“ನಾಯಿ ಮರಿ ನಾಯಿ ಮರಿ, ತಿಂಡಿ ಬೇಕೆ?”

– ಮಾರಿಸನ್ ಮನೋಹರ್.

ನಾಯಿ, ನಾಯಿಮರಿ, dog,

“ನಾಯಿ ಮರಿ, ನಾಯಿ ಮರಿ, ತಿಂಡಿ ಬೇಕೆ?” ಎಂಬ ಮಕ್ಕಳ ಹಾಡು ಯಾರು ಕೇಳಿಲ್ಲ? ನಾಯಿಮರಿಗಳನ್ನು, ನಾಯಿಗಳನ್ನು ಮುದ್ದು ಮಾಡದವರು ಇಲ್ಲವೇ ಇಲ್ಲ ಎನ್ನಬಹುದು! ನಾಯಿಗಳ ಹುಟ್ಟಿದ ಹಬ್ಬ, ನಾಯಿಗಳ ಮದುವೆ (ಮೂಡನಂಬಿಕೆಯದ್ದಲ್ಲ, ನಿಜವಾದ ಮದುವೆ) ನಾಯಿಗಳ ಸೀಮಂತ ಮಾಡುವವರೂ, ತಮ್ಮ ನಾಯಿಗಳ ಹೆಸರಿಗೆ ಮಿಲಿಯನ್ ಡಾಲರ್ ಮೌಲ್ಯದ ಆಸ್ತಿ ಬರೆದಿಟ್ಟು ಹೋಗಿರುವ ಮಂದಿಯೂ ಇದ್ದಾರೆ!

ಒಂದು ಸಲ ನನ್ನ ನೆಂಟರೊಬ್ಬರ ಮನೆಗೆ ಅವರ ಮಗನ ಹುಟ್ಟಿದ ದಿನದ ಕಾರ‍್ಯಕ್ರಮಕ್ಕೆ ಹೋಗಿದ್ದೆವು. ಪ್ರೋಗ್ರಾಮ್ ತುಂಬಾ ಅದ್ದೂರಿಯಾಗಿ ಮಾಡಿದ್ದರು. ಡೆಕೋರೇಶನ್, ಟೆಂಟ್, ಅಡುಗೆ ಗಮಗಮ ಮಂದಿಯ ಸಡಗರ ತುಂಬಿ ತುಳುಕುತ್ತಿತ್ತು. ಹುಟ್ಟುಹಬ್ಬದ ಪ್ರೋಗ್ರಾಮಿಗೂ ನೂರಾರು ಜನರಿಗೆ ಹೇಳಿದ್ದರು. ಹುಟ್ಟುಹಬ್ಬ ಕೇಕ್ ಕತ್ತರಿಸುವುದು, ಹೂವಿನ ಸರ ಹಾಕುವುದು, ಉಡುಗೊರೆ ಕೊಡುವುದು ಎಲ್ಲ ಮುಗಿದು ಊಟಕ್ಕೆ ಎಲ್ಲರನ್ನು ಎಬ್ಬಿಸಿದರು. ಸೊಗಸಾಗಿ ಮಾಡಿದ್ದ ಊಟ ಎಲ್ಲರೂ ಸವಿಯುತ್ತಿರುವಾಗ ಆ ಮನೆಯವರ ನಾಯಿ ಬಂತು ಊಟದ ಜಾಗಕ್ಕೆ. ಆ ಮನೆಯವರ ಜೀವ ಅದು. ಅವರ ಮಕ್ಕಳು ಅದನ್ನು ತಮ್ಮ ಅಣ್ಣ-ತಮ್ಮ ಅಂತಲೇ ಮುದ್ದು ಮಾಡುತ್ತಿದ್ದರು. ಆ ನಾಯಿ ಎಲ್ಲರ ಬಳಿಯೂ ಹೋಗುತ್ತಾ ಆಟವಾಡುತ್ತಾ ಇತ್ತು. ಕೆಲವರಿಗೆ ಮಜವೆನಿಸಿತು ಕೆಲವರಿಗೆ ಹೊಸದೆನಿಸಿ ವಿಚಿತ್ರವೆನಿಸಿತು. ಅಲ್ಲಿ ಊಟ ಮಾಡುತ್ತಿದ್ದ ದೂರದ ನೆಂಟನೊಬ್ಬನಿಗೆ ಈ ನಾಯಿಯ ಇರುವಿಕೆ ತಾಳದಾಯಿತು. ಊಟದ ಜಾಗಕ್ಕೆ ಅದು ಹೇಗೆ ನಾಯಿಯನ್ನು ಬಿಟ್ಟರು ಅಂತ ಗುಲ್ಲು ಎಬ್ಬಿಸಿದ. ಹೋದವನೇ ಸೀದಾ ಅಡಿಗೆಯವರ ಬಳಿಯಿಂದ ಉದ್ದನೆಯ ಅನ್ನದ ಹುಟ್ಟನ್ನು ತಂದು ಎಲ್ಲರ ಮುಂದೆಯೇ ಆ ನಾಯಿಗೆ ಅದರಿಂದ ಜೋರಾಗಿ ಬಡಿದ.ನಾಯಿ ಕುಯ್ಯೋ ಮರ‍್ರೋ… ಅಂತ ಗಟ್ಟಿಯಾಗಿ ಕರ‍್ಕಶವಾಗಿ ಚೀರುತ್ತಾ ಕೂಗಿಕೊಳ್ಳುತ್ತಾ ಎಲ್ಲರ ನಡುವಿನಿಂದ ಹೊರಗೆ ಓಡಿಹೋಯಿತು.

ಅದನ್ನು ಹಾಗೆ ಹೊಡೆದದ್ದನ್ನು ನೋಡಿದ ಬರ‍್ತಡೇ ಬಾಯ್ ನ ಅಕ್ಕ ಕಣ್ಣು ತುಂಬಾ ನೀರು ತುಂಬಿಕೊಂಡು ಗೋಳೋ ಅಂತ ಅಳಲು ಹಚ್ಚಿಕೊಂಡಳು. ಅತ್ತದ್ದೂ ಅಲ್ಲದೇ ಪಟ್ಟಣದ ಕಡೆಯ ಹಳ್ಳಿ ಕಡೆಯ ಎರಡೂ ಕಡೆ ಬಳಸಲ್ಪಡುವ ಒಳ್ಳೆಯ ಮಾತುಗಳನ್ನು ಬೇಸಿಗೆಯ ಮಳೆಯಂತೆ ಅವನ ಮೇಲೆ ಸುರಿಸಿದಳು. ಊಟಕ್ಕೆ ಸ್ವಲ್ಪ ಹೊತ್ತು ತೊಂದರೆಯಾಯಿತು. ಆದರೂ ತುಂಬಾ ಹೊತ್ತಾಗಿದ್ದರಿಂದ ಮಂದಿ ತಮ್ಮ ಊಟ ಮುಂದುವರೆಸಿದರು. ಹಾಗೆ ಹೊಡೆಸಿಕೊಂಡ ನಾಯಿ ಪಾಪ ಮತ್ತೆಂದೂ ಅವರ ಮನೆಗೆ ಹಿಂದಿರುಗಲಿಲ್ಲ ಅಂತ ಆಮೇಲೆ ಅವರು ಒಂದು ಸಲ ಬೇಟಿಯಾದಾಗ ಹೇಳಿದ್ದರು.

ನಾಯಿಗಳು ಸಾಕಿದವರ ಮೇಲೆ ಜೀವವನ್ನೇ ಇಟ್ಟುಕೊಂಡಿರುತ್ತವೆ

ನಾಯಿಗಳು ಬೆಕ್ಕುಗಳ ಹಾಗೆ ಅಲ್ಲ. ಬೆಕ್ಕುಗಳ ನೇಚರ್ ತುಂಬಾ ಬೇರೆ, ಅವು ಜಾಗದ ಜೊತೆ ಸಲಿಗೆಯನ್ನು ಬೆಳೆಸಿಕೊಳ್ಳುತ್ತವೆ ಅದೇ ನಾಯಿಗಳು ಹಾಗಲ್ಲ. ತಮ್ಮನ್ನು ಸಾಕಿದವರ ಮೇಲೆ ಜೀವವನ್ನೇ ಮಡಗಿಬಿಡುತ್ತವೆ. ತಮ್ಮನ್ನು ಪ್ರೀತಿಸುವ ಮಂದಿಯನ್ನು ತುಂಬಾ ಹಚ್ಚಿಕೊಂಡು ಬಿಡುತ್ತವೆ. ಕೆಲವು ನಾಯಿಗಳು ತಮ್ಮನ್ನು ತುಂಬಾ ಪ್ರೀತಿಸಿದ ಮಾಲೀಕನ ಸಾವನ್ನು ತಾಳಲಾಗದೆ ತಾವೂ ಊಟ ನೀರು ಬಿಟ್ಟು ಪ್ರಾಣ ಬಿಡುತ್ತವೆ! ಬೆಕ್ಕುಗಳು ಹಾಗಲ್ಲ, ಅವುಗಳಿಗಾಗಿ ಮಂದಿ ಪ್ರಾಣ ಬಿಟ್ಟರೂ ಕೇರ್ ಮಾಡಲ್ಲ.

ನಾಯಿಗಳಿಗೆ ತಮ್ಮ ಯಜಮಾನರೊಡನೆ ಆಟವಾಡುವುದೆಂದರೆ ಪ್ರಾಣ

ನಾಯಿಗಳು ತಮ್ಮ ಸುತ್ತ ಮುತ್ತ ಇರುವ ಜನರನ್ನು ಅರ‍್ತ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತವೆ. ಅವರಿಗೆ ದುಕ್ಕವಾದರೆ ಅವು ಸುಸ್ತಾಗಿ ಮೂಲೆಯಲ್ಲಿ ಕುಳಿತುಕೊಳ್ಳುತ್ತವೆ. ಅವರು ಸಂತಸದಿಂದ ಇದ್ದರೆ ಅವರಿಗಿಂತಲೂ ಹೆಚ್ಚು ಚಟುವಟಿಕೆಯಾಗಿ ಇರುತ್ತವೆ. ಬೆಕ್ಕುಗಳು ಗದ್ದಲವನ್ನು ತಾಳುವುದೂ ಇಲ್ಲ ಇಶ್ಟಪಡುವುದೂ ಇಲ್ಲ. ಅವಕ್ಕೆ ನಿಶ್ಯಬ್ದ ವಾತಾವರಣ ಸಿಕ್ಕರೆ ಸಾಕು, ಹಾಯಾಗಿ ನಿದ್ದೆ ಮಾಡುತ್ತವೆ. ನಾಯಿಗಳಿಗೆ ಚಟುವಟಿಕೆ ಬೇಕು, ಓಡಾಟ, ಮೋಜಿನಾಟ ಬಹಳ ಇಶ್ಟಪಡುತ್ತವೆ. ಮಾಲೀಕ ಎಲ್ಲಿಗೇ ಹೋದರೂ ಅವನ ಜೊತೆ ಹೋಗಲು ಹವಣಿಸುತ್ತವೆ. ನಾಯಿಗಳಿಗೆ “ಸಿಟ್, ಸ್ಟಾಂಡ್, ಶೇಕ್ ಹ್ಯಾಂಡ್” ಅಂತ ಮಂದಿ ಹೇಳುವುದನ್ನು ನೀವು ನೋಡೇ ಇರುತ್ತೀರಿ, ಆದರೆ ಬೆಕ್ಕುಗಳು ಹಾಗೆ ಎಂದೂ ನಿಮ್ಮ ಮಾತನ್ನು ಕೇಳುವುದಿಲ್ಲ!

ನಾಯಿಗಳ ತಳಿಗಳು

ನಾಯಿಗಳಲ್ಲಿ ಹಲವಾರು ತಳಿಗಳಿವೆ. ತುಂಬಾ ಹೆಸರುವಾಸಿಯಾದ ತಳಿಗಳೂ ತುಂಬಾ ಕುಕ್ಯಾತವಾದ ತಳಿಗಳೂ ಇವೆ. ಸಪೂರ ಉದ್ದನೆಯ ಮೈಯ ‘ಮುದೋಳ್ ಹೌಂಡ್‘, ಮುದ್ದಾದ ‘ಪಗ್‘, ಹೆಣ್ಮಕ್ಕಳ ಪರ‍್ಸ್ ನಲ್ಲಿ ಇಟ್ಟುಕೊಳ್ಳಬಹುದಾದಶ್ಟು ಚಿಕ್ಕದಾದ  ‘ಚಿವ್ಹಾವಾ’, ಪೋಲಿಸ್ ನಾಯಿ ಅನ್ನಿಸಿಕೊಂಡ ‘ಜರ‍್ಮನ್ ಶೆಪರ‍್ಡ್‘, ಮಂದಿಯಲ್ಲಿ ಬಯ ಹುಟ್ಟಿಸುವ ಅಪಾಯಕಾರಿ ತಳಿಯ ‘ಪಿಟ್ ಬುಲ್’, ಮನೆಯ ಮುಂದೆ ಕಟ್ಟುವ ತುಪ್ಪಳದ ‘ಪಾಮೇರಿಯನ್’, ಈಗೀಗ ಕರ‍್ನಾಟಕದಲ್ಲಿ ಕೂಡ ತುಂಬಾ ಪೇಮಸ್ ಆಗುತ್ತಿರುವ ‘ಹಸ್ಕೀ’ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಹಸ್ಕೀ ತಳಿ ನಾಯಿಗಳು ಬೂಗೋಳದ ಬಡಗಣ ತುದಿಯ (ನಾರ‍್ತ್ ಪೋಲ್) ಹಿಮದಲ್ಲಿ ಇರುವ ತಳಿಗಳು, ಎಲ್ಲ ಕಡೆ ಹೊಂದಿಕೊಳ್ಳುತ್ತವೆ. ಬ್ರಿಟಿಶ್ ‘ಬುಲ್ ಡಾಗ್’ (ವಿನಸ್ಟನ್ ಚರ‍್ಚಿಲ್ ನನ್ನು ‘ಬ್ರಿಟಿಶ್ ಬುಲಡಾಗ್’ ಅಂತ ಕರೆಯುತ್ತಾರೆ) ಮಕ್ಕಳ ಅಚ್ಚುಮೆಚ್ಚಿನ ‘ ಗೋಲ್ಡನ್ ರಿಟ್ರೀವರ‍್’ ,’ಲ್ಯಾಬ್ರಡರ‍್’ ಇನ್ನೂ ಹಲವಿವೆ. ನಾನು ಚಿಕ್ಕವನಿದ್ದಾಗ ನಾಯಿಗಳಲ್ಲಿ ಇಶ್ಟು ತಳಿ ಇರುತ್ತವೆ ಅಂತ ಗೊತ್ತಿರಲಿಲ್ಲ. ನಾಯಿ ಅಂದರೆ ‘ದೊಡ್ಡದು, ಚಿಕ್ಕದು, ಮರಿ, ಉದ್ದ ಕೂದಲಿನದು’ ಇಶ್ಟೇ ಅಂತ ಗುರುತು ಮಾಡುತ್ತಿದ್ದೆ!

ಸಿಂಗಪುರದಲ್ಲಿ ನಾಯಿ ಹೊಲಸು ಮಾಡಿದರೆ ಅದನ್ನು ಮಾಲೀಕನೇ ತೆಗೆಯಬೇಕು!

ಸಿಂಗಪುರದಲ್ಲಿ ನಾಯಿಯನ್ನು ಹೊರಗೆ ಸುತ್ತಾಡಿಸಲು ಹೋಗುವ ಮಾಲೀಕನು ತನ್ನ ಜೊತೆಯಲ್ಲಿ ಒಂದು ಬ್ಯಾಗನ್ನು ಒಯ್ಯುವುದು ಕಡ್ಡಾಯ. ನಾಯಿ ಎಲ್ಲಿಯಾದರೂ ಹೊಲಸು ಮಾಡಿದರೆ ಅದನ್ನು ಅದರ ಮಾಲೀಕನೇ ತೆಗೆಯಬೇಕು. ಇಲ್ಲದಿದ್ದರೆ ಬಾರೀ ದಂಡ ಕಟ್ಟಬೇಕು, ತಪ್ಪಿದ್ದಲ್ಲಿ ಸೆರೆಮನೆಯೇ!

ನಾಯಿಗಳನ್ನು ಕಂಡರೆ ಈ ಸೆಲೆಬ್ರಿಟಿಗಳಿಗೆ ಆಗುತ್ತಿರಲಿಲ್ಲ!

ನಾಯಿಗಳನ್ನು ಎಲ್ಲರೂ ಮುದ್ದುಮಾಡುತ್ತಾರೆ ಆದರೆ ನಾಯಿಗಳನ್ನು ಇಶ್ಟಪಡದ ಕ್ಯಾತ ಸೆಲೆಬ್ರಿಟಿಗಳೂ ಇದ್ದಾರೆ. ಇಂಗ್ಲೆಂಡಿನ ಪ್ರದಾನಿ ವಿನಸ್ಟನ ಚರ‍್ಚಿಲ್, ಆಲ್ಬರ‍್ಟ್ ಐನ್‍ಸ್ಟೀನ್, ಇಂಗ್ಲೆಂಡ್ ರಾಣಿ ವಿಕ್ಟೋರಿಯಾ, ಪಾಪ್ ಸ್ಟಾರ್ ಮೈಕಲ್ ಜ್ಯಾಕಸನ್ ಇವರೆಲ್ಲ ನಾಯಿಗಳನ್ನು ಇಶ್ಟಪಡದ ಸೆಲೆಬ್ರಿಟಿಗಳು. ಡೇವಿಡ್ ಬೆಕೆಮ್ ಗೆ ಹಕ್ಕಿಗಳು ಅಂದರೆ ಬಯ, ಮಿಕೀ ಮೌಸ್ ರಚಿಸಿದ ವಾಲ್ಟ್ ಡಿಸ್ನಿ ಇಲಿಗಳಿಗೆ ಹೆದರುತ್ತಿದ್ದ! ಕ್ಯಾತ ಹಾಲಿವುಡ್ ಹಿರೋ ಜಾನಿ ಡೆಪ್ಪ್ ಗೆ ಜೇಡ ಅಂದರೆ ಬಯ, ಅಡಾಲ್ಪ ಹಿಟ್ಲರನಿಗೆ ಬೆಕ್ಕುಗಳೆಂದ ಬಯವಿತ್ತು. ನಾಯಿಗಳ ಬಗ್ಗೆ ಇರುವ ಹೆದರಿಕೆಗೆ ಸೈನೋ ಪೋಬಿಯಾ ಅನ್ನುತ್ತಾರೆ. ಇಂಗ್ಲೆಂಡಿನಲ್ಲಿ ನಾಯಿಗಳನ್ನು ಅತಿಯಾಗಿ ಮುದ್ದುಮಾಡುತ್ತಾರೆ. ಟರ‍್ಕಿಯಲ್ಲಿ ಬೆಕ್ಕಿಗೆ ಅರಸನ ಸಮ್ಮಾನ, ಅದೇ ನಾಯಿಗಳನ್ನು ಕಂಡರೆ ಹಗೆ.

HMV ಕಂಪನಿಯ ಲೋಗೋ ಹಿಂದಿನ ಕತೆ

HMV ರಿಕಾರ‍್ಡಿಂಗ್ ಕಂಪನಿಯ ಲೋಗೋದ ಮೇಲೆ ಗ್ರಾಮಾಪೋನ್ ಗೆ ಕಿವಿ ಆಲಿಸಿ ಕೂತಿರುವ ನಾಯಿ ಮರಿಯೊಂದರ ತಿಟ್ಟವಿದೆ, ಅದರ ಹೆಸರು ನಿಪ್ಪರ್. ಇದು ಯಾಕೆ ಅಂದರೆ HMV ಕಂಪನಿಯ ಮಾಲೀಕನ ಬಳಿ ಒಂದು ನಾಯಿಯಿರುತ್ತದೆ. ಅದರ ಮೊದಲ ಮಾಲೀಕ ಅವನು ತೀರಿಹೋದ ಮೇಲೆ ಅವನ ನಾಯಿ ಊಟ ಮಾಡದೇ ನೀರು ಕುಡಿಯದೇ ಹಾಗೇ ಮರುಕಪಡುತ್ತಾ ಇರುತ್ತದೆ. ಆಗ ಮೊದಲ ಮಾಲೀಕನ ದನಿಯಿದ್ದ ರೆಕಾರ‍್ಡ್ ಒಂದನ್ನು ಅವರು ಗ್ರಾಮಾಪೋನ್ ನಲ್ಲಿ ಹಾಕಿ ಆ ನಾಯಿಗೆ ಕೇಳುವಂತೆ ಇಡುತ್ತಾರೆ ಆಗ ಎದ್ದ ನಾಯಿ ಆ ಗ್ರಾಮಾಪೋನ್ ಬಳಿ ಕುಳಿತು ಗಮನಕೊಟ್ಟು ಅವನ ದನಿಯನ್ನು ಕೇಳಿಸಿಕೊಳ್ಳುತ್ತದೆ‌. ಅದರಿಂದ ಪ್ರೇರಿತವಾಗಿ HMV ಕಂಪನಿಯ ಲೋಗೋದ ಮೇಲೆ ಆ ನಾಯಿಯ ಚಿತ್ರವಿದೆ. HMV ಅಂದರೆ His Master’s Voice, “ಅದರ ಮಾಲೀಕ‌ನ ಸ್ವರ” ಅಂತ ಅರ‍್ತ!

(ಮಾಹಿತಿ ಮತ್ತು ಚಿತ್ರ ಸೆಲೆ: wikipedia/Dogwikipedia.org/HMV)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.