ಅವಕಾಶಕ್ಕಾಗಿ ಕಾಯಬೇಡಿ, ಅವಕಾಶಗಳನ್ನು ಉಂಟುಮಾಡಿ

ಕೊಟ್ರೇಶ ನಡುವಿನಮನಿ.

king, kingdom. ರಾಜ. ಮಂತ್ರಿಮಂಡಲ

ಇಂದಿನ ಸ್ಪರ‍್ದಾತ್ಮಕ ಯುಗದಲ್ಲಿ, ಅವಕಾಶಗಳು ಒದಗಿ ಬಂದಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಲವರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೆ ಕೈಚೆಲ್ಲುತ್ತಾರೆ. ಬಳಿಕ, ದುಕ್ಕದಲ್ಲಿ ಮುಳುಗುತ್ತಾರೆ. ಸಿಗುವ ಅವಕಾಶಗಳನ್ನು ಕೈಚೆಲ್ಲಿದರೆ ಕೆಲಸ ಇಲ್ಲವೇ ಪ್ರಯತ್ನಗಳಲ್ಲಿ ಹಿನ್ನಡೆಯಾಗುವುದು ಗೊತ್ತಿರುವ ಸಂಗತಿ. ಸಿಗುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲು ಜಾಣತನ ಬೇಕು. ಹಾಗೆಯೇ, ಅವಕಾಶವಿಲ್ಲದಿರುವಾಗ, ಅವಕಾಶವನ್ನು ಉಂಟುಮಾಡಿ ಮುನ್ನಡೆಯುವ ಜಾಣತನವೂ ಬೇಕು.

ಅದೊಂದು ದೊಡ್ಡ ರಾಜ್ಯ. ಜನಪರ ಆಡಳಿತದಿಂದ ಹೆಸರು ಮಾಡಿದ್ದ ವೀರಸೇನನೆಂಬ ಅರಸನೊಬ್ಬ ಆ ರಾಜ್ಯವನ್ನು ಆಳುತ್ತಿದ್ದನು. ರಾಜ್ಯದ ಮಂದಿಗೆ ರಾಜನ ಮೇಲೆ ಅಪಾರ ಪ್ರೀತಿ ಮತ್ತು ಗೌರವ. ರಾಜನನ್ನು ಕಾಣಬೇಕೆಂದು, ರಾಜನೊಡನೆ ಮಾತಾಡಬೇಕೆಂದು ಎಲ್ಲರೂ ಬಯಸುತ್ತಿದ್ದರು. ಆದರೆ ರಾಜನನ್ನು ಹತ್ತಿರದಿಂದ ನೋಡುವ, ಮಾತಾಡುವ ಅವಕಾಶ ಎಲ್ಲರಿಗೂ ಸಿಗುತ್ತಿರಲಿಲ್ಲ. ಹೀಗಿರುವಾಗ, ನಗಿಸುವುದಕ್ಕೆ ಮತ್ತು ತನ್ನ ಜಾಣತನಕ್ಕೆ ಹೆಸರಾಗಿದ್ದ, ಆ ರಾಜ್ಯದವನೇ ಆದ ದೇವದತ್ತನೆಂಬುವನು ರಾಜನನ್ನು ಮಾತಾಡಿಸಬೇಕೆಂಬ ಆಸೆ ಹೊತ್ತು, ಅರಮನೆಗೆ ಬರುವನು. ಆದರೆ ಅರಮನೆಯ ಮುಂಬಾಗದ ಪಾಲಕರು ಮಹಾರಾಜನನ್ನು ನೋಡಲು ಅವಕಾಶ ಮಾಡಿಕೊಡುವುದಿಲ್ಲ. ಇದರಿಂದ ನಿರಾಸೆಗೊಂಡ ದೇವದತ್ತ, ರಾಜನನ್ನು ಹೇಗೆ ಬೇಟಿಯಾಗುವುದು ಎಂದು ಯೋಚಿಸುತ್ತಿದ್ದಾಗ, ಅದೇ ದಾರಿಯಲ್ಲಿ ವ್ಯಕ್ತಿಯೊಬ್ಬ, “ರಾಜ್ಯದಲ್ಲಿ ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಆಸಕ್ತ ಕುಸ್ತಿಪಟುಗಳು ಪಾಲ್ಗೊಳ್ಳಬಹುದು. ಗೆದ್ದವರಿಗೆ ರಾಜನಿಂದ ಬಹುಮಾನ” ಎಂದು ಡಂಗುರ ಸಾರುತ್ತಾ ಹೋಗುತ್ತಿರುತ್ತಾನೆ.

ರಾಜನೊಂದಿಗೆ ಮಾತಾಡಬೇಕೆಂದರೆ ಇದೇ ಸರಿಯಾದ ಅವಕಾಶ ಎಂದು ದೇವದತ್ತ ಯೋಚಿಸಿ, ಕುಸ್ತಿ ಪಂದ್ಯಕ್ಕೆ ತನ್ನ ಹೆಸರನ್ನು ನೋಂದಾಯಿಸುತ್ತಾನೆ. ದೈಹಿಕವಾಗಿ ಸಬಲನಾಗಿರದಿದ್ದರೂ, ಕುಸ್ತಿ ಬರದಿದ್ದರೂ ತನ್ನ ಬುದ್ದಿವಂತಿಕೆಯಿಂದ ಕುಸ್ತಿಪಟುವಿನ ಹಿಡಿತಕ್ಕೆ ಸಿಗದೇ ಅವನಿಂದ ತಪ್ಪಿಸಿಕೊಳ್ಳುತ್ತಾ ಕುಸ್ತಿಯಾಟವನ್ನು ನೋಡಲು ಬಂದಿರುವವರನ್ನು ರಂಜಿಸುತ್ತಾನೆ. ಈ ವಿಶಯ ರಾಜನ ಕಿವಿಯನ್ನೂ ಮುಟ್ಟುತ್ತದೆ. ರಾಜನು ದೇವದತ್ತನನ್ನು ಕರೆತರಲು ತನ್ನ ಸೇವಕರಿಗೆ ತಿಳಿಸುತ್ತಾನೆ. ತನ್ನ ಹಾಸ್ಯಪ್ರಗ್ನೆಯಿಂದ ಮತ್ತು ಚುರುಕುತನದಿಂದ ರಾಜನ ಮನಸನ್ನು ಗೆಲ್ಲುವಲ್ಲಿ ದೇವದತ್ತ ಯಶ ಕಾಣುತ್ತಾನೆ. ರಾಜನ ಆಸ್ತಾನದಲ್ಲಿ ದೇವದತ್ತನಿಗೆ ವಿದೂಶಕನ ಪಟ್ಟವೂ ಸಿಗುತ್ತದೆ. ಹೀಗೆ, ದೇವದತ್ತ ತನ್ನ ಜಾಣತನವನ್ನು ನಂಬಿ ಅವಕಾಶವನ್ನು ಉಂಟು ಮಾಡಿಕೊಂಡು ಗೆಲುವು ಕಾಣುತ್ತಾನೆ.

ಆದ್ದರಿಂದ, ನಮ್ಮ ಜೀವನದಲ್ಲಿ ಮುನ್ನಡೆಯಲು ಅವಕಾಶ ಸಿಗದಿದ್ದಾಗ, ಎದೆಗುಂದದೆ ಹೊಸ ಅವಕಾಶಗಳನ್ನು ಸ್ರುಶ್ಟಿಸಿಕೊಳ್ಳಲು ಮುಂದಾಗಬೇಕು. ಆಗ ಅಂದುಕೊಂಡ ಕೆಲಸಗಳಲ್ಲಿ ಗೆಲವು ಕಾಣುವುದು ಕಂಡಿತ! .

(ಚಿತ್ರ ಸೆಲೆ: storyplanets.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: