ಕಡುನಂಜಿನ ಹಾವು ‘ಬ್ಲ್ಯಾಕ್ ಮಾಂಬಾ’

– ಮಾರಿಸನ್ ಮನೋಹರ್.

ಬ್ಲ್ಯಾಕ್ ಮಾಂಬಾ, ನಂಜು, ಹಾವು, Black mamba, poisonous snake

ಹಾವು ಕಂಡರೆ ಹೌಹಾರದವರು ಯಾರಿದ್ದಾರೆ? ಎಲ್ಲ ಹಾವುಗಳೂ ವಿಶಕಾರಿಯಲ್ಲವೆಂದು ತಿಳಿದರೂ ಅದೇಕೋ ಹಾವನ್ನು ಕಂಡರೆ ಒಂದು ಬಗೆಯ ನಡುಕ ಎಲ್ಲರಲ್ಲಿಯೂ ಸಹಜ. ಆಪ್ರಿಕಾದ ಕಾಡುಗಳಲ್ಲಿ ಕಂಡು ಬರುವ ಒಂದು ಬಗೆಯ ಹಾವು ಎಶ್ಟು ವಿಶಕಾರಿ ಎಂದು ತಿಳಿದರೆ ನೀವು ಕಂಡಿತಾ ಬೆಚ್ಚಿ ಬೀಳುತ್ತೀರಿ! ಇದರ ಒಂದು ಕಡಿತದಲ್ಲಿ ಇರುವಶ್ಟು ನಂಜು 20 ಮಂದಿಯನ್ನು ಕೊಲ್ಲಬಲ್ಲುದು. ಇದುವೇ ಬ್ಲ್ಯಾಕ್ ಮಾಂಬಾ!

‘ಮಾಂಬಾ’ದ ಬೇಟೆಯ ಗತ್ತು

ಹಾವುಗಳ ಹಲ್ಲುಗಳು ಕೇವಲ ಕಚ್ಚುವುದಕ್ಕೆ ಮಾತ್ರ ಇರುತ್ತವೆ, ಅವುಗಳಿಂದ ಊಟವನ್ನು ಅರೆಯುವುದಕ್ಕೆ ಆಗದು. ಹಾವುಗಳು ಹಲ್ಲುಗಳಿಂದ ಕಚ್ಚಿ, ನಂಜನ್ನು ಕಚ್ಚಿದ ಪ್ರಾಣಿಯ ದೇಹದ ಒಳತುಂಬುತ್ತವೆ. ಹಾವುಗಳು ಎರಡು ಬಗೆಯ ನಂಜನ್ನು ಉಂಟುಮಾಡುತ್ತವೆ. ಒಂದು ನರ ನಂಜು (ನ್ಯೂರೋ ಟಾಕ್ಸಿಕ್) ಇನ್ನೊಂದು ನೆತ್ತರ ನಂಜು (ಹೀಮೋ ಟಾಕ್ಸಿಕ್). ಬ್ಲ್ಯಾಕ್ ಮಾಂಬಾ ಹಾವಿನ ನಂಜು ನರಗಳ ಮೇಲೆ ಪರಿಣಾಮ ಬೀರುತ್ತದೆ. ಈ ಹಾವು ಕಚ್ಚಿದಾಗ ನರಗಳಿಗೆ ಹಾವಿನ ನಂಜು ತಾಗಿ, ಪಪ್ಪುಸಗಳಿಗೆ ಅರೆ ಲಕ್ವಾ ಅತವಾ ಪೂರ ಲಕ್ವಾ ಹೊಡೆಯಬಹುದು. ರಾತ್ರಿ ಬೇಟೆಗಾಗಿ ಹೊರಡುವ ಬ್ಲ್ಯಾಕ್ ಮಾಂಬಾ, ಇಲಿ ಮತ್ತು ಹಕ್ಕಿ ಮರಿಗಳಂತಹ ಸಣ್ಣ ಜಂತುಗಳನ್ನು ಕಚ್ಚುತ್ತದೆ. ಆಗ ಲಕ್ವಾ ಹೊಡೆದ ಬೇಟೆ ಕೈಕಾಲು ಅಲ್ಲಾಡಿಸುತ್ತಾ ಬಿದ್ದಿರುತ್ತದೆ. ಕರಿ ಮಾಂಬಾ ಮೆಲ್ಲಗೆ ಅವುಗಳ ಬಳಿ ಹೋಗಿ ಬೇಟೆಯನ್ನು ಇಡಿಯಾಗಿ ನುಂಗಿಬಿಡುತ್ತದೆ. ಪೂರ ನುಂಗಿದ ಮೇಲೆ ಹಾವಿನ ಹೊಟ್ಟೆಯಲ್ಲಿನ ಆ್ಯಸಿಡ್, ಜಂತುಗಳನ್ನು ಕರಗಿಸುತ್ತದೆ. ಬ್ಲ್ಯಾಕ್ ಮಾಂಬಾ ಹುಲಿ-ಸಿಂಹ, ಚಿರತೆಗಳನ್ನೂ ತನ್ನ (ಬುಸ್ ಬುಸ್) ಸದ್ದಿನಿಂದ ಹೆದರಿಸಿ ಓಡಿಸಿಬಿಡುತ್ತದೆ.

ಬ್ಲ್ಯಾಕ್ ಮಾಂಬಾ ನೋಡಲು ಹೇಗಿರುತ್ತದೆ?

ಹೊಳೆವ ಬೆಳ್ಳಿ ಬೂದು ಬಣ್ಣದ ಮೈ, ಬಾಯೊಳಗೆ ಕಪ್ಪು ಬಣ್ಣವುಳ್ಳ ಬ್ಲ್ಯಾಕ್ ಮಾಂಬಾ ಸಾಮಾನ್ಯವಾಗಿ 8 ಅಡಿ ಉದ್ದವಿರುತ್ತದೆ. ಅಂದರೆ ಇಂಡಿಯಾದ ಕಾಳಿಂಗ ಸರ‍್ಪಕ್ಕಿಂತ ತುಸು ಕಡಿಮೆ. ಕೆಲವೊಂದು ಮಾಂಬಾಗಳು 14 ಅಡಿಯವರೆಗೆ ಇರುವ ಎತ್ತುಗೆಗಳು ಇವೆ. ಕರಿ ಮಾಂಬಾ 3 ಅಡಿವರೆಗೆ ತನ್ನ ಸಪೂರ ಮೈಯನ್ನು ಎತ್ತರಿಸಿಕೊಂಡು ನಿಲ್ಲಬಲ್ಲದು!

ಮಾಂಬಾಗಳ ಬದುಕು 

ಆಪ್ರಿಕಾದ ದಟ್ಟಕಾಡುಗಳು, ಸವನ್ನಾ ಹುಲ್ಲುಗಾವಲು, ಜವುಗು ನೆಲಗಳು – ಅತ್ತ ಬಿಸಿಯೂ ಅಲ್ಲದ ಇತ್ತ ಚಳಿಯೂ ಅಲ್ಲದ ನೆಲಗಳಲ್ಲಿ ಇವು ಬದುಕುತ್ತವೆ. ಪೊದೆಗಳಿರುವ ಕೆಸರು ನೆಲಗಳು ಇವಕ್ಕೆ ಹೇಳಿ ಮಾಡಿಸಿದಂತಹ ನೆಲ.

ಸೆಪ್ಟೆಂಬರ್‌ನಿಂದ ಪೆಬ್ರವರಿಯವರಗೆ ಮಾಂಬಾಗಳು ಮೊಟ್ಟೆ ಇಟ್ಟು ಮರಿಮಾಡುತ್ತವೆ. ಮರಿಗಳೂ ಕೂಡ ತಮ್ಮ ತಂದೆತಾಯಿಗಳ ಹಾಗೆ ನಂಜು ತುಂಬಿದವುಗಳೇ. ಹುಟ್ಟಿದ ಕೆಲವೇ ಸೆಕೆಂಡುಗಳಲ್ಲಿ ಒಂದಕ್ಕೊಂದು ಕಚ್ಚಲು ಮುಂದಾಗುತ್ತವೆ.

ಬೆಸುಗೆಯ ಹೊತ್ತು ಬಂದಾಗ ಹೆಣ್ಣು ಮಾಂಬಾದ ಮೈಯಿಂದ ಹೊರಸೂಸುವ ಹಾರ‍್ಮೋನ್ ವಾಸನೆ ಗಾಳಿಯಲ್ಲಿ ಹರಡುತ್ತಾ ಹೋಗುತ್ತದೆ. ಅದರ ಸುಳಿವನ್ನು ಪಡೆದ ಗಂಡು ಮಾಂಬಾಗಳು ವಾಸನೆ ಬಂದ ದಿಕ್ಕಿನತ್ತ ಹೋಗುತ್ತವೆ. ಹಾವುಗಳ ಕಣ್ಣು ಅಶ್ಟು ಚುರುಕಾಗಿರುವುದಿಲ್ಲ. ಆದರೆ ಅವು ವಾಸನೆ ಹಿಡಿಯುವ ಹಾಗೂ ಏನಾದರೂ ತಾಗಿದರೆ ಅವುಗಳಿಗೆ ಕೂಡಲೇ ಅರಿವಾಗುತ್ತದೆ. ಮೆಲ್ಲನೆಯ ಸದ್ದುಗಳನ್ನು ಚೆನ್ನಾಗಿ ಕೇಳಿಸಿಕೊಂಡು, ಕೊಂಚ ವಾಸನೆ ಬಂದರೂ ಅದನ್ನು ಚೆನ್ನಾಗಿ ಗುರುತಿಸುತ್ತವೆ. ಇವುಗಳ ಮೂಗಿನ ಹೊಳ್ಳೆ ತೂತುಗಳು ಬಿಸಿ ಅರಿವುಕಗಳನ್ನು (Heat Sensors) ಹೊಂದಿರುತ್ತವೆ. ತಮ್ಮ ನಾಲಿಗೆಯನ್ನು ಹೊರಗೆ ಒಳಗೆ ಎಳೆದುಕೊಳ್ಳುತ್ತಾ ವಾಸನೆ ಮತ್ತು ಬಿಸಿಯ ಸುಳಿವನ್ನು ಕರಾರುವಕ್ಕಾಗಿ ತಿಳಿದುಕೊಂಡು ಆ ದಿಕ್ಕಿನತ್ತ ಹರಿಯುತ್ತವೆ.

ತಣ್ಣನೆಯ ನೆತ್ತರಿನ ಹಾವುಗಳು ಮೈಬಿಸಿಯಾಗುವವರೆಗೆ ಏನೂ ಮಾಡವು!

ಹಾವುಗಳು ತಣ್ಣನೆಯ ನೆತ್ತರಿನ ಪ್ರಾಣಿಗಳು. ಅವುಗಳಿಗೆ ತಮ್ಮ ಮೈಕಾವನ್ನು ಕಾಪಾಡಿಕೊಳ್ಳಲು ಆಗದು. ತಮ್ಮ ಮೈಗೆ ಬೇಕಾಗುವ ಶಕ್ತಿಯನ್ನು ಪಡಯಲು ಅವು ಆಗಾಗ ಬಿಸಿಲಿಗೆ ಮೈ ಕಾಯಿಸಿಕೊಳ್ಳುತ್ತಿರುತ್ತವೆ. ಮೊಸಳೆ ಕೂಡ ತಂಪುನೆತ್ತರಿನ ಜಂತು, ಅದಕ್ಕೆ ಬಿಸಿಲು ಬಿದ್ದಾಗ ನದಿದಂಡೆಯ ಮೇಲೆ ಬಾಯಿ ತೆರೆದುಕೊಂಡು ಬಿದ್ದುಕೊಂಡಿರುತ್ತದೆ. ಹಾವು ತನ್ನ ಮೈ ಬಿಸಿಯಾಗುವವರೆಗೆ ಏನೂ ಮಾಡದು.

ಹಕ್ಕಿಗಳ ಮೊಟ್ಟೆಗಳೆಂದರೆ ಇದಕ್ಕೆ ಪ್ರಾಣ

ಮಾಂಬಾಗಳು ಬೇಟೆಯಾಡಲು ಇಲಿಗಳನ್ನು ಹಿಡಿಯುವುದಕ್ಕಿಂತ ಹಕ್ಕಿಗಳ ಮೊಟ್ಟೆಗಳನ್ನು ನುಂಗಲು ಬಯಸುತ್ತವೆ. ಇಲಿ ಬೇಟೆಯಾಡಲು ಮಾಂಬಾದ ತುಂಬಾ ಶಕ್ತಿಯ ಬಳಕೆಯಾಗುತ್ತದೆ. ಹಕ್ಕಿಗಳ ಮೊಟ್ಟೆಗಳನ್ನು ಅವುಗಳ ಗೂಡಿಗೆ ದಾಳಿ ಇಟ್ಟು ನುಂಗಿಬಿಡುತ್ತವೆ. ಇದು ಒಮ್ಮೆ ಗೂಡಿಗೆ ನುಗ್ಗಿತೆಂದರೆ ಮೊಟ್ಟೆಗಳ, ಮರಿಹಕ್ಕಿಗಳ ಕತೆ ಮುಗಿಯಿತು, ತಂದೆ-ತಾಯಿ ಹಕ್ಕಿಗಳು ಕಿರುಚುತ್ತಾ ತಮ್ಮ ಕೊಕ್ಕಿನಿಂದ ಮಾಂಬಾವನ್ನು ಕುಕ್ಕುತ್ತಾ ಅತ್ತಿಂದಿತ್ತ ಹಾರಾಡುತ್ತವೆ. 

ಹಾವುಗಳಿರುವುದು ಮಂದಿಯೊಂದಿಗೆ ಬದುಕಲು ಅಲ್ಲ!

ಕರಿಮಾಂಬಾ ಇಂಡಿಯಾದಲ್ಲಿ ಕಾಣಸಿಗದು. ಆಪ್ರಿಕಾ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಇದು ಸಹಜ ವಾತಾವರಣದಲ್ಲಿ ಬದುಕಿದ ಎತ್ತುಗೆ ಇಲ್ಲ. ಉಸುರಿಮನೆಗಳಲ್ಲಿ (zoo) ಇವುಗಳ ದೇಹಕ್ಕೆ ಬೇಕಾದ ಕಾವು ಮತ್ತು ಪರಿಸರವನ್ನು ಉಂಟುಮಾಡಿ ಬೆಳೆಸುತ್ತಾರೆ. ಅಮೆರಿಕಾ ಸೇರಿ ಹಲವು ನಾಡುಗಳಲ್ಲಿ ಹವ್ಯಾಸವಾಗಿ ಹಾವುಗಳನ್ನು ಸಾಕುವವರು ಇನಕ್ಯುಬೇಟರ್ ಗಳಲ್ಲಿ ಮಾಂಬಾದ ಮೊಟ್ಟೆಗಳಿಂದ ಮರಿಮಾಡಿಸಿ ಸಾಕುತ್ತಾರೆ. ಹಾವು ಸಾಕುವವರಿಗೇ ಅವರು ಸಾಕಿದ ಹಾವುಗಳು ಕಚ್ಚಿ ಕೊಂದ ಎತ್ತುಗೆಗಳು ತುಂಬಾ ಇವೆ. ಹಾವುಗಳು ಅಡವಿಗೆ ಇರುವಂತಹ ಜಂತುಗಳು ಮಂದಿಯೊಂದಿಗೆ ಬದುಕುವ ಜಂತುವಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: