ನನ್ನೂರಿನಲ್ಲಿ ಆಚರಿಸುತ್ತಿದ್ದ ‘ಬಸವ’ಜಯಂತಿ

ಮಂಜು.ಎಸ್.ಮಾಯಕೊಂಡ.

ಎತ್ತು, ಹೋರಿ, Bull

ಮಾಯಕೊಂಡ ನನ್ನೂರು, ನಾ ನನ್ನ ಗೆಳೆಯರೊಡನೆ ಹಾಡಿ, ಕುಣಿದು, ಬೆಳೆದ ಹುಟ್ಟೂರು. ದಾವಣಗೆರೆ ತಾಲೂಕಿನ ಒಂದು ಗ್ರಾಮ. ಹೋಬಳಿ ಕೇಂದ್ರವಾಗಿದ್ದರೂ ಹಬ್ಬ ಆಚರಣೆಗಳಲ್ಲಿ ತುಸು ಹೆಚ್ಚೇ ಸಂಬ್ರಮದಿಂದ ಪಾಲ್ಗೊಳ್ಳುವ ಜನ ನನ್ನೂರವರು. ಅಂತೆಯೇ, ನಮ್ಮ ಸಂಬ್ರಮದ ಹಬ್ಬ ಉಗಾದಿ ಕಳೆದು ಒಂದು ತಿಂಗಳ ನಂತರದಲ್ಲಿನ ಹಬ್ಬವೇ ಬಸವಜಯಂತಿ.

ರೈತಾಪಿ ಮಂದಿಗೆ ಈ ಹಬ್ಬ ತುಸು ಸಂಬ್ರಮದ್ದು ಎಂದರೆ ತಪ್ಪಾಗದು. ನನ್ನ ಬಾಲ್ಯದ ದಿನಗಳಲ್ಲಿ ಕಂಡದ್ದೇನೆಂದರೆ, ಆಗ ಗ್ರಾಮದ ಬಹುತೇಕರ ಮನೆಗಳಲ್ಲಿ ದನಕರುಗಳನ್ನು ಸಾಕುತ್ತಿದ್ದರು. ಅವುಗಳನ್ನು ತಮ್ಮ ಮನೆಯ ಮಕ್ಕಳಂತೆ ಪಾಲನೆ-ಪೋಶಣೆ ಮಾಡುತ್ತಿದ್ದರು. ಹೋರಿಗಳು ವರುಶದ ಪೂರ‍್ಣಾವದಿಯ ಯಾವೊಂದು ದಿನವೂ ಬಿಡುವಿಲ್ಲದೆ ರೈತನ ಕಾಯಕದಲ್ಲಿ ನೆರವಾಗುತ್ತಿದ್ದವು. ಅವುಗಳ ಬಗ್ಗೆ ಪೂಜ್ಯನೀಯ ಬಾವನೆ ಹೊಂದಿದ್ದರು ರೈತರು. ಬಸವಗಳನ್ನು ಪೂಜಿಸುವ ಹೆಸರಿನಲ್ಲಿ ಆಚರಿಸುವ ಹಬ್ಬವೇ ಬಸವಜಯಂತಿ ಎಂದು ನನ್ನಜ್ಜಿ ನನಗೆ ಅಂದು ಹೇಳಿದ್ದಳು.

ಆ ದಿನಗಳಲ್ಲಿ ಹಬ್ಬಗಳೆಂದರೆ ಸಂಬ್ರಮ ಮನೆ ಮಾಡುತ್ತಿತ್ತು. ಆ ಬಸವ ಜಯಂತಿಯಂದು ನನ್ನಪ್ಪನೊಂದಿಗೆ ಹೋರಿಗಳನ್ನು ಗ್ರಾಮದ ಸಮೀಪದ ಕೆರೆಗೆ ಕರೆದೊಯ್ಯುತ್ತಿದ್ದೆವು. ಆ ವೇಳೆಗಾಗಲೇ ಕೆರೆಯ ಬಳಿ ಹೋರಿ, ಹಸುಗಳೊಂದಿಗೆ ಜನರ ದಂಡೇ ಸೇರಿರುತಿತ್ತು. ನಂತರ ಒಬ್ಬರಾದ ನಂತರ ಒಬ್ಬರು ಆವುಗಳ ಮೈಯನ್ನು ಶುಬ್ರವಾಗಿ ತೊಳೆದು ಮನೆಗೆ ಕರೆ ತರುತ್ತಿದ್ದೆವು. ಅಂದು ದನಕರುಗಳಿಗೆ ಹಬ್ಬದೂಟವನ್ನು ಅಮ್ಮ ಮಾಡಿರುತ್ತಿದ್ದಳು. ಜೋಳ, ಸಜ್ಜೆ, ನವಣೆ ಹಾಗು ಇನ್ನಿತರೆ ದಾನ್ಯಗಳನ್ನು ಕುಟ್ಟಿ ಬೇಯಿಸಿದ ಕಿಚಡಿಯನ್ನು ತಯಾರಿಸಲಾಗುತ್ತಿತ್ತು. ಅದಕ್ಕೂ ಮೊದಲು ದನಕರುಗಳ ಕೊಂಬುಗಳಿಗೆ(ಕೋಡು) ಬಣ್ಣ ಹಚ್ಚಲಾಗುತ್ತಿತ್ತು. ನಂತರ ಅವುಗಳಿಗೆ ಕೊಟ್ಟಿಗೆಯಲ್ಲಿ ಕಟ್ಟಿ ಪೂಜೆ ಸಲ್ಲಿಸುವ ಮೂಲಕ ಬಕ್ತಿ ಸಮರ‍್ಪಿಸಲಾಗುತ್ತಿತ್ತು.

ನಮ್ಮ ಪೂರ‍್ವಜರ ಕಾಲದಿಂದಲೂ ಬಸವಣ್ಣ ಅತವಾ ಹೋರಿಗಳನ್ನು ರೈತನ ಗೆಳೆಯರು ಎಂದೇ ಹೇಳಲಾಗುತ್ತದೆ. ಆದರೆ ಪ್ರಸ್ತುತ ನಮ್ಮೂರಲ್ಲಿ ಬಸವನ ಜಯಂತಿಗೆ ಹುಡುಕಿದರೂ ಬಸವಣ್ಣಗಳೇ ಕಾಣಸಿಗದ ಸ್ತಿತಿ ಅತವಾ ಬಸವಣ್ಣಗಳು ಬೆರಳೆಣಿಕೆಯಶ್ಟು ಇರಬಹುದು. ರೈತರ ಸಮಸ್ಯೆ, ವ್ಯವಸಾಯ-ಉಳುಮೆಯ ಸುತ್ತಲಿನ ಸಮಸ್ಯೆಗಳ ಜೊತೆಗೆ ತಂತ್ರಗ್ನಾನವನ್ನು ಬೇಸಾಯಕ್ಕೆ ಅಳವಡಿಸಿಕೊಳ್ಳುತ್ತಿರುವುದೂ ಇದಕ್ಕೆ ಕಾರಣವಾಗಿರಬಹುದು. ಬದಲಾಗುತ್ತಿರುವ ಜಗತ್ತು ತೋರುತ್ತಿರುವ ಈ ವಾಸ್ತವತೆಯನ್ನು ಒಪ್ಪಲು ತುಸು ಕಶ್ಟವೆನಿಸಿದರೂ ಬದಲಾವಣೆಯೊಂದೇ ಶಾಶ್ವತ ಎಂಬುದನ್ನು ಅರಗಿಸಿಕೊಳ್ಳಲೇಬೇಕಿದೆ.

ನಾವು ಚಿಕ್ಕವರಿದ್ದಾಗ ಮೂಕಪ್ರಾಣಿಗಳೊಂದಿಗೆ ಆಚರಿಸುತ್ತಿದ್ದ ಬಸವಜಯಂತಿಯ ನೆನಪು ನನಗೆ ಎಂದಿಗೂ ಮರೆಯಲಾರದಂತದ್ದು!

( ಚಿತ್ರ ಸೆಲೆ : sundayobserver.lk )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *