ಕವಿತೆ: ಮನವ ನೋಯಿಸದಿರು
– ವೆಂಕಟೇಶ ಚಾಗಿ.
ಮತ್ತದೇ ಮಾತನು
ಮರಳಿ ನುಡಿಯದಿರು
ಒಳಗಿರುವ ದುಕ್ಕವ ಕೆದಕಿ
ಮನವ ನೋಯಿಸದಿರು
ಸುಳಿಯೊಳಗೆ
ಸಿಲುಕಿರುವ ಮನವಿದು
ಮರೆತು ಹೋದ ಗಳಿಗೆಗಳ
ಮತ್ತೆ ಮತ್ತೆ ನೆನಪಿಸಿ
ಮನವ ನೋಯಿಸದಿರು
ನಾವಂದು ನಡೆದಾಡಿದ
ಹಾದಿಬೀದಿಗಳೆಲ್ಲ
ನನ್ನ ನಿನ್ನನು ಮರೆತು
ಸಂತಸದಿಂದಿರುವಾಗ
ನೆನಪಿನ ಮಳೆ ಸುರಿಸಿ
ಮನವ ನೋಯಿಸದಿರು
ನಾನಂದು ಕೊಟ್ಟ
ನಲಿವ ಗುಲಾಬಿಯು ಇಂದು
ಹೊಸ ಬದುಕ ಕಟ್ಟಿ
ಹಸಿರು ವನದೊಳಗೆ
ಹೆಸರ ಮಾಡಿದ ಮೇಲೆ
ಹಳೆಯ ಕೆಸರ ನೆನಪಿಸಿ
ಮನವ ನೋಯಿಸದಿರು
ಹಳೆಯ ಪತ್ರಗಳೆಲ್ಲ
ಹೊಳಪು ಕಳೆದುಕೊಂಡು
ಗೆದ್ದಲುಗಳ ಹಸಿವಿಗೆ
ಆಹಾರವಾಗಿ ಕರಗುತಿರುವಾಗ
ಮತ್ತದೇ ಲೇಕನಿಯ ನೀಡಿ
ಹೊಸ ನೆನಪ ಬರೆಯಿಸಿ
ಮನವ ನೋಯಿಸದಿರು
ಆಸೆ ಬರವಸೆಗಳೆಲ್ಲ
ಬಸಿರ ಕಳೆದುಕೊಂಡಿವೆ ಈಗ
ನಿನ್ನ ನೆನಪುಗಳ ಮರೆತು
ಹೊಸ ಬರವಸೆಗಳ
ಬೆಳೆಯುತಿವೆ ಬರದಿಂದ
ಬತ್ತಿರುವ ಬಯಕೆಗಳ ಕರೆದು
ಮನವ ನೋಯಿಸದಿರು
(ಚಿತ್ರ ಸೆಲೆ: pxhere.com)
ಇತ್ತೀಚಿನ ಅನಿಸಿಕೆಗಳು