ಎತ್ತ ಹೋಗುವಿರಿ, ನಿಲ್ಲಿ ಮೋಡಗಳೇ…!

ಸುನಿಲ್ ಮಲ್ಲೇನಹಳ್ಳಿ.

ಮೋಡ, cloud

ಬಿಡುವು ಸಿಕ್ಕಾಗಲೆಲ್ಲ ನಮ್ಮ ಮನೆಯ ಬಾಲ್ಕನಿಯಲ್ಲಿ ಕುಳಿತು, ಆಗಸದಲ್ಲಿ ಹಾದು ಹೋಗುತ್ತಿರುವ ಮೋಡಗಳನ್ನು ನೋಡುವುದು ನನಗೆ ಉಲ್ಲಾಸ ತರುವ ಹವ್ಯಾಸಗಳೊಂದು. ಸದಾ ಮೋಡಗಳಿಂದ ಕೂಡಿರುವ ವಾತಾವರಣವಿರೋ ಈ ಆಶಾಡ ಮಾಸದಲ್ಲಿ, ಗಾಳಿಯ ವೇಗ ಹಾಗೂ ಅದರ ಆರ‍್ಬಟ ತುಸು ಜೋರೇ ಆದ ನಿಮಿತ್ತ ಗಾಳಿಯ ರಬಸಕ್ಕೆ ಮೋಡಗಳು ಒಂದೆಡೆಯಿಂದ ಮತ್ತೊಂದೆಡೆಗೆ ಸರಾಗವಾಗಿ ಯಾವುದೇ ಅಡೆತಡೆಯಿಲ್ಲದೆ ಚಲಿಸುತ್ತಿರುತ್ತವೆ.

ಒಂದೂರಿನಿಂದ ಮತ್ತೊಂದೂರಿಗೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ, ಅಶ್ಟೇ ಏಕೆ? ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಣಿಸುವ ಈ‌ ಮೋಡಗಳಿಗೆ ಯಾರೊಬ್ಬರು ಪಾಸ್ ಪೋರ‍್ಟ್, ವೀಸಾ ಕೇಳುವುದಿಲ್ಲ! ಅವುಗಳನ್ನು ತಡೆದಿಡಲು ಯಾವ ಟ್ರಾಪಿಕ್ ಸಿಗ್ನಲಾಗಲಿ ಅತವಾ ಚೆಕ್ ಪೋಸ್ಟಾಗಲಿ ನಾವು ಮಾಡಿಕೊಳ್ಳಲಾಗಿಲ್ಲ. ಅವು ಎಲ್ಲಿ ಕರಗಿ, ಮಳೆಯಾಗಿ ಸುರಿಯುತ್ತವೋ ಆ ಬಾಗದ ಜನರಲ್ಲಿ ಸಂತಸ, ಸಡಗರ ಹೇಳತೀರದು.

ನಮಗೆಲ್ಲ ತಿಳಿದಿರುವ ಹಾಗೆ ಮಳೆಯ ನೀರನ್ನು ಹೊತ್ತೊಯ್ಯುವ ಮೋಡಗಳನ್ನು ಉತ್ಪಾದಿಸುವ ಪ್ಯಾಕ್ಟರಿಗಳೇ ಸಾಗರ, ಸಮುದ್ರಗಳು. ಅಲ್ಲಿಂದ ಹೊರಡುವ ಈ ಮೋಡಗಳು ಗಾಳಿ ಸಹಾಯದಿಂದ ಗುಡ್ಡ, ಬೆಟ್ಟ, ಮಲೆನಾಡು, ಬಯಲು ಸೀಮೆ ಹೀಗೆ ಎಲ್ಲಾ ಕಡೆ ಪಸರಿಸಿ, ನಾಡಿನ‌ ಪ್ರತಿಯೊಂದು ಕಡೆ ಮಳೆಯನ್ನು‌ ಸುರಿಸುವ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತಿರುತ್ತವೆ.

ಅಪ್ಪಿತಪ್ಪಿ ಈ ಮೋಡಗಳೇನಾದರೂ ನಮಗೆ ಸಿಗುವ ಎತ್ತರದಲ್ಲಿ ಸಾಗುವಂತಿದ್ದರೆ, ಅವುಗಳಿಗೆ ಅಣೆಕಟ್ಟು ಕಟ್ಟಿ, ಸಂಗ್ರಹಿಸಿ, ಅಲ್ಲೇ ಮಳೆ ಸುರಿಯುವಂತೆ ಮಾಡುತ್ತಿದ್ದೆವೋ ಏನೋ!? ನದಿ ನೀರಿಗಾಗಿ ರಾಜ್ಯಗಳ ಅತವಾ ದೇಶಗಳ ನಡುವೆ ಆಗಾಗ ಉದ್ಬವಿಸುವ ಜಲ ವಿವಾದದಂತೆ ಮಳೆ ಮೋಡಗಳಿಗಾಗಿಯೂ ಸಹ ವಿವಾದ ಉದ್ಬವಿಸುವ ವಾತಾವರಣ ಸ್ರುಶ್ಟಿಯಾಗುತ್ತಿತ್ತು ಆಗ!

ನಮ್ಮ ರೈತರು ನೆಚ್ಚಿರುವ ಬೇಸಾಯವು ಗಾಳಿ ಹಾಗೂ ಈ ಮಳೆ ಮೋಡಗಳೊಡನೆ ಆಡುವ ಜೂಜಾಟದಂತೆ ಕಾಣುತ್ತದೆ. ಎಲ್ಲೋ ಕೆಲವೆಡೆ ರೈತ ಗೆದ್ದರೇ, ಬಹತೇಕ ಕಡೆ ಮಳೆ ಅತಿಯಾಗಿ ಬಂದೋ‌ ಇಲ್ಲವೇ ಬಾರದೆ ರೈತ ತನ್ನ ಬದುಕನ್ನೇ ಶಪಿಸಿಕೊಳ್ಳುತ್ತಿರುತ್ತಾನೆ. ಇದು ಬಹಳ ವಿಪರ‍್ಯಾಸದ‌ ಸಂಗತಿ. ಹೀಗೆ ನಮ್ಮ ದೇಶದ ಬಹುತೇಕ ಕಡೆ ಬಿಟ್ಟ ಕಣ್ಣನ್ನು ಬಿಟ್ಟ ಹಾಗೇ ನಮ್ಮ ರೈತಾಪಿ ಜನ ಆಗಸದಲ್ಲಿ ಸಾಗುತ್ತಿರುವ ‘ಆ ಮಳೆ ಮೋಡ’ಗಳತ್ತ ನೋಡುತ್ತಾ…ಮಳೆಯಾದರೆ ಗಾಳಿಯನ್ನು ಒಮ್ಮೊಮ್ಮೆ ಹೊಗಳುತ್ತಾ, ಕೆಲವೊಮ್ಮೆ ಶಪಿಸುತ್ತಾ ಆಗಲೋ ಈಗಲೋ ಮಳೆ ಬರಬಹುದೆಂಬ (ಹತ್)ಆಶಾ ಬಾವನೆಯಿಂದ ದಿನಗಳನ್ನು ಕಳೆಯುತ್ತಿದ್ದಾರೆ.

ಅದೋ ಶರದಿಯು ಕೊಟ್ಟಿತೋ ವರದಿ
ಬರತ ನಾಡಲಿ ಮುಂಗಾರು ಮಳೆ ಸರದಿ
ಎಲ್ಲೆಲ್ಲೂ ಮೋಡ ಕರಗಿ ಆಗುವುದಂತೆ ಮಳೆ|
ಇಳೆಯೊಳಗೆ ಮೊಳೆವುದು ಬಿತ್ತಿದ್ದ ಬೆಳೆ!
ಈ ನೆಲೆಯೊಂದು ಸ್ರುಶ್ಟಿಯ ಅದ್ಬುತ ಕಲೆ|

( ಚಿತ್ರ ಸೆಲೆ: publicdomainpictures.net )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications