ಯಶಸ್ಸು ಎಂದರೇನು?
‘ಯಶಸ್ಸು‘ ಎಂದರೆ ಏನು ಎಂಬ ಪ್ರಶ್ನೆ ಬಂದಾಗ ಸಿಗುವ ಉತ್ತರಗಳು ಅನೇಕ. ನಾನು ಆನೇಕರಲ್ಲಿ ಈ ಪ್ರಶ್ನೆ ಕೇಳಿದಾಗ ಅವರು ಕೊಟ್ಟ ಉತ್ತರ ದುಡ್ಡು! ಹೌದು ದುಡ್ಡೇ ದೊಡ್ಡಪ್ಪ . ಹಣ ಗಳಿಸುವುದೇ ದೊಡ್ಡ ಯಶಸ್ಸು ಎಂದು ನಿರೀಕ್ಶಿತ ಉತ್ತರವೇ ನನಗೆ ದೊರಕಿತು! ಅದು ಸರಿ ಕೂಡ. ಜೀವನದಲ್ಲಿ ದುಡ್ಡು ಮಾಡಿದೊಡನೆ, ಬೇರೆಲ್ಲ ಸೌಕರ್ಯಗಳು ನಿಮ್ಮ ಮನೆ ಬಾಗಿಲಿಗೆ ಓಡೋಡಿ ಬರುತ್ತವೆ. ಆದರೆ ನಿಜವಾಗ್ಲೂ ದುಡ್ಡು ಮಾಡುವುದನ್ನೆ ಯಶಸ್ಸು ಎನ್ನಬಹುದಾ?
ಬಡವನಿಗೆ ಬರುವ ಕಾಯಿಲೆ ಶ್ರೀಮಂತನಿಗೂ ಬರುತ್ತದೆ. ಎಶ್ಟೋ ಜನರ ಮನೆ ತುಂಬಾ ಹಣಕಾಸಿನ ಶ್ರೀಮಂತಿಕೆ ತುಂಬಿ ತುಳುಕುತ್ತಿದ್ದರೂ ಅವರು ಮಾರಣಾಂತಿಕ ಕಾಯಿಲೆಗೆ ಬಲಿಯಾಗಿರುವುದನ್ನು ನಾವು ನೋಡಿದ್ದೇವೆ. ಹಾಗಾದರೆ ಅವರ ಜೀವನವನ್ನು ಯಶಸ್ವಿ ಜೀವನ ಎನ್ನಬಹುದೇ? ಹೋಗ್ಲಿ ಶ್ರೀಮಂತಿಕೆಯನ್ನೇ ಯಶಸ್ಸು ಎನ್ನುವುದಾದರೆ, ಅಲ್ಲೂ ಕೆಲವರು ಆಗರ್ಬ ಶ್ರೀಮಂತರಿರುತ್ತಾರೆ. ಮತ್ತೆ ಕೆಲವರು ತಕ್ಕ ಮಟ್ಟಿಗೆ ಶ್ರೀಮಂತರಾಗಿರುತ್ತಾರೆ. ಇಲ್ಲಿ ಯಶಸ್ಸಿನ ವ್ಯಾಕ್ಯಾನವನ್ನು ಹೇಗೆ ಮಾಡಬಹುದು? ಆಗರ್ಬ ಶ್ರೀಮಂತ ಯಶಸ್ವಿ ವ್ಯಕ್ತಿಯೇ ಅತವಾ ತಕ್ಕ ಮಟ್ಟಿನ ಶ್ರೀಮಂತ ಯಶಸ್ವಿ ವ್ಯಕ್ತಿಯೇ?
ಜೀವನದಲ್ಲಿ ಅಂದುಕೊಂಡ ಗುರಿಯನ್ನು ತಲುಪುವುದನ್ನು ಯಶಸ್ಸು ಎನ್ನಬಹುದೇ? ಪ್ರೀತಿಸಿದವರನ್ನು ಮದುವೆಯಾಗುವುದನ್ನು ಯಶಸ್ಸು ಎನ್ನಬಹುದೇ? ಹೀಗೆ ಯಶಸ್ಸಿನ ವ್ಯಾಕ್ಯಾನ ನಾನಾ ರೀತಿಯಲ್ಲಿ ನಾವು ಮಾಡಬಹುದು. ಆದರೆ ನಿಜವಾದ ಯಶಸ್ಸು ಯಾವುದು? ಕೆಲವರು ಹೇಳುತ್ತಾರೆ, ಹೊಟ್ಟೆ ಬಟ್ಟೆಗೆ ಯಾವುದೇ ಕಮ್ಮಿ ಇಲ್ಲದೇ, ಕಾಯಿಲೆ ಕಸಾಲೆಗಳಿಗೆ ಬಲಿಯಾಗದಿದ್ದರೆ ಅದೇ ನಮ್ಮ ದೊಡ್ಡ ಯಶಸ್ಸು ಅಂತ. ಅದು ಕೂಡ ಸರಿ. ಆದರೆ ಇದೆಲ್ಲರ ಜೊತೆ ನಮ್ಮ ಆತ್ಮತ್ರುಪ್ತಿ ಕೂಡ ತುಂಬಾ ಮುಕ್ಯ. ನನ್ನ ಪ್ರಕಾರ ನಮ್ಮ ಆತ್ಮತ್ರುಪ್ತಿಯೇ ನಮ್ಮ ನಿಜವಾದ ಯಶಸ್ಸು!
ಒಬ್ಬ ಮನುಶ್ಯನ ಆತ್ಮತ್ರುಪ್ತಿಯೇ ಅವನ ನಿಜವಾದ ಯಶಸ್ಸು
ನಾವು ಮಾಡಿದ ಕೆಲಸದ ಬಗ್ಗೆ ನಮಗೆ ಸಂತೋಶವಿದ್ದರೆ ಅದು ನಮ್ಮ ಗೆಲವು. ನಾವು ಎಶ್ಟು ಮಹತ್ವಾಕಾಂಕ್ಶಿಯೋ, ಅಶ್ಟೇ ನಮ್ಮ ಯಶಸ್ಸು ಅತವಾ ಸೋಲು ವಿಸ್ತಾರಗೊಳ್ಳುತ್ತದೆ. ಇತರರಿಂದ ಅಳೆಯಲ್ಪಡುವ ನಮ್ಮ ಸಾದನೆ ನಿಜವಾದ ಯಶಸ್ಸು ಅಲ್ಲ. ಯಶಸ್ಸಿಗೆ ಕಂಡಿತವಾಗಿಯೂ ಒಂದು ಗಡಿರೇಕೆ ಇದೆ. ಆ ಗಡಿ ರೇಕೆಯ ವಿಸ್ತಾರವನ್ನು ನಿರ್ದರಿಸಬೇಕಾಗಿರುವುದು ನಮ್ಮ ಮನಸ್ಸು.
ನಮ್ಮ ಜೀವನ ಶೈಲಿಯಲ್ಲಿ ನಾವು ತ್ರುಪ್ತರಾಗಿದ್ದರೆ ಅದೇ ನಮ್ಮ ದೊಡ್ಡ ಯಶಸ್ಸು. ನಾವು ಪ್ರಪಂಚವನ್ನು ಮೆಚ್ಚಿಸಬೇಕಾಗಿಲ್ಲ. ದೊಡ್ಡ ಮನೆ ಕಟ್ಟಬೇಕೆಂದಿಲ್ಲ. ಬ್ಯಾಂಕಿನಲ್ಲಿ ಹಣ ಕೂಡಿಡಬೇಕಾಗಿಲ್ಲ. ಅಂತಿಮವಾಗಿ ನಮ್ಮಲ್ಲಿ ಉಳಿಯುವುದು ಏನೂ ಇಲ್ಲ. ಒಂದು ದಿನ ಎಲ್ಲವನ್ನು ಬಿಟ್ಟು ವಿದಾಯ ಹೇಳಬೇಕಾಗುತ್ತದೆ. ಹಾಗಂತ ಹೆಸರು ಉಳಿಯುವ ಹಾಗೆ ಏನಾದರೂ ಸಾದನೆ ಮಾಡಿ ಹೋಗಬೇಕೆಂದು ಕೂಡ ಇಲ್ಲ. ಏಕೆಂದ್ರೆ ನಮ್ಮ ಜನರು ಬೇಗ ಮರೆತು ಬಿಡುತ್ತಾರೆ. ಒಂದು ವೇಳೆ ಅವರು ಸ್ಮರಿಸಿದ್ರು ಅದನ್ನು ನೋಡಲು ನಾವೇ ಇರುವುದಿಲ್ಲ. ಹಾಗಾಗಿ ಇಲ್ಲಿ ನಮ್ಮ ಆತ್ಮತ್ರುಪ್ತಿಯೇ ನಮಗೆ ಮುಕ್ಯ. ಅದುವೇ ನಿಜವಾದ ಯಶಸ್ಸು. ಆದರೆ ಅದನ್ನು ಪಡೆಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ.
ಕೆಲವೊಮ್ಮೆ ನಾನಾ ಕಾರಣಗಳಿಗೋಸ್ಕರ ನಮ್ಮ ಆತ್ಮತ್ರುಪ್ತಿಯನ್ನು ನಾವು ಬದಿಗಿಟ್ಟು ಜೀವಿಸಬೇಕಾಗುತ್ತದೆ. ಆದರೂ ಅಲ್ಲೂ ಸಾದ್ಯವಾದಶ್ಟು ನಾವು ನಮ್ಮ ಕನಸನ್ನು ಈಡೇರಿಸಲು ಕಂಡಿತ ಪ್ರಯತ್ನ ಮಾಡಬಹುದು.
ನನ್ನ ಒಬ್ಬ ಸಹಪಾಟಿ ಇದ್ದ. ಒಳ್ಳೆಯ ಸ್ನೇಹಜೀವಿ. ನಾವಿಬ್ಬರೂ ಪದವಿಪೂರ್ವ ಶಿಕ್ಶಣ ಒಟ್ಟಿಗೇ ಓದಿದ್ದೆವು. ಅಂತಿಮ ಪರೀಕ್ಶೆಯಲ್ಲಿ ಆತ ಉತ್ತಮ ಸಾದನೆ ಮಾಡಲಿಲ್ಲ. ಅನೇಕರು ತಮಾಶೆ ಮಾಡಿದರು. ಆದರೆ ಅವನಿಗೆ ತನ್ನ ಗುರಿಯ ಬಗ್ಗೆ ಸ್ಪಶ್ಟವಾದ ಅರಿವಿತ್ತು. ಆತ ತನಗೆ ಇಶ್ಟವಿಲ್ಲದ ಪರೀಕ್ಶೆಯನ್ನು ಮತ್ತೆ ಬರೆಯಲು ಹೋಗಲಿಲ್ಲ. ಆತನಿಗೆ ಕಲೆಯ ಬಗ್ಗೆ ತುಂಬಾ ಆಸಕ್ತಿ ಇತ್ತು. ತನ್ನ ಮುಂದಿನ ಶಿಕ್ಶಣವನ್ನು ಮೈಸೂರಿನ ಶಾಲೆಯೊಂದರಲ್ಲಿ ಕಲಿತು ಕನ್ನಡ, ತುಳು ಚಿತ್ರಜಗತ್ತಿಗೆ ಪ್ರವೇಶಿಸಿ ಇಂದು ರಾಶ್ಟ್ರ ಪ್ರಶಸ್ತಿ ಪಡೆಯುವ ಮಟ್ಟಿಗೆ ಬೆಳೆದು ನಿಂತಿದ್ದಾನೆ. ತುಂಬಾ ವರ್ಶಗಳ ಹಿಂದೆ ಅವನ ಬಗ್ಗೆ ಒಂದು ಕನ್ನಡ ಪತ್ರಿಕೆಯಲ್ಲಿ ಬರೆದಿದ್ದರು. “ಸೋಲಿಗೆ ಸವಾಲು ಹಾಕಿದ ಕಲಾವಿದ“ ಎಂದು. ನಿಜವಾದ ಯಶಸ್ಸು ಇದು. ಆತ ರಾಶ್ಟ್ರಪ್ರಶಸ್ತಿಯನ್ನು ಪಡೆದುದನ್ನು ನಾನು ಯಶಸ್ಸು ಎನ್ನವುದಿಲ್ಲ. ನಿಜವಾದ ಯಶಸ್ಸು ಯಾವುದು ಗೊತ್ತೆ? ತನಗೆ ಇಶ್ಟವಾದ ಕಲೆಯನ್ನು ಆರಿಸಿಕೊಂಡು, ಅದನ್ನೇ ಮುಂದುವರಿಸಿದನಲ್ಲ ಅದು ಅವನ ಯಶಸ್ಸು ಎನ್ನಬಹುದು. ತನ್ನ ಸಾದನೆಯ ಬಗ್ಗೆ ಅವನಲ್ಲಿರುವ ಆತ್ಮತ್ರುಪ್ತಿಯೇ ಅವನ ನಿಜವಾದ ಯಶಸ್ಸು.
ಹಾಗೆ ಮತೊಬ್ಬಳು ಸಹಪಾಟಿ, ಮದುವೆ, ಮಕ್ಕಳು ಎಲ್ಲವೂ ಬೇಗನೆ ಆಯಿತು. ಆದರೆ ಸಾದಿಸಬೇಕೆನ್ನುವ ತುಡಿತ ಮನಸಲ್ಲಿ ಹಾಗೆ ಇತ್ತು. ತನ್ನೆಲ್ಲ ಜವಾಬ್ದಾರಿಗಳ ನಡುವೆ ತನ್ನ ಶಿಕ್ಶಣವನ್ನು ಮುಂದುವರೆಸಿ, ತನಗೆ ಇಶ್ಟವಾದ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇದಕ್ಕೆ ಹೇಳ್ತಾರೆ ನಿಜವಾದ ಯಶಸ್ಸು. ನಿಜವಾದ ಆತ್ಮತ್ರುಪ್ತಿ. ಇಲ್ಲಿ ಕೊಟ್ಟ ಎರಡು ಉದಾಹರಣೆಗಲ್ಲಿ ಹಣ ಮುಕ್ಯವಲ್ಲ ಅತವಾ ಅವರು ಗಳಿಸಿದ ಹೆಸರು ಕೂಡ ಅಲ್ಲ. ಅವರ ಹ್ರುದಯದಲ್ಲಿರುವ ಆ ಯಶಸ್ಸೆಂಬ ಸಂತೋಶ ಮತ್ತು ಆತ್ಮತ್ರುಪ್ತಿ. ಎಲ್ಲದಕ್ಕಿಂತಲ್ಲೂ ದೊಡ್ಡದು ಆತ್ಮತ್ರುಪ್ತಿ. ಇವರಿಬ್ಬರ ಸಾದನೆ ಕೂಡ ಪ್ರತಿಯೊಬ್ಬರಿಗೂ ತುಂಬಾ ಪ್ರೇರಕ ಶಕ್ತಿ. ಹೀಗೆ ಪ್ರಪಂಚಲ್ಲಿ ಅನೇಕ ಉದಾಹರಣೆಗಳಿವೆ.
ನಮ್ಮ ಯಶಸ್ಸು ಕೇವಲ ನೆಪ ಮಾತ್ರದ ಯಶಸ್ಸು ಆಗಿರದೆ ಆತ್ಮತ್ರುಪ್ತಿ ಪಡೆಯುವ ಯಶಸ್ಸು ಆಗಿರಲಿ ಎಂದು ಹಾರೈಸೋಣ.
( ಚಿತ್ರ ಸೆಲೆ : addicted2success.com )
nice, feeling happy thank you