ಉದ್ದಿನ ರೊಟ್ಟಿ ಮತ್ತು ರುಬ್ಬಿದ ಕೆಂಪು ಕಾರ
– ಸವಿತಾ.
ಹಿಂದೆ ಉದ್ದಿನ ಹಿಟ್ಟು ಕಲಸಿ ಕೈಯಲ್ಲಿ ತಟ್ಟಿ, ದಪ್ಪ ರೊಟ್ಟಿ ಮಾಡಿ, ಮಣ್ಣಿನ ಮಡಕೆ ಒಳಗೆ ಬೇಯಿಸಿ ಉದ್ದಿನ ರೊಟ್ಟಿ ಮಾಡುತ್ತಿದ್ದರು. ಈಗ ಮಣ್ಣಿನ ಮಡಕೆ ಸಿಗುವುದು ಅಪರೂಪ. ತವೆಯ ಮೇಲೆ ಉದ್ದಿನ ರೊಟ್ಟಿ ಮಾಡುವ ಬಗೆ ಇಲ್ಲಿದೆ.
ಬೇಕಾಗುವ ಸಾಮಾನುಗಳು
ಉದ್ದಿನ ರೊಟ್ಟಿ ಮಾಡಲು
- ಜೋಳದ ಹಿಟ್ಟು – 1 ಬಟ್ಟಲು
- ಉದ್ದಿನ ಹಿಟ್ಟು – 1/2 ಬಟ್ಟಲು
ರುಬ್ಬಿದ ಕೆಂಪು ಕಾರ ಮಾಡಲು
- ಕೆಂಪು ಹಣ್ಣು ಮೆಣಸಿನಕಾಯಿ – 12
- ಮೆಂತ್ಯ ಕಾಳು – 2 ಚಮಚ
- ಜೀರಿಗೆ – 1 ಚಮಚ
- ಉಪ್ಪು – ರುಚಿಗೆ ತಕ್ಕಶ್ಟು
ಉದ್ದಿನ ರೊಟ್ಟಿ ಮಾಡುವ ಬಗೆ
ಜೋಳದ ಮತ್ತು ಉದ್ದಿನ ಹಿಟ್ಟನ್ನು ಜರಡಿ ಹಿಡಿದು ಸ್ವಲ್ಪ ತಣ್ಣೀರು ಸೇರಿಸಿ, ಚೆನ್ನಾಗಿ ನಾದಿಕೊಳ್ಳಿ. ಸ್ವಲ್ಪ ಹಿಟ್ಟು ಹಿಡಿದು ದುಂಡಗೆ ಮಾಡಿ ಜೋಳದ ರೊಟ್ಟಿ ತಟ್ಟಿದ ಹಾಗೇ ಸ್ವಲ್ಪ ಒಣ ಹಿಟ್ಟು ಉದುರಿಸಿ ಕೈಯಿಂದ ರೊಟ್ಟಿ ತಟ್ಟಿಕೊಳ್ಳಿ. ನಂತರ ತಟ್ಟಿದ ರೊಟ್ಟಿಯನ್ನು ತವೆಯ ಮೇಲೆ ಹಾಕಿ. ಒಂದು ಬಟ್ಟೆಯ ತುಂಡು ನೀರಿನಲ್ಲಿ ಅದ್ದಿ, ರೊಟ್ಟಿ ಮೇಲೆ ಸವರಿ, ನೀರು ಆರಿದ ಮೇಲೆ ರೊಟ್ಟಿ ತಿರುವಿ ಹಾಕಿ ಎರಡೂ ಬದಿ ಬೇಯಿಸಿರಿ. ಈಗ ಉದ್ದಿನ ರೊಟ್ಟಿ ತಯಾರು. ಇದರ ಜೊತೆಗೆ ನೆಂಚಿಕೊಳ್ಳಲು ರುಬ್ಬಿದ ಕಾರ ಚೆನ್ನಾಗಿರುತ್ತದೆ.
ರುಬ್ಬಿದ ಕೆಂಪು ಕಾರ ಮಾಡು ಬಗೆ
ಕೆಂಪು ಮೆಣಸಿನ ಕಾಯಿ, ಮೆಂತೆ ಕಾಳು, ಜೀರಿಗೆ ಸ್ವಲ್ಪ ಹುರಿದು ತೆಗೆದಿಡಿ. ಬಿಸಿ ಆರಿದ ನಂತರ ಉಪ್ಪು ಸೇರಿಸಿ, ಮಿಕ್ಸರ್‌ನಲ್ಲಿ ರುಬ್ಬಿಕೊಂಡರೆ ಕೆಂಪು ಕಾರ ಸಿದ್ದ.
ಬಿಸಿಬಿಸಿ ಉದ್ದಿನ ರೊಟ್ಟಿ ಮತ್ತು ರುಬ್ಬಿದ ಕೆಂಪು ಕಾರವನ್ನು ಬೆಣ್ಣೆ ಅತವಾ ತುಪ್ಪದೊಂದಿಗೆ ಸವಿಯಿರಿ. ಯಾವುದೇ ಪಲ್ಯ, ಚಟ್ನಿ, ಇಲ್ಲವೇ ಸಾರಿನ ಜೊತೆ ಕೂಡ ತಿನ್ನಬಹುದು.
(ಚಿತ್ರ ಸೆಲೆ: ಸವಿತಾ)
ಇತ್ತೀಚಿನ ಅನಿಸಿಕೆಗಳು