ಕವಿತೆ : ಎಲ್ಲವೂ, ಎಲ್ಲರೂ, ಉರಿದ ಮೇಲೆ ಬೂದಿ ತಾನೇ
ಒಡಲ ಕಿಚ್ಚಿಗೆ ಕಡಲೆಲ್ಲಿಯ ಈಡು
ಸುರಿ ಸುರಿದು ಸುರುಟಾಗುವೆ ನೀನು
ಸಂತೆಯೊಂದಕೆ ಬಂದು ನಿಂದಿರುವೆ
ಆದಶ್ಟು ತುಂಬಿಕೊ ಕೈಚೀಲವನು
ತುಂಬಿಕೊಳ್ಳುವ ಕೈಚೀಲವೆ ಹರಿದರೆ
ಹಣವಿದ್ದು ಪ್ರಯೋಜನವೇನು
ಬಂದು ಬಾಂದವರೆಂಬವರು
ಕಣ್ಣೊಳಗೆ ಬಿದ್ದ ಕಸದಂತೆ ಅಳುಕುವರು
ನಿನ್ನ ಕಣ್ಣ ನೀರನೊರೆಸುವ
ಕುಶಲ ನಾಟಕ ತಂಡದಂತಿಪ್ಪರು
ನೆನಪಿನೊಳಿಡು ಅವು ಪಾತ್ರಗಳು
ಕೊನೆಗೆ ಕಳಚಲೇಬೇಕು ಮುಕವಾಡಗಳು
ಆಡಿದ ಮಾತಾವುದೂ ಉಳಿಯದು ಲೋಕದೊಳು
ಬರವಣಿಗೆಯೊಂದೇ ಬದುಕುವುದು ಕಾಲ ಕಾಲದೊಳು
ಬರೆಯಬೇಕು ಬರೆದು ತೀಡಬೇಕು ತೀಡಿ ನೋಡಬೇಕು
ಆ ಬ್ರಹ್ಮನ ಬರಹವೇ ಬದಲಾಗುವವರೆಗೂ
ಬರೆಯಲೇಬೇಕು, ಬರೆದು ತೀಡಲೇಬೇಕು
ತೀಡಿ ತೀಡಿ ನೋಡಲೇಬೇಕು
ನೀನೇ ಬರಿಸಬೇಕು ನಿನ್ನ ಅಂಚೆ ವೆಚ್ಚ
ತಲುಪುವವರೆಗೂ ಇರು ಸಾವದಾನದಿ ಕೊಂಚ
ಆದಿಯಾದಮೇಲೆ ಬೂದಿಯಾಗದಿರುವೆಯೇನು
ಬೂದಿಯಲ್ಲೇ ಇಹನು ನಮ್ಮ ನಿಮ್ಮ ಅಂತ್ಯಗೈಯ್ಯುವವನು
ಶಿವನೋ, ಅಲ್ಲಾಹುನೋ, ಏಸುವೋ
ಎಲ್ಲವೂ, ಎಲ್ಲರೂ, ಉರಿದ ಮೇಲೆ ಬೂದಿ ತಾನೇ
(ಚಿತ್ರ ಸೆಲೆ: timeanddate.com)
ಇತ್ತೀಚಿನ ಅನಿಸಿಕೆಗಳು