ಪಾರಿವಾಳಗಳ ಬಗ್ಗೆ ಕುತೂಹಲಕಾರಿ ಸಂಗತಿಗಳು!

– ನಾಗರಾಜ್ ಬದ್ರಾ.

ಈ ನೆಲದ ಮೇಲೆ ಹಲವಾರು ಬಗೆಯ ಹಕ್ಕಿಗಳು ಬದುಕುತ್ತಿದ್ದು, ಅದರಲ್ಲಿ ಕೆಲವು ಮಾತ್ರ ಮನುಶ್ಯನ ಬಾಳಬಗೆಗೆ (lifestyle) ಹೊಂದಿಕೊಂಡಿವೆ. ಅಂತಹ ಹಕ್ಕಿಗಳಲ್ಲಿ ಸಾವಿರಾರು ವರುಶಗಳಿಂದ ಮನುಶ್ಯನ ಜೊತೆಗೆ ಬದುಕನ್ನು ಕಟ್ಟಿಕೊಂಡಿರುವ ಪಾರಿವಾಳವು ಕೂಡ ಒಂದಾಗಿದೆ.

ವಿಶ್ವದ ಅತ್ಯಂತ ಹಳೆಯ ಸಾಕು ‘ಹಕ್ಕಿ’

ಈ ನೆಲದ ಮೇಲೆ ಹಲವಾರು ಬಗೆಯ ಪಾರಿವಾಳಗಳಿದ್ದು, ಕೆಲವೊಂದು ನಮ್ಮ ನಿಮ್ಮ ನಡುವೆ ನಾಡಿನಲ್ಲಿ ಕಾಣಿಸಿಕೊಂಡರೆ ಇನ್ನು ಕೆಲವು ಕಾಡಿನಲ್ಲಿ ಕಾಣಿಸಿಕೊಳ್ಳುತ್ತವೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ಪಾರಿವಾಳವು ಕೊಲಂಬಾ ಲಿವಿಯಾ ಡೊಮೆಸ್ಟಿಕಾ (Columba livia domestica) ಎಂಬ ಉಪಜಾತಿಗೆ ಸೇರಿದ್ದು, ಇದು ರಾಕ್ ಎಂಬ ಜಾತಿಯಿಂದ (rock dove) ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇವುಗಳನ್ನು ರಾಕ್ ಪಾರಿವಾಳ ಎಂದೂ ಕರೆಯುತ್ತಾರೆ. ಈಜಿಪ್ಟಿನ ಮೆಸೊಪೊಟೆಮಿಯಾ ನಾಗರಿಕತೆಯ ಹೊತ್ತಿನ ಚಿತ್ರಲಿಪಿಗಳಲ್ಲಿ (hieroglyphics) ಬರಹಕ್ಕೆಂದು ಬಳಸಿಲಾಗುತ್ತಿದ್ದ ಕ್ಯೂನಿಪಾರ‍್ಮ್ ಮಣ್ಣಿನಿಂದ ಮಾಡಿದ ಹಲಗೆಗಳು (cuneiform tablets) ಇರಾಕಿನಲ್ಲಿ ದೊರೆತಿದ್ದು, 5000 ಸಾವಿರ ವರ‍್ಶಗಳ ಹಿಂದೆ ಪಾರಿವಾಳಗಳನ್ನು ಸಾಕುತ್ತಿದ್ದರು ಎಂದು ಉಲ್ಲೇಕಿಸುತ್ತವೆ. ಇತ್ತೀಚಿನ ಸಂಶೋದನೆ ಪ್ರಕಾರ ಸುಮಾರು 10,000 ವರ‍್ಶಗಳ ಹಿಂದಿನಿಂದಲೂ ಪಾರಿವಾಳಗಳ ಸಾಕುವಿಕೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಪಾರಿವಾಳಗಳು ತುಂಬಾ ಚುರುಕು!

ನಾವು ಸಾಕುವ ಪಾರಿವಾಳಗಳಿಗೆ ತರಬೇತಿ ನೀಡಿದರೆ ಅವು ಸುಮಾರು 1000 ಕಿಲೋಮೀಟರ್ ವರೆಗೂ ದೂರವಿರುವ ಹಾಗೂ ಹಿಂದೆ ಎಂದೂ ಬೇಟಿ ನೀಡದ ಜಾಗದಿಂದಲೂ ಸಲೀಸಾಗಿ ಮನೆಗೆ ಮರಳಿ ಬರುತ್ತವೆ. ಈ ವಿಶೇಶ ತಳಿಯನ್ನು ಹೋಮಿಂಗ್ ಪಾರಿವಾಳ (homing pigeons) ಎಂದು ಕರೆಯುತ್ತಾರೆ. ಒಂದು ಅಡಿಕಟ್ಟಲೆಯ(theory) ಪ್ರಕಾರ ಇವು ತಮ್ಮ ತಲೆಯಲ್ಲಿನ ಸಣ್ಣ ಮ್ಯಾಗ್ನೆಟಿಕ್ ಅಂಗಾಂಶಗಳನ್ನು (magnetic tissues) ಬಳಸಿ ಬೂಮಿಯ ಮ್ಯಾಗ್ನೆಟಿಕ್ ಪೀಲ್ಡ್ಅನ್ನು ಅರಿತು ಯಾವುದೇ ಜಾಗದಿಂದಲೂ ನೇರವಾಗಿ ಮನೆಗೆ ಮರಳುತ್ತವೆ ಎಂದು ಹೇಳಲಾಗುತ್ತದೆ. ಮತ್ತೊಂದು ವಾದದ ಪ್ರಕಾರ ಇವು ಕೈವಾರದ ಅರಿವನ್ನು (compass sense) ಹೊಂದಿದ್ದು, ಸೂರ‍್ಯನ ಸ್ತಾನ ಹಾಗೂ ತಮ್ಮ ಒಳಗಿನ ಗಡಿಯಾರವನ್ನು ಬಳಸಿ ದಿಕ್ಕನ್ನು ತಿಳಿದು ಸಾಗುತ್ತವೆ ಎನ್ನಲಾಗುತ್ತದೆ.

ಸುದ್ದಿ ತಲುಪಿಸುವ ಕೆಲಸಕ್ಕೆ ಹೆಸರುವಾಸಿ!

ಪಾರಿವಾಳಗಳು ಹಲವಾರು ವರ‍್ಶಗಳಿಂದ ಒಂದು ಕಡೆಯಿಂದ ಇನೊಂದು ಕಡೆಗೆ ಸುದ್ದಿಯನ್ನು ತಲುಪಿಸುವ ಕೆಲಸಕ್ಕೆ ಹೆಸರುವಾಸಿ ಆಗಿವೆ. ಹಿಂದೆ ರಾಜರ ಕಾಲದಲ್ಲಿ ಇವು ಓಲೆಕಾರರಂತೆ ಕೆಲಸ ಮಾಡುತ್ತಿದ್ದವು ಎಂದು ಹೇಳಲಾಗುತ್ತದೆ. ಇವು ಒಂದನೇ ಹಾಗೂ ಎರಡನೇ ವಿಶ್ವ ಯುದ್ದದ ಸಮಯದಲ್ಲಿ ಸಾವಿರಾರು ಮಂದಿಯ ಜೀವಗಳನ್ನು ಉಳಿಸಿ ಇತಿಹಾಸ ರೂಪಿಸಿವೆ. ಚೆರ್ ಅಮಿ (Cher Ami) ಎಂಬ ಹೆಸರಿನ ಹಕ್ಕಿಯು 1918 ರ ಅಕ್ಟೋಬರ್ 4 ರಂದು ಯುನೈಟೆಡ್ ಸ್ಟೇಟ್ಸ್‌ನ ಸುಮಾರು 194 ಸೈನಿಕರನ್ನು ಕಾಪಾಡಿತು ಎಂದು ಹೇಳಲಾಗುತ್ತದೆ. ಹಳೇಕಾಲದಲ್ಲಿ ಗ್ರೀಸ್ ದೇಶದಲ್ಲಿನ ಕ್ರೀಡಾ ಅಬಿಮಾನಿಗಳು ಒಲಿಂಪಿಕ್ಸ್‌ನ ಪಲಿತಾಂಶಗಳ ಸುದ್ದಿಯನ್ನು ತಲುಪಿಸಲು ವಿಶೇಶ ತರಬೇತಿ ಪಡೆದ ಪಾರಿವಾಳಗಳನ್ನು ಬಳಸುತ್ತಿದ್ದರು ಎನ್ನಲಾಗುತ್ತದೆ.

ಪಾರಿವಾಳಗಳು ಸರಿಯಾದ ಪದಗಳನ್ನು ಗುರುತಿಸಬಲ್ಲವು!

2016 ರಲ್ಲಿ ಕೆಲವು ಅರಕೆಗಾರರು ಪಾರಿವಾಳಗಳು ಪದಗಳನ್ನು ಗುರುತಿಸಬಲ್ಲವೇ ಎನ್ನುವುದರ ಕುರಿತು ಅರಕೆ ಒಂದನ್ನು ನಡೆಸಿದರು. ಅದರಲ್ಲಿ ಅವರು ಕಂಪ್ಯೂಟರ್ ಪರದೆಯ ಮೇಲೆ ಸರಿಯಾದ ಮತ್ತು ತಪ್ಪು ಪದಗಳನ್ನು ತೋರಿಸಿದಾಗ ಪಾರಿವಾಳಗಳು ಸರಿಯಾದ ಪದಗಳನ್ನು ಗುರುತಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದವು.

ಪಾರಿವಾಳಗಳಲ್ಲಿಯೂ ಕೂಡ ಹಲವಾರು ಬಗೆಗಳಿವೆ

ಈ ನೆಲದ ಮೇಲೆ ಸುಮಾರು 310 ಬಗೆಯ ಜಾತಿ ಪಾರಿವಾಳಗಳಿದ್ದು, ಸಹರಾ ಮರುಬೂಮಿ, ಅಂಟಾರ‍್ಕ್ಟಿಕಾ ಹಾಗೂ ಅದರ ಸುತ್ತಮುತ್ತಲಿನ ಒಣ ಪ್ರದೇಶವನ್ನು ಹೊರತುಪಡಿಸಿ ಉಳಿದ ಎಲ್ಲೆಡೆಯೂ ಕಾಣಿಸಿಕೊಳ್ಳುತ್ತವೆ. ಇವು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಕಂಡುಬರುತ್ತವೆ. ಒಂದು ಅ‍ಚ್ಚರಿಯ ವಿಶಯ ಎಂದರೆ ನಗರಗಳು ಬೆಳದಂತೆ ಇವುಗಳ ಎಣಿಕೆಯು ಕೂಡ ಹೆಚ್ಚಾಗಿರುವುದು. ಜಗತ್ತಿನಾದ್ಯಂತ ಸುಮಾರು 400 ಮಿಲಿಯನ್ ರಶ್ಟು ಪಾರಿವಾಳಗಳು ಕಂಡುಬಂದರೆ, ನ್ಯೂಯಾರ‍್ಕ್ ನಗರ ಒಂದರಲ್ಲೇ 1 ಮಿಲಿಯನ್‌ಗಿಂತ ಹೆ‍ಚ್ಚಿನ ಸಂಕ್ಯೆಯ ಪಾರಿವಾಳಗಳಿವೆ ಎಂದು ಹೇಳಲಾಗುತ್ತದೆ.

ತುಂಬಾ ಎತ್ತರದಲ್ಲಿ ಹಾರಾಡಬಲ್ಲವು

ಪಾರಿವಾಳಗಳು ತುಂಬಾ ಎತ್ತರಕ್ಕೆ ಹಾಗೂ ಬಿರುಸಾಗಿ(speed) ಹಾರಾಡುವುದಕ್ಕೆ ಹೆಸರುವಾಸಿ. ಇವು ಸಾಮಾನ್ಯವಾಗಿ 6000 ಅಡಿಗಳಶ್ಟು ಎತ್ತರಕ್ಕೆ ಹಾರಬಲ್ಲವು ಎಂದು ಹೇಳಲಾಗುತ್ತದೆ. ಗಂಟೆಗೆ 77 ಮೈಲಿಗಳಂತೆ ಒಂದು ದಿನಕ್ಕೆ ಸುಮಾರು 600 ರಿಂದ 700 ಮೈಲಿಗಳಶ್ಟು ದೂರ ಹಾರಬಲ್ಲವು. 19 ನೇ ಶತಮಾನದಲ್ಲಿ ಇವು ಆಪ್ರಿಕಾ ಮತ್ತು ಇಂಗ್ಲೆಂಡ್ ನಡುವಿನ 7000 ಮೈಲುಗಳಶ್ಟು ದೂರವನ್ನು 55 ದಿನಗಳಲ್ಲಿ ತಲುಪಿದ್ದು, ಪಾರಿವಾಳಗಳ ಅತ್ಯಂತ ಉದ್ದದ ಹಾರಾಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

ಬಣ್ಣಗಳನ್ನು ಗುರುತಿಸಬಲ್ಲವು!

ನಮ್ಮ ಹಾಗೇ ಪಾರಿವಾಳ ಗಳು ಕೂಡ ಬಣ್ಣಗಳನ್ನು ಗುರುತಿಸಬಲ್ಲವು. ಇದಲ್ಲದೇ ನೇರಳಾತೀತ ಬೆಳಕನ್ನು (ultraviolet light) ನೋಡಬಹುದಾದ ವಿಶೇಶ ಚಳಕ ಹೊಂದಿವೆ. ಆದ್ದರಿಂದ ಇವುಗಳನ್ನು ಸಮುದ್ರದಲ್ಲಿ ಎದುರಾಗುವ ಅಪಾಯಗಳಿಂದ ಪಾರುಮಾಡಲು ಬಳಸಲಾಗುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ: pigeoncontrolresourcecentre.orgjustfunfacts.comranker.comwikipedia.orgmentalfloss.comovocontrol.compixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ:

%d bloggers like this: