‘ಟಿಂಕು’ – ಇದು ಹೊಡೆದಾಟದ ಸುಗ್ಗಿ ಹಬ್ಬ

– .

ಟಿಂಕು, ಹೊಡೆದಾಟ, tinku, fight

ಬೊಲಿವಿಯಾದ ಬೆಟ್ಟ ಮತ್ತು ಪಟ್ಟಣಗಳಲ್ಲಿ ಒಂದು ವಿಚಿತ್ರ ಆಚರಣೆಯಿದೆ. ಪ್ರತಿ ವರ‍್ಶವೂ ಇಲ್ಲಿನ ಮಂದಿಯ ನಡುವೆ ಇದ್ದಕ್ಕಿದ್ದಂತೆ ಹಿಂಸಾತ್ಮಕ ಹೊಡೆದಾಟ ಶುರು ಆಗುತ್ತದೆ. ಕೈಯ ಮುಶ್ಟಿಯೇ ಈ ಹೊಡೆದಾಟದಲ್ಲಿ ಬಳಕೆಯಾಗುವ ಮುಕ್ಯ ಆಯುದ. ಇಲ್ಲಿ ಕೆಲವೊಮ್ಮೆ ಪ್ರಾಣ ಹಾನಿಯಾಗಿರುವುದೂ ಉಂಟು. ಮುಶ್ಟಿ ಕಾಳಗದಿಂದ ಪ್ರಾರಂಬವಾಗುವ ಈ ಆಚರಣೆಯಲ್ಲಿ ಕಲ್ಲುಗಳೂ ಬಳಕೆಯಾಗುತ್ತವೆ. ಇಲ್ಲಿ ಬಾಗಹಿಸುವ ಕೆಲವರು ಎದುರಾಳಿಗೆ ಸಾಕಶ್ಟು ಹಾನಿ ಉಂಟುಮಾಡಲಿ ಎಂದು ತಮ್ಮ ಮುಶ್ಟಿಯ ಸುತ್ತ ಮೊನಚಾದ ಗಾಜಿನ ಚೂರುಗಳನ್ನು ಸೇರಿಸಿದ ಬಟ್ಟೆಯನ್ನು ಸುತ್ತಿಕೊಂಡು ಹೊಡೆದಾಟಕ್ಕೆ ಇಳಿಯುತ್ತಾರೆ. ಇಶ್ಟೆಲ್ಲಾ ಜಿದ್ದಾ ಜಿದ್ದಿ ಹೊಡೆದಾಟ ಕೊಂಚ ಹೊತ್ತಿನ ನಂತರ ಎಲ್ಲವೂ ಯತಾ ಸ್ತಿತಿಗೆ, ಏನೂ ಆಗಿಲ್ಲವೇನೋ ಎಂಬ ಸ್ತಿತಿಗೆ ಮರಳುತ್ತದೆ.

ಈ ಮುಶ್ಟಿ ಕಾಳಗವನ್ನೇ ಬೊಲಿವಿಯಾದ ಸ್ತಳೀಯ ಬಾಶೆ, ಕೈಚುವಾದಲ್ಲಿ ಟಿಂಕು ಎನ್ನುವುದು. ಟಿಂಕು ಎಂದರೆ ‘ಹಿಂಸಾತ್ಮಕ ಮುಕಾಮುಕಿ’ ಎಂದು ಅರ‍್ತ ಬರುತ್ತದೆ.

ಬೊಲಿವಿಯನ್ ಆಂಡಿಸ್ ನ ಸಮುದಾಯಗಳು ಆಚರಿಸುವ ‘ಟಿಂಕು’, ಜಗತ್ತಿನ ಬೇರೆ ಬೇರೆ ಕಡೆ ನಡೆಯುವ ದಾರ‍್ಮಿಕ ಬೀದಿ ಕದನಗಳಂತೆ ಪ್ರವಾಸಿಗರ ಆಕರ‍್ಶಣೆ ಪಡೆದಿರಬಹುದು. ಇಲ್ಲಿಗೆ ಬೇಟಿ ನೀಡುವವರು ಕ್ರೂರ ಹಾಗೂ ಬಯಾನಕ ಹೊಡೆದಾಟದ ವಿವರಗಳೊಂದಿಗೆ ಮನೆಯಲ್ಲಿ ತಯಾರಿಸುವ ಮದ್ಯ ಸೇವಿಸಿ ಮರಳುತ್ತಾರೆ.

ಆಂಡಿಸ್‌ನ ಸ್ತಳೀಯರಾದ ಆಯ್ಮಾರಾ ಮತ್ತು ಕೈಚುವಾ ಗುಂಪುಗಳು, ಆಚರಿಸುವ ಕೆಲವು ಹಬ್ಬಗಳು ಅತ್ಯಂತ ಕುಕ್ಯಾತವಾಗಿದೆ. ಹೊಡೆದಾಟದ ಜೊತೆ ಜೊತೆಯಾಗಿ ಈ ಉತ್ಸವದಲ್ಲಿ ಔತಣ ಕೂಟಗಳು, ನ್ರುತ್ಯಗಳು, ಸಂಗೀತ ಕಾರ‍್ಯಕ್ರಮಗಳು ಸಹ ಸೇರಿವೆ. ಕೆಲವು ಆಚರಣೆಗಳು ಪಕ್ಕದ ಮಾಚಾ ಮತ್ತು ಪೊಟೊಸಿ ಪಟ್ಟಣಗಳಲ್ಲಿ ನಡೆಯುತ್ತವೆ.

ಟಿಂಕು ಎಂಬುದು ಒಂದು ಆಚರಣೆಯ ಯುದ್ದ ರೂಪವಾಗಿದೆ. ಇಲ್ಲಿ ನಡೆಯುವ ಚಕಮಕಿಗಳು, ಮುಶ್ಟಿ ಕಾಳಗವು ವೈಯುಕ್ತಿಕವಾಗಿರಬಾರದು ಎಂಬುದೇ ಇದರ ಪ್ರಮುಕ ದ್ಯೇಯ. ಸಾಂಪ್ರದಾಯಿಕವಾದ ಬೊಲಿವಿಯನ್ ದೇವತೆಯಾದ ‘ಪಚಮಾಮಾ’ ಗೌವರಾರ‍್ತ ನಡೆಯುವ ಉದ್ದೇಶ ಈ ಕಾಳಗದ ಹಿಂದೆ ಇದೆ. ದಿನಗಳೆದಂತೆ ಇದು ಒಂದು ಕ್ರೀಡೆಯಾಗುತ್ತಾ ಸಾಗಿದ್ದು, ಇದರಲ್ಲಿ ದೈರ‍್ಯ ಮತ್ತು ಶಕ್ತಿಯನ್ನು ಸಾಬೀತು ಪಡಿಸುವ ಮಾರ‍್ಗವಾಗಿ ಬದಲಾಗಿದೆ ಎಂದರೆ ತಪ್ಪಲ್ಲ. ಇಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಮಂದಿ ಹೊಡೆದಾಟದಲ್ಲಿ ಬಾಗಿಯಾಗುತ್ತಾರೆ. ಶಾಂತಿ ಸೌಹಾರ‍್ದತೆಯಿಂದ ಇದ್ದ ಗ್ರಾಮಗಳಲ್ಲಿ ಇದ್ದಕ್ಕಿದ್ದಂತೆ ಯುದ್ದದ ವಾತಾವರಣ ನಿರ‍್ಮಾಣವಾಗುತ್ತದೆ, ಅಶ್ಟೇ ಶೀಗ್ರದಲ್ಲಿ ಯುದ್ದ ಕೊನೆಗೊಂಡು, ಮತ್ತೆ ಎಂದಿನಂತೆ ಶಾಂತಿ ಸೌಹಾರ‍್ದತೆ ನೆಲೆಸುತ್ತದೆ.

ಟಿಂಕುನಲ್ಲಿ ನಡೆಯುವ ಕಾಳಗದಲ್ಲಿ ಎರ‍್ರಾಬಿರ‍್ರಿಯಾಗಿ ಯಾರೆಂದರೆ ಅವರು, ಯಾರೊಡನೆಯೋ  ಹೊಡೆದಾಡುವಂತಿಲ್ಲ. ಇದರಲ್ಲಿ ನಡೆಯುವ ಪ್ರತಿಯೊಂದು ಮುಶ್ಟಿ ಯುದ್ದದಲ್ಲಿ ಯಾರು ಯಾರೊಡನೆ ಸೆಣಸಬೇಕು ಎಂಬುದು ಮೊದಲೇ ನಿರ‍್ದಾರವಾಗಿರುತ್ತದೆ. ಈ ಕಾಳಗಕ್ಕೆ ದರಿಸಬೇಕಾದ ಬಟ್ಟೆ ಹಾಗೂ ಹೊಡೆದಾಟದ ವಿದಾನಗಳು ಮೊದಲೇ ಅದಿಕ್ರುತಗೊಳಿಸಿದಂತೆ ಇರುವುದು ಕಡ್ಡಾಯ. ಇದರಲ್ಲಿ ಬಾಗವಹಿಸಲು ಬರುವ ಸ್ಪರ‍್ದಿಗಳಲ್ಲಿ ಹಲವರು ವರ‍್ಣ ರಂಜಿತ ವೇಶಬೂಶಣಗಳನ್ನು ದರಿಸಿ ಅಕಾಡಕ್ಕೆ ಇಳಿಯುತ್ತಾರೆ, ಮತ್ತೆ ಕೆಲವರು ಸಾಂಪ್ರದಾಯಿಕ ಹೆಲ್ಮೆಟ್ ರೀತಿಯ ತಲೆಕಾಪನ್ನು ದರಿಸಿ ಬರುತ್ತಾರೆ. ಪ್ರಾರಂಬದಲ್ಲಿ ಈ ಹೊಡೆದಾಟ ಮುಶ್ಟಿಯಿಂದ ಪ್ರಾರಂಬವಾದರೂ ಬೇಗನೆ, ಅನುಮತಿಸಿದ ಆಯುದ, ಕಲ್ಲುಗಳ ಬಳಕೆ ಶುರುವಾಗುತ್ತದೆ.

ಈ ಹೊಡೆದಾಟ ಮಾರಣಾಂತಿಕವಾಗುವುದನ್ನು ತಡೆಗಟ್ಟಲು ಸಾಕಶ್ಟು ನಿಯಮಗಳನ್ನು ರೂಪಿಸಲಾಗಿದೆ. ಹೊಡೆದಾಟದಲ್ಲಿ ಒಬ್ಬ ವ್ಯಕ್ತಿ ನೆಲಕ್ಕೆ ಬಿದ್ದಲ್ಲಿ, ಹೋರಾಟವನ್ನು ನಿಲ್ಲಿಸಲು ಪೋಲೀಸರು ಮತ್ತು ಸಮುದಾಯದ ಮುಕ್ಯಸ್ತರು ಮುಂದಾಗುತ್ತಾರೆ. ನಿಯಮದ ಪ್ರಕಾರ ಹೊಡೆದಾಡುತ್ತಿರುವ ವ್ಯಕ್ತಿ ಕೆಳಗೆ ಬಿದ್ದಲ್ಲಿ, ಎದುರಾಳಿ ಹೊಡೆದಾಟ ಅಲ್ಲಿಗೇ ನಿಲ್ಲಿಸಬೇಕು. ಆದರೆ ಗುಂಪು ಗುಂಪುಗಳಲ್ಲಿನ ಹಳೆಯ ವೈಶಮ್ಯ ಬುಗಿಲೆದ್ದು ಕೆಲವೊಮ್ಮೆ ಕೆಳಬಿದ್ದ ವ್ಯಕ್ತಿಯ ಮೇಲೆ ಆಕ್ರಮಣ ತೀವ್ರವಾಗುವ ಸಂಬವವಿದ್ದು, ಇದು ಸಾವುನೋವುಗಳಿಗೆ ಎಡೆಮಾಡಿಕೊಡುವ ಸಂಬವ ಹೆಚ್ಚಿದೆ.

ಎಲ್ಲೇ ಜಿದ್ದಾಜಿದ್ದಿ ಹೊಡೆದಾಟ ಇದ್ದಲ್ಲಿ ನೆರೆದಿರುವ ಜನ ಬಾಜಿ ಕಟ್ಟುವುದು ಸಾಮಾನ್ಯ. ಇಲ್ಲೂ ಅದೇನು ಹೊಸತಲ್ಲ. ಆದರೆ ಇಲ್ಲಿ ಅದು ಬಾಜಿ ಕಟ್ಟವುದು ಮುಶ್ಟಿ ಯುದ್ದಕ್ಕೆ ಮಾತ್ರ ಮೀಸಲು. ಒಮ್ಮೆ ಕಲ್ಲುಗಳ ಹೊಡೆದಾಟ ಶುರು ಆಯಿತೆಂದರೆ ಅಲ್ಲಿಗೆ ಕಟ್ಟಿದ್ದ ಪಂತ ಕೊನೆಗೊಳ್ಳುತ್ತದೆ.

ಹೊಡೆದಾಟದಲ್ಲಿ ಸಂಗ್ರಹವಾಗುವ ರಕ್ತವನ್ನು ಪಚಮಾಮಾ ದೇವತೆಗೆ ಅರ‍್ಪಿಸುವ ಪರಿಪಾಟವಿದೆ. ಇದರಿಂದ ಬೆಳೆ ಸಮ್ರುದ್ದವಾಗಿರುತ್ತದೆ ಎಂಬ ನಂಬಿಕೆ ಅಲ್ಲಿಯವರದು.

ಈ ಪ್ರದೇಶದ ಸಾಮಾನ್ಯ ಚಿತ್ರಣದಲ್ಲಿ ಬಡತನ ಹಾಗೂ ಕುಡಿತವನ್ನೇ ಪ್ರಮುಕವಾಗಿ ಕಾಣಬಹುದು. ‘ಚಿಚಾ’ ಎಂಬುದು ಒಂದು ಬಗೆಯ, ಬಿಯರ‍್‌ ತರಹದ ಪಾನೀಯ. ಪ್ರತಿ ಹಬ್ಬ ಮತ್ತು ಉತ್ಸವಗಳ ದಿನಗಳಲ್ಲಿ ಇದರ ಪಾತ್ರ ಅತಿ ಹೆಚ್ಚು. ಈ ಆಚರಣೆಯ ದಿನಗಳನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಇಲ್ಲಿನ ಮಂದಿ ಮೈಮುರಿದು ದುಡಿಯುತ್ತಾರೆ. ಉತ್ಸವದ ಹಾಗೂ ಹಬ್ಬದ ವಾತಾವರಣದ ದಿನಗಳು ಸಾಮಾನ್ಯ ಜೀವನಕ್ಕಿಂತ ವಿಶೇಶವಾದ ಕಾರಣ, ಬಿನ್ನವಾದ ರೀತಿಯಲ್ಲಿ ಆಚರಿಸಲು ಪಾನೀಯಗಳ ಸೇವನೆ ಹೆಚ್ಚು. ಉತ್ಸವ ಮತ್ತು ಹಬ್ಬದ ದಿನಗಳನ್ನು ಪೂರ‍್ಣ ಪ್ರಮಾಣದಲ್ಲಿ ಆನಂದಿಸಲು ಅವರುಗಳು ಅನುಸರಿಸುವ ಮಾರ‍್ಗ ಇದು ಎಂದು ಹೇಳಲಾಗುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, interesly.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: