ಮನಸೇ, ಓ ಮನಸೇ…

– ವೆಂಕಟೇಶ ಚಾಗಿ.

ಮನಸು, Mind

ಮನಸ್ಸು ಎಲ್ಲವನ್ನೂ ಬಯಸುತ್ತದೆ. ಮನಸ್ಸಿನ ಬಯಕೆಗೆ ಇತಿಮಿತಿ ಎಂಬುದಿಲ್ಲ. ಬಯಸಿದ್ದನ್ನು ಪಡೆಯುವ ಕಶ್ಟ ಮನಸ್ಸಿಗೇನು ಗೊತ್ತು? ಆದರೂ ಮನಸ್ಸು ಮಾಡಬೇಕು ಬಯಸಿದ್ದನ್ನು ಪಡೆಯಲು. ಮನಸ್ಸು ಕಲ್ಪನೆಗೆ ಜಾರಿದಾಗ ತನ್ನ ಬಯಕೆಗಳ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತದೆ. ಕನಸುಗಳ ಅರಮನೆಯಲ್ಲಿ ನಾನಾ ವಿದದಲ್ಲಿ ಕಲ್ಪನೆಗಳನ್ನು ಕಟ್ಟಿ ಕುಶಿ ಪಡುತ್ತದೆ. ಕಲ್ಪನೆಗಳು ಅತೀ ಸುಲಬ. ಹಾಗಾಗಿ ಕನಸುಗಳಿಗೆ ಯಾವುದೇ ಬೇಲಿ ಇರುವುದಿಲ್ಲ. ಆಕಾಶಕ್ಕೆ ಹಾರಬೇಕೆಂಬ ಮನಸ್ಸಿನ ಆಸೆಗೆ ಕಲ್ಪನೆಯು ಜೀವ ತುಂಬುತ್ತದೆ. ಅದು ಕನಸಿನಲ್ಲಿ ಸಾಕಾರಗೊಳ್ಳುತ್ತದೆ. ದೇಹಕ್ಕೆ ರೆಕ್ಕೆ ಬಂದ ಹಾಗೆ, ಆಕಾಶದ ಎತ್ತರಕ್ಕೆ ಹಾರಿದ ಹಾಗೆ, ಮೋಡಗಳ ಮರೆಯಲ್ಲಿ ಅಡಗಿದ ಹಾಗೆ, ಮೋಡಗಳೊಂದಿಗೆ ಓಡಿದ ಹಾಗೆ, ಕಾಮನಬಿಲ್ಲಿನಲ್ಲಿ ಜಾರಿದ ಹಾಗೆ, ಆಕಾಶದಿಂದ ಸುಂದರ ಬೂಮಿಯನ್ನು ನೋಡಿದ ಹಾಗೆ ಹೀಗೆ ನಾನಾ ಪರಿಯಲ್ಲಿ ಕಲ್ಪನೆಯು ಮನಸ್ಸಿನ ಆಸೆಗೆ ತುಸು ಕುಶಿಯನ್ನು ನೀಡುತ್ತದೆ.

ಮನಸ್ಸು ಯಾವಾಗ ಹುಟ್ಟಿತು? ಮನಸ್ಸು ಎಲ್ಲಿದೆ? ಮನಸ್ಸನ್ನು ನೋಡಬಹುದೇ? ಮನಸ್ಸು ಬೆಳೆಯುತ್ತದೆಯೇ? ಹೀಗೆ ಮನಸ್ಸಿನ ಬಗ್ಗೆ ಕೇಳಲಾಗುವ ಹಲವಾರು ಪ್ರಶ್ನೆಗಳಿಗೆ ಸರಿಯಾದ ಸಮರ‍್ಪಕವಾದ ಉತ್ತರ ಹುಡುಕುವುದು ತುಂಬಾ ಕಶ್ಟ. ನಮ್ಮೊಳಗೆ ಇದ್ದು ನಮ್ಮ ಎಲ್ಲ ಚಟುವಟಿಕೆಗಳಿಗೆ ಕಾರಣವಾಗುವ ಮನಸ್ಸು ಎಲ್ಲಿದೆ? ಅದೊಂದು ದೇಹದ ಅಂಗವೇ? ದೇಹದ ಅಂಗವಾಗಿದ್ದರೆ ನಮಗೆ ಸುಲಬವಾಗಿ ಗೋಚರವಾಗಿಬಿಡುತ್ತಿತ್ತು. ಶಾಲೆಯಲ್ಲಿ ಓದುವಾಗ ದೇಹದ ಬಾಗಗಳನ್ನು ಗುರುತಿಸಲು ನಮ್ಮ ಶಿಕ್ಶಕರು ಹೇಳುತ್ತಿದ್ದರು. ಆದರೆ ಅವರು ಮನಸ್ಸಿನ ಬಗ್ಗೆ ಹೇಳಲೇ ಇಲ್ಲ. ಅವರು ಹೇಳಿದ್ದು ಇಶ್ಟೇ, “ನಮ್ಮ ಮನಸ್ಸು ಶುದ್ದವಾಗಿರಬೇಕು. ಮನಸ್ಸು ಚಂಚಲ. ಮನಸ್ಸನ್ನು ಏಕಾಗ್ರತೆಗೊಳಿಸಲು ಪ್ರಾರ‍್ತನೆಯನ್ನು ಮಾಡಬೇಕು” ಎಂದು. ಮನಸ್ಸಿದ್ದರೆ ಮಾರ‍್ಗ, ಅವರು ಉದಾರ ಮನಸ್ಸಿನವರು ಹೀಗೆ ಹಲವಾರು ಮಾತುಕತೆಗಳಲ್ಲಿ ಈ ಮನಸ್ಸು ಎನ್ನುವ ಪದ ಬರುತ್ತದೆ. ಮನಸ್ಸನ್ನು ಶುದ್ದ ಮಾಡಬೇಕೆಂದರೆ ಮನಸ್ಸು ನಮ್ಮ ಕೈಗೆ ಸಿಗಬೇಕಲ್ಲ. ಎಲ್ಲಿದೆ ಮನಸ್ಸು? ಇಂತಹ ಪ್ರಶ್ನೆಗಳು ಅಬಾಸ ಎನಿಸಿದರೂ ಮನಸ್ಸಿನ ಪಾತ್ರ ಜೀವನದಲ್ಲಿ ಅತೀ ಮುಕ್ಯ.

ಮನಸ್ಸು ಎನ್ನುವುದು ಅಗೋಚರವಾದ, ದೇಹದ ಒಳಗಿರುವಂತಹ ಒಂದು ಅಂಗ ಎಂದು ಹೇಳಬಹುದು. ಮನಸ್ಸು ದೇಹದಲ್ಲಿ “ಇದೇ ಬಾಗದಲ್ಲಿದೆ” ಎಂದು ಹೇಳಲು ಸಾದ್ಯವಿಲ್ಲ. ಆದರೆ ನಮ್ಮ ಮೆದುಳಿನಲ್ಲಿ ನಡೆಯುವ ರಾಸಾಯನಿಕ ಸಂವೇದನೆಗಳನ್ನು ಒಟ್ಟಾಗಿ ಮನಸ್ಸು ಎಂದು ಹೇಳಬಹುದು. ಕೆಲವರು ಹ್ರುದಯದಲ್ಲಿ ಮನಸ್ಸಿದೆ ಎಂದು ಹೇಳುವುದುಂಟು, ಆದರೆ ಹ್ರುದಯವನ್ನೇ ಬದಲಾಯಿಸುವ ಈ ಕಾಲದಲ್ಲಿ ಹ್ರುದಯ ಬದಲಾದಾಗ ಮನಸ್ಸೂ ಬದಲಾಗಬೇಕಿತ್ತು. ಅದಾಗಲಿಲ್ಲ. ಅಂದಮೇಲೆ ಮನಸ್ಸು ಹ್ರುದಯದಲ್ಲಿ ಇಲ್ಲ ಎಂದಾಯಿತು. ಆದರೂ ಮನಸ್ಸಿದೆ. ಮನಸ್ಸು ನಮ್ಮ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮನಸ್ಸು ನಮ್ಮನ್ನು ಸನ್ಮಾರ‍್ಗದೆಡೆಗೆ ಕೊಂಡೊಯ್ಯುತ್ತದೆ. ಕೆಲವೊಮ್ಮೆ ಅಸತ್ಯದ ಮಾರ‍್ಗದೆಡೆಗೂ ಹೆಜ್ಜೆಯಿಡುತ್ತದೆ. ಆದರೆ ಎಲ್ಲ ಪರಿಣಾಮಗಳ ಪಲ ನಮ್ಮ ಮೇಲೆಯೇ. ಹಾಗಾಗಿ ಹಿರಿಯರ ಹೇಳಿಕೆಯಂತೆ ಮನಸ್ಸಿನ ಮೇಲಿನ ನಿಯಂತ್ರಣ ಅತೀ ಮುಕ್ಯ.

ಮನಸ್ಸಿದ್ದರೆ ಮಾರ‍್ಗ ಎಂಬ ಮಾತಿನಂತೆ ಮನಸ್ಸು ಗಟ್ಟಿಯಾದಾಗ, ದ್ರುಡ ಮನಸ್ಸು ಮಾಡಿದಾಗ ಯಾವುದೇ ಕಾರ‍್ಯವನ್ನು ನಾವು ಮಾಡಬಲ್ಲೆವು. ಯಾವುದೇ ಸಾದನೆಯನ್ನು ನಾವು ಸಾದಿಸಬಲ್ಲೆವು. ಮನಸ್ಸಿಲ್ಲದ ಬದುಕು ಅಯೋಮಯವೇ ಸರಿ. ಮನಸ್ಸಿಲ್ಲದೇ ಮಾಡುವ ಕೆಲಸ ಅಪೂರ‍್ಣ. ಎಲ್ಲಕಾರ‍್ಯಗಳ ಸಪಲತೆಗೆ, ಉತ್ತಮ ಪಲಿತಾಂಶಕ್ಕೆ ಮನಸ್ಸಿನ ಪಾತ್ರ ಪ್ರಮುಕವಾದುದು. ಈ ಹುಚ್ಚು ಕೋಡಿ ಮನಸ್ಸಿನ ಕತೆ ತುಂಬಾ ದೊಡ್ಡದು.‌ ಮನುಜನ ಬದುಕಿನಲ್ಲಿ ನಾನಾ ವಿದದಲ್ಲಿ ಆಟವಾಡುವ ಮನಸ್ಸು ಒಬ್ಬ ಪಾಳೇಗಾರನೇ ಸರಿ. ವಾಹ್… ಮನಸ್ಸೇ ನಿನಗಿದೋ ಸಲಾಂ. ಮನಸ್ಸಿನಿಂದಲೇ ಎಲ್ಲ ಮನಸ್ಸೇ ನೀನೇ ಎಲ್ಲ.

(ಚಿತ್ರಸೆಲೆ : sloanreview.mit.edu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications