ಬೊಂಬೆಗಳ ಕತೆ – ಟೆಡ್ಡಿ ಬೇರ್

ಜಯತೀರ‍್ತ ನಾಡಗವ್ಡ.

ಟೆಡ್ದಿ ಬೇರ್, Teddy Bear

1880ರಲ್ಲಿ ಜರ‍್ಮನಿಯ ಗಿಂಗೆನ್ (Giengen) ಎಂಬ ಪಟ್ಟಣದಲ್ಲಿ ಹೊಲಿಗೆ ಅಂಗಡಿಯೊಂದನ್ನು ಶುರುಮಾಡಲಾಯಿತು. ಮಾರ‍್ಗರೇಟ್ ಸ್ಟೀಪ್ (Margaret Steiff) ಎಂಬ ಸಿಂಪಿಗಿತ್ತಿ(Seamstress) ಶುರು ಮಾಡಿದ ಅಂಗಡಿ, ಬಟ್ಟೆಯಿಂದ ತಯಾರಿಸಿದ ಆನೆ ಬೊಂಬೆಗಳನ್ನು ಮಾರುಕಟ್ಟೆಗೆ ತಂದು ಕೆಲವೇ ವರುಶಗಳಲ್ಲಿ ಸಾಕಶ್ಟು ಹೆಸರು ಮಾಡುತ್ತದೆ. ಮುಂಬರುವ ದಿನಗಳಲ್ಲಿ ಆನೆಗಳಲ್ಲದೇ ಒಂಟೆ, ಕೋತಿ, ಕುದುರೆ, ಜಿರಾಪೆ, ಬೆಕ್ಕು, ನಾಯಿ, ಕತ್ತೆ, ಇಲಿ ಮುಂತಾದ ಉಸಿರಿಗಳನ್ನು(Animals) ಬಟ್ಟೆಯಿಂದ ತಯಾರಿಸಿ ಮಕ್ಕಳ ನೆಚ್ಚಿನ ಆಟಿಕೆ ಅಂಗಡಿಯಾಗಿ ಬೆಳೆಯುತ್ತದೆ. 1902ರ ಹೊತ್ತಿಗೆ ಮಾರ‍್ಗರೇಟ್‌ಳ ಸೋದರಳಿಯ ರಿಚರ‍್ಡ್ ಸ್ಟೀಪ್(Richard Steiff) ಹೊಸದೊಂದು ಬೊಂಬೆಯನ್ನು ಮಾರುಕಟ್ಟೆಗೆ ಪರಿಚಯಿಸಿ ಬೊಂಬೆಗಳ ಜಗತ್ತಿನಲ್ಲಿ ಹೊಸ ಮೈಲುಗಲ್ಲಿಗೆ ಕಾರಣನಾಗುತ್ತಾನೆ. ಈ ಬೊಂಬೆಯೆಂದರೆ ಇಂದು ಕೂಡ ಮಕ್ಕಳಿಂದ ದೊಡ್ಡವರಿಗೂ ಅಚ್ಚುಮೆಚ್ಚು. ಈ ಬೊಂಬೆಯೇ ಟೆಡ್ಡಿ ಬೇರ‍್ (Teddy Bear)!

‘ಟೆಡ್ಡಿ’ ಹೆಸರು ಹೇಗೆ ಬಂತು?

ಜರ‍್ಮನಿಯ ಲಿಪ್ಶಿಶ್(Leipzig) ಊರಿನ ತೋರ‍್ಪಿನಲ್ಲಿ ಕಂಡುಬಂದ ಮೊದಲ ಟೆಡ್ಡಿ ಬೇರ್ ಮೊದಲಿಗೆ ಯಾರ ಗಮನ ಸೆಳೆಯದಿದ್ದರೂ, ಅಮೇರಿಕಾದ ವ್ಯಾಪಾರಿಯೊಬ್ಬನ ಮನಗೆದ್ದಿತ್ತು. ಮೊದಲ ವಾರದಲ್ಲಿ 100 ಟೆಡ್ಡಿಗಳು, ಮತ್ತೆ ಕೆಲ ವಾರಗಳಲ್ಲಿ 3000 ಟೆಡ್ಡಿಗಳನ್ನು ಈ ವ್ಯಾಪಾರಿ ಕೊಂಡುಕೊಂಡಿದ್ದ. ಅಲ್ಲಿಂದ ಸ್ಟೀಪ್ ಕಂಪನಿ ಹಿಂದಿರುಗಿ ನೋಡಲೇ ಇಲ್ಲ. ರಿಚರ‍್ಡ್ ಸ್ಟೀಪ್ ಮತ್ತು ಅಮೇರಿಕಾದ ಮೊರಿಸ್ ಮಿಕ್ಟೊಮ್ (Morris Michtom) ಒಂದೇ ಹೊತ್ತಿಗೆ ಟೆಡ್ಡಿ ಬೇರ್ ಕಂಡುಹಿಡಿದವರು ಎನ್ನಲಾಗುತ್ತದೆ. ಅಮೇರಿಕಾದ ಅಂದಿನ ಅದ್ಯಕ್ಶ ತಿಯೊಡರ್ ರೂಸ್‌ವೆಲ್ಟ್(Theodre Rooswelt) ಅವರನ್ನು ಕಿರಿದಾಗಿ ಟೆಡ್ಡಿ ಎನ್ನಲಾಗುತಿತ್ತು, ಅದನ್ನೇ ಇಲ್ಲಿ ಬಳಸಿಕೊಂಡು ಟೆಡ್ಡಿ ಬೇರ್ ಹೆಸರು ಬಂತೆಂದು ಹೇಳಲಾಗುತ್ತದೆ.

ಸ್ಟೀಪ್ ಕಂಪನಿ ಒಡತಿಯ ಸಾಹಸದ ಬದುಕು

1909ರಲ್ಲಿ 61 ವಯಸ್ಸಿನ ಮಾರ‍್ಗರೇಟ್ ತೀರಿಕೊಂಡ ಹೊತ್ತಿಗೆ ಸ್ಟೀಪ್ ಕಂಪನಿ ತನ್ನ ಹೆಸರಿಗೆ ಗುರುತೊಂದನ್ನು ಪಡೆದು ಸುಮಾರು 10 ಲಕ್ಶದಶ್ಟು ಟೆಡ್ಡಿಗಳನ್ನು ಮತ್ತು 17 ಲಕ್ಶದಶ್ಟು ಇತರೆ ಬೊಂಬೆಗಳನ್ನು ಮಾರಾಟ ಮಾಡಿ ಜಗತ್ತಿನಲ್ಲೆಡೆ ಬೆಳೆಯತೊಡಗಿತ್ತು. ಇಶ್ಟೊಂದು ದೊಡ್ಡ ಕಂಪನಿ ಕಟ್ಟುವಲ್ಲಿ ಮಾರ‍್ಗರೇಟ್ ಎಂಬ ಹೆಣ್ಣುಮಗಳ ಸಾಹಸ ಎಲ್ಲರಿಗೂ ಮಾದರಿಯಾಗುವಂತದ್ದು. ಚಿಕ್ಕವಳಿದ್ದಾಗಲೇ ಕಾಲುಗಳಿಗೆ ಲಕ್ವ ಹೊಡೆಯುತ್ತದೆ, ಆಕೆಯ ಬಲ ತೋಳು ಕೂಡ ಸರಿಯಾಗಿ ಕೆಲಸ ಮಾಡದಾಗುತ್ತದೆ. ಇದರಿಂದ ಮಾರ‍್ಗರೇಟ್ ಸಾಕಶ್ಟು ಕಶ್ಟ ಅನುಬವಿಸುತ್ತಾಳೆ. ಅವಳ ತಂದೆ ತಾಯಿ ಕೂಡ ದಿಕ್ಕುತೋಚದವರಾಗುತ್ತಾರೆೆ ಎದೆಗುಂದದ ಮಾರ‍್ಗರೇಟ್, ಒಡಹುಟ್ಟಿದವರ ಮತ್ತು ನೆರೆಹೊರೆ ಮಕ್ಕಳ ನೆರವಿನಿಂದ ಶಾಲೆಯಲ್ಲಿ ಓದು-ಬರಹ ಮುಗಿಸುತ್ತಾಳೆ. 17ನೇಯ ವಯಸ್ಸಿಗೆ ವ್ರುತ್ತಿಪರ ಹೊಲಿಗೆಯ ತರಬೇತಿ ಮುಗಿಸಿದ ಮಾರ‍್ಗರೇಟ್, ಮೊದ ಮೊದಲಿಗೆ ಅಕ್ಕಂದಿರೊಂದಿಗೆ ಹೊಲಿಗೆ ಕೆಲಸದಲ್ಲಿ ತೊಡಗಿಕೊಂಡು, ನಂತರ ಬಟ್ಟೆ/ಉಣ್ಣೆಯಿಂದ ಬೊಂಬೆಗಳನ್ನು ಹೊಲಿದು ಇಂತಹ ದೊಡ್ಡ ಕಂಪನಿಯ ಒಡತಿಯಾಗಿ ಬೆಳೆಯುತ್ತಾಳೆ.

ಎಲ್ಲರಿಗೂ ಮೆಚ್ಚು ಈ ಟೆಡ್ಡಿಗಳು

ಸುಮಾರು 140 ವರುಶ ಹಳೆಯದಾದ ಸ್ಟೀಪ್ ಕಂಪನಿ ಬಟ್ಟೆ/ಹತ್ತಿ/ಉಣ್ಣೆ ಬಳಸಿ ತಯಾರಿಸುವ ಉಸಿರಿ ಬೊಂಬೆಗಳು ಬಲು ವಿಶೇಶ. ಬಣ್ಣ ಬಣ್ಣದ ಬಟ್ಟೆ ತೊಟ್ಟ, ವಿವಿದ ಗಾತ್ರದ, ಹಲವು ಆಕಾರದಲ್ಲಿರುವ ಟೆಡ್ಡಿಗಳಿಗೆ ಇಂದಿಗೂ ಎಲ್ಲಿಲ್ಲದ ಬೇಡಿಕೆ. ವರುಶದೊಳಗಿನ ಕೂಸುಗಳಿಗೆ, 2-3 ವರುಶದ ತೊದಲು ನುಡಿಯ ಕಂದಮ್ಮಗಳಿಗೆ, ಶಾಲೆಗೆ ಸೇರಿದ ಮಕ್ಕಳಿಗೆ, ಹದಿಹರೆಯದ ಮಕ್ಕಳಿಗೆ, ಒಲವಿನ ಜೋಡಿಹಕ್ಕಿಗಳಿಗೆ, ವಯಸ್ಕರರಿಗೆ ಹೀಗೆ ಎಲ್ಲ ವಯಸ್ಸಿನ ಜನರಿಗೆ ತಕ್ಕಂತೆ ಟೆಡ್ಡಿ ಬೇರ್ ಮಾರುಕಟ್ಟೆ ಬೆಳೆಸಿದ್ದು ಸ್ಟೀಪ್ ಕಂಪನಿ. ಟೆಡ್ಡಿಯಶ್ಟೇ ಅಲ್ಲದೇ ನಾಯಿಮರಿ, ಮೊಲ, ಬೆಕ್ಕು ಹೀಗೆ ಪುಟಾಣಿಗಳಿಗೆ ಇಶ್ಟವಾಗೋ ಉಸಿರಿಗಳ ಬೊಂಬೆಗಳಿಗೂ ಹೆಚ್ಚಿನ ಬೇಡಿಕೆಯಿದೆ.

ಕಿವಿಯಲ್ಲಿ ಗುಂಡಿ (Knopf im Ohr)

1904ರಲ್ಲಿ ಈ ಕಂಪನಿ “ಕಿವಿಯಲ್ಲಿ ಗುಂಡಿ” ಯನ್ನು(Knopf im Ohr) ತನ್ನ ಗುರುತಾಗಿ ಅಳವಡಿಸಿಕೊಂಡಿತು, ಇಂದಿಗೂ ಅವರ ಎಲ್ಲ ಉಸಿರಿ ಬೊಂಬೆಗಳ ಕಿವಿಯಲ್ಲಿ ಇದನ್ನು ಕಾಣಬಹುದು. ಸ್ಟೀಪ್ ಕೂಟ ಇದೀಗ ಮಕ್ಕಳಿಗೆ ಬೇಕಾಗುವ ಹಾಸಿಗೆ,ದಿಂಬು, ಹೊದಿಕೆ, ಕುಲಾಯಿ, ಬಟ್ಟೆಬರೆ, ಚಪ್ಪಲಿ, ಹೀಗೆ ಹತ್ತು ಹಲವಾರು ಸರಕುಗಳನ್ನು ತಯಾರಿಸಿ ಮಾರುತ್ತದೆ.  ಜರ‍್ಮನಿಯಲ್ಲದೇ ಯುರೋಪ್, ಅಮೇರಿಕಾ, ಬ್ರಿಟನ್, ಏಶಿಯಾಗಳಲ್ಲೂ ಸ್ಟೀಪ್‍ನವರ ಬೊಂಬೆಗಳಿಗೆ ಬೇಡಿಕೆಯಿದೆ. ಜರ‍್ಮನಿಯ ಎಲ್ಲ ಪ್ರಮುಕ ಊರುಗಳು ಸೇರಿದಂತೆ ಯುರೋಪಿನ ಹಲವೆಡೆ, ಅಮೇರಿಕಾ-ಕೆನಡಾಗಳಲ್ಲೂ ಸ್ಟೀಪ್ ಮಳಿಗೆಗಳು ಹಬ್ಬಿವೆ. 1980ರಲ್ಲಿ ಸ್ಟೀಪ್ ಕೂಟದ 100ನೇಯ ವರುಶದ ಅಂಗವಾಗಿ, ಗಿಂಗೆನ್‌ನಲ್ಲಿ ಮಾರ‍್ಗರೇಟ್ ನೆಲೆಸಿದ್ದ ಮನೆ-ಹೊಲಿಗೆ ಅಂಗಡಿಯನ್ನು ಒಡವೆಮನೆಯನ್ನಾಗಿ ಮಾರ‍್ಪಾಡಿಸಲಾಗಿದೆ. ಅಂದು ಮಾರ‍್ಗರೇಟ್ ಬಳಸಿದ ಹೊಲಿಗೆ ಸಾಮಗ್ರಿ, ಆಕೆಯ ಪುಟಾಣಿ ಮಳಿಗೆ ಎಲ್ಲವನ್ನೂ ಇಲ್ಲಿ ನೋಡಬಹುದಾಗಿದೆ.

( ಚಿತ್ರ ಸೆಲೆ : bearessentials.ie )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: