ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 13ನೆಯ ಕಂತು
– ಸಿ.ಪಿ.ನಾಗರಾಜ.
ಆವ ವೇಷವಾದಡೇನು
ತಾಮಸಧಾರಿಗಳು
ಕಾಮ ಕ್ರೋಧ ಲೋಭ ಬಿಡದ
ನಾನಾ ವಿಧದ ಡಂಭಕರು. (510/178)
ಆವ=ಯಾವ/ಯಾವುದೇ ಬಗೆಯ; ವೇಷ+ಆದಡೆ+ಏನು; ವೇಷ=ಉಡುಗೆ ತೊಡುಗೆ/ಸೋಗು/ತೋರಿಕೆಯ ರೂಪ; ಆದಡೆ=ಆದರೆ; ಏನು=ಯಾವುದು;
ತಾಮಸ=ಕತ್ತಲೆ/ಜಡತೆ/ನೀಚತನ/ಕೆಟ್ಟತನ; ಧಾರಿ=ಹೊಂದಿರುವವನು; ತಾಮಸಧಾರಿ=ಕೆಟ್ಟ ನಡೆನುಡಿಗಳಿಂದ ಕೂಡಿದವನು;
ಕಾಮ=ಗಂಡು ಹೆಣ್ಣಿನ ನಡುವಣ ದೇಹದ ನಂಟಿನ ಬಯಕೆ/ಇಚ್ಚೆ; ಕ್ರೋಧ=ಕೋಪ/ಸಿಟ್ಟು/ಆಕ್ರೋಶ; ಲೋಭ=ಜಿಪುಣತನ/ಅತಿಯಾಸೆ/ದುರಾಸೆ; ಬಿಡು=ತೊರೆ/ತ್ಯಜಿಸು; ಬಿಡದ=ತೊರೆಯದ/ತ್ಯಜಿಸದ; ನಾನಾ=ಅನೇಕ/ಹಲವು; ವಿಧ=ರೀತಿ/ಬಗೆ; ಡಂಭಕ=ಮೋಸಗಾರ/ವಂಚಕ;
“ಆವ ವೇಷವಾದಡೇನು = ಯಾವ ಬಗೆಯ ಉಡುಗೆ ತೊಡುಗೆಯನ್ನು ತೊಟ್ಟಿದ್ದರೆ ಏನು ತಾನೆ ಪ್ರಯೋಜನ “-ಈ ನುಡಿಗಳು ಒಂದು ರೂಪಕವಾಗಿ ಬಳಕೆಯಾಗಿವೆ. ‘ ಉಡುಗೆ ತೊಡುಗೆ ‘ ಎಂಬುದು ವ್ಯಕ್ತಿಯು ತಳೆದಿರುವ ಸಾಮಾಜಿಕ ಪಾತ್ರಕ್ಕೆ ಸಂಕೇತವಾಗಿದೆ. ‘ ಸಾಮಾಜಿಕ ಪಾತ್ರ ‘ ಎಂದರೆ ವ್ಯಕ್ತಿಯು ಹೊಂದಿರುವ ಹುದ್ದೆ , ಹೊಣೆಗಾರಿಕೆ ಮತ್ತು ಮಾಡಬೇಕಾದ ಕೆಲಸ.
ಜನಸಮುದಾಯಕ್ಕೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುತ್ತೇವೆ ಎಂದು ಹೇಳಿಕೊಂಡು ರಾಜಕೀಯ ರಂಗದಲ್ಲಿ ಮುಂದಾಳುಗಳ ಸೋಗಿನಲ್ಲಿ ಬರುತ್ತಾರೆ; ಸತ್ಯ ಮತ್ತು ನೀತಿಯನ್ನು ಜನರಿಗೆ ತಿಳಿಯ ಹೇಳಿ ಸಮಾಜವನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯುತ್ತೇವೆ ಎಂದು ಕಾವಿಯನ್ನು ತೊಟ್ಟು ಗುರುಗಳಾಗಿ ಇಲ್ಲವೇ ದೇವಮಾನವರ ರೂಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇವರಲ್ಲಿ ಬಹುತೇಕ ಮಂದಿ ಎಲ್ಲಾ ಬಗೆಯ ಕೆಟ್ಟ ಗುಣಗಳನ್ನು ಹೊಂದಿದವರಾಗಿದ್ದು , ಜನರನ್ನು ವಂಚಿಸುವ ಕಲೆಯಲ್ಲಿ ಪರಿಣತರಾಗಿರುತ್ತಾರೆ.
ಜನಸಮುದಾಯದ ಹಿತವನ್ನು ಕಾಪಾಡುವ ಮತ್ತು ಸಮಾಜವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿಗಳು , ಅವರು ಯಾರೇ ಆಗಿರಲಿ ಕೆಟ್ಟ ನಡೆನುಡಿಗಳಿಂದ ಕೂಡಿದ್ದರೆ , ಅಂತಹ ವ್ಯಕ್ತಿಗಳಿಂದ ಸಹ ಮಾನವರಿಗಾಗಲಿ ಮತ್ತು ಸಮಾಜಕ್ಕಾಗಲಿ ಯಾವೊಂದು ಪ್ರಯೋಜನವೂ ಇಲ್ಲ ಎಂಬುದನ್ನು ಈ ನುಡಿಗಳು ಸೂಚಿಸುತ್ತವೆ.
ಕಾಯವುಳ್ಳನ್ನಕ್ಕ ಶರಣರ
ಸಂಗದಿಂದ ಅರಿಯಬೇಕು
ಜೀವವುಳ್ಳನ್ನಕ್ಕ ಅರಿವಿನ
ಮುಖದಿಂದ ಅರಿಯಬೇಕು. (1096/239)
ಕಾಯ+ಉಳ್ಳ್+ಅನ್ನಕ್ಕ; ಕಾಯ=ದೇಹ/ಶರೀರ/ಮಯ್ ; ಉಳ್ಳ್=ಇರು; ಅನ್ನಕ್ಕ=ವರೆಗೆ/ತನಕ; ಉಳ್ಳನ್ನಕ್ಕ=ಇರುವ ತನಕ;
ಶರಣ=ಜೀವನದಲ್ಲಿ ಒಳ್ಳೆಯ ನಡೆನುಡಿಗಳೇ ಶಿವನೆಂದು ನಂಬಿ ನಡೆಯುವ ವ್ಯಕ್ತಿ; ಸಂಗ+ಇಂದ; ಸಂಗ=ಸಹವಾಸ/ಒಡನಾಟ/ಗೆಳೆತನ; ಅರಿ=ತಿಳಿ/ಕಲಿ ; ಅರಿಯಬೇಕು=ತಿಳಿದುಕೊಳ್ಳಬೇಕು;
ಜೀವ+ಉಳ್ಳ್+ಅನ್ನಕ್ಕ; ಜೀವ=ಪ್ರಾಣ/ಉಸಿರು; ಜೀವವುಳ್ಳನ್ನಕ್ಕ=ಜೀವಂತವಾಗಿರುವ ತನಕ/ಸಾವು ಬರುವ ತನಕ; ಅರಿವು=ಜೀವನದಲ್ಲಿ ಯಾವುದು ಸರಿ-ಯಾವುದು ತಪ್ಪು; ಯಾವುದು ನಿಜ-ಯಾವುದು ಸುಳ್ಳು; ಯಾವ ರೀತಿಯಲ್ಲಿ ಬಾಳಬೇಕು-ಯಾವ ರೀತಿಯಲ್ಲಿ ಬಾಳಬಾರದು ಎಂಬ ತಿಳುವಳಿಕೆ; ಮುಖ+ಇಂದ; ಮುಖ=ಮೋರೆ/ಮೊಗ; ಅರಿವಿನ ಮುಖದಿಂದ=ತಿಳುವಳಿಕೆಯನ್ನು ಪಡೆಯುವುದರ ಮೂಲಕ;
ಶಿವಶರಣ ಜತೆಯ ಒಡನಾಟದಿಂದ ಮತ್ತು ಅವರ ಹಿತವಚನವನ್ನು ಕೇಳುವುದರ ಮೂಲಕ ವ್ಯಕ್ತಿಯು ಅರಿವನ್ನು ಪಡೆದುಕೊಂಡು, ತನ್ನ ಜೀವನದ ಕೊನೆ ಗಳಿಗೆಯ ತನಕ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳಬೇಕು.
ಕೀರ್ತಿವಾರ್ತೆಗೆ ಮಾಡುವ ಭಕ್ತ
ತಪ್ಪಿದಡೆ ಅದ ಮನಕ್ಕೆ ತರಲಿಲ್ಲ
ಸಜ್ಜನ ಸದ್ಭಕ್ತನೆಡಹಿದಡೆ
ಅದ ಸೈರಿಸಬಾರದು ಕೇಳಾ. (1569/285)
ಕೀರ್ತಿ=ಹೆಸರನ್ನು ಪಡೆಯುವುದು/ಹೆಸರುವಾಸಿಯಾಗುವುದು; ವಾರ್ತೆ=ಸುದ್ದಿ/ಸಮಾಚಾರ; ಕೀರ್ತಿವಾರ್ತೆ=ವ್ಯಕ್ತಿಯ ಹೆಸರು ಮತ್ತು ಅವನು ಮಾಡಿದ ಕೆಲಸಗಳು ಎಲ್ಲೆಡೆ ಕೇಳಿಬರುವಂತಾಗಿ ವ್ಯಕ್ತಿಯು ಜನಮನ್ನಣೆಗೆ ಪಾತ್ರನಾಗುವುದು; ಮಾಡು=ಆಚರಿಸು/ನೆರವೇರಿಸು; ಭಕ್ತ=ದೇವರನ್ನು ನಂಬಿ ಪೂಜಿಸುವವನು; ತಪ್ಪು=ಇತರರಿಗೆ ಹಾನಿಯನ್ನುಂಟುಮಾಡುವ ಕೆಲಸವನ್ನು ಮಾಡುವುದು/ಸಮಾಜ ಒಪ್ಪಿತವಾದ ರೀತಿನೀತಿಗಳನ್ನು ಬಿಟ್ಟು ಬಾಳುವುದು; ತಪ್ಪಿದಡೆ=ತಪ್ಪನ್ನು ಮಾಡಿದರೆ; ಅದ=ಅದನ್ನು/ಅಂತಹ ತಪ್ಪನ್ನು; ಮನಕ್ಕೆ=ಮನಸ್ಸಿಗೆ ; ತರಲ್+ಇಲ್ಲ; ತರು=ತೆಗೆದುಕೊಂಡುಬರುವುದು; ತರಲಿಲ್ಲ=ತೆಗೆದುಕೊಳ್ಳಲಿಲ್ಲ;
ಸಜ್ಜನ=ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿ; ಸದ್ಭಕ್ತನ್+ಎಡಹಿದಡೆ; ಸದ್ಭಕ್ತ=ಒಳ್ಳೆಯ ನಡೆನುಡಿಯುಳ್ಳ ಶಿವಶರಣ; ಎಡಹು=ಮುಗ್ಗರಿಸು/ನಡೆಯುವಾಗ ಕಾಲು ತೊಡರಿ ಬೀಳುವುದು; ಎಡಹಿದಡೆ=ಮುಗ್ಗರಿಸಿದರೆ;
“ ಸಜ್ಜನ ಸದ್ಭಕ್ತನೆಡಹಿದಡೆ “ ಎಂಬ ನುಡಿಯು ಒಂದು ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ. ಒಳ್ಳೆಯ ಗುಣವಂತನಾದ ವ್ಯಕ್ತಿಯು ಜೀವನದಲ್ಲಿ ಕೆಟ್ಟ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನುಂಟುಮಾಡುವುದು;
ಸೈರಿಸು=ತಾಳು/ಸಹಿಸು; ಸೈರಿಸಬಾರದು=ಸಹಿಸಿಕೊಳ್ಳಬಾರದು/ಸುಮ್ಮನಿರಬಾರದು; ಕೇಳ್=ಆಲಿಸು/ಕೇಳು ; ಕೇಳಾ=ಕೇಳುವಂತಹವನಾಗು/ತಿಳಿಯುವಂತಹವನಾಗು/ಆಲೋಚಿಸು ನೋಡು;
ದೇವರ ಪೂಜೆಗೆ ಮತ್ತು ದೇಗುಲದಲ್ಲಿ ನಿತ್ಯವೂ ನಡೆಯುವ ಆಚರಣೆಗಳಿಗೆ ಅಪಾರವಾದ ಸಂಪತ್ತನ್ನು ನೀಡುವುದರ ಮೂಲಕ ಜನಸಮುದಾಯದ ನಡುವೆ ಹೆಸರುವಾಸಿಯಾಗಿದ್ದ ವ್ಯಕ್ತಿಯೊಬ್ಬನು ಕೆಟ್ಟ ಕೆಲಸವನ್ನು ಮಾಡಿದರೆ, ಅದನ್ನು ದೊಡ್ಡ ತಪ್ಪೆಂದು ಪರಿಗಣಿಸಬೇಕಾಗಿಲ್ಲ. ಏಕೆಂದರೆ ಆತ ಹಣವನ್ನು ಸುರಿದು ದೇವರನ್ನು ಪೂಜಿಸುತ್ತಿದ್ದನೇ ಹೊರತು ಒಳ್ಳೆಯ ನಡೆನುಡಿಗಳನ್ನು ಹೊಂದಿರಲಿಲ್ಲ. ಬಹಿರಂಗದಲ್ಲಿ ದೇವರಲ್ಲಿ ಒಲವುಳ್ಳ ಶರಣನಂತೆ ಕಾಣುತ್ತಿದ್ದನೆ ಹೊರತು, ನಿತ್ಯ ಜೀವನದ ವ್ಯವಹಾರಗಳಲ್ಲಿ ಕೆಟ್ಟವನಾಗಿದ್ದ.
ಆದರೆ ನಿತ್ಯ ಜೀವನದ ವ್ಯವಹಾರದಲ್ಲಿ ಸದಾಕಾಲ ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿರುವ ವ್ಯಕ್ತಿಯು ಇದ್ದಕ್ಕಿದ್ದಂತೆ ಕೆಟ್ಟದ್ದನ್ನು ಮಾಡತೊಡಗಿದರೆ, ಅದನ್ನು ಸಹಿಸಿಕೊಂಡು ಸುಮ್ಮನಿರಬಾರದು. ಆತನಿಗೆ ಎಚ್ಚರಿಕೆಯನ್ನು ನೀಡಿ ಮತ್ತೆ ಅಂತಹ ತಪ್ಪು ಅವನಿಂದ ಆಗದಂತೆ ಗುರುಹಿರಿಯರು ಮತ್ತು ಗೆಳೆಯರು ನೋಡಿಕೊಳ್ಳಬೇಕು.
ಏಕೆಂದರೆ ಒಳ್ಳೆಯ ವ್ಯಕ್ತಿಯು ಎಚ್ಚರ ತಪ್ಪಿ ಕೆಟ್ಟತನದಿಂದ ವರ‍್ತಿಸತೊಡಗಿದಾಗ, ಸಹಮಾನವರಿಗೆ ಮತ್ತು ಸಮಾಜಕ್ಕೆ ಹಾನಿಯಾಗುವುದರ ಜತೆಗೆ , ಜನರು ಒಳ್ಳೆಯತನದಲ್ಲಿ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಇದರಿಂದಾಗಿ ಒಳ್ಳೆಯವನಲ್ಲಿ ಮತ್ತು ಕೆಟ್ಟವನಲ್ಲಿ ವ್ಯತ್ಯಾಸವನ್ನೇ ಕಾಣಲಾಗದೆ, ಜೀವನದಲ್ಲಿ ಒಳ್ಳೆಯದು ಕೆಟ್ಟದ್ದೆಲ್ಲವನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡತೊಡಗುತ್ತಾರೆ.
( ಚಿತ್ರ ಸೆಲೆ: lingayatreligion.com )
ಇತ್ತೀಚಿನ ಅನಿಸಿಕೆಗಳು