Buffalo, ಎಮ್ಮೆ

ಯಾರೇ ಕೂಗಾಡಲಿ…!

– ವೆಂಕಟೇಶ ಚಾಗಿ.

Buffalo, ಎಮ್ಮೆ

ನಮ್ಮ ಹಳ್ಳಿ ದಾರಿಯಲ್ಲಿ ಎಮ್ಮೆಗಳು ಹೊರಟಿವೆ ಅಂದ್ರೆ, ಅವುಗಳ ಹಿಂದೆ ಬಸ್ಯಾ ಇದ್ದಾನೆ ಅಂತ ಅರ‍್ತ. ಎಮ್ಮೆಗಳಿಗೆ ಶಿಸ್ತುಬದ್ದ ನಡಿಗೆ ರೂಡಿಯಾದಂತಿದೆ. ಒಂದರ ಹಿಂದೆ ಒಂದರಂತೆ ಹೊರಟರೆ ಯಾವುದೋ ಸ್ಕೂಲಿಗೆ ಹೊರಟಂತೆ ಅವುಗಳ ನಡಿಗೆ. ಅವುಗಳಿಗೆಲ್ಲ ಕಡಕ್ ಆಪೀಸರ್ ಅಂದರೆ ನಮ್ಮ ಬಸ್ಯಾ. ಎಲ್ಲರೂ ಅವನನ್ನು “ಎಮ್ಮೆ ಬಸ್ಯಾ” ಅಂತಾನೇ ಕರೆಯುತ್ತಾರೆ. ಅವನು ಮಾತ್ರ ತಾನು “MA ಬಸ್ಯಾ” ಎಂದು ತನ್ನನ್ನು ತಾನು ಕರೆದುಕೊಳ್ಳುತ್ತಿದ್ದ. MA ಮಾಡೋದು ಅವನ ಆಸೆಯಾಗಿಗಿತ್ತಂತೆ. ನಮ್ಮ ಊರಿನಲ್ಲಿ ಎಮ್ಮೆ ಕಾಯೋನು ಅಂದರೆ ಅದು ಎಮ್ಮೆ ಬಸ್ಯಾ ಮಾತ್ರ. ಮೊದಲೆಲ್ಲಾ ಎಮ್ಮೆ ಕಾಯೋಕೆ ಬಹಳ ಜನ ಬರ‍್ತಾ ಇದ್ರು. ಆದರೆ ಈಗ ಎಲ್ಲರ ಕೈಯಲ್ಲಿ ಹಣ ಜಾಸ್ತಿ ಆದಮೇಲೆ ಎಮ್ಮೆ ಕಾಯೋದು ಕಡಿಮೆ ಮಾಡಿದ್ದಾರೆ. ನಗರಕ್ಕೆ ಬೆಳಗಿನ ಜಾವ ಕೆಲಸಕ್ಕೆಂದು ಓಡಿಹೋಗುತ್ತಾರೆ. ಈಗಿನ ಹಳ್ಳಿ ಜನಕ್ಕೆ ಅದೊಂತರ ಸಿಟಿ ರೋಗ ಬಂದುಬಿಟ್ಟಿದೆ. ಎಶ್ಟೋ ಜನ ಮನೆಯಲ್ಲಿರೋ ಎಮ್ಮೆ ಮಾರಿ ಸಿಟಿಯಲ್ಲಿ ಯಾವುದೋ ಒಂದು ಕೆಲಸಕ್ಕೆ ಸೇರಿ ಪ್ರತಿ ದಿನ ಹಳ್ಳಿಗೂ ಸಿಟಿಗೂ ಓಡಾಡ್ತಾ ಇರ‍್ತಾರೆ. ಕೆಲವರಂತೂ ತಮ್ಮಲ್ಲಿರುವ ಎಮ್ಮೆಗಳನ್ನು ಬಸ್ಯಾನಿಗೆ ಕೊಟ್ಟು ಮೇಯಿಸಿಕೊಂಡು ಬರೋದಕ್ಕೆ ಕಳಿಸುತ್ತಾರೆ. ಒಂದು ಎಮ್ಮೆಗೆ ತಿಂಗಳಿಗೆ ಇಂತಿಶ್ಟು ಅಂತ ಹಣ ಬಸ್ಯಾನ ಜೇಬಿಗೆ. ಇದೇ ಹಣದಿಂದ ಬಸ್ಯಾ ಕೊಂಡಿದ್ದು ನಾಲ್ಕೈದು ಎಮ್ಮೆಗಳನ್ನು. ಈಗ ಸುಮಾರು ಹತ್ತು ಹನ್ನೆರಡು ಹೆಮ್ಮೆಗಳ ಒಡೆಯ ಆತ.

ಮೊದಲೆಲ್ಲಾ ಬಸ್ಯಾನ ತಂದೆ-ತಾಯಿ ಮನೆಯಲ್ಲಿ ಇರೋ ಒಂದು ಎಮ್ಮೆಯನ್ನು ಕಾಯೋದಕ್ಕೆ ಕಳಿಸುತ್ತಿದ್ದರು. ಶಾಲೆ ಮಾಸ್ತರು ಮನೆಗೆ ಬಂದು ಬಸ್ಯಾನ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಅನಿವಾರ‍್ಯವಾಗಿ ಬಸ್ಯಾನ ತಾಯಿಯೇ ಎಮ್ಮೆ ಕಾಯೋಕೆ ಹೋಗಬೇಕಾಗುತ್ತಿತ್ತು. ಬಸ್ಯಾ ಶಾಲೆಗೆ ಹೋದಾಗ ಮೇಶ್ಟ್ರುಗಳು ಇವನಿಗೆ ಪರಿಹಾರ ಬೋದನೆ ಮಾಡೋಕೆ ದೊಡ್ಡ ಹರಸಾಹಸ ಪಡುತ್ತಿದ್ದರು. ಹೊಸದಾಗಿ ಬಂದಿದ್ದ ಮೇಶ್ಟ್ರು ಇವನಿಗೆ ಏನೂ ಬರದದ್ದನ್ನು ಕಂಡು “ಎಮ್ಮೆ ಕಾಯೊದಕ್ಕೆ ಹೋಗು ಶಾಲೆಗೆ ಯಾಕೆ ಬರ‍್ತೀಯಾ” ಅಂದಿದ್ದರು. ಅದಕ್ಕೆ ಬಸ್ಯಾ “ಸರ್, ನಾನು ಎಮ್ಮೆ ಕಾಯೋಕೆ ಅಂತಾನೆ ಹೋಗ್ತಿದ್ದೆ. ಹೆಡ್ ಮಾಸ್ಟರ್ ನನ್ನ ಶಾಲೆಗೆ ಕರೆದುಕೊಂಡು ಬಂದಾರ” ಅಂತಿದ್ದ. ಆದ್ರೂ ಬಸ್ಯಾ ಎಸ್ ಎಸ್ ಎಲ್ ಸಿ ಯಲ್ಲಿ ಜಸ್ಟ್ ಪಾಸಾಗಿದ್ದ!

ಎಮ್ಮೆ ಕಾಯುವುದರಲ್ಲಿ ಅವನು ಯಾವಾಗಲೂ ಮುಂದು. ಬೆಳಿಗ್ಗೆ ಬೇಗ ಎದ್ದು ಎಮ್ಮೆಗಳ ಸೇವೆ ಮಾಡಿ ಹಾಲು ಕರೆದು ಡೈರಿಗೆ ಹಾಕಿ ಬಂದರೆ ಬೆಳಗಿನ ಕೆಲಸ ಮುಗಿಯುತ್ತದೆ. ನಂತರ ಏನಿದ್ದರೂ ಹತ್ತು ಗಂಟೆಯ ನಂತರ. ಎಲ್ಲಾ ಎಮ್ಮೆಗಳನ್ನು ಊರ ಹೊರಗಿನ ಮೈದಾನಕ್ಕೆ ಹಾಗೂ ಅರೆಬರೆ ಕಾಡಿಗೆ ಕರೆದುಕೊಂಡು ಹೋಗುವುದು ಅವನ ಪ್ರತಿದಿನದ ದಿನಚರಿ. ಅವ್ವ ಕಟ್ಟಿದ ಬುತ್ತಿಯಲ್ಲಿ ನಾಲ್ಕೈದು ರೊಟ್ಟಿ, ಸ್ವಲ್ಪ ಪಲ್ಯ, ಮೊಸರು, ಬೆಣ್ಣೆ ಇತ್ಯಾದಿ ಇರುತ್ತಿತ್ತು. ಬುತ್ತಿಯನ್ನು ತನ್ನ ತಲೆಯ ಮೇಲಿಟ್ಟು ಹೆಗಲಿಗೆ ನೀರಿನ ಬಾಟಲ್ ತೂಗು ಹಾಕಿಕೊಂಡು ಹೊರಡುವುದು ನಿತ್ಯದ ಕಾಯಕ. ಬಸ್ಯಾನ ಎಮ್ಮೆಗಳು ರಸ್ತೆ ಮೇಲೆ ಹೋಗ್ತಾ ಇದ್ರೆ ಸ್ವಲ್ಪ ಟ್ರಾಪಿಕ್ ಜಾಸ್ತಿ ಆದರೂ ಅವುಗಳ ಶಿಸ್ತುಬದ್ದ ನಡಿಗೆ ಊರಿನವರಿಗೆ ಮಾದರಿಯಾಗಿತ್ತು. ಎಮ್ಮೆಗಳಿಗೆ ಬಸ್ಯಾನ ಮೇಲೆ ಎಶ್ಟು ಪ್ರೀತಿ ಅಂದ್ರೆ ತಮ್ಮ ಮೇಲೆ ಅವನನ್ನು ಸವಾರಿ ಮಾಡಿಕೊಂಡು ಹೋಗುತ್ತಿದ್ದವು. ಮದ್ಯಾಹ್ನದವರೆಗೂ ಅರೆಬರೆ ಕಾಡಿನಲ್ಲಿ ಮೇಯ್ದು, ನಂತರ ವಿಶಾಲವಾದ ಕೆರೆಯ ನೀರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು. ಅ ಅವದಿಯಲ್ಲಿ ಬಸ್ಯಾನ ಊಟವಾಗುತ್ತಿತ್ತು. ಬುತ್ತಿಯಲ್ಲಿ ನಾಲ್ಕೈದು ರೊಟ್ಟಿಗಳ ಜೊತೆ ಹೊಲದವರು ಕೊಡುತ್ತಿದ್ದ ತರಕಾರಿ, ಸೊಪ್ಪು ಪಲ್ಯಗಳು ಬಹುಪಾಲು ಸ್ತಾನ ಪಡೆದಿದ್ದವು. ಬೆಣ್ಣೆ, ಮೊಸರು ಬಸ್ಯಾನಿಗೆ ಬಲು ಇಶ್ಟ. ಅವನ ಊಟ ಯಾವ ಪೈವ್ ಸ್ಟಾರ್ ಹೋಟೆಲ್ ಊಟಕ್ಕೂ ಕಡಿಮೆ ಏನಲ್ಲ.

ಇಶ್ಟೇ ಅಲ್ಲದೆ ಕಾಲಕಾಲಕ್ಕೆ ಕಾಡು ಮೇಡಿನಲ್ಲಿ ದೊರಕುತ್ತಿದ್ದ ಮಾವು, ಬಾರೆ, ಅತ್ತಿಹಣ್ಣು, ಕಲ್ಲಂಗಡಿ, ಕಿತ್ತಳೆ ಮುಂತಾದ ಹಣ್ಣುಗಳಿಗೇನು ಕೊರತೆ ಇರಲಿಲ್ಲ. ಎಮ್ಮೆಗಳಿಗೆ ಕೆರೆಯಲ್ಲಿ ನೀರಾಟವಾದರೆ ಎಮ್ಮೆಗಳಿಗೊಂದಿಗೆ ಈಜು, ಹಳ್ಳಿ ಹುಡುಗರೊಂದಿಗೆ ಆಡುತ್ತಿದ್ದ ಮರಕೋತಿಯಾಟ, ಲಗೋರಿ ಮುಂತಾದ ಆಟಗಳಲ್ಲಿ ಬಸ್ಯಾ ಬಲುಮಂದೆ.

ಚಳಿಗಾಳಿಗೆ ಮಳೆಗೆ, ಬಿಸಿಲಿಗೆ ಅದೆಶ್ಟು ಸದ್ರುಡ ಆಗಿದ್ದನೆಂದರೆ ಒಂದು ದಿನವೂ ಸೀರಿಯಸ್ಸಾಗಿ ನೆಗಡಿ, ಕೆಮ್ಮು , ಜ್ವರ ಎಂದು ಮಲಗಿದ್ದವನಲ್ಲ. ರೋಗಗಳೇ ಅವನನ್ನು ಕಂಡು ಓಡಿ ಹೋಗುತ್ತಿದ್ದವು ಎನ್ನಬಹುದು. MA ವರೆಗೂ ಓದಿಲ್ಲದಿದ್ದರೂ SSLC ಓದಿದ ಬಸ್ಯಾ ನಿಗೆ ಬಹುದೊಡ್ಡ ಆಸೆ ಏನೆಂದರೆ ಇನ್ನಶ್ಟು ಎಮ್ಮೆಗಳನ್ನು ಕರೀದಿಸಿ ಒಂದು ದೊಡ್ಡ ಡೈರಿಯನ್ನು ಸ್ತಾಪಿಸುವುದು. ಡೈರಿಯಲ್ಲಿ MA ಕಲಿತವರಿಗೆಲ್ಲಾ ಕೆಲಸ ಕೊಡುವುದು ಅವನ ಮಹಾದಾಸೆ.  ಊರಲ್ಲಿ MA ಕಲಿತವರೆಲ್ಲ ಊರ ನಡುವಿನ ಜಗಲಿ ಕಟ್ಟೆಯ ಮೇಲೆ ಕುಳಿತು ಹರಟೆ ಹೊಡೆಯುತ್ತಿರುವಾಗ ಬಸ್ಯಾನನ್ನು ಕಂಡು “ಏನಪ್ಪಾ ಬಸ್ಯಾ, ಎಮ್ಮೆ ಕಾಯೋಕೆ ಹೊಂಟಿದ್ದೀಯಾ..?” ಎಂದು ಹಾಸ್ಯ ಮಾಡುತ್ತಿದ್ದರು. ಆಗ ಬಸ್ಯಾ , “ಹೌದ್ರಪ್ಪಾ, ಎಮ್ಮೆನಾದ್ರೂ ಕಾಯ್ತಾ ಇದ್ದೀನಿ. ನೀವು MA ಓದಿ ಏನು ಮಾಡುತ್ತಿದ್ದೀರಿ..?” ಎಂದು ಸರಿಯಾದ ಉತ್ತರ ನೀಡುತ್ತಿದ್ದ. ಬಸ್ಯಾನನ್ನು ಕೆಲವರು ಅಪಹಾಸ್ಯ ಮಾಡಿದರೂ ಬಸ್ಯಾ ಮಾತ್ರ “ಯಾರೇ ಕೂಗಾಡಲಿ, ಎಮ್ಮೆ ಕಾಯೋದು ಬಹಳ ಚಂದ” ಅನ್ನುತ್ತಿದ್ದ.

(ಚಿತ್ರ ಸೆಲೆ: pixabay)

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: