ನಿವ್ರುತ್ತಿ ಎಂಬುದು ವ್ರುತ್ತಿಗಶ್ಟೇ… ಜೀವನಕ್ಕಲ್ಲ

– ವೆಂಕಟೇಶ ಚಾಗಿ.

ನಿವ್ರುತ್ತಿ, retired life, retirement

ನನ್ನ ಸಹೋದ್ಯೋಗಿಯೊಬ್ಬರು ಇತ್ತೀಚೆಗೆಶ್ಟೇ ನಿವ್ರುತ್ತಿಯಾದರು. ಅವರು ಸುಮಾರು 33 ವರ‍್ಶಗಳ ಸುದೀರ‍್ಗ ವ್ರುತ್ತಿ ಜೀವನವನ್ನು ನಡೆಸಿದವರು. ಅನೇಕ ಏಳುಬೀಳುಗಳ ನಡುವೆ ಸರಾಗವಾಗಿ ವ್ರುತ್ತಿ ಮುಗಿಸಿ ಕೆಲವು ದಿನಗಳ ಹಿಂದೆಯಶ್ಟೇ ಕೆಲಸದಿಂದ ನಿವ್ರುತ್ತಿ ಹೊಂದಿದ್ದರು. ಲಾಕ್ ಡೌನ್ ಪರಿಣಾಮವಾಗಿ ಅವರು ನಿವ್ರುತ್ತಿಯಾಗುವ ದಿನದಂದು ನಾವು ಯಾರೂ ಸೇರಲು ಸಾದ್ಯವಾಗಲಿಲ್ಲ. ಆದರೆ ಕರೆ ಮಾಡಿ ಅವರ ವ್ರುತ್ತಿಜೀವನಕ್ಕೆ ಶುಬ ಕೋರಿದ್ದೆವು. ಅವರು ವ್ರುತ್ತಿಜೀವನದ ಅನುಬವಗಳಿಗಿಂತ ನಿವ್ರುತ್ತಿ ಜೀವನದಲ್ಲಿ ಬರಬಹುದಾದ ಸವಾಲುಗಳ ಬಗ್ಗೆ ಹೆಚ್ಚು ಮಾತನಾಡಿದ್ದು ಕಂಡುಬಂತು. ಅವರ ಮಾತುಗಳಲ್ಲಿ ನಿವ್ರುತ್ತಿ ನಂತರದ ಜೀವನದ ಕುರಿತು ಸಣ್ಣ ಬಯ ಇರುವುದೇನೋ ಎಂದೆನಿಸಿತು.

ನಿವ್ರುತ್ತಿ ಎನ್ನುವುದು ಪ್ರತಿ ಉದ್ಯೋಗಿಗೂ ಸಹಜವಾದದ್ದು. ನಿವ್ರುತ್ತಿ ಕೇವಲ ವ್ರುತ್ತಿಗಶ್ಟೇ; ಜೀವನಕ್ಕೆ ಅಲ್ಲ. ಹಾಗೆಯೇ ನಿವ್ರುತ್ತಿ ಜೀವನ ಒಂದು ಸವಾಲಲ್ಲ. ಸಹಜ ಜೀವನದ ಒಂದು ಬಾಗವಶ್ಟೇ. ವ್ರುತ್ತಿ ಜೀವನದ ಬಗ್ಗೆ ಬಯ ಆತಂಕಗಳಿಂದ ದೂರವಾಗುವುದು ತುಂಬಾ ಮುಕ್ಯವಾಗುತ್ತದೆ. ವಯಸ್ಸಾದಂತೆಲ್ಲ ದೈಹಿಕವಾಗಿ ಮಾನಸಿಕವಾಗಿ ಸಮಸ್ಯೆಗಳು ಎದುರಾದರೂ ಅವುಗಳನ್ನು ಎದುರಿಸುವಂತಹ ಮನೋಬಾವವನ್ನು ಬೆಳೆಸಿಕೊಳ್ಳಬೇಕು. ಮುಂದಿನ ಬದುಕು ಅನೇಕ ಅವಕಾಶಗಳಿಗೆ ಇರುವ ಒಂದು ಅವದಿ ಎಂದರೆ ತಪ್ಪಾಗಲಾರದು. ಹಾಗಾದರೆ ವ್ರುತ್ತಿ ಬದುಕನ್ನು ನೆಮ್ಮದಿಯಿಂದ ತ್ರುಪ್ತಿಕರವಾಗಿ ನಡೆಸುವುದು ಹೇಗೆ ಎಂಬುದಕ್ಕೆ ಕೆಲವು ಟಿಪ್ಸ್ ಗಳನ್ನು ಇಲ್ಲಿ ನೀಡಲಾಗಿದೆ.

1) ಎಲ್ಲರೊಂದಿಗೆ ಪ್ರೀತಿ ವಾತ್ಸಲ್ಯದಿಂದ ಮಾತನಾಡಿ

ನಮ್ಮ ಬಂದುಗಳು ,ಸ್ನೇಹಿತರು, ನೆರೆಹೊರೆಯವರೊಂದಿಗೆ ಉತ್ತಮ ಬಾಂದವ್ಯವನ್ನು ಹೊಂದುವುದು ಅತಿಮುಕ್ಯ. ಪ್ರೀತಿ ವಾತ್ಸಲ್ಯದಿಂದ ಮಾತನಾಡುವುದು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ನಿಮ್ಮ ಅನುಬವದಲ್ಲಿ ಅವರಿಗೆ ಪರಿಹಾರ ನೀಡುವುದು ಆದಶ್ಟು ಕಾಲವನ್ನು ಸ್ನೇಹಿತರೊಂದಿಗೆ ಮನೆಯವರೊಂದಿಗೆ ಕಳೆಯುವುದು ಉತ್ತಮ. ಕುಟುಂಬದೊಂದಿಗೆ ಉತ್ತಮವಾದ ಬಾಂದವ್ಯ ಬೆಳೆಸಿಕೊಳ್ಳುವುದು ಮುಕ್ಯ.

2) ಒಂಟಿತನದಿಂದ ದೂರವಿರಿ

ಏಕಾಂಗಿತನ ಎನ್ನುವುದು ಮಾನಸಿಕ ಸಮಸ್ಯೆಗಳನ್ನು ಹುಟ್ಟುಹಾಕುವುದಕ್ಕೆ ಕಾರಣವಾಗಬಹುದು. ವ್ರುತ್ತಿ ಬದುಕಿನಲ್ಲಿ ನಡೆದ ಗಟನೆಗಳು ಅತವಾ ಕುಟುಂಬದ ಸಮಸ್ಯೆಗಳ ಬಗ್ಗೆ ಇನ್ನಿಲ್ಲದ ವಿಚಾರ ಮಾಡುವುದರಿಂದ ಮಾನಸಿಕ ವೇದನೆಗೆ ಒಳಗಾಗಬಹುದು. ಆದ್ದರಿಂದ ಏಕಾಂಗಿತನವನ್ನು ಆದಶ್ಟು ದೂರವಿಡುವುದು ಒಳಿತು. ಪುಸ್ತಕಗಳನ್ನು ಓದುವುದು, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯ ಹವ್ಯಾಸ.

3) ಮತ್ತೊಬ್ಬರ ಮೇಲೆ ಹೆಚ್ಚು ಅವಲಂಬಿತರಾಗದಿರಿ

ನಿಮ್ಮ ಚಟುವಟಿಕೆಗಳು ಮತ್ತೊಬ್ಬರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವಂತೆ ಇರಲಿ. ಆದಶ್ಟು ಸ್ವಾವಲಂಬಿತರಾಗಿರುವುದು ಉತ್ತಮ . ಅನಿವಾರ‍್ಯ ಸಂದರ‍್ಬಗಳಲ್ಲಿ ಮತ್ತೊಬ್ಬರ ಸಹಾಯ ಪಡೆದುಕೊಳ್ಳಬೇಕಾಗುತ್ತದೆ. ನಿಮಗೆ ಸಹಾಯ ಸಹಕಾರ ನೀಡುವಾಗ ಅವರು ನಿಮಗೆ ಗೌರವಪೂರ‍್ಣವಾಗಿ ನೀಡುವಂತಹ ವಾತಾವರಣ ನಿರ‍್ಮಿಸುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಸಹಾಯಕ್ಕೆ ಬೇರೆಯವರು ಅವಕಾಶಗಳನ್ನು ನಿರೀಕ್ಶಿಸುವಂತಹ ಸಂದರ‍್ಬಗಳು ಇದ್ದಾಗ ನಿವ್ರುತ್ತಿ ಜೀವನದಲ್ಲಿ ಲಾಬವೇ.

4) ಆರ‍್ತಿಕವಾಗಿ ಸಬಲರಾಗಿರಿ

ನೀವು ಆರ‍್ತಿಕವಾಗಿ ಸಬಲರಾಗಿ ಇಲ್ಲದಿದ್ದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಿಮಗಾಗಿ ಸ್ವಲ್ಪ ಹಣವನ್ನು ತೆಗೆದಿಟ್ಟುಕೊಳ್ಳುವುದು ಉತ್ತಮ. ನಿಮ್ಮ ವೈಯಕ್ತಿಕ ಕರ‍್ಚುಗಳಿಗೆ ಬೇರೆಯವರನ್ನು ಅವಲಂಬಿಸಿದೆ ಸ್ವಾಬಿಮಾನಿಯಾಗಿ ಬದುಕುವುದು ಉತ್ತಮ. ಆದಶ್ಟು ಹಣಕಾಸಿನ ವ್ಯವಹಾರಗಳಿಂದ ದೂರವಿರುವುದು ಒಳಿತು.

5) ಚಿಂತೆಯಿಂದ ದೂರವಿರಿ

ಹಿಂದೆ ನಡೆದ ಗಟನೆಗಳನ್ನು ಮೆಲುಕು ಹಾಕುತ್ತಾ ಕೂರುವುದು ಮಾನಸಿಕವಾಗಿ ನಿವ್ರುತ್ತಿ ಬದುಕನ್ನು ನರಕವಾಗಿಸುತ್ತವೆ. ಹಿಂದೆ ನಡೆದ ಗಟನೆಗಳು ಅನಿವಾರ‍್ಯವಾಗಿ ನಡೆದಂತವು ಎಂಬ ಬಾವನೆಯನ್ನು ಹೊಂದಬೇಕು. ಅವುಗಳ ಬಗ್ಗೆ ಚಿಂತಿಸದಿರುವುದು ಉತ್ತಮ. ಸಾದ್ಯವಾದಶ್ಟು ಇಂತಹ ನೆನಪುಗಳನ್ನು ತರಿಸುವಂತಹ ಸಂದರ‍್ಬಗಳಿಂದ ದೂರವಿರುವುದು ಒಳ್ಳೆಯದು. ವಾಸ್ತವ ಬದುಕಿನಲ್ಲಿ ಜೀವಿಸುವುದು ಒಳಿತು. ನಿಮ್ಮ ಮನಸ್ಸಿಗೆ ಗಾಸಿಯಾಗುವಂತಹ ನೆನಪುಗಳನ್ನು ಹಗುರವಾಗಿ ತೆಗೆದುಕೊಂಡು ಆಗಲೇ ಮರೆತು ಬಿಡುವುದು ಒಳಿತು.

6) ಆರೋಗ್ಯದ ಕಡೆ ಗಮನವಿರಲಿ

ನಿವ್ರುತ್ತಿಯ ಜೀವನದಲ್ಲಿ ವಯಸ್ಸಾದಂತೆ ಆರೋಗ್ಯದ ಕಡೆಗೆ ಗಮನ ಹರಿಸುವುದು ಅತಿ ಮುಕ್ಯವಾಗುತ್ತದೆ. ಆರೋಗ್ಯದ ಸಮಸ್ಯೆಗಳು ನಿಮಗೆ ಬಾದಿಸದಂತೆ ಸೂಕ್ತ ಆಹಾರ, ಯೋಗ, ನಿದ್ರೆ, ನಡಿಗೆ ಮುಂತಾದವುಗಳ ಬಗ್ಗೆ ಗಮನವಿರಲಿ. ಸಣ್ಣಪುಟ್ಟ ರೋಗಗಳನ್ನು ತೊಂದರೆಗಳನ್ನು ಕಡೆಗಣಿಸದಿರಿ. ಬಿಪಿ, ಶುಗರ್ ಮುಂತಾದ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಆರೋಗ್ಯದ ಕಾಳಜಿಯನ್ನು ಅತ್ಯುತ್ತಮವಾಗಿ ತೆಗೆದುಕೊಳ್ಳುವವರು ನೀವೇ ಅಲ್ಲವೇ?

ಇಲ್ಲಿ ನೀಡಿರುವ ಟಿಪ್ಸ್ ಗಳು ಕೇವಲ ಬೆರಳೆಣಿಕೆಯಶ್ಟು ಅಶ್ಟೇ. ಆದರೆ ನಿಮ್ಮ ಜೀವನದ ಅನುಬವ ಅಗಾದ. ಬದುಕಿದ್ದಾಗಲೇ ನ್ಯಾಯಯುತವಾಗಿ ಬೇಕಾದ್ದನ್ನು ಪಡೆಯಲು ಅವಕಾಶವಿದೆ. ಆದ್ದರಿಂದ ಬದುಕಿರುವಾಗಲೇ ಜೀವನವನ್ನು ಸಂತೋಶದಿಂದ ಅನುಬವಿಸಿ. ನಿಮ್ಮ ಜೀವನವು ಮತ್ತೊಬ್ಬರಿಗೆ ಮಾದರಿಯಾಗಲಿ.

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *