ಮೊಸಳೆಗಳು ಸರ್ ಮೊಸಳೆಗಳು!

– ಮಾರಿಸನ್ ಮನೋಹರ್.

ಮೊಸಳೆ ಜೋಡಿ ಮತ್ತು ನೇರಳೆ ಮರದ ಕೋತಿಯ ಕತೆ ಕೇಳಿದ್ದೇವೆ. ರುಚಿಯಾದ ನೇರಳೆ ಹಣ್ಣು ತಿನ್ನುವ ಕೋತಿಯ ಗುಂಡಿಗೆಯನ್ನು ಹೆಂಡತಿ ಮೊಸಳೆ ಬಯಸುತ್ತದೆ. ಕೋತಿ ತನ್ನ ಗುಂಡಿಗೆಯನ್ನು ನೇರಳೆ ಮರದಲ್ಲಿಯೇ ಮರೆತು ಬಿಟ್ಟು ಬಂದಿದ್ದೇನೆ. ಅಲ್ಲಿಗೆ ಹಿಂದಕ್ಕೆ ಹೋಗಿ ತೆಗೆದುಕೊಂಡು ಬರೋಣ ಅಂತ ಗಂಡು ಮೊಸಳೆಯನ್ನು ಮರಕ್ಕೆ ಕರೆದುಕೊಂಡು ಹೋಗಿ, ತನ್ನ ಜೀವ ಉಳಿಸಿಕೊಳ್ಳುವ ಕತೆಯಿದೆ. ನಾನು ಚಿಕ್ಕವನಿದ್ದಾಗ ಹೈದ್ರಾಬಾದ್ ಉಸಿರಿಮನೆಗೆ(zoo) ಹೋಗಿದ್ದೆ. ಅಲ್ಲಿನ ಒಂದು ಕೊಳದ ದಂಡೆಯ ಮೇಲೆ ಹಲವಾರು ಮೊಸಳೆಗಳು ಬಾಯಿ ತೆರೆದುಕೊಂಡು ಬಿಸಿಲು ಕಾಯಿಸಿಕೊಳ್ಳುತ್ತಿದ್ದವು. ನಾನು ಮೊಟ್ಟ ಮೊದಲ ಬಾರಿಗೆ ಅಶ್ಟು ಮೊಸಳೆಗಳನ್ನು ನೋಡಿ ಹೌಹಾರಿ ಹೋಗಿದ್ದೆ! ಮೊಸಳೆಗಳು ತಂಪುನೆತ್ತರಿನ ಉಸಿರಿಗಳಾಗಿವೆ. ಬಿಸಿಲಲ್ಲಿ ಗಂಟೆ ಗಟ್ಟಲೆ ಬಿದ್ದುಕೊಂಡು ತಮ್ಮ ಮೈಕಾವು ಹೆಚ್ಚಿಸಿ ಕೊಳ್ಳುತ್ತವೆ. ಮೊಸಳೆ, ಎಲಿಗೇಟರ್ ಮತ್ತು ಗರಿಯಾಲ್ ಗಳಲ್ಲಿ ತುಂಬಾ ಬೇರ‍್ಮೆಯಿದೆ. ಗರಿಯಾಲ್ ಗಳನ್ನು ಅವುಗಳ ಉದ್ದನೆಯ ಚೂಪು ಮೂತಿಯಿಂದ ಸುಳುವಾಗಿ ಗುರುತಿಸಬಹದು. ಆದರೆ ಮೊಸಳೆ (Crocodile)) ಮತ್ತು ಎಲಿಗೇಟರ್ ಗಳ ನಡುವೆ ಬೇರ‍್ಮೆ ಹೇಳುವದು ಕಶ್ಟ. ಎಲಿಗೇಟರ್ ಗಳಿಗೆ ಹೋಲಿಸಿದ್ದಲ್ಲಿ ಮೊಸಳೆಗಳು ಮೈಯಳತೆಯಲ್ಲಿ ದೊಡ್ಡವು ಮತ್ತು ಬೇಗನೇ ಸಿಟ್ಟಿಗೇಳುತ್ತವೆ. ಮೊಸಳೆಗಳಲ್ಲಿ ಸಿಹಿನೀರಿನ ಮೊಸಳೆ ಮತ್ತು ಉಪ್ಪುನೀರಿನ ಮೊಸಳೆಗಳು ಎಂಬ ಎರಡು ದೊಡ್ಡ ಗುಂಪುಗಳು ಇವೆ.

ಮೊಸಳೆಗಳಲ್ಲಿವೆ ಹಲವು ತಳಿಗಳು

ಮೊಸಳೆಗಳಲ್ಲಿ ಹಲವು ಬಗೆಗಳಿದ್ದು ಎಲ್ಲವಕ್ಕೂ ತಮ್ಮದೇ ಆದ ವಿಶಿಶ್ಟತೆಗಳಿವೆ. ಅಮೆರಿಕದ ದೊಡ್ಡ ಮೊಸಳೆ, ನ್ಯೂಗಿನಿಯ ಸಣ್ಣ ಮೊಸಳೆ, ವೆನೆಜುವೆಲಾದ ಓರಿನೋಕೋ ಎಂಬ ಕಂದು ಬಣ್ಣದ ಮೊಸಳೆ, ಮೈಮೇಲೆ ಕಪ್ಪು ಪಟ್ಟೆಪಟ್ಟೆಗಳಿರುವ ಆಸ್ಟ್ರೇಲಿಯಾದ ಸಿಹಿನೀರು ಮೊಸಳೆ, ಪಿಲಿಪ್ಪಿನ್ ಮೊಸಳೆ, ಗಾಡ ಬೂದಿ ಬಣ್ಣದ ಮೆಕ್ಸಿಕೋ ಮೊಸಳೆ, ಗಾಡ ತಾಮ್ರ ಬಣ್ಣದ ದಾಳಿ ಮಾಡುವ ನೈಲ್ ಮೊಸಳೆ, ಇಂಡಿಯಾದ ಮಗ್ಗರ್ ಮೊಸಳೆ, ಎಲ್ಲಕ್ಕಿಂತ ಹೆಚ್ಚು ಸಿಟ್ಟಿಗೆದ್ದು ದಾಳಿ ಮಾಡುವ ಉಪ್ಪು ನೀರಿನ ಹಳದಿ ಮೊಸಳೆ, ಮೈಮೇಲೆ ಹಲವಾರು ದುಂಡುದುಂಡಾದ ಬುಗುಟಿ ಹೊಂದಿರುವ ಸಣ್ಣ ಸೈಜಿನ ಕ್ಯೂಬಾ ಮೊಸಳೆ, ಮತ್ತು ಆಪ್ರಿಕಾದ ಕುಳ್ಳ ಮೊಸಳೆಗಳು ಹೀಗೆ. ಕ್ಯೂಬಾ ಮೊಸಳೆ ಬೇಟೆಯನ್ನು ಅಟ್ಟಿಸಿಕೊಂಡು ನೀರಿನಿಂದ ಹೊರಗೆ ಕೆಲವು ಮೀಟರ‍್‌ಗಳವರೆಗೆ ಬೆನ್ನಟ್ಟುತ್ತದೆ! ಎಲ್ಲ ಮೊಸಳೆಗಳಲ್ಲಿ ಉಪ್ಪು ನೀರಿನ ಮೊಸಳೆಗಳು ಅಗಲವಾದ ಮೂತಿ ಹೊಂದಿದ್ದು ಸೈಜಿನಲ್ಲಿ ದೊಡ್ಡದಾಗಿರುತ್ತವೆ. ಮೊಸಳೆಗಳು ಹರಿದಾಡುವ (Reptiles) ಗುಂಪಿನ ಉಸಿರಿಗಳಾಗಿವೆ. ನೀರಿನಲ್ಲಿಯೂ ನೆಲದ ಮೇಲೂ ಬದುಕುವ ಉಸಿರಿಗಳಾಗಿವೆ. ಮೊಸಳೆಗಳು ಮಾಂಸದುಣಿಸಿನ ಉಸಿರಿಗಳಾಗಿದ್ದು ಹೆಚ್ಚಾಗಿ ಮೀನು, ಹಾವು, ಹಕ್ಕಿಗಳು, ಮೊಲೆಯುಣಿಗಳು (Mammals) ಮತ್ತು ಶಂಕ-ಚಿಪ್ಪುಗಳನ್ನೂ ತಿನ್ನುತ್ತವೆ. ಮೊಸಳೆಗಳು ಉಪ್ಪು ನೀರನ್ನು ತಾಳಿಕೊಳ್ಳುತ್ತವೆ. ಏಕೆಂದರೆ ಇವುಗಳಲ್ಲಿ ಉಪ್ಪು ಸೋಸುವ ಪೊಟ್ಟಣಗಳು(salt gland) ಇವೆ. ಮೊಸಳೆ ತಂಪನ್ನು ತಾಳಿಕೊಳ್ಳಲಾರವು ಇದೇ ನೆಪಕ್ಕೆ ಮೊಸಳೆಗಳು ಬಿಸಿಲು ಹೆಚ್ಚು ಬೀಳುವ ಈಕ್ವೆಡಾರ್ ಗೆ ಹತ್ತಿರ ಇರುವ ನಾಡುಗಳಲ್ಲಿ ಹೆಚ್ಚಾಗಿ ಬದುಕುತ್ತವೆ. ಮೊಸಳೆಗಳೂ ಕರಿ ಮಾಂಬಾದ ಹಾಗೆ ತಂಪು ನೆತ್ತರಿನ ಉಸಿರಿಗಳಾಗಿರುವುದರಿಂದ ಟ್ರಾಪಿಕಲ್ ವಾತಾವರಣದ ನೀರಿನ ಕುಣಿಗಳು, ಜವುಗು, ಕೆಸರು ಗದ್ದೆ, ಹಸಿ ಕೊಚ್ಚೆ ಜಾಗಗಳಲ್ಲಿ ಚೆನ್ನಾಗಿ ಬದುಕುತ್ತವೆ.

ಮೊಸಳೆಗಳ ಹುಟ್ಟು ಮತ್ತು ಸುತ್ತಣದ ಬಿಸಿಯ ಜೊತೆಗಿನ ನಂಟು!

ಹೆಣ್ಣು ಮೊಸಳೆ ಜವುಗು ಬೂಮಿಯಲ್ಲಿ ಗುದ್ದನ್ನು ಮಾಡಿ ಅದರಲ್ಲಿ ಮೊಟ್ಟೆಗಳನ್ನು ಹಾಕುತ್ತದೆ. ಆಮೇಲೆ ಆ ಮೊಟ್ಟೆಗಳನ್ನು ಮಣ್ಣಿನಿಂದ ಮೆದುವಾಗಿ ಮುಚ್ಚಿಬಿಡುತ್ತದೆ. ಮೊಸಳೆಯ ಮೊಟ್ಟೆಗಳನ್ನು ಕದ್ದು ತಿನ್ನುವ ಉಸಿರಿಗಳಲ್ಲಿ ಕೊಮೊಡೊ ಡ್ರ್ಯಾಗನ್ ಎತ್ತಿದ ಕೈ. ಈ ಕೊಮೊಡೊ ಡ್ರ್ಯಾಗನ್ ತಾಯಿ ಮೊಸಳೆ ಇಲ್ಲದ ಹೊತ್ತಿನಲ್ಲಿ ಬಂದು ಗುದ್ದನ್ನು ಕೆದರಿ ಮೊಟ್ಟೆ ಗಳನ್ನು ಕದ್ದು ತಿಂದು ಪರಾರಿಯಾಗುತ್ತದೆ. ಮೊಸಳೆಗಳ ಮೊಟ್ಟೆಗಳಿಗೂ ಹೊರಗಿನ ಸೆಕೆಗೂ ತುಂಬಾ ನಂಟು ಇದೆ. ಹೊರಗಿನ ಸೆಕೆ 30 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇದ್ದರೆ ಮೊಟ್ಟೆಗಳಿಂದ ಹೆಣ್ಣು ಮೊಸಳೆಗಳು ಆಗುತ್ತವೆ. 30 ರಿಂದ 31 ಡಿಗ್ರಿ ಸೆಲ್ಸಿಯಸ್ ಸೆಕೆಯಿದ್ದರೆ ಹೆಣ್ಣು ಗಂಡೂ ಎರಡೂ ಮರಿಗಳು ಆಗುತ್ತವೆ. 33 ಡಿಗ್ರಿ ಸೆಲ್ಸಿಯಸ್ ವರೆಗೆ ಸೆಕೆಯಿದ್ದರೆ ಗಂಡು ಮೊಸಳೆಗಳು ಆಗುತ್ತವೆ. ಅಂದರೆ ಮೊಸಳೆಗಳ ಲಿಂಗ ಗಂಡು-ಹೆಣ್ಣಾಗುವದು ಕ್ರೊಮೊಸೋಮ್ ಗಳಿಂದ ಆಗುವದಿಲ್ಲ ವಾತಾವರಣದ ಹೊರಗಿನ ಸೆಕೆಯಿಂದ ಆಗುತ್ತದೆ! ಮರಿಗಳು ತಮ್ಮ ಮೂತಿಯ ಮುಂದೆ ಚಾಚಿರುವ ಒಂದು ಹಲ್ಲಿನಿಂದ ಮೊಟ್ಟೆಯ ಪೊರೆಯನ್ನು ಸೀಳಿ ಹೊರಗೆ ಬರುತ್ತವೆ. ಮೊಸಳೆಯ ಮರಿಗಳು ಮೊಟ್ಟೆಯೊಡೆದು ಹೊರಗೆ ಬಂದ ಒಡನೇ ಮೆದುವಾದ ಕಿರ‍್ರ್ ಕಿರ‍್ರ್ ಸದ್ದನ್ನು ಹೊರಡಿಸುತ್ತವೆ. ಈ ಸದ್ದನ್ನು ಅರಸಿಕೊಂಡು ತಾಯಿ ಮೊಸಳೆ ತನ್ನ ಗುದ್ದಿನ ಬಳಿಗೆ ಬರುತ್ತದೆ. ಆಗ ಅದು ಮಣ್ಣನ್ನು ಸರಿಸಿ ಮರಿಗಳು ಹೊರಗೆ ಬರುವಂತೆ ಮಾಡುತ್ತದೆ. ಮರಿಗಳು ನೀರಿನಲ್ಲಿ ತಾಯಿಯ ಜೊತೆಗೆ ಇರುವಾಗ ಈಜಿ ಸಾಕಾಗಿ ತಮ್ಮ ತಾಯಿಯ ಬೆನ್ನೇರಿ ಕುಳಿತು ಕೊಳ್ಳುತ್ತವೆ. ಮೊಸಳೆ ಮರಿಗಳು ಚಿಕ್ಕದ್ದಾಗಿರುವಾಗ ಹಕ್ಕಿಗಳು ಮತ್ತು ಬೇರೆ ಉಸಿರಿಗಳು ಎತ್ತಿಕೊಂಡು ಹೋಗಿ ತಿಂದು ಬಿಡುತ್ತವೆ.

ಮೊಸಳೆಯ ಮೈಮಾಟವೇ ಅದರ ಶಕ್ತಿ

ಮೊಸಳೆ ತನ್ನ ಬಾಲದಿಂದ ನೂಕುಬಲ ಹುಟ್ಟು ಹಾಕುತ್ತದೆ. ಇದರ ಕಾಲ್ಬೆರಳುಗಳು ಒಂದು ಪದರದಿಂದ ಮೆತ್ತಿಕೊಂಡಿದ್ದು, ಇದು ತನ್ನ ಮೈ ಹೊರಳಿಸುವಂತೆ ಮಾಡುತ್ತದೆ. ಮೊಸಳೆಯ ಬಾಯಲ್ಲಿ ಹೊಟ್ಟೆಯನ್ನು ಬಾಯಿಯಿಂದ ಬೇರೆ ಮಾಡುವ ನೀರ‍್ಬಾಗಿಲಿದೆ. ಈ ನೀರುಬಾಗಿಲು ಮೊಸಳೆಯ ಬಾಯಿಂದ ನೀರು ಹೊಟ್ಟೆಗೆ ಸೇರದಂತೆ ತಡೆಯುತ್ತದೆ ಮತ್ತು ಬೇಟೆ ನುಂಗುವಾಗ ತೆರೆದುಕೊಳ್ಳುತ್ತದೆ. ಮೊಸಳೆ ಕಚ್ಚಿ ನುಂಗುವ ಉಸಿರಿಯಾಗಿದೆ. ಅಂದರೆ ಹುಲಿ ಸಿಂಹಗಳ ಹಾಗೆ ಮೆಲ್ಲುವದಿಲ್ಲ, ಜಿಂಕೆ ಎಮ್ಮೆಗಳ ಹಾಗೆ ದವಡೆಯಲ್ಲಿ ಅರೆಯುವದಿಲ್ಲ, ಮೆಲುಕು ಹಾಕುವದೂ ಇಲ್ಲ. ತನ್ನ ಬೇಟೆಯನ್ನು ಕಚ್ಚಿ ಹರಿದು ನುಂಗಿ ಬಿಡುತ್ತದೆ. ಮೊಸಳೆ ಬೆನ್ನಿನ ಪದರ ತುಂಬಾ ಬಿರುಸಾಗಿದ್ದು ಗೆರೆಗೆರೆಯಾಗಿಯೂ, ದಪ್ಪನೆಯ ಬುಗುಟಿಗಳನ್ನು ಹೊಂದಿದೆ. ಮೊಸಳೆಯ ಬೆನ್ನು ಬಿರುಸಾಗಿದ್ದರೆ ಅದರ ಹೊಟ್ಟೆ ಪದರ ತುಂಬಾ ತೆಳುವಾಗಿಯೂ, ಬಿಳಿ ಬಣ್ಣದ್ದಾಗಿಯೂ ಇದೆ. ಮೊಸಳೆ ಮೈದೊಗಲು ಎಣ್ಣೆಯನ್ನು ಸ್ರವಿಸುತ್ತದೆ ಇದರಿಂದ ಮೊಸಳೆಯ ಮೈಗೆ ಕೆಸರು ಅಂಟಿಕೊಳ್ಳದು. ಈ ಎಣ್ಣೆಯ ನೆಪದಿಂದಾಗಿಯೇ ಮೊಸಳೆಗಳು ಬಿಸಿಲಿನಲ್ಲಿ ಮಿರಮಿರನೆ ಮಿಂಚುತ್ತವೆ. ಮೊಸಳೆಗೆ ಬೆವರು ಹೊರಹಾಕುವ ತೂತುಗಳು ಇಲ್ಲ. ನಾಯಿಗಳ ತರಹ ತನ್ನ ಬಾಯಿಂದ ಸೆಕೆಯನ್ನು ಹೊರಗೆ ಹಾಕುತ್ತದೆ. ಮೊಸಳೆಗಳಲ್ಲಿ ಕುಳ್ಳ ಗುಂಪಿನ ಮೊಸಳೆಗಳು 6 ಅಡಿ ಬೆಳೆದರೆ, ಉಪ್ಪು ನೀರಿನ ದೊಡ್ಡ ಮೊಸಳೆಗಳು 23 ಅಡಿಗಳವರೆಗೆ ಉದ್ದ ಬೆಳೆದು 1000 ಕೆಜಿ ತೂಕವುಳ್ಳದ್ದಾಗುತ್ತವೆ! ಮೊಸಳೆ ಮರಿಯಾಗಿದ್ದಾಗ ಬರೀ 20 ಸೆಂಟಿ ಮೀಟರ್ ಇರುತ್ತದೆ, ಆದರೆ ಬೆಳೆಯುತ್ತಾ ಬಲಿತು ದೊಡ್ಡದಾದ ಮೇಲೆ 20 ಅಡಿ ತಲುಪುತ್ತದೆ. ತೈಲ್ಯಾಂಡಿನ ಸಮುಟ್ ಪ್ರಕಾನ್ ಮೊಸಳೆಮನೆಯಲ್ಲಿನ ಒಂದು ಉಪ್ಪು ನೀರಿನ ಮೊಸಳೆ 20 ಅಡಿ ಉದ್ದ ಮತ್ತು 1114 ಕೆಜಿ ಹೊಂದಿತ್ತು.

ಮೊಸಳೆಗಳ ಬೇಟೆಯಾಡುವ ಗತ್ತು

ಮೊಸಳೆ ನಾಲಿಗೆ ಬಾಯಿಯ ಅಂಗಳಕ್ಕೆ ಮೆತ್ತಿಕೊಂಡಿರುವದರಿಂದ, ಅದು ತನ್ನ ನಾಲಿಗೆಯನ್ನು ನಾಯಿಯ ಹಾಗೆ ಹೊರಕ್ಕೆ ಚಾಚಲಾರದು. ಮೊಸಳೆಯ ಹಲ್ಲುಗಳು ಅದರ ಬದುಕಿನುದ್ದಕ್ಕೂ 50 ಬಾರಿ ಬಿದ್ದು ಮತ್ತೆ ಏಳುತ್ತವೆ. ಮೊಸಳೆ ಸರಾಸರಿ 35 ರಿಂದ 75 ಏಡುಗಳು(years) ಬದುಕುತ್ತವೆ. ಮೊಸಳೆಯ ಇರುಳು ನೋಟ (Night Vision) ತುಂಬಾ ಚೆನ್ನಾಗಿದೆ. ಹೀಗಾಗಿ ಇದು ಇರುಳಿನಲ್ಲಿಯೇ ಬೇಟೆಯಾಡುತ್ತದೆ‌. ಇದಕ್ಕೆ ಬೇಟೆಯಾಗುವ ಉಸಿರಿಗಳ ಇರುಳು ನೋಟ ತುಂಬಾ ಕಡಿಮೆಯಾಗಿರುವದರಿಂದ ಮೊಸಳೆ ಅವುಗಳನ್ನು ಸುಳುವಾಗಿ ಹಿಡಿದುಕೊಳ್ಳುತ್ತದೆ. ಮೊಸಳೆ ಹಲ್ಲಿಯ ಹಾಗೆ ಚಪ್ಪಟೆ ಮೈಮಾಟವನ್ನು ಹೊಂದಿದೆ. ಕೆಸರು ತುಂಬಿದ ನೀರಿನಲ್ಲಿ ಇದು ಸರಸರನೇ ಹೊರಳಾಡುತ್ತಾ ಓಡಾಡುತ್ತದೆ. ಜಿಂಕೆ, ಕೋತಿ, ಕಡವೆ, ವಿಲ್ಡರಬೀಸ್ಟ್, ಜೀಬ್ರಾ ಇವುಗಳ ಕಾಲುಗಳ ತುದಿಗೆ ಗೊರಸುಗಳಿರುವದರಿಂದ ಅವು ಕೆಸರಿನಲ್ಲಿ ಹೂತುಹೋಗಿ ಸಿಕ್ಕಿಬೀಳುತ್ತವೆ. ಇದು ಮೊಸಳೆ ಅವುಗಳನ್ನು ಹಿಡಿದುಕೊಳ್ಳಲು ನೆರವಾಗುತ್ತದೆ. ಉಸಿರಿಗಳು ತಮ್ಮ ನೀರಡಿಕೆ ತಣಿಸಿಕೊಳ್ಳಲು ಕೊಳ-ಕೆರೆ-ತೊರೆಗಳ ದಂಡೆಗೆ ಬಂದಾಗ ಮೊಸಳೆಗಳು ದಂಡೆಯ ಅಂಚಿನಲ್ಲಿಯೇ ಕೆಸರಿನ ನೀರಿನಲ್ಲಿ ಅವಿತು ಕೊಂಡಿರುತ್ತವೆ. ಉಸಿರಿಗಳು ನೀರು ಕುಡಿಯಲು ತಮ್ಮ ಕತ್ತು ಬಗ್ಗಿಸಿದಾಗ ಮೊಸಳೆ ಚಕ್ಕನೇ ಅವುಗಳ ಮೇಲೆ ಎರಗಿ, ಬಾಯಲ್ಲಿ ಕಚ್ಚಿ ಹಿಡಿದು ನೀರೊಳಗೆ ಎಳೆದುಕೊಳ್ಳುತ್ತವೆ. ಇನ್ನಶ್ಟು ಮೊಸಳೆಗಳೂ ಅಲ್ಲಿಗೇ ಬಂದು ಆ ಉಸಿರಿಯ ಕಾಲುಗಳನ್ನು ಕುತ್ತಿಗೆಯನ್ನು ಕಚ್ಚಿ ಗರಗನೇ ತಿರುಗಿಸಿ ಬೇರ‍್ಪಡಿಸಿಕೊಂಡು ಒಯ್ದು ನುಂಗುತ್ತವೆ. ಮೊಸಳೆಯ ಕಚ್ಚುಬಲ (Bite Force) ಎಲ್ಲಕ್ಕಿಂತ ಹೆಚ್ಚಿನದ್ದಾಗಿದ್ದು, ತನ್ನ ಬೇಟೆಯನ್ನು ಸುಮಾರು 22,000 N (ನ್ಯೂಟನ್ ಬಲ) ಬಲಹಾಕಿ ಕಚ್ಚುತ್ತದೆ! ಅತಿ ಬಯಂಕರ ಬೇಟೆಗಾಗಿ ಹೆಸರುವಾಸಿಯಾಗಿರುವ ರೊಟ್ಟವೈಲರ್ ನಾಯಿಯ ಕಚ್ಚುಬಲ 1,490 N ಆಗಿದ್ದರೆ, ಹಾಯಿನಾದ(ಕತ್ತೆ ಕಿರುಬ) ಕಚ್ಚುಬಲ‌ 3,600 N ಆಗಿದೆ. ಈ ಹೋಲಿಕೆಯಿಂದ ನಮಗೆ ಮೊಸಳೆಯೆ ಕಚ್ಚುಬಲದ ಅಂದಾಜು ಗೊತ್ತಾಗುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ: pixabay.com, wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: