ವಿಶ್ವದ ಅತ್ಯಂತ ಹಳೆಯ ಹೋಟೆಲ್
– ಕೆ.ವಿ.ಶಶಿದರ.
ಹೋಟೆಲ್ ಉದ್ಯಮ ಬಹಳ ಪುರಾತನವಾದದ್ದು. ಇದರ ಇತಿಹಾಸ ಕೆದಕುತ್ತಾ ಹೋದರೆ, ಹದಿನೇಳನೆ ಶತಮಾನಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆಗ ಪ್ರವಾಸಿಗರಿಗೆ ತಂಗಲು ಮತ್ತು ತಿನ್ನಲು ವ್ಯವಸ್ತೆ ಮಾಡುತ್ತಿದ್ದ ಕೆಲವು ದಾಕಲೆಗಳು ಸಿಗುತ್ತವೆ. ಅದಕ್ಕೂ ಹಿಂದಿನ ದಾಕಲೆಗಳಲ್ಲಿ ಈ ಕುರಿತ ಮಾಹಿತಿ ಅಶ್ಟಾಗಿ ಕಂಡುಬರುವುದಿಲ್ಲ.
ಜಪಾನಿನಲ್ಲಿರುವ ನಿಶಿಯಾಮಾ ಓನ್ಸೆನ್ ಕೀಯುಂಕನ್ ಹೋಟೆಲ್ ಆರಂಬವಾಗಿದ್ದು 705ನೇ ಇಸವಿಯಲ್ಲಿ. ಅಂದರೆ ಇಂದಿಗೆ ಸರಿಯಾಗಿ 1315 ವರುಶಗಳ ಹಿಂದೆ. ಹಾಗಾಗಿ ಇದು ಅತ್ಯಂತ ಹಳೆಯ ಹೋಟೆಲ್ ಎಂದು ಹೆಸರು ಮಾಡಿದೆ. ಇದೇ ಕಾರಣದಿಂದ ಇದು ಗಿನ್ನೆಸ್ ಬುಕ್ ಆಪ್ ವರ‍್ಲ್ಡ್ ರೆಕಾರ‍್ಡ್ ನಲ್ಲಿ ಸ್ತಾನ ಗಳಿಸಿದೆ. ಈ ಹೋಟೆಲಿನ ಮತ್ತೊಂದು ಹೆಗ್ಗಳಿಕೆಯಂದರೆ ಇದನ್ನು ಒಂದೇ ಕುಟುಂಬದ ಸದಸ್ಯರು ಕಳೆದ ಸಾವಿರದ ಮುನ್ನೂರು ವರ‍್ಶಗಳಿಂದ ನಡೆಸಿಕೊಂಡು ಬರುತ್ತಿರುವುದು.
ಈ ಹೋಟೆಲ್ ಜಪಾನಿನ ಕ್ಯೋಟೋ ಪರ‍್ವತ ಶ್ರೇಣಿಯ ಅತಿ ಸುಂದರ ತಾಣದಲ್ಲಿ ನೆಲೆಗೊಂಡಿದೆ. ಇಲ್ಲಿ ಎಲ್ಲಾ ವರ‍್ಗದ ಜನರಿಗೂ, ಜಪಾನಿನ ಸಮುರಾಯ್‍ಗಳಿಂದ ಹಿಡಿದು, ಬದಲಾವಣೆ ಬಯಸಿ ಬರುವ ಅತ್ಯಂತ ಸಾಮಾನ್ಯ ಪ್ರವಾಸಿಗರಿಗೂ ಆತಿತ್ಯ ನೀಡಲಾಗುತ್ತದೆ. ಸಾವಿರ ವರ‍್ಶಗಳಿಗೂ ಹೆಚ್ಚು ಕಾಲ ಈ ಸೇವೆಗಳನ್ನು ಒದಗಿಸುತ್ತಿರುವುದು ನಿಜಕ್ಕೂ ಅಚ್ಚರಿಯ ವಿಚಾರ.
705ನೇ ಇಸವಿಯಲ್ಲಿ ನಿಶಿಯಾಮಾ ಓನ್ಸೆನ್ ಕೀಯುಂಕನ್ ಪ್ರಾರಂಬವಾಗಿದ್ದು ಅಂದಿನ ದಿನ ಆಳ್ವಿಕೆಯಲ್ಲಿದ್ದ ಚಕ್ರವರ‍್ತಿಯ ಮಗನ ಕಲ್ಪನೆಯ ಆದಾರದ ಮೇಲೆ. ಜಪಾನೀ ನುಡಿಯಲ್ಲಿ ಓನ್ಸೆನ್ ಎಂದರೆ ಬಿಸಿನೀರಿನ ಬುಗ್ಗೆ(hot springs) ಎಂದರ‍್ತ. ಈ ಪ್ರದೇಶದಲ್ಲಿ ಅನೇಕ ಬಿಸಿನೀರಿನ ಬುಗ್ಗೆಗಳಿವೆ. ಇಲ್ಲಿ ಸ್ನಾನ ಮಾಡುವುದರಿಂದ ಸಾಕಶ್ಟು ಕಾಯಿಲೆಗಳು ಗುಣವಾಗುತ್ತವೆ ಎಂದು ಹಲವು ಪ್ರವಾಸಿಗರು ಮತ್ತು ಮಿಲಿಟರಿಯ ಮಂದಿ ಇಲ್ಲಿಗೆ ಬರುತ್ತಿದ್ದರು. ಬಿಸಿನೀರ ಚಿಲುಮೆಗಳಲ್ಲಿ ತಮ್ಮ ಬಿಡುವಿನ ಸಮಯವನ್ನು ಆನಂದಿಸಲು ಹಾಗೂ ತಮ್ಮ ದೈನಂದಿನ ದಣಿವಿನಿಂದ ವಿಶ್ರಾಂತಿ ಪಡೆಯಲು ಜಪಾನಿನ ಸಮುರಾಯ್ ಗಳು ಈ ಸ್ತಳಕ್ಕೆ ಬರುವುದು ಸಾಮಾನ್ಯವಾಗಿತ್ತು.
ಸಾವಿರದ ಮುನ್ನೂರಕ್ಕೂ ಹೆಚ್ಚು ವರ‍್ಶಗಳಿಂದ ಚಾಲ್ತಿಯಲ್ಲಿರುವ ಈ ಹೋಟೆಲ್ ಅನ್ನು ಇಲ್ಲಿಯವರೆಗೆ 52 ತಲೆಮಾರಿನವರು ಮುನ್ನಡೆಸಿದ್ದಾರೆ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಯವರು ಅಂದಿನ ಅವಶ್ಯಕತೆಗೆ ತಕ್ಕಂತೆ ಈ ಸ್ತಳವನ್ನು ಮಾರ‍್ಪಡಿಸುತ್ತಾ ಬಂದಿದ್ದಾರೆ. ಕಾಲಕ್ಕೆ ತಕ್ಕಂತೆ ಪ್ರವಾಸಿಗರಿಗೆ ಹೆಚ್ಚು ವಿಶಾಲವಾದ ಮತ್ತು ಐಶಾರಾಮಿ ವ್ಯವಸ್ತೆ ಮಾಡುವುದು ಇದರ ಹಿಂದಿದ್ದ ಆಶಯ. ಈ ಹೋಟೆಲ್ ಅನೇಕ ಬದಲಾವಣೆಗಳನ್ನು ಕಂಡರೂ, ಹಳೆಯ ಕಾಲದ ಹಲವು ಗುರುತುಗಳನ್ನು ಉಳಿಸಿಕೊಂಡಿದೆ.
ಅವಶ್ಯಕತೆಗೆ ತಕ್ಕಂತೆ ಹಾಗೂ ಪ್ರವಾಸಿಗರ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಬದಲಾವಣೆಗಳನ್ನು ಮಾಡಿದ ಕಾರಣ, ಇದರ ಪ್ರದೇಶವು ದೊಡ್ಡದಾಗಿ ಬೆಳೆದಿದೆ. ಇದು ಎಶ್ಟೇ ದೊಡ್ಡದಾಗಿರೂ, ಮೊದಲಿಗೆ ಇದ್ದ ಚೆಲುವನ್ನು ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಇಲ್ಲಿ ಒಳನಡೆದರೆ ಹಳೆಯ ಕಾಲದ ಅನುಬವ ನೀಡುತ್ತದೆ. ನೈಸರ‍್ಗಿಕವಾಗಿ ನಿಮಿಶಕ್ಕೆ ಸಾವಿರಾರು ಲೀಟರ್ ನೀರನ್ನು ಹೊರಚಿಮ್ಮುವ ಬುಗ್ಗೆಗಳಿಂದಾಗಿ ಈ ಹೋಟೆಲ್ ಇಂದಿಗೂ ಮಂದಿಯನ್ನು ತನ್ನತ್ತ ಸೆಳೆಯುತ್ತಿದೆ.
(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, www.mindblowing-facts.org, Wikipedia)
ಇತ್ತೀಚಿನ ಅನಿಸಿಕೆಗಳು