯಲ್ಲಿ ನಾಲ್ಕು ಕಪ್ ಸೇರುವೆಗಳು(Cup Holders), ತೋರುಮಣೆಯ ಮೇಲ್ಬಾಗದಲ್ಲಿ ಅಗಲದ ಸರಕುಗೂಡು ನೀಡಲಾಗಿದೆ. ತಂಪುಕುಡಿಗೆಗಳನ್ನು(Cold Drinks) ಒಯ್ಯಲು ದೊಡ್ಡದಾದ ಸರಕುಗೂಡು ಸಹ ಮರಾಜೊನಲ್ಲಿರಲಿದೆ. ಬಂಡಿಯ ಎಲ್ಲ ಬಾಗಿಲ ಸಂದುಗಳಲ್ಲಿ 1 ಲೀಟರ್ ಬಾಟಲ್ ಇಡಬಹುದಾದಂತ ಸೇರುವೆಗಳು ಕಂಡುಬರುತ್ತವೆ.

ಬಂಡಿಯ ಮುಂಬಾಗದ ನಡುಕಟ್ಟೆಯಲ್ಲಿ(Centre Console) 2 USB ಕಿಂಡಿಗಳನ್ನು ನೀಡಲಾಗಿದೆ. ಇದೇ ಮೊಟ್ಟಮೊದಲ ಬಾರಿಗೆ ಕೈ ತಡೆತದ ಗುಣಿಯನ್ನು(Hand Brake Lever) ಬಾನೋಡದಲ್ಲಿ ಕಂಡುಬರುವ ಗುಣಿಯಂತೆ(Throttle) ಮಾಡಲಾಗಿದೆ. ಹೊಸದಂತೆ ಇದು ಕಂಡು ಬಂದರೂ, USB ಕಿಂಡಿಗೆ ತಂತಿ ಜೋಡಿಸಲು ಕೈಚಾಚಿದಾಗ ಇದು ಕೈಗೆ ತಗುಲಿ ಕಿರಿಕಿರಿ ಎನ್ನಿಸದಿರದು. ಬಂಡಿಯ ಮದ್ಯದ ಸಾಲಿನ ಮೇಲ್ಬಾಗದಲ್ಲಿ ಜೋಡಿಸಲ್ಪಟ್ಟ ಕುಳಿರ‍್ಗಾಳಿ ಕಿಂಡಿಗಳು(Air Conditioner Vents) ಎಲ್ಲರ ಮೆಚ್ಚುಗೆ ಪಡೆದಿವೆ. ಮುಂದಿನ ಸಾಲಿನಲ್ಲಿರುವಂತೆ ನಡು ಸಾಲಿನಲ್ಲೂ ತಕ್ಕುದಾಗಿ ಜೋಡಿಸಿದ ಕೂರುಮಣೆ(Seat), ಕೈ-ಕಾಲು, ತಲೆ ಚಾಚಲು ಹೇರಳವಾದ ಜಾಗ ಕಂಡು ಬರುತ್ತದೆ. ಇಲ್ಲಿ ಮಹೀಂದ್ರಾ ಒಳ್ಳೆಯ ಸ್ಕೋರ್ ಮಾಡಿದೆ ಎಂದು ಹೇಳಬಹುದು. ಕೊನೆಯ ಸಾಲಿನ ಕೂರುಮಣೆ ನೇರವಾಗಿದ್ದು ಬೆನ್ನು ಒರಗಿಸಿ ಕೂರಲು ಕಶ್ಟವಾದರೂ ಇದೇ ಗುಂಪಿಗೆ ಸೇರುವ ಇತರೆ ಬಂಡಿಗಳಿಗಿಂತ ಹೆಚ್ಚಿನ ಜಾಗ ಹೊಂದಿದೆ. ಮರಾಜೊ ಬಂಡಿ ಸುಯ್ ಅಂಕೆ ಏರ‍್ಪಾಟು(Cruise Control), ಗಾಳಿಪಾಡು ಹಿಡಿತದಲ್ಲಿಡುವ ಏರ‍್ಪಾಟು (Auto Climate Control) ಕೂಡ ಹೊಂದಿರಲಿದೆ.

ಬಂಡಿಯ ಕಾಪಿನ ವಿಶಯಕ್ಕೆ ಬಂದರೆ, ಬಂಡಿಯ ಎಲ್ಲ ಮಾದರಿಗಳಲ್ಲೂ 2 ಗಾಳಿ ಚೀಲಗಳನ್ನು(Air Bag), ಕದಲ್ಗಾಪು(Immobilizer), ತಟ್ಟೆ ತಡೆತ(Disc Brake) ಮತ್ತು ಸಿಲುಕದ ತಡೆತದ ಏರ‍್ಪಾಟು(Anti-Lock Brake System) ಅಳವಡಿಸಲಾಗಿದೆ. ಕೆಲವು ಮೇಲ್ಮಟ್ಟದ ಮಾದರಿಗಳಲ್ಲಿ ನಿಲುಗಡೆಗೆ ನೆರವಾಗುವ ಅರಿವುಕಗಳು(Parking Sensors) ಮತ್ತು ನಿಲುಗಡೆಗೆ ಹಿಂಬದಿಯ ತಿಟ್ಟಕಗಳನ್ನು(Reverse Parking Camera) ನೀಡಲಾಗಿದೆ. ಇನ್ನೊಂದು ವಿಶೇಶವೆಂದರೆ, ಬಂಡಿ ಅವಗಡ/ಅಪಾಯದಲ್ಲಿ ಸಿಲುಕಿದರೆ, ಬಂಡಿಯ ವಿಶೇಶ ಏರ‍್ಪಾಟಿನ ಮೂಲಕ ನೆರವು ಕೇಂದ್ರಗಳಿಗೆ ಕರೆ ಹೋಗುತ್ತದೆ. ಇದನ್ನು “ಎಮರ‍್ಜೆನ್ಸಿ ಕಾಲ್” ಏರ‍್ಪಾಟೆಂದು(Emergency Call) ಹೆಸರಿಸಲಾಗಿದೆ. ಗುದ್ದಾಟದಲ್ಲಿ ಹಾಳಾಗದಂತೆ ಗಟ್ಟಿಯಾದ ಉಕ್ಕಿನಿಂದ ಮರಾಜೊನ ಅಡಿಗಟ್ಟು ತಯಾರಿಸಲಾಗಿದೆಯಂತೆ. ಇತ್ತಿಚೀಗೆ ಬಾರತದ ಬಂಡಿಗಳನ್ನೂ ಗುದ್ದಾಟದ ಒರೆತಕ್ಕೆ(Crash Test) ಹಚ್ಚಿ ನೋಡಲಾಗುತ್ತಿದೆ. ಈ ಒರೆತದಲ್ಲಿ ಹೆಚ್ಚಿನ ಅಂಕ ಪಡೆದು, ಸುಬದ್ರ ಬಂಡಿ ಎನ್ನಿಸಿಕೊಳ್ಳಬಹುದು ಮರಾಜೊ. ಮಳೆಗಾಲದಲ್ಲಿ ನೆರವಾಗಲು ಬಂಡಿಯ ಹಿಂಬದಿಯ ಗಾಜಿಗೂ ಒರೆಸುಕಗಳು(Wiper) ನೀಡಲಾಗಿದೆ.

ಪಯ್ಪೋಟಿ:

ಹಳಬಳಕೆಯ ಬಂಡಿಗಳ ಪಟ್ಟಿಗೆ ಸೇರಿರುವ ಸುಜುಕಿ ಎರ‍್ಟಿಗಾ(Ertiga) ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾಗಳೊಂದಿಗೆ(Innova Crysta) ಮರಾಜೊ ಸೆಣಸಲಿದೆ ಎನ್ನಬಹುದು. ಬಾರತದ ಮಾರುಕಟ್ಟೆಯಲ್ಲಿ, 7-8 ಮಂದಿ ಪಯಣಿಸಲು ಇರುವ ಹಲಬಳಕೆಯ ಬಂಡಿಗಳ(MPV/MUV) ಆಯ್ಕೆಗಳು ಕಡಿಮೆಯೇ. ಎರ‍್ಟಿಗಾ ಈ ಗುಂಪಿನಲ್ಲಿ ಸೇರಿದ್ದರೂ ಕೂಡ, ಗಾತ್ರದಲ್ಲಿ ಕಿರಿದೇ ಸರಿ. ಇದರಲ್ಲಿ ಹಾಯಾಗಿ 5-6 ಮಂದಿ ಸಾಗಬಹುದಶ್ಟೇ. ಬಿಣಿಗೆ ಮತ್ತು ಸಾಗಣಿಗಳ ವಿಶಯದಲ್ಲಿ ಎರ‍್ಟಿಗಾ ಮತ್ತು ಇನ್ನೋವಾ ಬಂಡಿಗಳ ನಡುವೆ ಸಾಕಶ್ಟು ಬೇರ‍್ಮೆ ಇದೆ. 1.3 ಲೀಟರ್ ಬಿಣಿಗೆಯ ಎರ‍್ಟಿಗಾ 90 ಕುದುರೆಬಲ ಕಸುವು ನೀಡಿ, ಕೇವಲ 200 ನ್ಯೂಟನ್ ಮೀಟರ್ ತಿರುಗುಬಲ ಉಂಟುಮಾಡಲಿದೆ. ಅದೇ ಇನ್ನೋವಾ, 2.4 ಮತ್ತು 2.8 ಲೀಟರ್ ಹೀಗೆ 2 ಡೀಸೆಲ್ ಬಿಣಿಗೆಗಳ ಆಯ್ಕೆಯಲ್ಲಿ ಸಿಗುತ್ತಿದ್ದು, ಕ್ರಮವಾಗಿ 150 ಮತ್ತು 174 ಕುದುರೆಬಲಗಳ ಕಸುವು ನೀಡಿ, 343 ಮತ್ತು 360 ನ್ಯೂಟನ್ ಮೀಟರ‍್‌ಗಳಶ್ಟು ತಿರುಗುಬಲ ಹುಟ್ಟುಹಾಕಲಿದೆ. ಈ ಎರಡು ಬಂಡಿಗಳ ನಡುವೆ ಸಾಕಶ್ಟು ಅಂತರವಿದೆ. ಇವುಗಳ ಮದ್ಯದಲ್ಲಿ ಮರಾಜೊ ಸೇರಲಿದೆ. ಎರ‍್ಟಿಗಾಗಿಂತ ಹೆಚ್ಚು ಬಲಶಾಲಿ ಬಿಣಿಗೆ ಮತ್ತು ಸಾಗಣಿ ಪಡೆದಿರುವ ಮರಾಜೊ, ಇನ್ನೋವಾ ಮುಂದೆ ಪುಟ್ಟದೆನಿಸುತ್ತದೆ. ಆದರೆ ಮೈಲಿಯೋಟದ ವಿಶಯದಲ್ಲಿ ಮಾತ್ರ ಮರಾಜೊ ಮತ್ತು ಎರ‍್ಟಿಗಾ, ಇನ್ನೋವಾ ಹಿಂದಿಕ್ಕಿ, ಸರಿಸಮನಾಗಿ ನಿಲ್ಲುತ್ತವೆ.

ಆಯಗಳ ವಿಶಯದಲ್ಲಿ, ಮರಾಜೋ ಇತರೆ ಎರಡು ಬಂಡಿಗಳಿಗಿಂತ ಹೆಚ್ಚು ಅಗಲವಾಗಿದ್ದರಿಂದ ಹೆಚ್ಚಿನ ಗಾಲಿಗಳ ನಡುವಿನ ಅಂತರ ಹೊಂದಿದೆ. ಮಿಕ್ಕಿನ ಆಯಗಳಲ್ಲಿ ಮರಾಜೊ ಇನ್ನೋವಾಗಿಂತ ಚೂರು ಕಡಿಮೆ ಎನ್ನಿಸಿದರೂ, ಎರ‍್ಟಿಗಾಗಿಂತ ಸಾಕಶ್ಟು ದೊಡ್ಡದೇ ಸರಿ.

ಬೆಲೆ:

ಎಮ್2, ಎಮ್4, ಎಮ್6 ಮತ್ತು ಎಮ್8 ಹೀಗೆ ನಾಲ್ಕು ಬಗೆಯ ಮಾದರಿಗಳಲ್ಲಿ ಹಾಗೂ 7,8 ಕೂರುಮಣೆಗಳ ಆಯ್ಕೆಯಲ್ಲಿ ಮಾರಾಟಗೊಳ್ಳುತ್ತಿದೆ. ಸುಮಾರು 10 ಲಕ್ಶರೂ.ಗಳಿಂದ 14 ಲಕ್ಶರೂ.ಗಳವರೆಗೆ ಮರಾಜೊ ದೊರೆಯಲಿದೆ. ಬಾರತದ ಎಲ್ಲ ಊರುಗಳಲ್ಲೂ ಒಂದೇ ಬೆಲೆಯಲ್ಲಿ ಮಾರಾಟಕ್ಕಿರಲಿದೆ ಮರಾಜೊ. ಈ ಎಲ್ಲ ಮಾದರಿಗಳ ಬೆಲೆಯನ್ನು ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.

ಎರ‍್ಟಿಗಾ ಮತ್ತು ಇನ್ನೋವಾಗಳ ನಡುವೆ ಹೆಚ್ಚಿನ ಆಯ್ಕೆಗಳೇ ಇಲ್ಲವೆಂದು ಕೊರಗುತ್ತಿದ್ದ ಹಲಬಳಕೆಯ ಬಂಡಿ ಕೊಳ್ಳುಗರಿಗೆ ಮಹೀಂದ್ರಾ ಕೂಟ ಮರಾಜೊ ರೂಪದಲ್ಲಿ ಹೊಸ ಆಯ್ಕೆಯೊಂದನ್ನು ಮುಂದಿಟ್ಟಿದೆ. ದಸರಾ, ದೀಪಾವಳಿ ಹಬ್ಬಕ್ಕೆ ಹೊಸ ಹಲಬಳಕೆಯ ಬಂಡಿಕೊಳ್ಳುವವರಿದ್ದರೆ, ಮಹೀಂದ್ರಾದ ಈ ಶಾರ‍್ಕ್ ಮೀನನ್ನು ಪರಿಗಣಿಸಬಹುದು.

(ಮಾಹಿತಿ ಮತ್ತು ತಿಟ್ಟ ಸೆಲೆ: mahindramarazzo.comautocarindia.com)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications