ಉಸಿರು ಬಿಗಿಹಿಡಿದು ನೀರಿನೊಳಗೆ 13 ನಿಮಿಶ ಇರಬಲ್ಲವರು!

– ವಿಜಯಮಹಾಂತೇಶ ಮುಜಗೊಂಡ.

bajau, udnerwater, diving, ಬಜಾವು, ಉಸಿರು

ಒಂದು ಮುತ್ತಿನ ಕತೆ ಚಿತ್ರದಲ್ಲಿ ಒಂದು ದ್ರುಶ್ಯವಿದೆ. ಡಾ. ರಾಜ್‌ಕುಮಾರ್ ಎಂಟು ತೋಳಿನ ದೈತ್ಯ ಆಕ್ಟೋಪಸ್ ಎದುರು ಕಾದಾಡುವ ದ್ರುಶ್ಯವದು. ಎಂಟೆದೆಯ ಗಟ್ಟಿಗರೂ ಉಸಿರು ಬಿಗಿ ಹಿಡಿಯುವಂತೆ ಮಾಡುವ ಈ ದ್ರುಶ್ಯದ ಹಿಂದಿನ ಸಂಗತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಈ ಚಿತ್ರೀಕರಣ ನಡೆಯುವ ಹೊತ್ತಿನಲ್ಲಿ ಡಾ. ರಾಜ್ ಯಾವುದೇ ಡ್ಯೂಪ್ ಬಳಸದೇ, ಹಲವು ನಿಮಿಶಗಳ ಕಾಲ ಉಸಿರು ಹಿಡಿದು ನೀರಿನಡಿಯಲ್ಲಿದ್ದರಂತೆ. ಅಶ್ಟು ಹೊತ್ತು ಉಸಿರು ತೆಗೆದುಕೊಳ್ಳದೇ ನೀರಿನ ಒಳಗೆ ಇರುವುದು ಸಾಮಾನ್ಯ ಮಾತು ಅಲ್ಲವೇ ಅಲ್ಲ.

ನಾವು ಎಶ್ಟು ಹೊತ್ತು ಉಸಿರಾಡದೇ ನೀರಿನಲ್ಲಿ ಮುಳುಗಬಲ್ಲೆವು? ಅಬ್ಬಬ್ಬಾ ಅಂದರೆ ಒಂದು ನಿಮಿಶ, ಅಶ್ಟೇ. ಪ್ರಾಣಾಯಾಮದಂತಹ ಯೋಗಾಬ್ಯಾಸ ಮಾಡಿದ್ದರೆ ಕೆಲವು ನಿಮಿಶಗಳವರೆಗೆ ಉಸಿರು ಹಿಡಿಯಬಹುದು. ಅತೀ ಹೆಚ್ಚು ಹೊತ್ತು ನೀರಿನಡಿಯಲ್ಲಿ ಮುಳುಗಬಲ್ಲ ಅಳವನ್ನು ಅಲೆಮಾರಿ ಜನಾಂಗವೊಂದರ ಮಂದಿ ಹುಟ್ಟಿನಿಂದಲೇ ಪಡೆದುಕೊಂಡು ಬಂದಿದ್ದಾರೆ. ಪಿಲಿಪೀನ್ಸ್, ಇಂಡೋನೇಶಿಯಾ ಮತ್ತು ಮಲೇಶಿಯಾದಲ್ಲಿ ಕಂಡುಬರುವ ಬಜಾವು ಮಂದಿ ಈ ವಿಶೇಶ ಅಳವನ್ನು ಹೊಂದಿದ್ದಾರೆ. ಇವರು 200 ಅಡಿ ಆಳದವರೆಗೂ ನೀರಿನಲ್ಲಿ ಮುಳುಗಬಲ್ಲವರಾಗಿದ್ದು, 13 ನಿಮಿಶಗಳಶ್ಟು ಹೊತ್ತು ನೀರಿನಡಿ ಉಸಿರಾಡದೇ, ಮೀನುಗಳ ಬೇಟೆಯಾಡುತ್ತಾರೆ ಮತ್ತು ಕಡಲಾಳದ ಮುತ್ತು, ಚಿಪ್ಪುಗಳನ್ನು ಹೊರತೆಗೆಯುತ್ತಾರೆ.

ಬಜಾವು ಮಂದಿಯ ಡಿ.ಎನ್.ಎ. ಮಾರ‍್ಪಾಟು ಅವರ ಮಯ್ಯಲ್ಲಿರುವ ತೊರಳೆಗಳ(spleen) ಅಳತೆಯ ಮೇಲೆ ಪರಿಣಾಮ ಬೀರಿದೆ. ಬೇರೆಯವರಿಗೆ ಹೋಲಿಸಿದಲ್ಲಿ ಬಜಾವು ಬುಡಕಟ್ಟಿನ ಮಂದಿ ಸುಮಾರು ಒಂದೂವರೆ ಪಟ್ಟು ದೊಡ್ಡದಾದ ತೊರಳೆ ಹೊಂದಿದ್ದು, ಇದರಿಂದಾಗಿಯೇ ನೀರಿನಲ್ಲಿ ಹೆಚ್ಚು ಹೊತ್ತು ಮುಳುಗಬಲ್ಲವರಾಗಿದ್ದಾರೆ. ಸೆಲ್‌ ಜರ‍್ನಲ್‌ನಲ್ಲಿ ಮೂಡಿ ಬಂದಿರುವ ಬರಹ ಈ ಕುರಿತು ಬೆಳಕು ಚೆಲ್ಲಿದೆ.

ಏನಿದು ತೊರಳೆ? ಇದರ ಕೆಲಸವೇನು?

ಮನುಶ್ಯನ ಮಯ್ಯಲ್ಲಿರುವ ಹಲವು ಅಂಗಗಳಲ್ಲಿ ಬಹುಶಹ ತೊರಳೆಗಿರುವ ಕೆಲಸ ಅತೀ ಕಡಿಮೆ. ನಮ್ಮ ಕಿಬ್ಬೊಟ್ಟೆ ಮತ್ತು ಎಲುಬುಗೂಡಿನ ನಡುವೆ ಇರುವ ಜಾಗದಲ್ಲಿ ತೊರಳೆ ಇದೆ. ನೇರಳೆ ಬಣ್ಣದ ಈ ಅಂಗ ಬೆನ್ನುಮೂಳೆಯಿರುವ ಹೆಚ್ಚೂ ಕಡಿಮೆ ಎಲ್ಲ ಪ್ರಾಣಿಗಳಲ್ಲೂ ಇದೆ. ನಾವು ಈ ಅಂಗ ಇಲ್ಲದಿದ್ದರೂ ಬದುಕಬಲ್ಲೆವು. ನಮಗೆ ರೋಗ ನಿರೋದಕ ಶಕ್ತಿ ಇರುವಂತೆ ನೋಡಿಕೊಳ್ಳುವುದಲ್ಲದೇ, ಕೆಂಪು ನೆತ್ತರ ಕಣಗಳ ಸೋಸುವಿಕೆ ಮತ್ತು ಮರುಬಳಕೆಯಲ್ಲಿ ತೊರಳೆಗಳು ಮುಕ್ಯ ಪಾತ್ರವಹಿಸುತ್ತವೆ.

ನೀರಿನಡಿಯ ಒತ್ತಡದಲ್ಲಿ ಮಯ್ಯಿಗೆ ಏನಾಗುತ್ತದೆ?

ಮನುಶ್ಯ ನೀರಿನಲ್ಲಿ ಹೆಚ್ಚು ಹೆಚ್ಚು ಆಳಕ್ಕೆ ಮುಳುಗುತ್ತಿದ್ದಂತೆ, ಸುತ್ತಲಿನ ನೀರಿನ ಒತ್ತಡ ಹೆಚ್ಚುತ್ತದೆ. ಇದರಿಂದ ಪುಪ್ಪಸದ(lungs) ನೆತ್ತರ ಕೊಳವೆಗಳಲ್ಲಿ ಹೆಚ್ಚು ನೆತ್ತರು ತುಂಬಿ, ಕೊಳವೆಗಳ ಮೇಲೆ ಒತ್ತಡ ಹೆಚ್ಚುತ್ತದೆ. ಈ ಒತ್ತಡ ಅತೀ ಹೆಚ್ಚಾದಾಗ ನೆತ್ತರಗೊಳವೆಗಳು ಒಡೆದು ಸಾವಿಗೂ ಕಾರಣವಾಗಬಹುದು. ನೀರಿನಲ್ಲಿ ಮುಳುಗಿದಾಗ ಉಸಿರ‍್ಗಾಳಿಯ(oxygen) ಕೊರತೆಯನ್ನು ನೀಗಿಸಲು ಮತ್ತು ಮಯ್ಯ ಕಸುವು ಉಳಿಸಲು ಕೆಲವು ಬದಲಾವಣೆಗಳಾಗುತ್ತವೆ. ಸಹಜವಾಗಿಯೇ ಗುಂಡಿಗೆ ಬಡಿತ ನಿದಾನವಾಗುತ್ತದೆ, ನೆತ್ತರ ಕೊಳವೆಗಳು ಕುಗ್ಗುತ್ತವೆ, ತೊರಳೆ ಕಿರಿದಾಗುತ್ತದೆ.

ಹೆಚ್ಚು ಹೊತ್ತು ನೀರಿನೊಳಗಿರಲು ಹೇಗೆ ಸಾದ್ಯ?

ನೀರಿನಡಿ ಬದುಕುವ ಪ್ರಾಣಿಗಳು ದೊಡ್ಡ ಅಳತೆಯ ತೊರಳೆಗಳನ್ನು ಹೊಂದಿರುವುದು ಈ ಹಿಂದಿನ ಹಲವು ಅರಕೆಗಳಿಂದ(research) ಗೊತ್ತಾಗಿದೆ. ಇದೇ ವಿಶಯ ಬಜಾವು ಜನಾಂಗಕ್ಕೂ ಅನ್ವಯಿಸುತ್ತದೆಯೇ ಎನ್ನುವುದನ್ನು ಯೂನಿವರ‍್ಸಿಟಿ ಆಪ್ ಕೋಪನ್‌ಹೇಗನ್‌ಸೆಂಟರ್ ಆಪ್ ಜಿಯೋಜನೆಟಿಕ್ಸ್‌ಮೆಲಿಸ್ಸಾ ಲಾರ‍್ಡೋ ಅರಕೆಗೆ ಒಳಪಡಿಸಿದ್ದಾರೆ. ಬಜಾವು ಬುಡಕಟ್ಟಿಗೆ ಸೇರಿದ ಹಲವು ಮಂದಿಯನ್ನು ಅರಕೆಗೊಳಪಡಿಸಿ ನೋಡಿದಾಗ ಅವರು ಬೇರೆ ಮಂದಿಗಿಂತ ದೊಡ್ಡ ತೊರಳೆಗಳನ್ನು ಹೊಂದಿರುವುದು ತಿಳಿದುಬಂದಿದೆ.

ಲಾರ‍್ಡೋ ಅವರು ಬಜಾವು ಜನಾಂಗಕ್ಕೆ ಪೀಳಿಯಲ್ಲಿ(gene) ಅತೀ ಹತ್ತಿರದ ಸಂಬಂದಿಗಳಾಗಿರುವ ಇಂಡೋನೇಶಿಯಾದಲ್ಲಿ ನೆಲೆಸಿರುವ ಸಾಲ್ವಾನ್ ಎಂಬ ಜನಾಂಗದ ಮಂದಿಯನ್ನೂ ಅರಕೆಗೆ ಒಳಪಡಿಸಿದ್ದಾರೆ. ಸಾಲ್ವಾನ್ ಮತ್ತು ಬಜಾವುಗಳನ್ನು ಹೋಲಿಸಿ ನೋಡಿದಾಗ ಬಜಾವು ಜನಾಂಗದವರು ಸುಮಾರು ಒಂದೂವರೆ ಪಟ್ಟು ದೊಡ್ಡದಾಗಿರುವ ತೊರಳೆ ಹೊಂದಿರುವುದು ಕಂಡುಬಂದಿದೆ. ಈ ಎರಡೂ ಜನಾಂಗಗಳ ಡಿ.ಎನ್.ಎ. ಹೋಲಿಸಿ ನೋಡಿದಾಗ, PDE10A ಎನ್ನುವ ಪೀಳಿ ಬಜಾವುಗಳಲ್ಲಿ ಕಂಡುಬಂದಿದ್ದು ಸಾಲ್ವಾನ್‌ಗಳಲ್ಲಿ ಇರಲಿಲ್ಲ. ಈ ಪೀಳಿ ಕೆಲವು T4 ತೈರಾಯ್ಡ್ ಸುರಿವೊಯ್ಯುಕಗಳ(hormone) ಮೇಲೆ ಪರಿಣಾಮ ಬೀರುತ್ತದೆ. ಇಲಿಗಳಲ್ಲಿ ಈ ಪೀಳಿ, ತೊರಳೆಗಳ ಅಳತೆಗೆ ನೇರವಾಗಿ ಕಾರಣವಾಗಿರುವುದು ಕಂಡುಬಂದಿದೆ.ಒತ್ತಡದಲ್ಲಿ ಕುಗ್ಗಿದಾಗ ದೊಡ್ಡ ಅಳತೆಯ ತೊರಳೆಗಳು ಹೆಚ್ಚು ಉಸಿರ‍್ಗಾಳಿಯುಳ್ಳ ಕೆಂಪು ನೆತ್ತರ ಕಣಗಳನ್ನು ಹುಟ್ಟುಹಾಕುತ್ತವೆ. ಇದರಿಂದಾಗಿ ಬಜಾವು ಜನಾಂಗದ ಮಂದಿ ಹೆಚ್ಚು ಹೊತ್ತು ನೀರಿನಡಿ ಇರಬಲ್ಲರು.

ಬಜಾವು ಬುಡಕಟ್ಟಿನ ಮಂದಿ, ನೀರಿನ ಒಳಗೆ ಹೆಚ್ಚು ಹೊತ್ತು ಉಸಿರು ಹಿಡಿಯುವ ಚಳಕವನ್ನು, ನೀರಿಗಿಳಿಯುವ ರೂಡಿಯಿಂದ ಮೈಗೂಡಿಸಿಕೊಂಡಿರಬಹುದು ಎಂದೆನಿಸುವುದು ಸಹಜ. ಆದರೆ, ಬಜಾವುಗಳ ಡಿ. ಎನ್. ಎ. ಅಲ್ಲಿ ಆಗಿರುವ ಮಾರ‍್ಪಾಟಿನಿಂದಾಗಿ ಅವರ ತೊರಳೆ ದೊಡ್ಡದಾಗಿದ್ದು, ಇದು ಅವರು ನೀರಿನಡಿಯಲ್ಲಿ ಹೆಚ್ಚು ಹೊತ್ತು ಮುಳುಗಲು ನೆರವು ನೀಡುತ್ತದೆ. ಪ್ರಕ್ರುತಿ ಸಹಜವಾದ ಪೀಳಿ ಮಾರ‍್ಪಾಟಿನಿಂದ ಇಂತಹ ಬದಲಾವಣೆ ಆಗಿರಬಹುದು ಎಂದು ಲಾರ‍್ಡೋ ಅಬಿಪ್ರಾಯಪಟ್ಟಿದ್ದಾರೆ.

ಆಪತ್ತಿನ ಅಂಚಿನಲ್ಲಿ ಸಮುದ್ರದ ಅಲೆಮಾರಿಗಳು

ಸಮುದ್ರದ ಅಲೆಮಾರಿಗಳೆಂದೇ ಕರೆಯಿಸಿಕೊಳ್ಳುವ ಬಜಾವು ಬುಡಕಟ್ಟಿನವರ ಬದುಕು ಅಪಾಯದ ಅಂಚಿನಲ್ಲಿದೆ. ಮೂಲೆಗುಂಪಾಗಿರುವ ಇವರಿಗೆ ನಾಗರಿಕ ಹಕ್ಕುಗಳೂ ಅಶ್ಟಾಗಿ ಸಿಗುತ್ತಿಲ್ಲ. ಮೀನುಗಾರಿಕೆ ಕೈಗಾರಿಕೆಯಾಗಿ ಮಾರ‍್ಪಾಡು ಹೊಂದುತ್ತಿರುವಂತೆ, ಇವರ ಕೆಲಸಗಳಿಗೂ ಕುತ್ತು ಬಂದಿದೆ. ಇದರಿಂದ ಹಲವು ಮಂದಿ ಕಡಲು ತೊರೆದು ಬೇರೆ ಕೆಲಸ ನೋಡಿಕೊಳ್ಳುತ್ತಿದ್ದಾರೆ. ಇವರ ಬದುಕಿಗೆ ಹೆಚ್ಚಿನ ಬೆಂಬಲ ದೊರೆಯಬೇಕು ಎನ್ನುತ್ತಾರೆ ಲಾರ‍್ಡೋ.

(ಮಾಹಿತಿ ಸೆಲೆ: telegraph.co.uk, nationalgeographic.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Gireesh T says:

    excellent information…life of human being is marvellous.thanks

ಅನಿಸಿಕೆ ಬರೆಯಿರಿ: