ಐ ಪಿ ಎಲ್ 12 ರಲ್ಲಿ ಕರ‍್ನಾಟಕದ ಕ್ರಿಕೆಟಿಗರು

ಆದರ‍್ಶ್ ಯು. ಎಂ.

 

ಕರ‍್ನಾಟಕ ಕ್ರಿಕೆಟ್ ತಂಡದ ಆಟಗಾರರು, Karnataka Cricket players

ಒಂದು ಕಡೆ ಬೇಸಿಗೆ ಬಿಸಿಲ ಕಾವು ಏರುತ್ತಿದೆ. ಇನ್ನೊಂದು ಕಡೆ ಕ್ರಿಕೆಟ್ ಪ್ರೇಮಿಗಳ ಕ್ರಿಕೆಟ್ ಜ್ವರವೂ ಏರುತ್ತಿದೆ. ಇದಕ್ಕೆ ಕಾರಣ ಐಪಿಎಲ್ ಪಂದ್ಯಾವಳಿ. ಎಲ್ಲರ ಚಿತ್ತವೂ ಈಗ ಐಪಿಎಲ್ ನತ್ತ ಇದೆ. ಯಾವುದೋ ರಾಜ್ಯದ ಆಟಗಾರ ಇನ್ಯಾವುದೋ ರಾಜ್ಯದ ಪ್ರಾಂಚೈಸಿಗೆ ಆಡೋದು ಐಪಿಎಲ್ ನ ಗಮ್ಮತ್ತು. ಹಾಗಾದರೆ, ದೇಸೀ ಕ್ರಿಕೆಟ್ ನಲ್ಲಿ ಹೆಸರು ಮಾಡಿರುವ ನಮ್ಮ ಕರ‍್ನಾಟಕ ಕ್ರಿಕೆಟ್ ತಂಡದ ಆಟಗಾರರು ಯಾವ ಯಾವ ತಂಡದಲ್ಲಿದ್ದಾರೆ, ಆರ್ ಸಿ ಬಿ ತಂಡದಲ್ಲಿ ಎಶ್ಟು ಜನ ಕನ್ನಡಿಗರಿದ್ದಾರೆ ಎನ್ನುವ ಪ್ರಶ್ನೆ ಏಳುವುದು ಸಹಜವೇ. ಈ ಬಾರಿಯ ಐ ಪಿ ಎಲ್ ನಲ್ಲಿ ಕರುನಾಡ ಕ್ರಿಕೆಟಿಗರು ಯಾವ ಯಾವ ತಂಡದ ಪರವಾಗಿ ಆಡುತ್ತಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.

ಈ ವರ‍್ಶ ಒಟ್ಟು 5 ತಂಡಗಳಲ್ಲಿ ಕರ‍್ನಾಟಕದ 11 ಮಂದಿ ಆಟಗಾರರಿರುವುದು ಹೆಮ್ಮೆಯ ವಿಚಾರ. ಒಟ್ಟು 8 ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳನ್ನು ಬಿಟ್ಟರೆ ಮತ್ತೆಲ್ಲ ತಂಡಗಳಲ್ಲೂ ಕರ‍್ನಾಟಕದ ಆಟಗಾರರಿದ್ದಾರೆ.

ಕೋಲ್ಕತಾ ನೈಟ್ ರೈಡರ‍್ಸ್ ತಂಡದಲ್ಲಿ ಕರ‍್ನಾಟಕದ ಮೂವರು ಆಟಗಾರರಿದ್ದಾರೆ. ಅದರಲ್ಲಿಯ ರಾಬಿನ್ ಉತ್ತಪ್ಪ ಈ ತಂಡದ ಉಪನಾಯಕರೂ ಹೌದು. ರಾಬಿನ್ ಹೊರತುಪಡಿಸಿ ವೇಗಿ ಪ್ರಸಿದ್ದ್ ಕ್ರಿಶ್ಣ ಹಾಗೂ ಸ್ಪಿನ್ನರ್ ಕಾರಿಯಪ್ಪ ಆಡುತ್ತಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕೆ ಎಲ್ ರಾಹುಲ್, ಕರುಣ್ ನಾಯರ್ ಹಾಗೂ ಮಯಾಂಕ್ ಅಗರ‍್ವಾಲ್ ರಿದ್ದಾರೆ. ಈ ಮೂವರೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಕಳೆದ ಬಾರಿ ಪಂಜಾಬ್ ತಂಡದ ಸಂತಸದ ಕ್ಶಣವೊಂದರಲ್ಲಿ ರಾಹುಲ್ ‘ಈ ಸಲ ಕಪ್ ನಮ್ದೇ ಗುರು ಹೇಳಿ ಬಿಡು ಎಲ್ಲರಿಗೂ’ ಅಂದಿದ್ದನ್ನು ಈ ಕ್ಶಣಕ್ಕೆ ನೆನಪಿಸಿಕೊಳ್ಳಬಹುದು.

ರಾಜಸ್ತಾನ ರಾಯಲ್ಸ್ ನಲ್ಲೂ ಕೂಡಾ ಮೂವರು ಕರ‍್ನಾಟಕದ ಆಟಗಾರರಿದ್ದಾರೆ. ಸ್ಪಿನ್ ಅವಳಿಗಳಾದ ಕ್ರಿಶ್ಣಪ್ಪ ಗೌತಮ್ ಹಾಗೂ ಶ್ರೇಯಸ್ ಗೋಪಾಲ್ ಜೊತೆಗೆ ಆಲ್ ರೌಂಡರ್ ಸ್ಟುವರ‍್ಟ್ ಬಿನ್ನಿ ಈ ತಂಡದಲ್ಲಿದ್ದಾರೆ. ಗೌತಮ್ ಹಾಗೂ ಶ್ರೇಯಸ್ ಗೋಪಾಲ್ ಕಳೆದ ಬಾರಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು.

ಸನ್ ರೈಸರ‍್ಸ್ ಹೈದರಾಬಾದ್ ನಲ್ಲಿ ನಮ್ಮ ಕರ‍್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಆಡುತ್ತಿದ್ದಾರೆ. ಇತ್ತೀಚೆಗೆ ಸೈಯದ್ ಮುಶ್ತಾಕ್ ಅಲಿ ಟಿ-20 ಸರಣಿಯಲ್ಲಿ ಶತಕಗಳನ್ನು ಗಳಿಸಿದ್ದ ಮನೀಶ್ ಪಾಂಡೆ ಮೇಲೆ ಸಾಕಶ್ಟು ಬರವಸೆಯಿದೆ. ಆದರೆ ‘ಮಾಮ್ಸ್ ಎಡ್ಜ್ ಆದರೆ ಅಲ್ಲೇ ಬರುತ್ತೇ’ ಅಂತ ಹೇಳೋಕೆ ಮನೀಶ್ ಗೆ ಕರ‍್ನಾಟಕದ ಆಟಗಾರರಾರೂ ಇಲ್ಲ ಹೈದರಾಬಾದ್ ತಂಡದಲ್ಲಿ.

ಇನ್ನೂ ಕೊನೆಯದಾಗಿ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡದಲ್ಲಿ ಯಾರಾದ್ರೂ ಕರ‍್ನಾಟಕದ ಆಟಗಾರರಿದ್ದಾರಾ ಅಂತ ಚಾಲೆಂಜ್ ಮಾಡಿದರೆ, ಇದ್ದಾನೆ ಒಬ್ಬ ಅಂತ ಹೇಳೋಕೆ ಒಬ್ಬ ಆಟಗಾರನಿದ್ದಾನೆ. ಆತನೇ ಎಡಗೈ ಬ್ಯಾಟ್ಸ್ ಮನ್ ದೇವದತ್ ಪಡಿಕ್ಕಲ್. ಆದರೆ ಆರ್ ಸಿ ಬಿ, ಹನ್ನೊಂದು ಆಟಗಾರರನ್ನು ಆರಿಸುವ ಪರಿ ನೋಡಿದರೆ ಪಡಿಕ್ಕಲ್ ಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುವುದು ಕಡಿಮೆ ಅಂತ ಅನಿಸುತ್ತದೆ.

ಒಟ್ಟಾರೆಯಾಗಿ ನಮ್ಮ ಆಟಗಾರರು ಅದಾವ ತಂಡದಲ್ಲೇ ಆಡುತ್ತಿರಲಿ, ಅವರೆಲ್ಲಾ ಚೆನ್ನಾಗಿ ಆಡಲಿ ಮತ್ತು ನಮ್ಮೆಲ್ಲರ ಬೆಂಬಲ ಅವರ ಮೇಲಿರಲಿ. ಹಾಗೇ, ಐಪಿಎಲ್ ಈ ಬಾರಿ ಸ್ಟಾರ್ ಸ್ಪೋರ‍್ಟ್ಸ್ ಕನ್ನಡ ಚಾನೆಲ್ ನಲ್ಲಿ ಬರುತ್ತಿದೆ. ಕನ್ನಡದಲ್ಲೇ ಸ್ಕೋರ್ ನೀಡುತ್ತಿರುವುದು, ಕನ್ನಡದಲ್ಲೇ ವಿವರಣೆ ಕೊಡುತ್ತಿರುವುದು ಕಣ್ಣಿಗೆ, ಕಿವಿಗೆ ಹಬ್ಬ. ಹಾಗಾಗಿ ಐಪಿಎಲ್ ಅನ್ನು ಸ್ಟಾರ್ ಸ್ಪೋರ‍್ಟ್ಸ್ ಕನ್ನಡ ಚಾನೆಲ್ ನಲ್ಲಿಯೇ ನೋಡೋಣ, ನಮ್ಮ ಕರ‍್ನಾಟಕ ಕ್ರಿಕೆಟ್ ಆಟಗಾರರನ್ನು ಬೆಂಬಲಿಸೋಣ :-).

( ಚಿತ್ರ ಸೆಲೆ: espncricinfo, rediff, cricbuzz, royalchallengers )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks