ಹಡಪದ ಅಪ್ಪಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

ಸಿ.ಪಿ.ನಾಗರಾಜ.

ಹಡಪದ ಅಪ್ಪಣ್ಣ, ಲಿಂಗಮ್ಮ, Hadapada Appanna, Lingamma

ತನ್ನ ತಾನರಿಯದೆ
ತನ್ನ ತಾ ನೋಡದೆ
ತನ್ನ ತಾ ನುಡಿಯದೆ
ಅನ್ಯರ ಸುದ್ದಿಯ ನುಡಿದಾಡುವ ಕುನ್ನಿಗಳಿಗೆ
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. (960/1723)

ತಾನ್+ಅರಿಯದೆ; ಅರಿ=ತಿಳಿ; ಅರಿಯದೆ=ತಿಳಿದುಕೊಳ್ಳದೆ;

ತನ್ನ ತಾನರಿಯದೆ=ನಿಸರ‍್ಗದ ಆಗುಹೋಗು ಮತ್ತು ಸಮಾಜದ ಕಟ್ಟುಪಾಡುಗಳ ನಡುವೆ ಬಾಳುತ್ತಿರುವ ವ್ಯಕ್ತಿಯು ತನ್ನ ವ್ಯಕ್ತಿತ್ವದ ಇತಿಮಿತಿಗಳನ್ನು ತಿಳಿದುಕೊಳ್ಳದೆ;

ನೋಡು=ಕಾಣು/ಆಲೋಚಿಸು/ವಿಚಾರ ಮಾಡು;

ತನ್ನ ತಾ ನೋಡದೆ=ದಿನ ನಿತ್ಯದ ಬದುಕಿನಲ್ಲಿ ಸಹಮಾನವರ ಜತೆಯಲ್ಲಿ ತಾನು ಹೇಗೆ ನಡೆದುಕೊಳ್ಳುತ್ತಿದ್ದೇನೆ ಎಂಬುದನ್ನು ಒರೆಹಚ್ಚಿ ನೋಡಿಕೊಳ್ಳದೆ;

ನುಡಿ=ಹೇಳು; ತನ್ನ ತಾ ನುಡಿಯದೆ=ತನ್ನ ನಡೆನುಡಿಯಲ್ಲಿರುವ ಒಳಿತು ಕೆಡುಕಿನ ಸಂಗತಿಗಳನ್ನು ತಾನೇ ಹೇಳಿಕೊಳ್ಳದೆ, ಅಂದರೆ ತನ್ನ ಮನದಲ್ಲಿಯೇ ತಾನು ಮಾತನಾಡಿಕೊಂಡು, ಕೆಟ್ಟದ್ದನ್ನು ಬಿಡಬೇಕೆಂಬ ನಿಲುವನ್ನು ತಳೆಯದೆ;

ಅನ್ಯರ=ಇತರರ/ಬೇರೆಯವರ; ಸುದ್ದಿ=ಸಮಾಚಾರ/ವಾರ‍್ತೆ; ನುಡಿದು+ಆಡುವ; ಆಡು=ತೆಗಳು/ನಿಂದಿಸು; ಕುನ್ನಿ=ನಾಯಿ/ನಾಯಿ ಮರಿ; ” ಕುನ್ನಿ “ ಎಂಬ ಪದ ಒಂದು ಬಯ್ಗುಳವಾಗಿ ಬಳಕೆಯಾಗಿದೆ. ವ್ಯಕ್ತಿಯ ಸಾಮಾಜಿಕ ವ್ಯಕ್ತಿತ್ವವನ್ನೇ ಅಲ್ಲಗಳೆದು, ಅವನನ್ನು ಒಂದು ನಾಯಿಗೆ ಹೋಲಿಸಲಾಗಿದೆ;

ಗುರು+ಇಲ್ಲ; ಗುರು=ಮಕ್ಕಳಿಗೆ ಮತ್ತು ತನ್ನ ಬಳಿ ಬಂದವರಿಗೆ ಅರಿವನ್ನು ನೀಡಿ, ಅವರ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ರೂಪಿಸುವ ವ್ಯಕ್ತಿ; ಲಿಂಗ+ಇಲ್ಲ; ಲಿಂಗ=ಈಶ್ವರ/ಶಿವ ; ಜಂಗಮ+ಇಲ್ಲ; ಜಂಗಮ=ಎಲ್ಲಿಯೂ ಒಂದು ಕಡೆ ನೆಲೆಯಾಗಿ ನಿಲ್ಲದೆ, ಸದಾಕಾಲ ಸಂಚರಿಸುತ್ತ ಜನಸಮುದಾಯದ ಜನಮನದಲ್ಲಿ ಒಳ್ಳೆಯ ನಡೆನುಡಿಗಳ ಬಗ್ಗೆ ಅರಿವನ್ನು ಮತ್ತು ಎಚ್ಚರವನ್ನು ಮೂಡಿಸುತ್ತಿರುವ ಶಿವಶರಣ;

ತನ್ನ ಮಯ್ ಮನದಲ್ಲಿ ತುಡಿಯುವ ಒಳಿತು ಕೆಡುಕಿನ ಒಳಮಿಡಿತಗಳಲ್ಲಿ, ಕೆಡುಕನ್ನು ಹತ್ತಿಕ್ಕಿಕೊಂಡು, ಒಳ್ಳೆಯ ರೀತಿಯಲ್ಲಿ ಜೀವನವನ್ನು ನಡೆಸದೆ, ಇತರರ ನಡೆನುಡಿಗಳಲ್ಲಿನ ತಪ್ಪುಗಳನ್ನು ಎತ್ತಿ ಆಡುವವನು ಅತ್ಯಂತ ನೀಚ ವ್ಯಕ್ತಿಯಾಗಿರುತ್ತಾನೆ. ಇಂತಹ ವ್ಯಕ್ತಿಯು ಗುರು ಲಿಂಗ ಜಂಗಮದಿಂದ ದೂರವಿರುತ್ತಾನೆ. ಅಂದರೆ ಸಾಮಾಜಿಕವಾಗಿ ಒಂದು ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವುದಿಲ್ಲ.

ನುಡಿದರೇನಯ್ಯ ನಡೆ ಇಲ್ಲದನ್ನಕ್ಕ
ನಡೆದರೇನಯ್ಯ ನುಡಿ ಇಲ್ಲದನ್ನಕ್ಕ. (985/1726)

ನುಡಿದರ್+ಏನ್+ಅಯ್ಯ; ನುಡಿ=ಮಾತು/ಸೊಲ್ಲು; ನುಡಿದರೆ=ಒಳ್ಳೆಯ ಮಾತುಗಳನ್ನು ಆಡುವುದರಿಂದ; ಏನ್=ಯಾವುದು; ಏನಯ್ಯ=ಏನು ತಾನೆ ಪ್ರಯೋಜನ/ಯಾವ ಪ್ರಯೋಜನವೂ ಇಲ್ಲ;

ನಡೆ=ದಿನ ನಿತ್ಯ ಮಾಡುವ ಕೆಲಸ/ವ್ಯವಹಾರ/ವರ‍್ತನೆ; ಇಲ್ಲದ+ಅನ್ನಕ್ಕ; ಅನ್ನಕ್ಕ=ಆ ವರೆಗೆ/ಅಲ್ಲಿಯ ತನಕ; ಇಲ್ಲದನ್ನಕ್ಕ=ಇಲ್ಲದಿದ್ದರೆ/ಇಲ್ಲದಿರುವ ತನಕ; ನಡೆ ಇಲ್ಲದನ್ನಕ್ಕ=ಒಳ್ಳೆಯ ಕೆಲಸವನ್ನು ಮಾಡದಿದ್ದರೆ; ನಡೆದರ್+ಏನ್+ಅಯ್ಯ;

ನಡೆದರೆ=ಒಳ್ಳೆಯ ಕೆಲಸವನ್ನು ಮಾಡಿದರೆ; ನುಡಿ ಇಲ್ಲದನ್ನಕ್ಕ=ಒಳ್ಳೆಯ ಮಾತುಗಳಿಲ್ಲದಿದ್ದರೆ, ಅಂದರೆ ವ್ಯಕ್ತಿಯು ಆಡುವ ಮಾತುಗಳು ಅದನ್ನು ಕೇಳಿದವರಿಗೆ ಅರಿವು, ಆನಂದ ಮತ್ತು ನೆಮ್ಮದಿಯನ್ನು ಮೂಡಿಸದಿದ್ದರೆ;

ವ್ಯಕ್ತಿಯು ಆಡುವ ನುಡಿ ಮತ್ತು ಮಾಡುವ ಕೆಲಸಗಳೆರಡೂ ಒಳ್ಳೆಯದಾಗಿದ್ದಾಗ ಮಾತ್ರ ಜನಸಮುದಾಯ ಮತ್ತು ಸಮಾಜ ಉಳಿದು ಬೆಳೆದು ಬಾಳುತ್ತದೆ.

( ಚಿತ್ರ ಸೆಲೆ : lingayatreligion.com

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: