ಮಹಾಬಾರತ: ಕತನ ಕವನ

– ಚಂದ್ರಗೌಡ ಕುಲಕರ‍್ಣಿ.

ಮಹಾಬಾರತ, Mahabharata

ವ್ಯಾಸಮುನಿಯು ರಚಿಸಿದಂತಹ
ಮಹಾಕಾವ್ಯವು ಬಾರತ
ಜನಪದರೆಲ್ಲರ ನಾಲಿಗೆ ಮೇಲೆ
ನಲಿಯುತಲಿರುವುದು ಜೀವಂತ

ಕುರುಪಾಂಡವರ ಸೇಡಿನ ಕದನವು
ಕತೆಯಲಿ ಒಂದು ನೆಪ ಮಾತ್ರ
ಒಳಗಡೆ ನಡೆವುದು ಗುಣಾವಗುಣಗಳ
ಅದ್ಬುತವೆನಿಸುವ ರಸಚಿತ್ರ

ಕರ‍್ಣ ಅರ‍್ಜುನ ಬೀಮ ದುರ‍್ಯೋದನ
ಶಕುನಿಗಳೆಲ್ಲರು ನಮ್ಮೊಳಗೆ
ಬೀಶ್ಮ ದ್ರೋಣ ವಿದುರ ಕ್ರುಪರು
ಅವತರಿಸುವರು ಮನದೊಳಗೆ

ಏಕಲವ್ಯ ಅಬಿಮನ್ಯು ಬಾಲರು
ಶಸ್ತ್ರ ವಿದ್ಯೆಯ ಬಲ್ಲವರು
ಅಂಬೆ ಕುಂತಿ ಗಾಂದಾರಿ ದ್ರೌಪತಿ
ಎಲ್ಲರ ಮನವನು ಗೆಲ್ಲುವರು

ವಸುದೇವ ಕ್ರಿಶ್ಣ ಬಲದೇವ ಕಂಸ
ಕುರು ಪಾಂಡವರ ನೆಂಟರು
ಬಕ ಹಿಡಿಂಬ ಗಟೋತ್ಕಚರು
ದೈತ್ಯ ಶಕ್ತಿಯ ಬಂಟರು

ವೀರ ಸಾಹಸ ಸಹನೆ ಮತ್ಸರ
ಬೆರೆತುಕೊಂಡಿವೆ ಕತೆಯಲ್ಲಿ
ವಿನಯ ಗರ‍್ವ ಪ್ರತಿಶ್ಟೆ ಪಣಗಳು
ಮೆರೆದಿವೆ ಉಜ್ವಲ ಪಾತ್ರದಲಿ

ಆಲದ ಕಾಂಡ ಬೇರು ಬಿಳಲು
ಬೆಸೆದುಕೊಂಡಿವೆ ಬಂದುರ
ಸಾವನು ಮೀರಿದ ಎಶ್ಟೋ ಕತೆಗಳು
ತುಳುಕಿಸಿ ಬಿಟ್ಟಿವೆ ಹಂದರ

ಪಂಪ ರನ್ನ ಕುಮಾರವ್ಯಾಸರ
ಸೆಳೆದುಬಿಟ್ಟಿದೆ ಈ ಕತನ
ಕನ್ನಡ ಮಣ್ಣಿನ ಸತ್ವವ ಪಡೆದು
ಮೂಡಿಸುತಲಿರುವುದು ಸಂಚಲನ

ನಾಟಕ ಕಾವ್ಯ ಮಹಾಕಾವ್ಯದ
ಟಿಸಿಲೊ ಟಿಸಿಲು ನೂರಾರು
ಕಾದಂಬರಿ ಕತೆ ಪುನರವತಾರದ
ಪರ‍್ವವೆ ನಡೆದಿದೆ ಬಲುಜೋರು

ಆಟ ಬಯಲಾಟ ಯಕ್ಶಗಾನದಿ
ಚಿಮ್ಮಿಸಿ ಬಿಡುವುದು ಸಂಬ್ರಮ
ಪುರಾಣ ಪ್ರವಚನ ಕೀರ‍್ತನಗಳಲಿ
ನುಡಿಸುತಲಿರುವುದು ಸರಿಗಮ

ಅಂದಿನ ಕತೆಯು ಇಂದಿಗೂ ಹೊಂದುತ
ತೋರುವುದೆಮ್ಮಯ ಬಿಂಬವನು
ಕೇಳುತ ಓದುತ ಒಳಗೆ ಬೆಳೆದು
ಒಡೆವುದು ಬಾಳಿನ ಗುಂಬವನು

ನ್ಯಾಯ ಅನ್ಯಾಯ ದರ‍್ಮ ಅದರ‍್ಮಕೆ
ಗೆರೆಯನೆಳೆವುದು ಕಡು ಕಶ್ಟ
ಜಿದ್ದಾ ಜಿದ್ದಿನ ಪಣದಲಿ ಸಿಕ್ಕು
ಬಳಲುವ ಚಿತ್ರವು ಬಲು ಸ್ಪಶ್ಟ

ಗೆದ್ದವರಾರು ಸೋತವರಾರು
ಎಲ್ಲರ ಮನದಲಿ ತಾಕಲಾಟ
ಸೋಲು ಗೆಲುವನು ಮೀರಿದ ಬದುಕಿಗೆ
ನಡೆದಿದೆ ಏನೊ ಹುಡುಕಾಟ

(ಚಿತ್ರ ಸೆಲೆ: ttvaibhavam.com ) 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.