ವಿಕ್ಟೋರಿಯಾ ಜಲಪಾತದ ‘ಡೆವಿಲ್ಸ್ ಈಜುಕೊಳ’

ಕೆ.ವಿ.ಶಶಿದರ.

ಡೆವಿಲ್ಸ್ ಈಜುಕೊಳ, Devils Pool

ಡೆವಿಲ್ಸ್ ಈಜುಕೊಳ ಜಾಂಬಿಯಾದ ವಿಕ್ಟೋರಿಯಾ ಜಲಪಾತದ ತುದಿಯಲ್ಲಿ ಬಂಡೆಗಳಿಂದ ರೂಪುಗೊಂಡ ಒಂದು ನೈಸರ‍್ಗಿಕ ಕೊಳ. ಸಾವಿರಾರು ವರುಶಗಳ ಕಾಲ ನೀರಿನ ಹೊಡೆತದಿಂದಾಗಿ ಬಂಡೆಗಳು ಸವೆದು ತಡೆಗೋಡೆಯಾಗಿ ರೂಪುಗೊಂಡಿದ್ದರಿಂದ ಈ ಈಜುಕೊಳ ಅಸ್ತಿತ್ವಕ್ಕೆ ಬಂದಿದೆ. ಇದರಲ್ಲಿನ ನೀರು ಜಲಪಾತವಾಗಿ ಬಿದ್ದು ಸೇರುವುದು 125 ಮೀಟರ್ ಗೂ ಹೆಚ್ಚು ಆಳದಲ್ಲಿರುವ ಕಣಿವೆಯನ್ನು. ಈ ಕಾರಣದಿಂದ ಇಲ್ಲಿ ಈಜಲು ಬಯಸುವವರಿಗೆ ಎರಡು ಗುಂಡಿಗೆ ಇರಬೇಕು!

ಸಾಹಸ ಪ್ರಿಯರಿಗೆ ಇದು ಅಚ್ಚು ಮೆಚ್ಚಿನ ತಾಣ

ವಿಶ್ವದಲ್ಲಿ ಅತ್ಯಂತ ಎತ್ತರದಲ್ಲಿರುವ ಹಾಗೂ ಅತ್ಯಂತ ಅಪಾಯಕಾರಿ ನೈಸರ‍್ಗಿಕ ಈಜುಕೊಳ ಇದಾದ್ದರಿಂದ ಇದಕ್ಕೆ ‘ಡೆವಿಲ್ಸ್ ಈಜುಕೊಳ’ (Devils pool)ಎಂಬುದು ಹೊಂದುವಂತ ಹೆಸರು. ಬೇಸಿಗೆಯಲ್ಲಿ ಈಜುಕೊಳದ ನೀರಿನ ಮಟ್ಟ ಅತ್ಯಂತ ಕಡಿಮೆ. ಈಜುಗಾರರಿಗೆ ಈ ಹೊತ್ತು ಬಹಳ ಸಹಾಯಕಾರಿ. 128 ಮೀಟರ್ ಆಳದ ಕೆಳಗಿನ ಕಣಿವೆಗೆ ಬೀಳುವ ಅಪಾಯ ಈ ಅವದಿಯಲ್ಲಿ ಕಂಡಿತ ಇರುವುದಿಲ್ಲ.

ಈ ಕೊಳದ ಅಪೂರ‍್ವತೆ ತುದಿಯಲ್ಲಿರುವ ಬಲವಾದ ಕಲ್ಲಿನಿಂದಾಗಿದೆ. ಈ ತಡೆಗೋಡೆಯಂತಹ ಕಲ್ಲು ಎಶ್ಟೇ ರಬಸದಿಂದ ನೀರು ಬಂದರೂ ತುದಿಯ ಮೇಲಿನಿಂದ ತಳ್ಳಿಕೊಂಡು ಹೋಗುವುದನ್ನು ತಡೆಯುತ್ತದೆ. ಪ್ರತಿ ನಿಮಿಶ ಈ ಜಲಪಾತದಿಂದ ಕಣಿವೆಗೆ ಹರಿಯುವ ನೀರಿನ ಪ್ರಮಾಣ 500 ದಶಲಕ್ಶ ಲೀಟರ್ ಗಳು. 128 ಮೀಟರ್ ಎತ್ತರದಿಂದ ಕಲ್ಲಿನ ಬಂಡೆಗಳ ಮೇಲೆ ನೀರು ದುಮ್ಮಿಕ್ಕಿದಾಗ ಕಿವಿಗಡಚಿಕ್ಕುವ ಸದ್ದು ಹೊರಹೊಮ್ಮುತ್ತದೆ. ನೀರು ಬಂಡೆಯ ಮೇಲೆ ಬಿದ್ದ ರಬಸಕ್ಕೆ ಸಣ್ಣ ಸಣ್ಣ ಕಣಗಳು ಸಿಡಿದೇಳುತ್ತವೆ. ಇದರಿಂದಾಗಿ ಇಡೀ ವಾತಾವರಣವೇ ಮಂಜಿನಿಂದ ಆವ್ರುತವಾದಂತೆ ಕಾಣುತ್ತದೆ. ನೆಲದರಿಗರು ಇದನ್ನು ‘ಮೊಸಿ-ಓ-ಟುನ್ಯಾ’ ಅತವಾ ‘ದ ಸ್ಮೋಕ್ ದಟ್ ತಂಡರ‍್ಸ್’ ಎಂಬ ಉಪನಾಮದಿಂದಲೂ ಕರೆಯುತ್ತಾರೆ.

ಅನುಬವಿ ಮಾರ‍್ಗದರ‍್ಶಿಗಳ ನೆರವು ಸಿಗುವುದು ಡೆವಿಲ್ಸ್ ಈಜುಕೊಳ, Devils Pool

ಡೆವಿಲ್ಸ್ ಈಜುಕೊಳದಲ್ಲಿ ಈಜಲು ಹೋಗುವ ಹಾದಿಯಲ್ಲಿ ಮೊದಲು ಜಾಂಬಿಜಿ ನದಿಯನ್ನು ಈಜಿ ದಾಟಬೇಕು. ಲಿವಿಂಗ್ ಸ್ಟನ್ ದ್ವೀಪದಿಂದ ಡೆವಿಲ್ಸ್ ಈಜುಕೊಳಕ್ಕೆ 5 ರಿಂದ 10 ನಿಮಿಶದ ಈಜುದಾರಿ. ಜಾಂಬಿಜಿ ನದಿಯಲ್ಲಿ ಮೊದಲ ಬಾಗ ನೀರಿನ ಹರಿವಿಗೆ ವಿರುದ್ದವಾಗಿ ಈಜಬೇಕು. ಎರಡನೆಯ ಬಾಗದಲ್ಲಿ ನೀರಿನ ಹರಿವಿನ ದಿಕ್ಕಿನಲ್ಲಿ ಈಜಬೇಕಿರುವ ಕಾರಣ ಇದು ಸುಲಬದ ಹಾದಿ. ಈ ನದಿಯನ್ನು ದಾಟುವಾಗ ಒಬ್ಬರಿಗೆ ಇಬ್ಬರಂತೆ ಮಾರ‍್ಗದರ‍್ಶಿಗಳು ನೆರವು ನೀಡುತ್ತಾರೆ. ನದಿಯಲ್ಲಿ ನೀರಿನ ವಿರುದ್ದ ಈಜಲು ಅಂಜಿಕೆಯಾದರೆ ಅಂತಹವರು ಮಾರ‍್ಗದರ‍್ಶಿಗಳ ಕೈ ಹಿಡಿದು ನಡೆದೇ ಹೋಗಬಹುದು. ನದಿಯ ನೀರಿನ ಆಳ ಸೊಂಟದವರೆಗೆ, ಅಂದರೆ ಮೂರೂವರೆ ಅಡಿ ಮಾತ್ರ. ‘ಈಜು ಬರದವರು ಪ್ರಯತ್ನ ಮಾಡಕೂಡದು’ ಎಂಬ ಎಚ್ಚರಿಕೆಯನ್ನು ಕೂಡ ಇಲ್ಲಿಿ ಕೊಡಲಾಗಿದೆ.

ಅನುಬವಿ ಮಾರ‍್ಗದರ‍್ಶಿಗಳ ನೆರವು ಈಜಲು ಬಯಸುವವರಿಗೆ ಸಿಗುತ್ತದೆ. ನೀರಿಗಿಳಿಯಲು, ಕಣಿವೆಯಿರುವ ತುದಿಗೆ ಬಂದು ಕಾಮನಬಿಲ್ಲಿನ ಸೌಂದರ‍್ಯವನ್ನು ಆಸ್ವಾದಿಸಲು, ಕೊಳದ ತುದಿಯಲ್ಲಿ ಕಾಲನ್ನು ಹಿಡಿದು ದೇಹವನ್ನು ತಲೆಕೆಳಕಾಗಿ ಇಳಿ ಬಿಟ್ಟು, ಕಣಿವೆಯ ರುದ್ರ ರಮಣೀಯ ದ್ರುಶ್ಯ ಆಸ್ವಾದಿಸಲು ಮಾರ‍್ಗದರ‍್ಶಿಗಳು ನೆರವಾಗುತ್ತಾರೆ.

ಡೆವಿಲ್ಸ್ ಈಜು ಕೊಳ ಎಶ್ಟು ಸುರಕ್ಶಿತ?

ಅಡಿಗಡಿಗೆ ಇಶ್ಟೆಲ್ಲಾ ತೊಂದರೆಗಳು ಇದ್ದಾಗ್ಯೂ ಡೆವಿಲ್ಸ್ ಈಜು ಕೊಳ ನಿಜವಾಗಿಯೂ ಸುರಕ್ಶಿತವೇ? ಎನ್ನುವ ಪ್ರಶ್ನೆ ಸಾಮಾನ್ಯರನ್ನು ಕಾಡುವುದು ಸಹಜ. ಡೆವಿಲ್ಸ್ ಈಜುಕೊಳ, Devils Pool

ಡೆವಿಲ್ಸ್ ಈಜುಕೊಳದ ತುದಿಯಲ್ಲಿನ ಕಲ್ಲು ಮೇಲಕ್ಕೆ ಚಾಚಿರುವುದರಿಂದ, ಈಜುವ ರಬಸದಲ್ಲಿ ಮೇಲಕ್ಕೆ ಹಾರಿ, ಬೀಳುವುದು ಸಾದ್ಯವಿಲ್ಲ. ತಡೆಗೋಡೆಯಂತೆ ಕಲ್ಲು ತಡೆಯುತ್ತದೆ. ಆದರೂ ಇಲ್ಲಿ ಈಜಲು ಬಿಡುವ ಮುನ್ನ ನೀರಿನ ಮಟ್ಟವನ್ನು ಪರಿಶೀಲಿಸಲಾಗುತ್ತದೆ. ಸುರಕ್ಶತೆಯ ಬಗ್ಗೆ ಕಾಳಜಿ ಇರುವ ಕಾರಣ, ಕೊಳದಲ್ಲಿ ನೀರಿನ ಮಟ್ಟ ತುದಿಯಲ್ಲಿನ ಕಲ್ಲಿಗಿಂತ ಬಹಳಶ್ಟು ಕಡಿಮೆಯಿದ್ದಲ್ಲಿ ಮಾತ್ರ ಈಜಕೊಳದಲ್ಲಿ ಇಳಿಯಲು ಅನುಮತಿ ನೀಡಲಾಗುತ್ತದೆ. ತುದಿಯಲ್ಲಿ ಮೇಲಕ್ಕೆ ಚಾಚಿರುವ ಕಲ್ಲು ಸಾಕಶ್ಟು ದಪ್ಪ ಹಾಗೂ ಗಟ್ಟಿಯಾಗಿರುವುದರಿಂದ, ಕಲ್ಲು ಮುರಿದು ಬೀಳುವ ಸಾದ್ಯತೆ ಬಹಳ ಕಡಿಮೆ. ಆದರೂ ಯಾವುದನ್ನೂ ತಳ್ಳಿಹಾಕುವಂತಿಲ್ಲ. ಎಂದು ಏನಾಗುತ್ತದೆ ಎಂದು ಬಲ್ಲವರಾರು? ಎಲ್ಲಾ ಅವಗಡಗಳೂ ಆಕಸ್ಮಿಕವೇ ಅಲ್ಲವೆ?

( ಮಾಹಿತಿ ಸೆಲೆ: zambiatourism.com, roamingaroundtheworld.com )
( ಚಿತ್ರಸೆಲೆ: unfamiliardestinations.com, roamingaroundtheworld.com, theadventureborn.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.