ಮಹಾನಗರಿಯಲ್ಲಿ ಮೊದಲ ದಿನ

ಸಂದೀಪ ಔದಿ.

ದೊಡ್ಡ ನಗರ, Big City( ಬರಹಗಾರರ ಮಾತು: ಬದುಕು ಕಂಡುಕೊಳ್ಳಲು ತಮ್ಮ ಊರುಗಳಿಂದ ದೊಡ್ದ ದೊಡ್ದ ನಗರಗಳಿಗೆ ಜನರು ಬರುವುದು ಸಹಜ. ಹೀಗೆ ನಗರಕ್ಕೆ ಬರುವವರೊಬ್ಬರ ಮನದ ತಳಮಳವನ್ನು ತಿಳಿಸುವ ಪ್ರಯತ್ನ ಈ ಕಾಲ್ಪನಿಕ ಬರಹ  )

ಚಳಿಗಾಲದಲ್ಲೂ 36 ರ ಜಳ ಕಂಡ ಊರಿಂದ ಹೊರಟವಳವಳು. ಮಹಾನಗರದ ಸೀಮೆ ಆರಂಬದಲ್ಲೇ ನಡುಗಿಸುವ ಚಳಿ. ಮುಂಜಾವಿನ ಮೌನರಾಗ ಕೇಳಿದವಳಿಗೆ ಹೂಂಕರಿಸಿ ಆರ‍್ಬಟಿಸುತ್ತಿದ್ದ ಒಂದೇ ಗುರಿಯಡೆಗೆ ಹೊರಟಿದ್ದ ಬಸ್ಸುಗಳ ಸದ್ದಿನ ಕಿರಿಕಿರಿ. ಸಾಲು ಸಾಲು ಬಸ್ಸು ಹಾಗೂ ಎಲ್ಲೋ ಕೇಳಿದ್ದ ಹಾಡುಗಳು, ನಿದಿರೆ ಕಾಣದ ಕೆಂಪು ಕಣ್ಣುಗಳು. ಗುಡುಗುಂಟುರು ಪಾಳ್ಯ (ಅವಳಿಗೆ ಕೇಳಿಸಿದ್ದು ಹಾಗೆ) ಎಂಬ ಜೋರಾದ ಕೂಗು ಮತ್ತು ಬ್ರೇಕ್. ತಡವರಸಿ ಎದ್ದವಳೇ, ಬ್ಯಾಗ್ ಹಿಡಿದು ತನ್ನ ಸೀಟಿನಿಂದ ಬಸ್ಸಿನ ಮುಂಬಾಗದಲ್ಲಿ ಬಂದು… ರಾಜನಗರ್ ಬಂತಾ?(ರಾಜಾಜಿನಗರ ಎನ್ನುವುದು ಮರೆತೋಗಿತ್ತು ಆಕೆಗೆ) ಅಂತ ಇನ್ನೇನು ಕೇಳ್ಬೇಕು ಅನ್ನುವಶ್ಟರಲಿ, ‘ಅದಿನ್ನೂ ಬಂದಿಲ್ಲ ಇನ್ನೂ ದೂರ ಅದ, ಬಂದಾಗ ಹೇಳತೇನಿ’ ಅಂದ ಕಂಡಕ್ಟರ್. ಆದರೂ ಅವಳಿಗೆ ಸಮಾದಾನ ಇಲ್ಲ. ಗಟ್ಟಿ ಮನಸ್ಸು ಮಾಡಿ ತನ್ನ ಸೀಟಿಗೆ ಒರಗಿದಳು.

ಸೀಟಿನಲ್ಲಿ ಕೂತವಳು ಪದೇ ಪದೇ ಅಲೆಯುಲಿಯ (mobile) ರಿಮೈಂಡರ್ ಸ್ನೂಜ್ ಮಾಡುತ್ತಿದ್ದಳು. ಅಂತೂ ಇಂತೂ ರಾಜಾಜಿನಗರ ಬಂತು. ಚಿತ್ರ ಮಂದಿರದ ( ನವರಂಗ್ ) ಮುಂದಿನ ಬೀದಿಗೆ ನಡುಗುವ ಕೋಮಲ ಕಾಲುಗಳ ಸ್ಪರ‍್ಶ. ಬಸ್ ಅಲ್ಲಿಂದ ಹೊರಟಾಗ ಒಂದು ಅವಲಕ್ಕಿ ಚೂಡಾ ಮತ್ತ ಕಾಯಿಪಲ್ಲೆ ತುಂಬಿದ ಕಂದು ಬಣ್ಣದ ರಟ್ಟಿನ ಡಬ್ಬ, ಸೂಟಕೇಸ್, ಕಡುಗೆಂಪು ಬಣ್ಣದ ಟ್ರಾವೆಲಿಂಗ್ ಬ್ಯಾಗ್ ಸಂದ್ಯಾಳ ಸುತ್ತ ಕಾವಲುಗಾರರಂತೆ ಹರಡಿವೆ.

ಮೊಬೈಲ್ ಪರ‍್ಸಿನಿಂದ ಹೊರತೆಗೆದು “ನಾನ ಲೇ ಇಲ್ಲೇ ರಾಜನಗರದಾಗ ಇಳದೀನಿ. ಹೆಂಗ ಬರೂದು ಮನೀಗೆ” ಅಂತ ಕೇಳಿದಳು. ಆ ಕಡೆಯಿಂದ ಮಾತಾಡುತ್ತಿದ್ದರೂ ಈಕೆಗೆ ಏನೂ ಕೇಳುತ್ತಿಲ್ಲ. ಕರೆ ಕಟ್ ಮಾಡಿ ಮತ್ತೆ ಕರೆ ಮಾಡಿದರೂ ಹತ್ತುತ್ತಿಲ್ಲ. ಪದೇ ಪದೇ ಪ್ರಯತ್ನಿಸಿದರೂ “ನೀವು ಕರೆ ಮಾಡುತ್ತಿರುವ ಚಂದಾದಾರರು ಸಂಪರ‍್ಕಕ್ಕೆ ಸಿಗುತ್ತಿಲ್ಲ, ದಯವಿಟ್ಟು ಮತ್ತೆ ಪ್ರಯತ್ನಿಸಿ” ಎಂಬ ಅಶರೀರ ವಾಣಿ. ಚಳಿ ಮತ್ತು ಸೆಕೆ ಎರಡೂ ಒಟ್ಟಿಗೆ ಆದ ಅನುಬವ ಸಂದ್ಯಾಳಿಗೆ. ಆತಂಕದಿ ಬೆವರು ಹಾಗೂ ನಡುಕ. ಏನೂ ತೋಚದಾಗದೆ ಇನ್ನೇನು ಆಕೆ ಕುಸಿದೇ ಹೋಗುವ ಸಮಯದಲ್ಲಿ, ಅತ್ತಿತ್ತ ತಿರುಗುತ್ತಿದ್ದ ಕಣ್ಣು ಬಲಬದಿಗೆ ನೋಡಲಾರಂಬಿಸಿತು. ರಾಜನಗರದ ಚಿತ್ರಮಂದಿರದ ಮುಂದೆ ಬಿಳಿ ಪ್ಯಾಂಟು, ಕೆಂಪು ಅಂಗಿ, ಬುಜಕ್ಕೆ ಚಿಕ್ಕ ಚೀಲ ಹಾಕಿಕೊಂಡು ಮಂದಹಾಸ ಬೀರುತ್ತಿದ್ದ ಕನ್ನಡ ಕಣ್ಮಣಿ, ನಟ ಸಾರ‍್ವಬೌಮ ಅಣ್ಣಾವ್ರ ದೊಡ್ಡ ಕಟೌಟು..’ನಗು ನಗುತಾ ನಲಿ ಏನೇ ಆಗಲಿ’ ಎಂದು ಬಂಗಾರದ ಮನುಶ್ಯ ಚಿತ್ರದ ಹಾಡು ಗುನುಗಿದಂತೆ..

ರಸ್ತೆಯ ಇನ್ನೊಂದು ಬದಿಯಲ್ಲಿ, ತುಸುದೂರದಲ್ಲಿ ನಿಂತು ಸಂದ್ಯಾಳ ಅವಸ್ತೆ ನೋಡುತ್ತಿದ್ದ ಆಕೆಯ ಗೆಳತಿ ವೇದಾ ( ಸಂದ್ಯಾಳ ಮೊಬೈಲ್ ನಲ್ಲಿ ಕೇಳಿಬರುತ್ತಿದ್ದ ಚಂದಾದಾರರು ) ಮೆಲ್ಲನೆ ರಸ್ತೆದಾಟಿ ಬರಲಾರಂಬಿಸಿದಳು. ವೇದಾಳನ್ನು ನೋಡುತ್ತಿದ್ದಂತೆ ಸಂದ್ಯಾಳಿಗೆ ಎಲ್ಲಿಲ್ಲದ ಆನಂದ, ಪರಮಾನಂದ. “ಅಬ್ಬಾ, ಅಂತೂ ಬಂದೀ, ನಾ ಇಲ್ಲೇ .. ಯವ್ವ ಏನ್ ಹೇಳ್ಲಿ “… ಅಂತ ತನ್ನ ತಳಮಳವನ್ನು ಹೇಳಲು ಶುರುವಿಟ್ಟುಕೊಂಡಳು ಸಂದ್ಯಾ. ‘ತಿಳೀತು ನಡಿ’ ಅಂತ ನಗುತ್ತಾ ಹೇಳಿ, ಕಂದು ಬಣ್ಣದ ರಟ್ಟಿನ ಡಬ್ಬ ಕೈಗೆತ್ತಿಕೊಂಡು, ಇನ್ನೊಂದು ಕೈಯಲ್ಲಿ ಸಂದ್ಯಾಳ ಬೆರಳು ಹಿಡಿದು ತನ್ನ ಮನೆಗೆ ಕರೆದುಕೊಂಡು ಹೊರಟಳು ವೇದಾ. ‘ನಡ್ಕೊಂಡ ಹೋಗಬಹುದಾ? ದೂರ ಆಗೂದಿಲ್ಲ? ಆಟೋ ಬರೂದಿಲ್ಲ? ಬಸ್ಸಿಗೆ ಹೋದ್ರ?…’ ಎಂಬಿತ್ಯಾದಿ ಪ್ರಶ್ನೆಗಳು ತಲೆಯಲ್ಲೇ ಗಿರಕಿ ಹೊಡೆಯುತ್ತಿದ್ದವು, ಆದರೆ ಸಂದ್ಯಾಳ ನಾಲಿಗೆಯ ಕಡೆಗೆ ಪಯಣಿಸಲಿಲ್ಲ.

ಇದೆಲ್ಲದರ ನಡುವೆ, ತುಸು ಹೆಂಗೋ ಸುದಾರಿಸಿಕೊಂಡು ಮುಕ್ಯರಸ್ತೆಯಿಂದ  ಅಡ್ಡರಸ್ತೆ ಕಡೆಗೆ ಹೊರಳಬೇಕು ಅನ್ನುವಶ್ಟರಲ್ಲಿ, ಮೆಲ್ಲಗೆ ಹಿಂತಿರುಗಿ ಅಣ್ಣಾವ್ರತ್ತ ನೋಡಿ ಮನದಲ್ಲೇ ವಂದಿಸಿದಳು ಸಂದ್ಯಾ. ಅಣ್ಣಾವ್ರು “ಮೇಲೆ ಅವನಿದ್ದಾನೆ, ಹೋಗಿ ಬನ್ನಿ ಸಂದ್ಯಾರವರೇ ” ಅಂದಂತೆ ಅನುಬವ. ಮತ್ತದೇ ಹಾಡು..”ಎಲ್ಲಾ ದೇವನಾ ಕಲೆಯೆಂದೇ ನೀ ತಿಳಿ, ಅದರಿಂದ ನೀ ಕಲಿ..ನಗು ನಗುತಾ ನಲಿ ಏನೇ ಆಗಲಿ” ..ಗುನುಗುನುತ್ತಾ ಗೆಳತಿಯೊಂದಿಗೆ ಹೆಜ್ಜೆ ಹಾಕತೊಡಗಿದಳು.

( ಚಿತ್ರಸೆಲೆ: opening.download )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: