ಪ್ರೀತಿ ಮದುರ ತ್ಯಾಗ ಅಮರ
– ವೆಂಕಟೇಶ ಚಾಗಿ.
ಪ್ರೀತಿ ಅಂದ್ರೇನೆ ಹಾಗೆ. ಅದು ಯಾವಾಗ ಹುಟ್ಟುತ್ತೆ, ಹೇಗೆ ಬೆಳೆಯುತ್ತೆ ಎಂಬುದು ಗೊತ್ತಾಗುವುದೇ ಇಲ್ಲ. ಪ್ರೇಮಲೋಕಕ್ಕೆ ಎಂಟ್ರಿ ಆಗುತ್ತಿದ್ದಂತೆ ಸುತ್ತಲಿನ ಲೋಕವೇ ಸುಂದರವಾಗಿ ಬಿಡುತ್ತದೆ. ಹೊಸ ರೀತಿಯ ಶ್ರಾವಣವೇ ಪ್ರೇಮಲೋಕದಲ್ಲಿ ಪ್ರಾರಂಬವಾಗುತ್ತದೆ. ಹೊಸ ಹೊಸ ಕನಸುಗಳು ಮೊಳಕೆಯೊಡೆಯುತ್ತವೆ, ಬಯಕೆಗಳು ಹುಟ್ಟುತ್ತವೆ. ಪ್ರೇಮನಿವೇದನೆಗಾಗಿ ಮನಸ್ಸು ಹಾತೊರೆಯುತ್ತದೆ. ಸಂಗಾತಿಯ ಬಾವಚಿತ್ರ ಮನದೊಳಗೆ ಅಚ್ಚಾಗಿ ಕುಳಿತುಕೊಳ್ಳುತ್ತದೆ. ಪ್ರೇಮಕವಿಯೊಬ್ಬ ಅದ್ಹೇಗೋ ಜನ್ಮತಳೆದು ಬಿಡುತ್ತಾನೆ. ಹಗಲುಗನಸು ಇರುಳು ಕನಸುಗಳಲ್ಲಿಯೂ ಸಂಗಾತಿಯದೇ ನೆನಪು.
ಪ್ರೀತಿಗೆ ಸೆಳೆತವಿದೆ, ಬಂದವಿದೆ, ಬಾವನೆಗಳ ಮಿಡಿತವಿದೆ
ಹಾಯ್ ಬಾಯ್, ಸಣ್ಣ ಸಣ್ಣ ಸಹಾಯಗಳಿಂದ ಶುರುವಾಗುವ ಪ್ರೀತಿ, ನಂಬಿಕೆಯ ತಳಹದಿ ಗಟ್ಟಿಯಾಗುತ್ತಿದ್ದಂತೆಯೇ ಪ್ರೀತಿಯಾಗಿ ಅರಳುತ್ತದೆ. ಆತ್ಮೀಯತೆ, ಸಲಿಗೆ, ಗೆಳೆತನ ಮುಂಬರುವ ಪ್ರೀತಿಗೆ ಬುನಾದಿಗಳಾಗುತ್ತವೆ. ಪ್ರೇಮಕತೆಗಳು, ಪ್ರೇಮಗೀತೆಗಳು ತುಂಬಾನೇ ಇಶ್ಟವಾಗಿಬಿಡುತ್ತವೆ. ಆಗಾಗ ಪುಸ್ತಕದಲ್ಲಿ ಸಂಗಾತಿಯ ಹೆಸರು ಇಣುಕುತ್ತದೆ. ಸಂಗಾತಿಯ ಹೆಸರಲ್ಲಿ ಪುಸ್ತಕದಲ್ಲಿಟ್ಟ ನವಿಲುಗರಿ ಮರಿಹಾಕುತ್ತದೆ. ಸಂಗಾತಿಯ ಮೊಬೈಲ್ ನಂಬರ್ ಸಿಕ್ಕರಾಯ್ತು ಪ್ರೀತಿಯಲ್ಲಿ ಒಂದು ಟೆಸ್ಟ್ ಪಾಸಾದಂತೆಯೇ. ಗುಡ್ ಮಾರ‍್ನಿಂಗ್, ಗುಡ್ ನೈಟ್, ಹೌ ಆರ್ ಯು, ಟೀ ಆಯ್ತಾ, ಟಿಪಿನ್? ಹೀಗೆ ನಾನಾ ವಿದದ ಮೆಸೇಜ್‌ಗಳು ಹರಿದಾಡುತ್ತವೆ. ರಿಪ್ಲೈ ಬಂದರಂತೂ ಕುಶಿಯೋ ಕುಶಿ. ವಿಶೇಶ ಆರೈಕೆ, ಆತ್ಮೀಯ ಸಂಬಾಶಣೆ ಪ್ರಾರಂಬವಾದಂತೆಯೇ ಸರಿ. ಹಾಗೆಯೇ ತರಲೆ, ಹಾಸ್ಯ, ಮುನಿಸು, ಕೋಪ, ಓಲೈಕೆ, ತವಕ ಮುಂತಾದವುಗಳ ಅನುಬವಗಳು ಪ್ರತಿಯೊಬ್ಬ ಪ್ರೇಮಿಗೆ ಆಗುವುದು ಕಟ್ಟಿಟ್ಟ ಬುತ್ತಿ. ಇದೆಲ್ಲಾ ಇಲ್ಲದಿದ್ದರೆ ಅದನ್ನು ಪ್ರೀತಿ ಪ್ರೇಮ ಎಂದು ಕರೆಯಲಾದೀತೆ? ಕಂಡಿತ ಇಲ್ಲ.
ಪ್ರೀತಿ ಪ್ರೇಮ ಜೀವನದ ಸುಂದರ ಅದ್ಯಾಯ
ಪ್ರೀತಿ ಪ್ರೇಮದ ಆ ದಿನಗಳು ಜೀವನದ ಒಂದು ಸುಂದರ ಅದ್ಯಾಯವಾಗಿ ಉಳಿಯುತ್ತವೆ. ಪ್ರೀತಿಯ ಸುಳಿಯಲ್ಲಿ ಸಿಲುಕಿದವರು ಎಂದರೆ ಅದು ತಪ್ಪಾದೀತು. ಪ್ರೀತಿ ಎಂಬುದು ಸುಳಿ ಅಲ್ಲ ಪ್ರೀತಿಸಿದವರು ಅಪರಾದಿಗಳೂ ಅಲ್ಲ. ಪ್ರೀತಿ ಪ್ರೇಮ ನಮ್ಮ ಜೀವನದ ಸುಂದರ ಅದ್ಯಾಯ.
ನಿಜವಾದ ಪ್ರೀತಿಗೆ ಕೊನೆಯುಂಟೇ?
ನಿಜವಾದ ಪ್ರೀತಿ ಉಳಿಯುತ್ತದೆ. ಹಾಗಂತ ಪ್ರೀತಿಸಿದವರೆಲ್ಲ ಮದುವೆಯಾಗಿ ನೂರು ಕಾಲ ಬಾಳ್ತಾರೆ ಅನ್ನೋದಕ್ಕೆ ಕಶ್ಟ ಆಗಬಹುದು. ನಮ್ಮ ಈ ಸಮಾಜದ ಕಟ್ಟುಪಾಡುಗಳಲ್ಲಿ ಇದು ವಿರಳವೂ ಕೂಡಾ. ಜಾತಿ, ದರ‍್ಮ, ಅಂತಸ್ತು, ಪ್ರತಿಶ್ಟೆ ಹೀಗೆ ಹಲವಾರು ವಿಶಯಗಳು ಅಡ್ಡಗೋಡೆಗಳಾಗಿ ನಿಲ್ಲುತ್ತವೆ. ಆ ಸಂದರ‍್ಬಗಳಲ್ಲಿ ಲವ್ ಬ್ರೇಕಪ್‌ಗಳಾಗುವುದೇ ಹೆಚ್ಚು. ಆಗ ಪ್ರೀತಿಸಿದವರು ಪರಸ್ಪರ ಈ ಬ್ರೇಕಪ್‌ಗೆ ಕಾರಣರೆಂಬಂತೆ ದೂರುತ್ತಾ ಪ್ರೀತಿ ಮಾಡಿದ್ದೇ ತಪ್ಪಾಯ್ತೇನೊ ಎಂಬ ಗ್ರಹಿಕೆಗೆ ಒಳಗಾಗುತ್ತಾರೆ. ಇಲ್ಲವೇ ಪ್ರೀತಿಯಲ್ಲಿ ಪಾಸಾಗಲಿಲ್ಲವಲ್ಲ ಎಂದು ಜೀವನವನ್ನೇ ಕೊನೆಗಾಣಿಸಿಕೊಳ್ಳುತ್ತಾರೆ. ಇದು ಸರಿಯೇ? ಪ್ರೀತಿಗೆ ಇಂತಹ ಕಪ್ಪು ಚುಕ್ಕೆಗಳು ಬೇಕೆ? ಕಂಡಿತಾ ಇಲ್ಲ.
ಪ್ರೀತಿ ಮದುರ ತ್ಯಾಗ ಅಮರ
ಪ್ರೀತಿ ತನ್ನ ಸಂಗಾತಿಯ ಒಳಿತನ್ನು ಬಯಸುತ್ತದೆ. ತ್ಯಾಗ ಮನೋಬಾವ ಬೆಳೆಸುತ್ತದೆ. ಪ್ರೀತಿ ಜೀವನವನ್ನು ಸುಂದರವಾಗಿಸುತ್ತದೆ. ಮದುರ, ನಿರ‍್ಮಲ, ನಿಶ್ಕಲ್ಮಶ ಬಾವನೆಗಳನ್ನು ಒಳಗೊಂಡ ಪ್ರೀತಿಗೆ ಕೊನೆ ಎಂಬುದಿಲ್ಲ. ಬ್ರೇಕಪ್ ಎಂಬ ಮಾತೇ ಇಲ್ಲ. ಸಂದರ‍್ಬಗಳ ಒತ್ತಡಕ್ಕೆ ಸಿಲುಕಿ ದೂರವಾದರೂ ದೂರುವುದು ಏಕೆ? ಪ್ರೀತಿಗೆ ಇದು ಅವಮಾನವಲ್ಲವೇ? ಸಂಗಾತಿ ದೂರವಾದರೂ ಅವರನ್ನು ಗೌರವದಿಂದ ಕಾಣಬೇಕು. ಅವರ ಜೀವನಕ್ಕೆ ನಮ್ಮ ನಡೆನುಡಿಗಳಿಂದ ಕೆಡುಕಾಗದಿರುವ ಹಾಗೆ ನಡೆದುಕೊಳ್ಳುವುದೂ ಪ್ರೀತಿಯ ಒಂದು ಮುಕ. ಪ್ರೀತಿಸೋದು ತಪ್ಪಲ್ಲ ಆದರೆ ಪ್ರೀತಿಯ ನಿಜವಾದ ಅರ‍್ತವನ್ನು ಅರ‍್ತೈಸಿಕೊಳ್ಳದಿರುವುದೇ ದೊಡ್ಡ ತಪ್ಪು. ನಿಜ, ಈ ಪ್ರೀತಿನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ. ಈ ಆಸ್ತಿ ಎಲ್ಲರಿಗೂ ದೊರೆಯುವುದು ಅಪರೂಪ. ಪ್ರೀತಿ ಮದುರ ತ್ಯಾಗ ಅಮರ ಅಲ್ಲವೇ?
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು