ಬೋಯಿಂಗ್-737 ವಿಮಾನ ಒಂದರ ಬಿಡಿಸಲಾಗದ ರಹಸ್ಯ!
– ಕೆ.ವಿ.ಶಶಿದರ.
ಬಾಲಿ ದ್ವೀಪದಲ್ಲಿರುವ ಈ ಪಾಳುಬಿದ್ದ ಬೋಯಿಂಗ್-737 ವಿಮಾನವು ಪ್ರವಾಸಿಗರ ಪ್ರಮುಕ ಆಕರ‍್ಶಣೆಯ ಕೇಂದ್ರ ಬಿಂದುವಾಗಿದೆ. ಈ ದೈತ್ಯ ವಿಮಾನ ಇರುವುದು ಪುಟ್ಟ ಮೈದಾನದಲ್ಲಿ. ಸುತ್ತಲೂ ಮಣ್ಣಿನ ಗೋಡೆಯಿದ್ದು ಮದ್ಯಬಾಗದಲ್ಲಿ ಇದು ರಾರಾಜಿಸುತ್ತಿದೆ. ಬೋಯಿಂಗ್-737 ವಿಮಾನದ ಮೇಲೆ ಇದು ಯಾವ ಕಂಪನಿಗೆ ಸೇರಿದ್ದು ಎಂಬ ಯಾವುದೇ ಕುರುಹಿಲ್ಲ. ಅದರ ನೋಂದಣಿ ಸಂಕ್ಯೆ ಸಹ ವಿಮಾನದ ಮೇಲ್ಮೈನಲ್ಲಿ ಎಲ್ಲೂ ನಮೂದಾಗಿಲ್ಲ!
ಹಾಲಿ ಇದು ಪ್ರಸಿದ್ದ ಪಾಂಡವಾ ಸಮುದ್ರ ತೀರದಿಂದ ಕೇವಲ ಐದು ನಿಮಿಶದ ಹಾದಿಯಲ್ಲಿರುವ ‘ರಾಯ ದುವಾ ಸೆಲಾಟನ್’ ಹೆದ್ದಾರಿಯ ಬಳಿ ಇದೆ. ಹೆದ್ದಾರಿ ಪಕ್ಕದಲ್ಲಿನ ಸಣ್ಣ ಮೈದಾನ ಈ ಪಾಳುಬಿದ್ದ ವಿಮಾನದ ನೆಲೆ. ಇದರ ಸುತ್ತಮುತ್ತ ಹಡಗಿನಲ್ಲಿ ಒಯ್ಯಲಾಗುವ ಕಂಟೇನರ್‍ಗಳು ಹಾಗೂ ಮುರುಕಲು ಗುಡಿಸಲುಗಳು ತುಂಬಿವೆ.
ಈ ದೈತ್ಯ ವಿಮಾನ ಇಂತಹ ಸಣ್ಣ ಮೈದಾನಕ್ಕೆ ಬಂದಿದ್ದಾದರೂ ಹೇಗೆ?
ಈ ಪುಟ್ಟ ಮೈದಾನಕ್ಕೆ ಇಶ್ಟೊಂದು ದೊಡ್ಡ ವಿಮಾನ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಹಲವರಲ್ಲಿದೆ. ಇದೊಂದೇ ಪ್ರಶ್ನೆಯಲ್ಲ, ಈ ಉಕ್ಕಿನ ಹಕ್ಕಿ ಬರುವಾಗ ಯಾರ ಕಣ್ಣಿಗೂ ಬೀಳಲಿಲ್ಲವೇಕೆ? ಇದು ಬರುವ ಶಬ್ದ ಸಹ ಯಾರಿಗೂ ಕೇಳಲಿಲ್ಲವೇಕೆ? ಇದು ಬರುವ ಹಾದಿಯಲ್ಲಿ ಯಾವ ಕಟ್ಟಡಕ್ಕೂ ಬಡಿಯಲಿಲ್ಲವೇ? ಇದರ ಮಾಲೀಕರು ಯಾರು? ಎಂಬೆಲ್ಲಾ ಪ್ರಶ್ನೆಗಳು ಯಕ್ಶಪ್ರಶ್ನೆಯಾಗಿಯೇ ಉಳಿದಿದೆ.
ಬೋಯಿಂಗ್-737 ಇಲ್ಲಿಗೆ ಬಂದ ಬಗೆಗಿನ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿರುವುದರಿಂದ ಅದರ ಆಗಮನದ ನಿಕರವಾದ ದಿನಾಂಕ ಸಹ ನಿಗೂಡವಾಗಿದೆ. ಈ ಲೋಹದ ಹಕ್ಕಿಯ ಸುತ್ತ ಬೆಳೆದಿರುವ ಗಿಡಗಂಟೆಗಳನ್ನು ಗಮನಿಸಿದರೆ, ಸಾಕಶ್ಟು ಸಮಯದ ಹಿಂದೆಯೇ ಇಲ್ಲಿಗೆ ಬಂದಿರಬೇಕು ಎಂಬ ಉಹಾಪೋಹವಿದೆ. ಇದರ ಹೊರಬಾಗದಲ್ಲಿಯಾಗಲಿ ರೆಕ್ಕಗಳಲ್ಲಾಗಲಿ ಎಲ್ಲೂ ನೆಗ್ಗಾಗಿರುವ ಕುರುಹಿಲ್ಲದಿರುವುದು ಇದರ ಬರುವಿಕೆಯನ್ನು ಮತ್ತಶ್ಟು ಕಗ್ಗಂಟಾಗಿಸಿದೆ.
ಈ ವಿಮಾನ ಯಾರದ್ದು ಎಂದು ಇಲ್ಲಿಯವರೆಗೆ ತಿಳಿದುಬಂದಿಲ್ಲ!
ಈ ದುಬಾರಿ ವಾಹನ ನನ್ನದು/ನಮ್ಮದೆಂದು ಹಿಂಪಡೆಯಲು ಯಾವುದೇ ವ್ಯಕ್ತಿಯಾಗಲಿ, ಸಂಸ್ತೆಯಾಗಲಿ ಮುಂದೆ ಬರದಿರುವುದು ಇದರ ಮಾಲೀಕತ್ವದ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸುಂದರವಾಗಿರುವ ವಿಮಾನದ ದೇಹದ ಒಳಬಾಗವನ್ನು ಉಪಯೋಗಿಸಿಕೊಂಡು ರೆಸ್ಟಾರೆಂಟ್ ಆಗಿ ಪರಿವರ‍್ತನೆ ಮಾಡಲು ವಿಮಾನ ನೆಲೆಸಿರುವ ಸ್ತಳದ ಮಾಲೀಕ ಬಯಸಿದ್ದ. ಆದರೆ ಪರಿವರ‍್ತಿಸಲು ಹಣದ ಕೊರತೆಯಿಂದ ತನ್ನ ಕನಸನ್ನು ನನಸು ಮಾಡಲಾಗದೆ, ಈ ಲೋಹದ ಹಕ್ಕಿಯನ್ನು ತುಕ್ಕು ಹಿಡಿಯಲು ಬಿಟ್ಟು ಬಿಟ್ಟ. ಕಾಲಕ್ರಮೇಣ ವಿಮಾನದ ಒಂದೊಂದೇ ಬಿಡಿ ಬಾಗಗಳು ನಾಪತ್ತೆಯಾದವು. ಆದರೂ ಈಗ ಇದೊಂದು ಪ್ರೇಕ್ಶಣೀಯ ಸ್ತಳಾವಾಗಿ ಮಾರ‍್ಪಟ್ಟಿತು.
ಜನಜಂಗುಳಿ ಹೆಚ್ಚಾದಂತೆ ಮೈದಾನದ ಮಾಲೀಕ ದೊಡ್ಡ ಗೇಟ್ ನಿರ‍್ಮಿಸಿ 24 ಗಂಟೆ ಪಹರೆಯನ್ನೂ ಹಾಕಿ ಜನ ಅದರ ಹತ್ತಿರಕ್ಕೆ ಸುಳಿಯದಂತೆ ಕಡಿವಾಣ ಹಾಕಿ ನಿಯಂತ್ರಿಸಿದ್ದಾನೆ. ಪೂರ‍್ಣ ಬಂದೋಬಸ್ತ್ ಮಾಡಿ ಉಳಿದ ವಿಮಾನಕ್ಕೆ ರಕ್ಶಣೆ ಒದಗಿಸಿದ್ದಾನೆ. ಇದನ್ನು ನೋಡಲು ಮೈಲಿಗಳಶ್ಟು ದೂರದಿಂದ ಜನ ಬರುವುದು ಸಾಮಾನ್ಯ ದ್ರುಶ್ಯ, ವಿಮಾನದ ಹತ್ತಿರ ಹೋಗ ಬಯಸುವವರು ಹಣ ತೆತ್ತು ಟಿಕೀಟು ಕರೀದಿಸಬೇಕು. ಇವರಲ್ಲಿ ಕೆಲ ಅದ್ರುಶ್ಟಶಾಲಿಗಳಿಗೆ ಮಾತ್ರ ವಿಮಾನದ ಒಳ ಬಾಗ ವೀಕ್ಶಿಸಲು ಪರವಾನಿಗೆ ನೀಡಲಾಗುತ್ತದೆ.
ಮತ್ತೊಂದು ಕುತೂಹಲಕಾರಿ ವಿಶಯವೆಂದರೆ ಬಾಲಿ ದ್ವೀಪದಲ್ಲಿ ಪಾಳುಬಿದ್ದ ಬೋಯಿಂಗ್-737 ವಿಮಾನ ಇದೊಂದೇ ಅಲ್ಲ. ಇದೇ ರೀತಿಯ ನಿಗೂಡವಾಗಿ ಬಂದಿಳಿದಿರುವ ಮತ್ತೊಂದು ಬೋಯಿಂಗ್-737 ವಿಮಾನವು ಕಡೆಂಗಾನನ್ ಅಲ್ಲಿ ಡಂಕಿನ್ ಡೊನಟ್ಸ್ ಮಾರಾಟ ಮಳಿಗೆಯ ಬಳಿಯಿದೆ. ಈ ವಿಮಾನದ ದೊಡ್ಡ ರೆಕ್ಕೆಗಳು ಪಕ್ಕದಲ್ಲಿನ ಮುಕ್ಯ ರಸ್ತೆಯನ್ನೂ ಸಹ ದಾಟಿದೆ. ಗೂಗಲ್ ಮ್ಯಾಪ್‍ನಲ್ಲಿ ಇದನ್ನು ಗಮನಿಸಲು ಸಾದ್ಯವಿದೆ.
(ಮಾಹಿತಿ ಸೆಲೆ: thesun.co.uk)
(ಚಿತ್ರ ಸೆಲೆ: aanavandi.com)
ಅಪರೂಪದ ವಿಶಿಶ್ಟತೆಯ ಪ್ರವಾಸಿತಾಣಗಳ ಕತನಗಳ ಸರಮಾಲೆ ..ನಿಜಕ್ಕೂ ನಮಗೊಂದು ಪ್ರಪಂಚಪರ್ಯಟನೆ