ಸಂತೋಶಕ್ಕೆ ಸೌಕರ‍್ಯ ಅವಶ್ಯಕವೇ?
“ಮನೆ ಒಳಗಿನ ಮಕ್ಕಳು ಕೊಳೆತವು ರಸ್ತೆ ಮೇಲಿನ ಮಕ್ಕಳು ಬೆಳೆದವು” ಎಂಬ ಮಾತಿದೆ. ಅಂದರೆ, ಕೆಲವೊಮ್ಮೆ ಎಲ್ಲ ಸೌಕರ‍್ಯ ಇರುವ ಅನುಕೂಲಸ್ತ ಮಕ್ಕಳ ಮನಸ್ಸು ಸೋಮಾರಿತನ,ಆಲಸ್ಯ, ನಿರಾಸಕ್ತಿ, ಮನೋಕ್ಲೀಶೆ ಮುಂತಾದ ಗೊಂದಲಗಳಲ್ಲಿ ಸಹಜವಾಗಿ ಅರಳುವುದಿಲ್ಲ. ಅತೀ ಶಿಸ್ತು, ಒತ್ತಡ, ದೈಹಿಕ ಕಸರತ್ತು ಇಲ್ಲದಿರುವಿಕೆಯಿಂದಾಗಿ ಮತ್ತು ಪ್ರಕ್ರುತಿಯಲ್ಲಿ ಸ್ವಚ್ಚಂದವಾಗಿ ಮನಬಿಚ್ಚಿ ಕುಣಿದು ಕುಪ್ಪಳಿಸದೆ ಶಿಸ್ತಿನ ಹೆಸರಲ್ಲಿ ಮನೋರೊಗಿಗಳಾಗಿರುವುದನ್ನೂ ನೋಡಿರುತ್ತೇವೆ. ಮನೆಯಲ್ಲಿ ಎಲ್ಲ ಸೌಕರ‍್ಯವಿದ್ದರೂ ಅದರಿಂದ ಸಂತೋಶವಾಗಿ ಇರಲು ಅವರಿಗೆ ಸಾದ್ಯವಿಲ್ಲ ಎಂಬುದು ತಂದೆ-ತಾಯಂದಿರ ಚಿಂತೆಯೂ ಆಗಿರುತ್ತದೆ.
ಅದೇ ಬಡ ಮಕ್ಕಳನ್ನು, ರಸ್ತೆ ಬದಿಯಲ್ಲಿ, ಕೊಳಗೇರಿಯಲ್ಲಿ ವಾಸಿಸೋ ಮಕ್ಕಳನ್ನು ಗಮನಿಸಿ. ಅವರಿಗೆ ಒಳ್ಳೆಯ ಸೌಕರ‍್ಯ ಹೋಗಲಿ ಮೈ ಮೇಲೆ ತೊಡಲು ಸರಿಯಾಗಿ ಬಟ್ಟೆ ಇರುವುದಿಲ್ಲ, ಉಣ್ಣಲು ಸರಿಯಾದ ಆಹಾರವಿರುವುದಿಲ್ಲ. ಇಂತಹ ಕಿತ್ತು ತಿನ್ನುವ ಬಡತನದ ನಡುವೆ ಮಕ್ಕಳು ಪ್ರಕ್ರುತಿಯ ಜೊತೆ ಜೊತೆಗೆ ಹಾಡುತ್ತ ಪಾಡುತ್ತ ಕುಣಿದು ಕುಪ್ಪಳಿಸುತ್ತ ಸ್ವಚ್ಚಂದವಾಗಿ ಬೆಳೆಯುತ್ತವೆ. ಇವರ ನಲಿವಿಗೆ ಯಾವುದೇ ಸೌಕರ‍್ಯವಿಲ್ಲದಿದ್ದರೂ ಪ್ರಕ್ರುತಿಯಲ್ಲಿ ಸಿಗುವ ವಸ್ತುಗಳನ್ನೆ ಬಳಸಿಕೊಂಡು ಆಡುತ್ತಾರೆ, ಕುಣಿಯುತ್ತಾರೆ, ನಕ್ಕು ನಲಿಯುತ್ತಾರೆ ಮತ್ತು ಆರೋಗ್ಯಪೂರ‍್ಣವಾಗಿ ಬೆಳೆಯುತ್ತ ಮಾನಸಿಕವಾಗಿ ಸದ್ರುಡರಾಗಿರುತ್ತಾರೆ.
ಈಗ ನಾವೇ ಆಲೋಚಿಸಬೇಕಾಗುತ್ತದೆ. ‘ಸಂತೋಶಕ್ಕೆ ಸೌಕರ‍್ಯ ಅವಶ್ಯಕವೇ?’ ಎಂದು. ಈ ಸಂತೋಶವೆನ್ನುವುದು ಒಂದು ಮಾನಸಿಕ ಸ್ತಿತಿ. ‘ಆರೋಗ್ಯಕರ ಮನಸ್ಸಿದ್ದರೆ ಮಾತ್ರ ಆರೋಗ್ಯಕರ ಕಾಯವಿರಲು ಸಾದ್ಯ. ಈರ‍್ಶ್ಯೆ, ದ್ವೇಶ, ಅಸೂಯೆ, ಕೋಪ ಇವೆಲ್ಲ ನಮ್ಮನ್ನು ಕಿನ್ನತೆಗೆ ದೂಡಿಬಿಡುತ್ತವೆ. ಮನಸಿನಲ್ಲಿ ನೆಮ್ಮದಿಯಿಲ್ಲದಿದ್ದಾಗ ನಾವು ಚಿನ್ನದ ತಟ್ಟೆಯಲ್ಲಿ ಕೂಳನಿರಿಸಿ ಚಿನ್ನದ ಚಮಚದಲ್ಲಿ ತಿಂದರೂ ನಮಗೆ ಸಂತೋಶ ತರುವುದಿಲ್ಲ. ಸುಕದ ಸುಪ್ಪತ್ತಿಗೆಯೇ ಇದ್ದರು ಅನುಬವಿಸಿ ಸಂತೋಶ ಪಡಲು ನಮಗೆ ಸಾದ್ಯವಾಗುವುದಿಲ್ಲ. ಕೋಪ, ಮತ್ಸರ, ದ್ವೇಶ, ಈರ‍್ಶ್ಯೆ ಇಲ್ಲದ ಬಡ ಮಕ್ಕಳನ್ನ ನೋಡಿ. ದರೆಯನ್ನೆ ಅಕಾಡವಾಗಿಸಿಕೊಂಡು, ಕಲ್ಲು,ಮಣ್ಣು, ಹುಣಸೆ ಬೀಜ, ತೆಂಗಿನ ಗರಿ ಇವುಗಳನ್ನೆ ಬಳಸಿ ಆಟವಾಡುತ್ತಿರುತ್ತಾರೆ. ಕುಣಿದು ಕುಪ್ಪಳಿಸಿ ಸಂತೋಶ ಪಡುತ್ತಿರುತ್ತಾರೆ. ಇಂತ ಮಕ್ಕಳ ಮನಸ್ತಿತಿ ಎಲ್ಲರಿಗೂ ಮಾದರಿ.
ಆದ್ದರಿಂದ ಸಂತೋಶಕ್ಕೆ ಸೌಕರ‍್ಯವೊಂದೇ ಮುಕ್ಯವಲ್ಲ. ಎಂತಹ ಪರಿಸ್ತಿತಿಯಲ್ಲೂ ಸೌಕರ‍್ಯವಿಲ್ಲದೆ, ಸೀಮಿತ ಲಬ್ಯತೆಯಲ್ಲಿಯೂ ಸಂತೋಶಿಸುವ ಆರೋಗ್ಯಕರ ಮನಸ್ಸೇ ಮುಕ್ಯ ಎಂದು ನನ್ನ ಸ್ಪಶ್ಟ ನಿಲುವು. ಏಕೆಂದರೆ ಗುಡಿಸಲೇ ಆಗಲಿ ಅರಮನೆಯಾಗಲಿ ಆಟ ನಿಲ್ಲದು. ಎದುರಾಗುವ ತರಾವರಿ ಸನ್ನಿವೇಶಗಳ ಆನಂದಿಸುವ ಮನಸ್ಸು ಬೇಕಶ್ಟೇ!
( ಚಿತ್ರಸೆಲೆ : timesofindia.com )
ಇತ್ತೀಚಿನ ಅನಿಸಿಕೆಗಳು