ಕವಿತೆ: ಮಣಿಹಾರ
ಮಣಿಹಾರ ಮಾರುವಾಕಿ
ಬದುಕ ಬಣ್ಣ ಮಾಸಿದ ಮುದುಕಿ
ಬಡತನದ ಜೊತೆ
ಬಡಿದಾಡಿದಾಕಿ
ಸಾರಲು ಬಂದಿಹಳು ಜೀವನದ ಸಾರ
ಸುಕ್ಕುಗಟ್ಟಿದ ಕೈಲಿ ಮೂಡಿದವು ಹಾರ
ಕಶ್ಟ-ಸುಕಗಳನು
ಜೊತೆಯಾಗಿ ಪೋಣಿಸಿದಾಕಿ
ಮಾರಲು ಕೂತಿಹಳು ವಿದವಿದದ ಹಾರ
ಅದೇ ತಾನೆ ಮದುವೆಯಾದ
ನವಜೋಡಿಗೊಂದು ಮುತ್ತಿನ ಹಾರ
ಸಂಸಾರ ಜಂಜಾಟ ಸಾಕೆಂದವರಿಗೆ
ಜಪಮಾಲೆ ತುಳಸಿಹಾರ
ಲಂಗ ದಾವಣಿ ತೊಟ್ಟು
ಮುಡಿಯಲ್ಲಿ ಮಲ್ಲಿಗೆ ಇಟ್ಟು
ತುಂಟ ಕಂಗಳನು ತೇಲಿಸುತ
ನಗುವವಳಿಗೆ ಕೆಂಪು ರಂಗಿನ ಹಾರ
ಬಗೆ ಬಗೆಯ ಬಣ್ಣದಲಿ
ಮಣಿಹಾರ ಮಾರುವಾಕಿ
ಒಂದೊಂದು ಮಣಿಗಳನು ಪೋಣಿಸುತ್ತಾ
ತನುವ ದುಕ್ಕ ಮರೆತಾಕಿ
( ಚಿತ್ರ ಸೆಲೆ : iskconvrindavan.com )
ಇತ್ತೀಚಿನ ಅನಿಸಿಕೆಗಳು