ಕಣ್ಣ ಹನಿಯೇ ಹೇಳು

– ಸಚಿನ್ ಎಚ್‌. ಜೆ.

eyes, tears, ಕಣ್ಣು, ಕಣ್ಣೀರು

ಕಣ್ಣ ಹನಿಯೇ ಹೇಳು ಹರಿಯುತಿರುವೆ ಏಕೆ ಹೀಗಿಂದು?

ಒಮ್ಮೆಯೂ ತಿರುಗಿ ನೋಡದಾಗ ಅವಳು
ಒಂದೇ ಒಂದು ಮಾತು ಕೇಳದಾಗ ಅವಳು

ಒಂದೇ ಒಂದು ನಗು ಬೀರದಾಗ ಅವಳು
ಒಂದೇ ಒಂದು ಕರೆ ಉತ್ತರಿಸದಾಗ ಅವಳು
ಒಂದೇ ಒಂದು ಸಂದೇಶ ಓದದಾಗ ಅವಳು

ತಿಳಿಯಲಿಲ್ಲವೇ ನಿನಗಾಗ?
ಹೊಳೆಯಲಿಲ್ಲವೇ ನಿನಗಾಗ?

ಬಾರದೇ ಹೋದೆ ನೀನು, ನೆನೆಯದೇ ಹೋದೆ ನನ್ನ ನೀನು
ಕಣ್ಣುಗಳ ಕಾತರ ನೀಗಿಸಲಿಲ್ಲ ನೀನು
ಮರುಬೂಮಿಯಾಗಿದ್ದ ಈ ಕೆನ್ನೆಗಳ ತೋಯಿಸಲೂ ಇಲ್ಲ ನೀನು

ನನ್ನಾಸೆಯ ಪತಂಗಗಳು ಅವಳಾಸೆಯ ಉರಿ ಜ್ವಾಲೆಯಲಿ
ಹೊತ್ತುರಿದು ಪರಪರನೆ ಬೂದಿಯಾಗುತಿರೆ ಅಂದು
ನೋಡಿ ಸುಮ್ಮನಿರುವುದು ಮಜವೆನಿಸಿತೆ ನಿನಗಂದು?

ಹುಸಿಯಾಸೆಯ ಬಿಸಿ ಜ್ವಾಲೆ ಹೊತ್ತಿ ಉರಿಯುತಿರೆ
ಸುಮ್ಮನೆ ನೋಡಿದೆಯಾ ನೀನು ದೂರದಿಂದಲೇ?
ಮೂರ‍್ಕ ಹ್ರುದಯದ ಹಿಗ್ಗಾಟವನು, ಬಾವನೆಗಳ ಜಗ್ಗಾಟವನು

ಹೇಳಿದಳವಳು ಇಂದು, ನನ್ನ ಮಾತು ಅವಳಿಗೆ ಹಿತವಲ್ಲ
ಹೇಳಿದಳವಳು ಇಂದು, ನನ್ನ ಮೌನ ಅವಳನ್ನು ಕಾಡೊಲ್ಲ

ನನ್ನ ಕರೆಗಳವಳಿಗೆ ಲೆಕ್ಕಕ್ಕಿಲ್ಲ, ನನ್ನ ಸಂದೇಶಗಳವಳಿಗೆ ಬೇಕಿಲ್ಲ
ಹೇಳಿ ಹೋದಳವಳು ಇಂದು, ತಿರುಗಿ ನೋಡದೆ ಹೋದಳು ಇಂದು

ಸ್ವಲ್ಪವೂ ತೊದಲಲಿಲ್ಲ ಅವಳು, ಹೇಳುವಾಗ ಇಂದು
ನನ್ನ ಪ್ರೀತಿ ಅವಳಿಗೆ ತ್ರುಣ ಸಮಾನವೆಂದು

ಕಳೆಯುತಿರಲು ಕಾಲ, ನಿದಾನವಾಗಿ ಮರೆತಿರುವೆ ಸೋಲ
ಬಾವನೆಗಳ ಬಿಸಿಯುಸಿರು ಬರಿದಾಗಿರುವಾಗ

ಕೆನ್ನೆಗಳ ಬಿಸಿ ಇಳಿದಾಗಿದೆ ಈಗ
ಅಲಕ್ಶ್ಯದ ಚಳಿಗೆ ಹ್ರುದಯ ಮಂಜುಗಲ್ಲಾಗಿರುವಾಗ
ನೆತ್ತರಲಿ ಹತಾಶೆ ಹೆಪ್ಪುಗಟ್ಟಿದೆ ಈಗ

ನಿವಾರಣೆಯ ನೆವಗಳಲ್ಲೇ ಚಿಗುರಿತ್ತು
ನಿರಾಕರಣೆಯ ಅಪೇಕ್ಶೆಯೇ ಇಲ್ಲದೆ ಬೆಳೆದಿತ್ತು

ಹುಸಿಯಾಸೆಗಳ ಸಸಿ ಆಗ, ಉಪೇಕ್ಶೆಗೆ ಬಾಯಾರಿ ಒಣಗಿದೆ ಈಗ
ಅಲೋಚನೆಗಳ ಬಿಸಿ, ಬಾವನೆಗಳ ಹಸಿ ತಣ್ಣಗಾಗಿ ಹಳಸಿದ ಮೇಲೆ ಈಗ
ಬೊಗಸೆ ತುಂಬಿ ತುಳುಕಿಸುತಿರುವೆಯೇನು, ಸಮಯ ಪ್ರಗ್ನೆ ಮರೆತಿರುವೆ ನೀನು
ಕಾರಣವ ನೀಡದೆ ನನಗೆ, ಹರಿಯುತಿರುವೆ ಯಾಕಿಂದು?

ಕಣ್ಣ ಹನಿಯೇ ಹೇಳು ಮರೆಯಲೆತ್ನಿಸುತಿರಲು ನಾನು
ದುಕ್ಕ ಉಮ್ಮಳಿಸಿ ಬರುವಂತೆ ಮತ್ತೊಮ್ಮೆ ಸುರಿಯುತಿರುವೆ ನೀನು

ಕಣ್ಣ ಹನಿಯೇ ಹೇಳು ಹರಿಯುತಿರುವೆ ಏಕಿಂದು?

(ಚಿತ್ರ: blogs.unimelb.edu.au )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: